ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಕುಂಭಾಶಿ
ಪರಿಚಯ
[ಬದಲಾಯಿಸಿ]ಇತ್ತೀಚಿನ ಒಂದು ದಶಕದಲ್ಲಿ ಸ್ಥಾಪನೆಗೊಂಡ ದೇವಾಲಯಗಳಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನವು ಅತ್ತಂತ ಪ್ರಸಿದ್ಧಿ ಪಡೆದ ದೇವಸ್ಥಾನಗಳಲ್ಲಿ ಒಂದಾಗಿದೆ.ಸಪ್ತ ಋಷಿಗಳ ತಪೋ ಭೂಮಿಯಾದ ಪುರಾಣ ಪ್ರಸಿದ್ಧ ಕ್ಷೇತ್ರವಾದ ಕುಂಭಾಶಿಯು ದಕ್ಷಿಣ ಕಾಶಿ ಎಂದು ಪ್ರಖ್ಯಾತಿಯನ್ನು ಪಡೆದಿದೆ. ಇಂತಹ ಪುಣ್ಯ ಸ್ಥಳದಲ್ಲಿ ಜಗತ್ ಪ್ರಸಿದ್ಧಿಯನ್ನು ಪಡೆದ ಆನೆಗುಡ್ಡೆ ಮಹಾಗಣಪತಿ ದೇವರು ಹಾಗೂ ಸೂರ್ಯ, ಚಂದ್ರ, ಪುಷ್ಕರ್ಣೆಯನ್ನು ಹೊಂದಿದೆ. ಹರಿಹರ ದೇವಸ್ಥಾನ,ಅಯ್ಯಪ್ಪ ದೇವಾಲಯ ಹೀಗೆ ಹಲವಾರು ದೇವಾಲಯಗಳ ಜೊತೆಯಲ್ಲಿ ಕೈಲಾಸದಲ್ಲಿ ಪರಶಿವನ ಸಾನಿಧ್ಯದಲ್ಲಿ ಇರುವ ಎಲ್ಲಾ ಶಕ್ತಿಗಳು ಇಲ್ಲಿ ನೆಲೆಯಾಗಿದ್ದು, ಇದೀಗ ಆದಿಶಕ್ತಿ ಮಹಾಮಾಯೆಯಾದ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರು ಕೂಡ ಇಂತಹ ದಿವ್ಯ ಸಾನಿಧ್ಯದಲ್ಲಿ ನೆಲೆನಿಂತಿದ್ದಾರೆ. ಈ ದೇವಾಲಯವು ರಾಷ್ಟೀಯ ಹೆದ್ದಾರಿ-೬೬ರ ಪಕ್ಕದಲ್ಲಿಯೇ ಮೂಡಿಬಂದ ಸುಂದರವಾದ ಭವ್ಯ ದೇವಾಲಯವಾಗಿದೆ.
ಹಿನ್ನಲೆ
[ಬದಲಾಯಿಸಿ]ಶ್ರೀ ದೇವಿಯ ಆರಾಧಕರಾದ ಶ್ರೀಮತಿ ಅನಿತಾ ಹಾಗೂ ಶ್ರೀಯುತ ದೇವರಾಯ ಮಂಜುನಾಥ ಶೇರೆಗಾರರು ಈ ದೇವಸ್ಥಾನವನ್ನು ಕಟ್ಟಿಸಿದರು. ಇವರು ಮೂಲತಃ ಗಂಗೊಳ್ಳಿಯವರಾದ ರಾಮಕ್ಷತ್ರೀಯ ಸಮಾಜದವರಾದ ಹೊಸ್ಮನೆ ಕೀರ್ತಿಶೇಷ ಗೌರಮ್ಮ ಹಾಗೂ ಕೀರ್ತಿಶೇಷ ಮಂಜುನಾಥ ಶೇರೆಗಾರ ಇವರ ಪುತ್ರರು. ದೇವಿಯ ಆರಾಧಕರಾದ ಶ್ರೀಯುತ ದೇವರಾಯ ಮಂಜುನಾಥ ಶೇರೆಗಾರರಿಗೆ ಕನಸಿನಲ್ಲಿ ಅಮ್ಮನವರು ಪ್ರತ್ಯಕ್ಷಳಾಗಿ ಕಾಣಿಸಿಕೊಂಡು ಈ ಸ್ಥಳದಲ್ಲಿ ನನ್ನ ಸಾನಿಧ್ಯವಿದ್ದು, ನನಗೆ ಒಂದು ಆಲಯವನ್ನು ನಿರ್ಮಾಣ ಮಾಡಿ ಕೊಡಬೇಕೆಂದು ಸೂಚನೆ ನೀಡಿದಾಗ ಶ್ರೀಯುತ ದೇವರಾಯರು ತನ್ನ ಹಿತೈಷಿಗಳು ದೇವಿ ಆರಾಧಕರಾದ ಕಾರ್‍ದಾಂಡ ಮುಂಬಯಿ ಇಲ್ಲಿಯ ವಾಸಿ ಶ್ರೀಯುತ ಪುರಷೋತ್ತಮ ಭಟ್ಟರ ಮಾರ್ಗದರ್ಶನದಲ್ಲಿ ಕೇರಳದ ಪೈಯನ್ನೂರಿನ ಪ್ರಸಿದ್ದ ಜೋಯಿಸರಾದ ಶ್ರೀಯುತ ಎ. ವಿ. ಮಾಧವನ್ ಪುದುವಾಳ ಇವರ ನೇತೃತ್ವದಲ್ಲಿ ಅಷ್ಠಮಂಗಳ ಪ್ರಶ್ನೆಯನ್ನಿಟ್ಟು ಪ್ರಾರ್ಥಿಸಿಕೊಳ್ಳುತ್ತಾರೆ. ಆ ಪ್ರಕಾರ ಪ್ರಶ್ನಾಭಾಗದಲ್ಲಿ ತಿಳಿಸಿದಂತೆ,ಈ ಸಾನಿಧ್ಯವು ಒಂದು ಚೈತನ್ಯದಿಂದ ಕೂಡಿದ ಸ್ಥಳವಾಗಿಯೂ ಹಿಂದೆ ವಾದಿರಾಜರ ಕಾಲದಲ್ಲಿ ಶ್ರೀಚಕ್ರವನ್ನು ಪೂಜಿಸಲ್ಪಟ್ಟಿದ್ದು, ನಂತರ ಅಲ್ಲಿಯೇ ಶ್ರೀಚಕ್ರವು ಐಕ್ಯವಾಗಿದೆ. ಅಲ್ಲದೇ ಶ್ರೀಯುತರು ದೇವಿ ಆರಾಧಕರಾದ ಕಾರಣ ಶ್ರೀ ದೇವಿಯು ಅವರ ಜೊತೆಯಲ್ಲಿಯೇ ಇದ್ದು ಅವರ ಬೆಂಗಾವಲಾಗಿ ರಕ್ಷಣೆಯನ್ನು ನೀಡುತ್ತಿದ್ದು, ಅಷ್ಟೆ ಅಲ್ಲದೆ ಅವರ ಮನೆಯಲ್ಲಿ ಕೊಲ್ಲೂರು ಮೂಕಾಂಬಿಕೆಯನ್ನು ಆರಾದಿಸಿಕೊಂಡು ಬರುತ್ತಿದ್ದರು.
ಆಕಾರಣಕ್ಕಾಗಿಯೇ ಶ್ರೀಯುತ ದೇವರಾಯರು ಒಂದು ಭವ್ಯ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಮಾಡಿದರು. ಹಾಗೇ ನಿರಂತರ ಆರುವರೆ ವರ್ಷಗಳ ಕಾಲ ಸಾವಿರಾರು ಕಾರ್ಮಿಕ ವರ್ಗದವರು ಶ್ರಮವಹಿಸಿ ಈ ಸುಂದರ ದೇವಾಲಯವನ್ನು ನಿರ್ಮಾಣ ಮಾಡಿದರು. ದೇವಾಲಯವು ಬಹಳ ವಿಶಿಷ್ಠತೆಯಿಂದ ಕೂಡಿದೆ. ಗರ್ಭಗ್ರಹವು ಶಿಲಾಮಯದಿಂದ ಕೂಡಿದ್ದು, ಬಹಳ ಸುಂದರವಾದ ಕೆತ್ತನೆಯಿಂದ ಕೂಡಿ ಬಂದಿದೆ. ಹಾಗೆ ದೇವಾಲಯದ ಪ್ರಾಂಗಣ ಹಾಗೂ ಮೇಲ್ಭಾಗದಲ್ಲಿ ಮರದ ಕೆತ್ತನೆಗಳು, ಸುಂದರವಾದ ವಿಗ್ರಹಗಳು, ಹೂ ಬಳ್ಳಿಗಳು, ಕುಂಭ ಹಾಗೂ ಅಡ್ಡ ತೊಲೆಗಳು ಸುಂದರವಾಗಿ ಮೂಡಿ ಬಂದಿದ್ದು ಭಕ್ತರ ಮನ ಸೂರೆಗೊಳ್ಳುವಂತಿದೆ. ವಿಶೇಷವಾಗಿ ಕಾಷ್ಠ ಮರದ ಕೆತ್ತನೆಯಿಂದ ಕೂಡಿದ ಕಂಭಗಳು ಅದರಲ್ಲಿ ಚೋಳರ ಕಾಲದ ಕೆತ್ತನೆಗಳು, ಹೊಯ್ಸಳರ ಕಾಲದ ವಿಗ್ರಹಗಳು, ಬೇಲೂರು ಹಳೆಬೀಡಿನಲ್ಲಿ ಇರುವಂತಹ ಮರದ ವಿಗ್ರಹಗಳು. ಮಹಾದ್ವಾರದ ಮೇಲ್ಚಾವಣಿಯಲ್ಲಿ ಭಕ್ತರು ನಿಬ್ಬೆರಗಾಗಿಸುವ ರೀತಿಯಲ್ಲಿ ಬೇರೆ ಬೇರೆ ರೀತಿಯ ಹೂಗಳು ಬಳ್ಳಿಗಳ ರೀತಿಯಲ್ಲಿ ಕೆತ್ತಲಾಗಿದೆ. ಈ ಎಲ್ಲಾ ಮರದ ಕೆತ್ತನೆಗಳನ್ನು ನೋಡಿದ ಭಕ್ತರು ಒಂದು ಸಲ ದಿಗ್ಭ್ರಮೆಗೊಂಡು ಉಲ್ಲಾಸ ಭರಿತರಾಗುವಂತೆ ಮಾಡುವ ಮರದ ಕೆತ್ತನೆಯಿಂದಲೇ ಈ ಆಲಯವು ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಆಲಯದ ಹೊರಭಾಗದಲ್ಲಿ ದೇವಳಕ್ಕೆ ಶೋಭೆ ತರುವಂತೆ ಆಲದ ಮರ ಅದರ ಬುಡದಲ್ಲಿ ನಾಗ, ನಾಗಯಕ್ಷೆ, ಸ್ವರ್ಣಯಕ್ಷೆ ಹಾಗೂ ಕ್ಷೇತ್ರಪಾಲ ಪರಿವಾರ ದೇವರ ಶಿಲಾಮಯವಾದ ಪೀಠಗಳು ಸುಂದರವಾಗಿ ಶೋಭಿಸುತ್ತಿದೆ. ದೇವಳದ ಮುಂಭಾಗದಲ್ಲಿ ಸುಮಾರು ೩೫ ಅಡಿ ಎತ್ತರದ ವಿಮಾನ ಗೋಪುರ ಅದರಲ್ಲಿ ದೇವಿಯ ನಾನಾ ರೂಪದ ವಿಗ್ರಹಗಳು ರಾತ್ರಿ ಹೊತ್ತಿನ ಬೆಳಕಿನಲ್ಲಿ ಸುಂದರವಾಗಿ ಕಾಣುತ್ತದೆ. ಹಾಗೇ ದೇವಾಲಯದ ಹೊರಸುತ್ತಿನ ಗೋಡೆ ಹಾಗೂ ಚಾವಣಿಯ ಮೇಲ್ಭಾಗದಲ್ಲಿ ಜಗನ್ಮಾತೆಯ ನಾನಾ ವಿಧಧ ವಿಗ್ರಹಗಳು ಮನಮೋಹಕರೂಪದಲ್ಲಿ ಕಂಗೊಳಿಸುತ್ತಿದೆ. ದೇವಾಲಯದ ಮುಂಭಾಗದಲ್ಲಿ ಶಿಲಾಮಯ ಪುಷ್ಕರ್ಣೆ, ಅದರಲ್ಲಿ ವರ್ಷದ ಕೊನೆಯವರೆಗೂ ಜಲದಿಂದ ತುಂಬಿರುತ್ತದೆ. ಹಾಗೆ ತಾಯಿಯ ಚಂಡಿಕಾ ಹೋಮ ಸೇವೆ ಮಾಡಲು ವಿಶಾಲವಾದ ಶಿಲಾಮಯ ಯಾಗ ಮಂಟಪ ನೋಡಿದರೆ ಯಾರನ್ನು ನಿಬ್ಬೆರಗಾಗಿಸುತ್ತದೆ. ಹಾಗೂ ರಾಷ್ಟ್ರೀಯ ಹೆದ್ದಾರಿ – ೬೬ ರಲ್ಲಿ ಜಗನ್ಮಾತೆಯ ದರ್ಶನಕ್ಕೆ ಭಕ್ತರನ್ನು ಕೈಬಿಸಿ ಕರೆಯುವಂತೆ ಕಾಣುವ ೭೫ ಅಡಿ ಎತ್ತರದ ಬ್ರಹದಾಕಾರದ ರಾಜ ಗೋಪುರ ಕರ ಕುಶಲ ನೈಪುಣ್ಯತೆಯಿಂದ ಕೂಡಿದೆ.
