ಪಾದರಸ
| ||||||
ಸಾಮಾನ್ಯ ಮಾಹಿತಿ | ||||||
---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಪಾದರಸ, Hg, ೮೦ | |||||
ರಾಸಾಯನಿಕ ಸರಣಿ | transition metal | |||||
ಗುಂಪು, ಆವರ್ತ, ಖಂಡ | 12, 6, d | |||||
ಸ್ವರೂಪ | ಬೆಳ್ಳಿಯಂತ ಹೆಳಪು | |||||
ಅಣುವಿನ ತೂಕ | 200.59(3) g·mol−1 | |||||
ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s2 | |||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 18, 2 | |||||
ಭೌತಿಕ ಗುಣಗಳು | ||||||
ಹಂತ | ದ್ರವ | |||||
ಸಾಂದ್ರತೆ (ಕೋ.ತಾ. ಹತ್ತಿರ) | ೧೩.೫೩೪ g·cm−3 | |||||
ಕರಗುವ ತಾಪಮಾನ | ೨೩೪.೩೨ K (-೩೮.೮೩ °C, -೩೭.೮೯ °ಎಫ್) | |||||
ಕುದಿಯುವ ತಾಪಮಾನ | ೬೨೯.೮೮ K (೩೫೬.೭೩ °C, ೬೭೪.೧೧ °F) | |||||
ಆಕ್ಸಿಡೀಕರಣ ಸ್ಥಿತಿಗಳು | 2 (mercuric), 1 (mercurous) (mildly basic oxide) | |||||
ವಿದ್ಯುದೃಣತ್ವ | ೨.೦೦ (Pauling scale) | |||||
ಕಾಂತೀಯ ವ್ಯವಸ್ಥೆ | diamagnetic | |||||
ಉಲ್ಲೇಖನೆಗಳು | ||||||
ಪಾದರಸ (Mercury) ಒಂದು ಮೂಲಧಾತು ಲೋಹ. ಪ್ರಾಚೀನ ಕಾಲದ ಜನರಿಗೂ ಇದು ತಿಳಿದಿತ್ತು. ಇದು ಕೋಣೆಯ ಉಷ್ಣಾಂಶದಲ್ಲೂ ದ್ರವ ರೂಪದಲ್ಲಿರುತ್ತದೆ. ಬಹಳ ವೇಗವಾದ ಚಲನೆ ಇದೆ. ಇದು ವಿಷಕಾರಕ.
ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಪರಿಚಿತ ಲೋಹ ಇದೊಂದೇ. ಪ್ರತೀಕ Hg; ಪರಮಾಣು ಸಂಖ್ಯೆ 80; ಪರಮಾಣು ತೂಕ 200.61; ಸಾಂದ್ರತೆ 13.546; ಕುದಿಬಿಂದು 359.9೦C. ಸ್ಥಿರ ಸಮಸ್ಥಾನಿಗಳ ಸಂಖ್ಯೆ 7. ಪಾದರಸದ ಮೇಲ್ಮೈ ಎಳೆತ ಹೆಚ್ಚು. ಆದ್ದರಿಂದ ಸುರಿದಾಗ ಇತರ ದ್ರವಗಳೋಪಾದಿಯಲ್ಲಿ ಇದು ಹರಿಯುವುದಿಲ್ಲ ಮತ್ತು ಹರಡುವುದಿಲ್ಲ, ಬದಲು ಸಣ್ಣ ಹನಿಗಳಾಗಿ ವಿಭಾಗವಾಗುವುದು. ರಸವಾದಿಗಳಿಗೂ ಪುರಾತನ ಹಿಂದೂ ಮತ್ತು ಚೀನಿಯರಿಗೂ ಪಾದರಸದ ಗುಣ ಗೊತ್ತಿತ್ತು.
