ವಿಷಯಕ್ಕೆ ಹೋಗು

ಗರ್ನ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗ್ಲೆಂಡಿನ ದಕ್ಷಿಣಕ್ಕೆ, ಫ್ರಾನ್ಸ್ ತೀರಕ್ಕೆ ಸಮೀಪದಲ್ಲಿ ಇಂಗ್ಲಿಷ್ ಕಡಾಲ್ಗಾಲುವೆಯಲ್ಲಿರುವ ದ್ವೀಪಗಳಲ್ಲೊಂದು. ಗಾತ್ರದಲ್ಲಿ ಎರಡನೆಯದು. ವಿಸ್ತೀರ್ಣ 63. ಚ.ಕಿ.ಮೀ. ಉದ್ದ ಈಶಾನ್ಯದಿಂದ ನೈಋತ್ಯಕ್ಕೆ, ದಕ್ಷಿಣದಲ್ಲಿ ಇದರ ಅಗಲ ಸು. 13.5 ಕಿ.ಮೀ ಹರ್ಮ್, ಜ್ಹೀಟೂ ಮತ್ತು ಇತರ ಪುಟ್ಟ ದ್ವೀಪಗಳನ್ನೊಳಗೊಂಡಂತೆ ಏರ್ಪಟ್ಟಿರುವ ಬೇಯ್ಲಿಫ್ ಆಡಳಿತ ಪ್ರದೇಶದ ಜನಸಂಖ್ಯೆ 47,158 (1961). ರಾಜಧಾನಿ ಸೇಂಟ್ ಪೀಟರ್ಸ ಪೋರ್ಟ್.


ಭೌತಲಕ್ಷಣ

ಗರ್ನ್ಸಿ ದ್ವೀಪದ ದಕ್ಷಿಣ ಭಾಗದಲ್ಲಿ ಸಮುದ್ರದಂಚಿನಲ್ಲಿ ಪ್ರಪಾತಗಳಿವೆ. ಅನೇಕ ಕಡೆ ಸಮುದ್ರದ ಅಲೆಗಳಿಂದ ಸಂಭವಿಸಿದ ಕೊರಕಲುಗಳುಂಟು. ಉತ್ತರಾಭಿಮುಖವಾದ ತೊರೆಗಳು ಇಲ್ಲಿಯ ಕಣಿವೆಗಳ ಮೂಲಕ ಹರಿಯುತ್ತವೆ. ದಕ್ಷಿಣತೀರಭಾಗದ ಹೊರತು ದ್ವೀಪದ ಇತರ ತೀರಗಳಲ್ಲಿ ಕಲ್ಲಿನ ದಿಬ್ಬಗಳು ಹೆಚ್ಚು. ಇಂಥ ದಿಬ್ಬಗಳು ಪೆರೆಲ್ಲಿ ಕೊಲ್ಲಿ ಮತ್ತು ಅನತಿದೂರದ ಲಿಹೌ ದ್ವೀಪದಲ್ಲಿ ಹೇರಳವಾಗಿವೆ. ದ್ವೀಪದ ಪಶ್ಚಿಮತೀರ ಅಟ್ಲಾಂಟಿಕ್ ಸಾಗರಕ್ಕೆ ತೆರವಾಗಿದೆ. ಅಲ್ಲಿ ಹಲವು ನೌಕಾಘಾತಗಳು ಸಂಭವಿಸಿವೆ. ಉತ್ತರಕರಾವಳಿ ತಗ್ಗು, ಸೇಂಟ್ ಸ್ಯಾಂಪ್ಸನ್ ಬಂದರು ಇರುವುದು ಆ ಭಾಗದಲ್ಲಿ. ಅಲ್ಲಿ ಭೂಮಿ ಸಮುದ್ರದಿಂದ ಕೊಚ್ಚಿ ಬಂದ ಮರಳಿನಿಂದ ಕೂಡಿದ್ದು, ಸಮುದ್ರದ ಗಷ್ಟು ಮತ್ತು ಮರಳು ದಿಬ್ಬಗಳ ನಡುವಣ ಜಲಭಾಗದಲ್ಲಿ ಶೇಖರವಾದ ಕಶ್ಮಲ ವಸ್ತು ಸಾಮಾನ್ಯವಾಗಿ ಗೊಬ್ಬರವಾಗಿ ಉಪಯೋಗಕ್ಕೆ ಬರುತ್ತದೆ.