ಹಾಗಾಗಿಯೇ ಇಂದು ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಾಲಯ ನೋಡುಗರ ಕಣ್ಮನ ಸೆಳೆಯುವ ತಾಣವಾಗಿ ಮೂಡಿ ಬಂದಿದೆ. ಪ್ರಶ್ನಾ ಭಾಗದಲ್ಲಿ ಬಂದಂತೆ ದೇವಾಲಯದ ಒಳಭಾಗದಲ್ಲಿ ಪರಿವಾರ ದೇವರಾದ ಶ್ರೀ ಮಹಾಗಣಪತಿ, ಶ್ರೀ ಶ್ರೀನಿವಾಸ ದೇವರ ಗುಡಿಗಳು ಸುಂದರವಾಗಿ ಮೂಡಿ ಬಂದಿದೆ. ಹಾಗೇ ಪ್ರಧಾನ ದೇವರಾದ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ಗರ್ಭ ಗುಡಿಯು ವಿಶಾಲವಾಗಿ ಸುಂದರವಾಗಿದ್ದು, ತಾಯಿ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು ನಾಲ್ಕು ಬಾಹುಗಳಲ್ಲಿ ತ್ರಿಶೂಲ, ಚಕ್ರ, ಹಾಗೂ ಅಭಯ, ವರದ ಹಸ್ತದಿಂದ ಕೂಡಿದ ಪಂಚ ಲೋಹದಲ್ಲಿ ವಿರಾಜಮಾನಳಾಗಿದ್ದಾಳೆ.
ಇಂದು ಈ ಭವ್ಯ ಸುಂದರ ದೇವಾಲಯದಲ್ಲಿ ತನ್ನ ಅಭಯ ಹಸ್ತದಿಂದ ಭಗ್ವಧ್ಭಕ್ತರಿಗೆ ಹರಸುವ ತಾಯಿಯಾಗಿ ಮೂಡಿ ಬಂದಿದ್ದಾಳೆ. ಈಗಾಗಲೇ ರಾಜ್ಯ, ದೇಶ, ವಿದೇಶದವರೆಗೆ ಪ್ರಚಾರ ಪಡೆದಿರುವ ದೇವಾಲಯವು ಈಗಾಗಲೇ ಲಕ್ಷಾಂತರ ಭಕ್ತರ ಆರಾಧ್ಯ ತಾಯಿಯಾಗಿ ಇಷ್ಠಾರ್ಥವನ್ನು ಈಡೇರಿದ ನಿದರ್ಶನಗಳು ಇದೆ. ಹಾಗೇ ದೇಶ, ವಿದೇಶದಿಂದ ಆಗಮಿಸಿದ ಭಕ್ತರು ತಾಯಿಯ ಸೇವಾ ರೂಪವಾಗಿ ಸಪ್ತಶತೀ ಪಾರಾಯಣ, ಪಂಚ ದುರ್ಗಾದೀಪ ನಮಸ್ಕಾರ, ತುಲಾಭಾರ ಸೇವೆ, ಹಾಗೂ ಚಂಡಿಕಾ ಹೋಮವನ್ನು ಹಾಗೂ ಇನ್ನಿತರ ಸೇವೆಯನ್ನು ಕುಟುಂಬ ಸಮೇತರಾಗಿ ಆಗಮಿಸಿ ಸೇವೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಇಂದು ಭಕ್ತರ ಇಷ್ಟಾರ್ಥವನ್ನು ಬಹುಬೇಗ ಈಡೇರಿಸುವ ತಾಯಿಯಾಗಿ ಕುಂಭಾಶಿಯಲ್ಲಿ ನೆಲೆಯಾಗಿದ್ದಾಳೆ.
ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ ೫ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೂ ಭಕ್ತಾದಿಮಾನಿಗಳಿಗೆ ಅಮ್ಮನವರ ದರ್ಶನ ಪಡೆಯುವ ಅವಕಾಶವಿದೆ.