ದೊರಕುವಿಕೆ
[ಬದಲಾಯಿಸಿ]ಧಾತು ಸ್ಥಿತಿಯಲ್ಲಿ ಪಾದರಸ ಅತ್ಯಲ್ಪ ಮೊತ್ತದಲ್ಲಿ ದೊರೆಯುತ್ತದೆ. ಕೆಂಪು ಬಣ್ಣದ ಸಿನಬಾರ್ ಇದರ ಮುಖ್ಯ ಅದುರು.[೧][೨] ಪಾದರಸದ ಗಣಿಗಳ ಪೈಕಿ ಸ್ಪೇನ್ ದೇಶದ ಆಲ್ಮಾಡೇನ್ ಮತ್ತು ಇಟಲಿಯ ಕಾರ್ನಿಯೋಲಾ ಗಣಿಗಳು ಪ್ರಸಿದ್ಧವಾದವು. ಪಾದರಸದ ಉತ್ಪಾದನೆಯಲ್ಲಿ ಈ ದೇಶಗಳು ಪ್ರಮುಖ ಸ್ಥಾನ ಗಳಿಸಿವೆ. ಮೆಕ್ಸಿಕೋ, ಅಮೆರಿಕ ಸಂಯುಕ್ತ ಸಂಸ್ಥಾನ, ಯುಗೊಸ್ಲಾವಿಯ ದೇಶಗಳು ಸಹ ಗಣನೀಯ ಮೊತ್ತದಲ್ಲಿ ಪಾದರಸವನ್ನು ಉತ್ಪಾದಿಸುತ್ತವೆ.
ಉತ್ಪಾದನೆ
[ಬದಲಾಯಿಸಿ]ಸಿನಬಾರನ್ನು (ಮರ್ಕ್ಯೂರಿಕ್ ಸಲ್ಫೈಡ್) ವಾಯವಿನಲ್ಲಿ ಹಾಗೆಯೇ ಅಥವಾ ಸುಣ್ಣದೊಡನೆ ಬೆರೆಸಿ ಹುರಿದಾಗ ಲೋಹ ಬಿಡುಗಡೆಯಾಗುವುದು. ಅದನ್ನು ನೀರಿನಿಂದ ತಣಿಸಿ ಲೋಹ ಅಥವಾ ಮಣ್ಣಿನ ಸಾಂದ್ರತೆಗಳಲ್ಲಿ ಸಂಗ್ರಹಿಸಲಾಗುವುದು. ಷೇಮಾಯ್ ಚಕ್ಕಳದ ಮೂಲಕ ಶೋಧಿಸಿ, ಮರ್ಕ್ಯೂರಸ್ ನೈಟ್ರೇಟ್ ಮಿಶ್ರಿತ 5% ನೈಟ್ರಿಕ್ ಆಮ್ಲದಿಂದ ತೊಳೆದುಬಂದ ಪಾದರಸವನ್ನು ಆಸವನ ವಿಧಾನದಿಂದ ಶುದ್ಧೀಕರಿಸಲಾಗುವುದು. ಇದನ್ನು ಮೆದು ಕಬ್ಬಿಣದ ಜಾಡಿಗಳಲ್ಲಿಟ್ಟು ರವಾನಿಸುತ್ತಾರೆ.
ಗುಣಗಳು ಮತ್ತು ಉಪಯೋಗಗಳು
[ಬದಲಾಯಿಸಿ]ಗಾಜಿಗೆ ಅಂಟದಿರುವುದು ಪಾದರಸದ ವೈಶಿಷ್ಟ್ಯ. ಇದು ಉತ್ತಮ ಉಷ್ಣವಾಹಕ. ಉಷ್ಣತಾಮಾಪಕಗಳಲ್ಲಿ ಪಾದರಸದ ಉಪಯೋಗ ಈ ಗುಣಗಳನ್ನು ಅವಲಂಬಿಸಿದೆ. ಇದರ ಸಾಂದ್ರತೆ ಹೆಚ್ಚು. ಆವಿಯೊತ್ತಡ ಕಡಿಮೆ. ಆದ್ದರಿಂದ ವಾಯುಭಾರಮಾಪಕ, ಮೆಕ್‌ಲಿಯಾಡ್ ಅಳೆಪಿಡಿ (ಗೇಜ್) ಇತ್ಯಾದಿ ನಿರ್ವಾತ ಅಳೆಪಿಡಿಗಳ ನಿರ್ಮಾಣದಲ್ಲಿ ಪಾದರಸವನ್ನು ಬಳಸುವರು. ಇದು ಒಳ್ಳೆಯ ವಿದ್ಯುತ್‌ವಾಹಕವಾದ್ದರಿಂದ ಸ್ವಿಚ್ಚುಗಳು ಮತ್ತು ಟಪ್ಪೆ (ರಿಲೇ) ವ್ಯವಸ್ಥೆಗಳಲ್ಲಿ ಇದರ ಉಪಯೋಗ ಹೆಚ್ಚು.[೩] ಕೆಲವು ವಿಶಿಷ್ಟ ಬಾಯಿಲರುಗಳಲ್ಲಿ ಹಬೆಗಿಂತ ಪಾದರಸದ ಆವಿಯೇ ಹೆಚ್ಚು ಪರಿಣಾಮಕಾರಿ ಎಂದು ಪ್ರಯೋಗಗಳಿಂದ ತಿಳಿದುಬಂದಿದೆ. ಇಂಥ ಆಧುನಿಕ ಬಾಯ್ಲರುಗಳು ಸೀಮಿತ ವೆಚ್ಚದಲ್ಲಿ ಅಧಿಕ ಶಕ್ತಿಯನ್ನು ಉತ್ಪಾದಿಸಬಲ್ಲವು. ಇತರ ಅನಿಲಗಳು ವಿದ್ಯುತ್‌ವಾಹಕಗಳು, ಪಾದರಸಾನೀಲವಾದರೋ ವಿದ್ಯುತ್‌ವಾಹಕ. ಈ ಕಾರಣದಿಂದ ದಿಷ್ಟಕಾರಿ (ರೆಕ್ಟಿಫೈಯರ್; ಪರ್ಯಾಯ ಪ್ರವಾಹವನ್ನು ಏಕಮುಖ ಪ್ರವಾಹಕ್ಕೆ ಪರಿವರ್ತಿಸುವ ಸಾಧನ) ಉಪಕರಣದಲ್ಲಿ ಪಾದರಸವನ್ನು ಬಳಸುವರು. ಪಾದರಸಾನಿಲದ ಮೂಲಕ ವಿದ್ಯುದ್ವಿಸರ್ಜನೆಯನ್ನು ಹಾಯಿಸಿದಾಗ ಅತಿ ನೇರಿಳೆ ಕಿರಣಗಳು ಹೊರಬೀಳುವುವು. ಕ್ವಾರ್ಟ್ಜ್ ಕೋಶಗಳಲ್ಲಿ ಅಳವಡಿಸಿದ ಇಂಥ ದೀಪಗಳಿಂದ ಅತಿ ನೇರಿಳೆ ಬೆಳಕನ್ನು ಪಡೆಯುವುದು ವಾಡಿಕೆ.
ಪರಮಾಣುಶಕ್ತಿಯ ಉತ್ಪಾದನೆಯಲ್ಲಿ ಪಾದರಸವನ್ನು ಬಳಸಲಾಗುತ್ತಿದೆ. ವಿಕಿರಣ ಪಟುತ್ವ ನಿರೋಧಕ ರಕ್ಷಣ ಸಾಧನಗಳಲ್ಲಿ ಅಲ್ಲದೆ ಉಷ್ಣವಿನಿಮಯ ಮಾಧ್ಯಮವಾಗಿ ಕೂಡ ಪಾದರಸದ ಉಪಯೋಗ ಸಾಮಾನ್ಯವಾಗುತ್ತಿದೆ. ಲೋಹವಲ್ಲದೆ ಅದರ ಆಕ್ಸೈಡ್, ಕ್ಲೋರೈಡ್ ಮತ್ತು ಸಲ್ಫೇಟುಗಳು ವೇಗವರ್ಧಕಗಳಾಗಿ ವಿನಿಯೋಗವಾಗುತ್ತಿವೆ. ವಿದ್ಯುದ್ವಿಧಾನದಿಂದ ಕ್ಲೋರಿನ್ ಮತ್ತು ಕಾಸ್ಟಿಕ್ ಸೋಡ ತಯಾರಿಕೆಯಲ್ಲಿ ಪಾದರಸ ಕ್ಯಾಥೋಡಾಗಿ ವರ್ತಿಸುವುದು. ಎರಡನೆಯ ಮಹಾಯುದ್ಧ ಕಾಲದಲ್ಲಿ ನಿರೂಪಿಸಲಾದ ಮರ್ಕ್ಯೂರಿ ಆಕ್ಸೈಡ್ ವಿದ್ಯುತ್‌ಕೋಶಕ್ಕಾಗಿ ಪಾದರಸ ಬಹುವಾಗಿ ಬಳಕೆಯಾಗುತ್ತಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪ್ರಧಾನಸ್ಥಾನ ಉಂಟು. ಸಿಫಿಲಿಸ್ ಮೇಹರೋಗದ ಚಿಕಿತ್ಸೆಗೆ ಪಾದರಸದ ಬಳಕೆ ಶತಮಾನಗಳಿಂದ ರೂಢಿಯಲ್ಲಿದೆ.