ನಡೆಯುವ ಧಾರ್ಮಿಕ ಕಾರ್ಯಕ್ರಮಗಳು
[ಬದಲಾಯಿಸಿ]- ಚಂಡಿಕಾ ಹೋಮ (ಮೂಲ ನಕ್ಷತ್ರ)
ಪ್ರತಿ ಮಾಸದ ಮೂಲಾ ನಕ್ಷತ್ರದಂದು ಸಾನಿಧ್ಯಾಭಿವೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರೀಚ೦ಡಿಕಾ ದುರ್ಗಾಪರಮೇಶ್ವರಿಯ “ಚ೦ಡಿಕಾ ಹೋಮ” ನೆರವೇರಿಸಲಾಗುತ್ತದೆ. ಅಂದಿನ ವಿಶೇಷ:- ಮಂಗಳವಾದ್ಯದೊ೦ದಿಗೆ ಶ್ರೀದೇವಿಯ ಉತ್ಸವ ಮೂರ್ತಿ ಯಾಗಶಾಲಾ ಪ್ರವೇಶ ಮಾಡಿ ಹೋಮಾ೦ತ್ಯದವರೆಗೆ ಯಾಗಶಾಲೆಯಲ್ಲಿಯೇ ಸಾನಿಧ್ಯ ಇದ್ದು ದರ್ಶನಕ್ಕೆ ಅವಕಾಶವಿರುತ್ತದೆ. ಸಂಜೆ ವಿಶೇಷ ದೀಪಾಲ೦ಕಾರದೊಂದಿಗೆ ರಂಗಪೂಜೆ, ಸ್ವರ್ಣಪಲ್ಲಕ್ಕಿ ಉತ್ಸವ, ಅಷ್ಮಾವಧಾನ, ಮಹಾ ಮಂಗಳಾರತಿ ತೀರ್ಥ ಪ್ರಸಾದ, ಬ್ರಹ್ಮಾಸ್ಪ ವಿತರಣೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಸೇವೆ ಇರುತ್ತದೆ. ಚಂಡಿಕಾ ಹೋಮದ ಸೇವಾರ್ಥಿಗಳ ಚಂಡಿಕಾ ಹೋಮವು ಮೂಲಾ ನಕ್ಷತ್ರದ ಚಂಡಿಕಾ ಹೋಮದಂತೆಯೆ ನಡೆಯುತ್ತದೆ. ಸಾರ್ವಜನಿಕ ಅನ್ನದಾನ ಸಂಜೆ ನಡೆಯುವ ರಂಗಪೂಜೆ, ಸ್ವರ್ಣ ಪಲ್ಲಕ್ಕಿ, ಅಷ್ಟಾವಾಧಾನ ಇತ್ಯಾದಿ ಸೇವೆಗಳು. (ಚಂಡಿಕಾ ಹೋಮ ಮಾಡಿಸುವ ಸೇವಾರ್ಥಿಗಳು ಅಪೇಕ್ಷಿಸಿದಲ್ಲಿ ಮಾತ್ರ)
- ಶ್ರೀ ಸೂಕ್ತ ಹೋಮ (ಪ್ರತಿ ಶುಕ್ರವಾರ ಬೆಳಗ್ಗೆ)
ಮಾಸದ ಪ್ರತಿ ಶುಕ್ರವಾರದಂದು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ದಿವ್ಯ ಅನುಗ್ರಹ, ಲೋಕ ಕಲ್ಯಾಣ ಹಾಗೂ ಸಮಸ್ತ ಭಕ್ತಾದಿಗಳ ಒಳ್ಳೆಯ ಸಂಪತ್ತು, ಅಭಿವೃದ್ಧಿಗಾಗಿ ಮಹಾಲಕ್ಷ್ಮೀಯ ಅನುಗ್ರಹ ಸಿದ್ಧಿಗಾಗಿ ಶ್ರೀ ಸೂಕ್ತ ಹೋಮ ಪ್ರಾತಃ ಕಾಲ ಆರಂಭಗೊಂಡು, ಅಮ್ಮನವರ ಆ ದಿನದ ಪ್ರಾತಃ ಕಾಲದ ಮಹಾ ಪೂಜೆ, ಮಹಾ ಮಂಗಳಾರತಿಯ ಮುನ್ನಾ ಸಂಪನ್ನಗೊಳ್ಳುತ್ತದೆ. ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನದಾನ ಸೇವೆ ಇರುತ್ತದೆ.
- ನವಕುಂಭ ಸಂಪನ್ನಅಧಿವಾಸ ಹೋಮ (ಪ್ರತಿ ಸಂಕ್ರಾಂತಿ)
ಪ್ರತಿ ಸಂಕ್ರಾಂತಿಯ ದಿನದಂದು ಈ ಹೋಮ ಜರುಗುತ್ತದೆ. ಪ್ರತಿ ಸಂಕ್ರಾಂತಿಯ ಹಿಂದಿನ ದಿನ ರಾತ್ರಿ ಅರ್ಚಕರೆಲ್ಲರೂ ಸೇರಿ ಮೂರು ಗರ್ಭಗುಡಿಗಳನ್ನು ದೇವರುಗಳಿಗೆ ವಸ್ತ್ರಾಚ್ಛಾದನೆ ಮಾಡಿ ಅಂದರೆ ವಸ್ತ್ರದಿಂದ ಮುಚ್ಚಿ ಗರ್ಭಗುಡಿಗಳ ಶುಚಿತ್ವ ದೃಷ್ಟಿಯಿಂದ ಸ್ವಚ್ಚತಾ ಕಾರ್ಯವನ್ನು ಮಾಡುತ್ತಾರೆ. ಅದರ ಜೊತೆಗೆ ಸಾನಿಧ್ಯದಲ್ಲಿ ಕಲಾ ಚೈತನ್ಯ ಅಧಿಕವಾಗುವುದಕ್ಕೋಸ್ಕರ ಮರುದಿನ ಅಂದರೆ ಸಂಕ್ರಾಂತಿಯಂದು ಈ ಕಾರ್ಯಕ್ರಮ ನಡೆಯುತ್ತದೆ. ೯ ಕಲಶದಿಂದ ದೇವಿಗೆ ಅಭಿಷೇಕ ಹಾಗೂ ಅಧಿವಾಸ ಹೋಮ, ಮಹಾ ಪೂಜೆ, ಮಹಾಗಣಪತಿಗೆ ಕಲಶಾಭಿಷೇಕ ಮಹಾಪೂಜೆ, ಶ್ರೀನಿವಾಸನಿಗೆ ಕಲಶಾಭಿಷೇಕ ಮಹಾ ಪೂಜೆ ನಡೆಯುತ್ತದೆ.
- ಷಣ್ಣಾರಿಕೇಳಿ ಗಣಹೋಮ (೬ ಕಾಯಿ ಗಣಹೋಮ ) (ಚೌತಿ )
ಪ್ರತಿ ಪಕ್ಷದ ಚತುರ್ಥಿ ತಿಥಿಯಂದು ಮಹಾಗಣಪತಿಯ ಅನುಗ್ರಹಕ್ಕೋಸ್ಕರ ಹಾಗೂ ಸಮಸ್ತ ಭಕ್ತಾದಿಗಳ ಧರ್ಮಕಾರ್ಯದ ನಿರ್ವಿಘ್ನತೆಗೊಸ್ಕರ ಗಣಹೋಮ ನಡೆಯುತ್ತದೆ. ಹಾಗೂ ಪ್ರತಿ ನಿತ್ಯ ೧ ಕಾಯಿಗಣ ಹೋಮ ನಡೆಯುತ್ತದೆ.
- ವಿಷ್ಣುಸೂಕ್ತ ಹೋಮ (ಶ್ರವಣ ನಕ್ಷತ್ರ)
ಪ್ರತಿ ಶ್ರವಣ ನಕ್ಷತ್ರದ ದಿನದಂದು ಈ ಕಾರ್ಯಕ್ರಮ ಶ್ರೀನಿವಾಸ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುತ್ತದೆ. ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತಾದಿಗಳ ಸರ್ವತೋಮುಖ ಅಭಿವೃದ್ಧಿ ,ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ, ವ್ಯವಹಾರಗಳ ಉನ್ನತಿಗಾಗಿ ಈ ಹೋಮ ನಡೆಯುತ್ತದೆ.
- ಆಶ್ಲೇಷಾ ಬಲಿ (ಆಶ್ಲೇಷ ನಕ್ಷತ್ರದ ದಿನ)
ಪ್ರತಿ ಆಶ್ಲೇಷಾ ನಕ್ಷತ್ರದ ದಿನದಂದು ಪ್ರಾತ:ಕಾಲ ಶ್ರೀ ಸರ್ಪಾದ್ಯಷ್ಟಕುಲ ನಾಗೇಂದ್ರ, ಶ್ರೀ ನಾಗಯಕ್ಷೀ, ಹಾಗೂ ಶ್ರೀ ಸ್ವರ್ಣಯಕ್ಷೀ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯುತ್ತದೆ. ನವಕುಂಭ ಸಂಪನ್ನ, ಕಲಶಾಭಿಷೇಕ, ಅಧಿವಾಸ ಹೋಮ ನಡೆದು ನಂತರ ವಿಶೇಷವಾಗಿ ಆಶ್ಲೇಷಾ ಬಲಿ ಹಾಗೂ ಉದ್ಯಾಪನ ಹೋಮ ಮಹಾ ಪೂಜೆಗಳು ನಡೆಯುತ್ತದೆ. ಸಮಸ್ತ ಭಕ್ತರ ಸರ್ಪ ಶಾಪ, ಸರ್ಪಕೋಪ, ಸರ್ಪತಾಪ ನಿವೃತ್ತಿಗೋಸ್ಕರ ಹಾಗೂ ಸಾನಿಧ್ಯಗಳ ಪ್ರಾಕಾರ ಶುದ್ಧಿ, ಪ್ರಾಂಗಣ ಶುದ್ಧಿ ಬಿಂಬ ಶುದ್ದಿ ಹಾಗೂ ಬಿಂಬದಲ್ಲಿ ಪೂರ್ಣ ಚೈತನ್ಯಕ್ಕೊಸ್ಕರ ಈ ಕಾರ್ಯಕ್ರಮಗಳು ನಡೆಯುತ್ತದೆ. ಮಧ್ಯಾಹ್ನ ಮಹಾಮಗಳಾರತಿ, ನಂತರ ವಟು ಆರಾಧನೆ ಹಾಗು ಬ್ರಾಹ್ಮಣ ಆರಾಧನೆ ನಡೆಯುತ್ತದೆ.