ಸಂಯುಕ್ತಗಳು
[ಬದಲಾಯಿಸಿ]ಪಾದರಸದ ಉಪಯುಕ್ತ ರಾಸಾಯನಿಕಗಳ ಪೈಕಿ ಈ ಮುಂದಿನವನ್ನು ಹೆಸರಿಸಬಹುದು:
- ಮರ್ಕ್ಯೂರಿಕ್ ಕ್ಲೋರೈಡ್ (HgCl2) ಚರ್ಮದ ಹದಗಾರಿಕೆ, ಪೂತಿನಾಶಕ, ಮತ್ತು ಮರದ ತುಂಡುಗಳ ಸಂರಕ್ಷಣೆ.
- ಮರ್ಕ್ಯೂರಿಕ್ ಫಲ್ಮಿನೇಟ್ Hg(CNO)2 ವಿಸ್ಫೋಟ ಪ್ರೇರಕವಾಗಿ (ಡಿಟೊನೇಟರ್).
- ಹಳದಿ ಮರ್ಕ್ಯೂರಿಕ್ ಆಕ್ಸೈಡಿನ ಮುಲಾಮು ಹುಳುಕಡ್ಡಿ ಇತ್ಯಾದಿ ಚರ್ಮರೋಗಗಳನ್ನು ಗುಣಪಡಿಸಲು.
- ಪಾದರಸದ ಆರ್ಗ್ಯಾನಿಕ್ ಸಂಯುಕ್ತಗಳು ಕಾಗದದ ಕೈಗಾರಿಕೆಯಲ್ಲಿ ಅಲ್ಲದೆ ವಿಷಾಪಹಾರಿಗಳಾಗಿ, ಕ್ರಿಮಿನಾಶಕಗಳಾಗಿ ಮತ್ತು ಪೂತಿನಾಶಕಗಳಾಗಿ ಜನಪ್ರಿಯವಾಗಿವೆ. ಇವುಗಳ ಪೈಕಿ ಮೆಟಾಫೆನ್ ಮರ್‌ಥಯೋಲೇಟ್ ಮರ್ಕ್ಯೂರೋಕ್ರೋಮ್, ಮರ್‌ಫೀನೈಲ್ ನೈಟ್ರೇಟ್, ಮರ್‌ಫೀನೈಲ್ ಬೋರೇಟ್, ಮತ್ತು ಮರಾಕ್ಸಿಲ್ ಮುಖ್ಯವಾದವು.
ಪಾದರಸದ ಸಂಯುಕ್ತಗಳಲ್ಲಿ ಎರಡು ವಿಧಗಳಿವೆ. ಮರ್ಕ್ಯೂರಸ್ ಸಂಯುಕ್ತಗಳಲ್ಲಿ ಪಾದರಸದ ವೇಲೆನ್ಸಿ ಒಂದು. ಆಕ್ಸೈಡ್, ಕ್ಲೋರೈಡ್, ಬ್ರೋಮೈಡ್, ಅಯೊಡೈಡ್, ಸಲ್ಫೈಡ್, ಸಲ್ಫೇಟ್, ನೈಟ್ರೇಟ್, ಫಾಸ್ಫೇಟ್, ಮತ್ತು ಕ್ರೋಮೇಟ್ ಪ್ರಧಾನ ಮರ್ಕ್ಯೂರಸ್ ಸಂಯುಕ್ತಗಳು. ಇವುಗಳ ಪೈಕಿ ಕ್ಯಾಲೊಮೆಲ್ ಎಂದು ಪ್ರಸಿದ್ಧವಾಗಿರುವ ಮರ್ಕ್ಯೂರಸ್ ಕ್ಲೋರೈಡ್ (Hg2Cl2) ಮುಖ್ಯವಾದದ್ದು. ಪಾದರಸ ಮತ್ತು ಮರ್ಕ್ಯೂರಿಕ್ ಕ್ಲೋರೈಡಿನ ನಿಕಟ ಮಿಶ್ರಣವನ್ನು ಕರ್ಪೂರೀಕರಿಸಿ ಇದನ್ನು