- ಪ್ರತಿನಿತ್ಯ ವೇದ ಪಾರಾಯಣ
ಪ್ರಾತಃ ಕಾಲದಲ್ಲಿ ಆರಂಭಗೊಂಡು ತ್ರಿಕಾಲದಲ್ಲಿಯೂ ಕೃಷ್ಣಯಜು ತೈತ್ತರೀಯ ಶಾಖೆಯ ವೇದ ಪಾರಾಯಣ ನಡೆಯುತ್ತದೆ.
- ಚಂಡಿಕಾ ಪಾರಾಯಣ (ಸಪ್ತಶತೀ) (ಪ್ರತಿ ದಿನ)
"ಯತ್ರೈತ್ ಪಠ್ಯತೆ ಸಮ್ಯಕ್ ನಿತ್ಯಮಾಯತನೇ ಮಮ ಸದಾ ನ ತದ್ವಿಮೋಕ್ಷ್ಯಾಮಿ ಸಾನ್ನಿಧ್ಯಂ ತತ್ರಮೇಸ್ಥಿತಮ್” ಎಂಬ ಭಗವತಿಯ ವಾಕ್ಯದಂತೆ “ ಎಲ್ಲಿ ಚಂಡಿಕಾ ಪಾರಾಯಣ ಅಂದರೆ ಸಪ್ತಶತೀ ಪಾರಾಯಣ ನಿತ್ಯವೂ ನಡೆಯುವುದೋ, ಅಲ್ಲಿ ಭಕ್ತಾನುಗ್ರಹದಾಯಿನಿಯಾಗಿ ಸಾನ್ನಿಧ್ಯಗೊಂಡು ಯಾವಾಗಲೂ ಅನುಗ್ರಹಿಸುತ್ತೇನೆ” ಎನ್ನುವುದಾಗಿ “ ಶ್ರುತಂ ಹರತಿ ಪಾಪಾನಿ ತಥಾರೋಗ್ಯಂ ಪ್ರಯಚ್ಛತಿ” ಎಂಬ ತಾಯಿಯ ಮಾತಿನಂತೆ ಪ್ರತಿ ನಿತ್ಯದ ಚಂಡಿಕಾ ಪಾರಾಯಣ ಶ್ರವಣ ಮಾಡಿ ಭಕ್ತಾದಿಗಳೆಲ್ಲರೂ ಪಾಪ ರಹಿತರಾಗಿ ಸದಾರೋಗ್ಯ ಭಾಗ್ಯವನ್ನು ಪಡೆದು ಪುಣ್ಯವಂತರಾಗುತ್ತಾರೆ. ಚಂಡಿಕಾ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಪ್ರತಿದಿನವೂ ಚಂಡಿಕಾ ಪಾರಾಯಣ ಅವಿಚ್ಛಿನ್ನವಾಗಿ ನಡೆಯುತ್ತದೆ. ಭಕ್ತರಿಗೆ ಬೇಕಾದಲ್ಲಿ ಸಂಪುಟಿ ಪಾರಾಯಣ ಸೇವೆಯನ್ನು ಮಾಡಲಾಗುವುದು.
- ಪ್ರತಿನಿತ್ಯವೂ ಪ್ರಾತಃ ಕಾಲ ಪಂಚಾಂಗ ಪಠನ, ಶ್ರವಣ
“ತಿಥೇಶ್ಚೈವರ್ಯಮವಾಪ್ನೋತಿ ವಾರಾದಾಯುಷ್ಯ ವರ್ಧನಮ್ ನಕ್ಷತ್ರಾ ಧ್ಧರತೇ ಪಾಪಂ ಯೋಗಾದ್ರೊಗ ನಿವಾರಣಮ್ ಕರಣಾತ್ಕಾರ್ಯ ಸಿದ್ಧಿಶ್ಚ ಪಂಚಾಗ ಫಲಮುತ್ತಮಮ್" ಪಂಚಾಂಗ ಅಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಪ್ರತಿ ನಿತ್ಯವು ಇವುಗಳ ಶ್ರವಣ, ಪಠನದಿಂದ, ತಿಥಿಯಿಂದ ಐಶ್ವರ್ಯ ಪ್ರಾಪ್ತಿ, ವಾರದಿಂದ ಆಯಸ್ಸು ವರ್ಧನೆ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ನಿವಾರಣೆ, ಕರಣದಿಂದ ಕಾರ್ಯಸಿದ್ಧಿ ಎಂಬ ಶುಭಫಲಗಳು ಪ್ರಾಪ್ತಿಯಾಗುತ್ತದೆ. ಪ್ರತಿ ನಿತ್ಯವು ಪ್ರಾತಃ ಕಾಲದ ಮಹಾಪೂಜೆಯ ನಂತರ ಪಂಚಾಂಗ ಪಠನ, ಶ್ರವಣ ನಡೆಯುತ್ತದೆ.
- ಶ್ರೀಮದ್ಭಗವದ್ಗೀತಾ ಪಠನ (ಪ್ರತಿ ದಿನ)
ಪ್ರತಿ ನಿತ್ಯ ಮಧ್ಯಾಹ್ನದ ಮಹಾ ಪೂಜೆ, ತೀರ್ಥಪ್ರಸಾದ ವಿತರಣೆಯ ನಂತರ ಭಗವದ್ಗೀತೆಯ ಪಠನ ನಡೆಯುವುದು. ಪ್ರತಿ ನಿತ್ಯ ಗೀತಾ ಪಠಣ ಶ್ರವಣದಿಂದ ಪುಣ್ಯಪ್ರಾಪ್ತಿ, ಪಾಪನಾಶ, ದುಃಖನಾಶ, ಆಪತ್ತುನಾಶ, ಸದಾರೋಗ್ಯ, ಧನ ಪ್ರಾಪ್ತಿಯನ್ನು ಪಡೆದು ಘೋರ ನರಕ ಪಡೆಯದೇ ಗೀತಾಚಾರ್ಯನಾದ ಭಗವಂತ ಶ್ರೀಕೃಷ್ಣ ಪರಮಾತ್ಮನ ದಿವ್ಯಸಾಯುಜ್ಯವನ್ನು ಪಡೆಯಬಹುದು.
- ದೇವಿ ಸ್ತೊತ್ರ ಪಾರಾಯಣ
ಪ್ರತಿದಿನ ರಾತ್ರಿ ಮಹಾಮಂಗಳಾರತಿಯ ನಂತರ ಈ ಸ್ತೋತ್ರ ಪಾರಾಯಣ ನಡೆಯುತ್ತದೆ. ದೇವ್ಯಪರಾಧ ಕ್ಷಮಾಪಣ ಸ್ತೊತ್ರ, ಆನಂದ ಲಹರೀಸ್ತೊತ್ರ, ಶಾರದಾ ಭುಜಂಗಸ್ತೊತ್ರ ಪಾರಾಯಣಗಳು ನಡೆಯುತ್ತದೆ. ಸ್ತೋತ್ರಗಳ ಪಠನ, ಶ್ರವಣದಿಂದ ಪಾಪನಾಶವಾಗಿ, ಪುಣ್ಯ ಪ್ರಾಪ್ತಿಯಾಗಿ ಜಗನ್ಮಾತೆಯ ದಿವ್ಯ ಅನುಗ್ರಹವಾಗುತ್ತದೆ.
- ಸಾಮೂಹಿಕ ಸತ್ಯನಾರಾಯಣ ವ್ರತ ಕಥೆ, ಪೂಜೆ (ಪ್ರತಿ ಹುಣ್ಣಿಮೆ)
ಪ್ರತಿ ಮಾಸದ ಹುಣ್ಣಿಮೆಯಂದು ಸಾಯಂಕಾಲ ಈ ಕೈಂಕರ್ಯವು ನಡೆಯುತ್ತದೆ. ಕಲಿಯುಗದಲ್ಲಿ ಶ್ರೇಷ್ಠವಾದ ವ್ರತವನ್ನು ಮಾಡಿಸಿ, ಕಥಾಶ್ರವಣ, ಸಪಾದ ಭಕ್ಷ್ಯ ಸೇವಿಸಿ ವ್ರತದ ಸಂಪೂರ್ಣ ಫಲವನ್ನು ಭಕ್ತಾದಿಗಳು ಪಡೆಯುತ್ತಾರೆ. ಲೋಕ ಕಲ್ಯಾಣದ ಜೊತೆಗೆ ಭಕ್ತರು, ತಮ್ಮ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಕ್ರತಾರ್ಥರಾಗುತ್ತಾರೆ. ಭಕ್ತರಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಬಾಹ್ಯ ಸಂಪರ್ಕ
[ಬದಲಾಯಿಸಿ]- https://www.youtube.com/watch?v=P6l0RqKcyL4
- https://www.google.com.pk/travel/entity/key/ChkI-YKH2eW2jfgGGg0vZy8xMWY2MmNyNm5fEAQ?ved=0CAAQ5JsGahcKEwi4tvjz6Pb9AhUAAAAAHQAAAAAQAw&ts=CAESABoECgIaACoECgAaAA
- https://www.facebook.com/people/Sri-Chandika-Durgaparameshwari-Temple-Kumbhashi/100069979571638/