ತಯಾರಿಸಬಹುದು. ಇದು ನೀರಿನಲ್ಲಿ ಅದ್ರಾವ್ಯವಾದ ಬಿಳಿಯ ಪುಡಿ. ಇದನ್ನು ಭೇದಿಕಾರಕವಾಗಿ ಉಪಯೋಗಿಸಬಹುದು. ಪರ್ಯಾಪ್ತ ಪೋಟ್ಯಾಸಿಯಮ್ ಕ್ಲೋರೈಡ್ ದ್ರಾವಣದಲ್ಲಿ ನಿಲಂಬಿತವಾದ ಕ್ಯಾಲೊಮೆಲ್ ಎಲೆಕ್ಟ್ರೋಡನ್ನು ವಿದ್ಯುದ್ರಾಸಾಯನಿಕ ಪ್ರಯೋಗಗಳಲ್ಲಿ ಆದರ್ಶಮಾನವಾಗಿ ಉಪಯೋಗಿಸುವರು. ವೆಸ್ಟನ್ ವಿದ್ಯುತ್ಕೋಶದಲ್ಲಿ ಮರ್ಕ್ಯೂರಸ್ ಸಲ್ಫೇಟ್ ದ್ರುವೀಕರಣವನ್ನು ನಿರೋಧಿಸುವುದು.
ಮರ್ಕ್ಯೂರಿಕ್ ಸಂಯುಕ್ತಗಳಲ್ಲಿ ಪಾದರಸದ ವೇಲೆನ್ಸಿ ಎರಡು. ಇವುಗಳಲ್ಲಿ ಮುಖ್ಯವಾದದ್ದು, ಮರ್ಕ್ಯೂರಿಕ್ ಕ್ಲೋರೈಡ್ (HgCl2). ಇದು ನೀರಿನಲ್ಲಿ ದ್ರಾವ್ಯ. ದಾರುಣವಾದ ವಿಷ. ಕಾಸಿದಾಗ ಕರ್ಪೂರಿಕರಿಸುವುದು. ಪೊಟ್ಯಾಸಿಯಂ ಅಯೋಡೈಡ್ ದ್ರಾವಣದೊಡನೆ ವರ್ತಿಸಿದಾಗ ಕೆಂಪು ಬಣ್ಣದ ಮರ್ಕ್ಯೂರಿಕ್ ಅಯೋಡೈಡ್ (HgI2) ಒತ್ತರಿಸುವುದು. ಇದು ಮತ್ತೆ ಪೊಟ್ಯಾಸಿಯಂ ಅಯೋಡೈಡಿನಲ್ಲಿ ವಿಲೀನವಾದರೆ ಪೊಟ್ಯಾಸಿಯಂ ಮರ್ಕ್ಯೂರಿಕ್ ಅಯೋಡೈಡ್ (K2HgI4) ಎಂಬ ಸಂಕೀರ್ಣ ಲವಣ ಉಂಟಾಗುವುದು. ಇದರ ಕ್ಷಾರೀಯ ದ್ರಾವಣವೇ ನೆಸ್ಲರ್ ಪರಿವರ್ತಕ. ಅಲ್ಪ ಪ್ರಮಾಣ ಅಮೋನಿಯ ಅಥವಾ ಅಮೋನಿಯಂ ಲವಣಗಳ ಸಂಪರ್ಕದಲ್ಲಿ ಹಳದಿ ಅಥವಾ ಕಂದು ಬಣ್ಣ ಉಂಟಾಗುವುದು. ಅಮೋನಿಯಂ ಲವಣಗಳನ್ನು ಗುರುತಿಸಲು ಇದೊಂದು ಸೂಕ್ಷ್ಮ ಪರೀಕ್ಷಾ ಪ್ರಯೋಗ. ನೀರಿನಲ್ಲಿ ವಿಲೀನವಾಗಿರುವ ಅಮೋನಿಯಾದ ಅಂಶವನ್ನು ನಿರ್ಧರಿಸಲು ಈ ಪ್ರಯೋಗ ಸಹಕಾರಿಯಾಗಿದೆ.
ಮರ್ಕ್ಯೂರಿಕ್ ಥಯೋಸಯನೇಟನ್ನು Hg(CNS)2 ಹಾವುಬಾಣದ ತಯಾರಿಕೆಯಲ್ಲಿ ಉಪಯೋಗಿಸುವರು. ಇದರ ಸಣ್ಣ ತುಂಡೊಂದನ್ನು ಉರಿಸಿದಾಗ ನೀಳವಾದ ಸರ್ಪಾಕೃತಿಯನ್ನು ಹೊಂದುವುದು. ಈ ಬೂದಿ ವಿಷವಸ್ತು.
ಮರ್ಕ್ಯೂರಿಕ್ ಸಲ್ಫೈಡ್ (HgS); ಪಾದರಸದ ಲವಣಗಳ ಮೂಲಕ ಹೈಡ್ರೋಜನ್ ಸಲ್ಫೈಡ್ ಅನಿಲವನ್ನು ಹಾಯಿಸಿದಾಗ ಕಪ್ಪುಬಣ್ಣದ ಮರ್ಕ್ಯೂರಿಕ್ ಸಲ್ಫೈಡ್ ಒತ್ತರಿಸುವುದು. ಇದನ್ನು ಪ್ರತ್ಯೇಕಿಸಿ ಕರ್ಪೂರೀಕರಿಸಿದರೆ ಕೆಂಪು ಬಣ್ಣದ ಘನವಸ್ತು ಲಭಿಸುವುದು. ರಂಗುಗಳಲ್ಲಿ ಅಲ್ಲದೆ ರಬ್ಬರ್ ಮತ್ತು ಪ್ಲಾಸ್ಟಿಕುಗಳಿಗೆ ಬಣ್ಣ ನೀಡಲು ಇದನ್ನು ಉಪಯೋಗಿಸುವರು.
ಪಾದರಸ ಮತ್ತು ಅದರ ದ್ರಾವ್ಯ ಸಂಯುಕ್ತಗಳೆಲ್ಲ ವಿಷಗಳು. ಚರ್ಮದ ಮೂಲಕವೂ ಪಾದರಸ ಸುಲಭವಾಗಿ ದೇಹಗತವಾಗುವುದು. ಆದ್ದರಿಂದ ಕಾರ್ಖಾನೆಗಳಲ್ಲಿ ಮತ್ತು ಸಂಶೋಧನಾಲಯಗಳಲ್ಲಿ ಪಾದರಸ ಆವಿಯ ಸೇವನೆಯ ವಿರುದ್ಧ ರಕ್ಷಣಾ ಕ್ರಮಗಳು ಅನಿವಾರ್ಯ ಮತ್ತು ಅಗತ್ಯ.
ಉಲ್ಲೇಖಗಳು
[ಬದಲಾಯಿಸಿ]- ↑ Rytuba, James J (2003). "Mercury from mineral deposits and potential environmental impact". Environmental Geology. 43 (3): 326–338. doi:10.1007/s00254-002-0629-5. S2CID 127179672.
- ↑ "Metacinnabar: Mineral information, data and localities".
- ↑ Hammond, C. R The Elements Archived 26 June 2008 ವೇಬ್ಯಾಕ್ ಮೆಷಿನ್ ನಲ್ಲಿ. in ಟೆಂಪ್ಲೇಟು:RubberBible86th
ಹೊರಗಿನ ಕೊಂಡಿಗಳು
[ಬದಲಾಯಿಸಿ]- Chemistry in its element podcast (MP3) from the Royal Society of Chemistry's Chemistry World: Mercury
- Mercury at The Periodic Table of Videos (University of Nottingham)
- Centers for Disease Control and Prevention – Mercury Topic
- EPA fish consumption guidelines
- Hg 80 Mercury
- Material Safety Data Sheet – Mercury
- Stopping Pollution: Mercury – Oceana
- Natural Resources Defense Council (NRDC): Mercury Contamination in Fish guide Archived 2008-07-06 ವೇಬ್ಯಾಕ್ ಮೆಷಿನ್ ನಲ್ಲಿ. – NRDC
- NLM Hazardous Substances Databank – Mercury
- BBC – Earth News – Mercury "turns" wetland birds such as ibises homosexual
- Changing Patterns in the Use, Recycling, and Material Substitution of Mercury in the United States United States Geological Survey
- Thermodynamical data on liquid mercury.
- . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)