ವಾಯುಗುಣ

ಈ ದ್ವೀಪದ್ದು ಸಮುದ್ರತೀರದ ವಾಯುಗುಣ. ಮಂಜು ಮತ್ತು ಹಿಮ ಕಡಿಮೆ. ವಾರ್ಷಿಕ ಸರಾಸರಿ ಉಷ್ಣತೆ 170 ಫ್ಯಾ. (-80ಸೆಂ.). ಬಿಸಿಲು ವರ್ಷದಲ್ಲಿ 1,905 ಘಂಟೆಗಳ ಕಾಲ ಬೀಳುತ್ತದೆ. ವಾರ್ಷಿಕ ಮಧ್ಯಕ ಮಳೆ ದಕ್ಷಿಣದಲ್ಲಿ 89 ಸೆಂ.ಮೀ, ವಾಯುವ್ಯದಲ್ಲಿ 76 ಸೆಂ.ಮೀ ಈ ದ್ವೀಪದ ಸಿಹಿನೀರಿನ ಅಭಾವವನ್ನು ಸಮುದ್ರದ ನೀರನ್ನು ಶೋಧಿಸುವ ಯಂತ್ರದ ಸಹಾಯದಿಂದ ಈಗ ನಿವಾರಿಸಿದ್ದಾರೆ.


ಇತಿಹಾಸ

ಗರ್ನ್ಸಿ ದ್ವೀಪದಲ್ಲಿ ನವಶಿಲಾಯುಗದಿಂದಲೂ ಜನಜೀವನ ಇದೆಯೆಂದು ತಿಳಿದುಬರುತ್ತದೆ. 11ನೆಯ ಶತಮಾನದಲ್ಲಿ ನಾರ್ಮಂಡಿ ಪ್ರದೇಶದ ಜನ ಈ ದ್ವೀಪದಲ್ಲಿ ವಸಾಹತುಗಳನ್ನು ಸ್ಥಾಪಿಸಿಕೊಂಡರು. ಆಗಿನ ಕಾಲದ ದಾಖಲೆಗಳಿಂದ ಸೇಂಟ್ ಸೋವರ್ ಪ್ರಭುಗಳು, ಬೆಸ್ಸಿನ್ನ ಶ್ರೀಮಂತರು, ಲ ಮಾಂಟ್ ಸೇಂಟ್ ಮಿಚ್ಚೆಲ್, ಕ್ರೈಸ್ತಮಠದ ಪಾದ್ರಿಗಳು ಹಾಗೂ ನಾರ್ಮಂಡಿಯ ಡ್ಯೂಕ್-ಇವರು ಈ ದ್ವೀಪದ ಮುಖ್ಯ ಭೂಮಾಲೀಕರಾಗಿದ್ದರೆಂದು ತಿಳಿದುಬರುತ್ತದೆ. ಆ ಶತಮಾನದಲ್ಲಿ ಹತ್ತು ಪ್ಯಾರಿಷ್ ಚರ್ಚುಗಳು ಇಲ್ಲಿದ್ದುವು. 12ನೆಯ ಶತಮಾನದಲ್ಲಿ ಹನ್ನೆರಡು ಫ್ರೆಂಚ್ ಕ್ರೈಸ್ತ ಮಠಗಳು ಈ ದ್ವೀಪದಲ್ಲಿ ಸ್ವತ್ತು ಹೊಂದಿದ್ದುವು. ನಾರ್ಮಂಡಿಯಿಂದ ಪ್ರತ್ಯೇಕಗೊಂಡ ಮೇಲೆ, ಇಂಗ್ಲೆಂಡಿನ ಜಾನ್ ದೊರೆಯ ಕಾಲದಿಂದ ಈ ದ್ವೀಪ ಅದರ ಸಾಮಾನ್ಯ ಕಾನೂನುಗಳನ್ನು ಮತ್ತು ಸ್ಥಳೀಯ ಪದ್ಧತಿಗಳನ್ನು ಉಳಿಸಿಕೊಂಡು ಬಂತು. 15ನೆಯ ಶತಮಾನದ ಕೊನೆಯಿಂದ ಈ ದ್ವೀಪದ ಆಡಳಿತವನ್ನು ನೋಡಿಕೊಳ್ಳಲು ಒಬ್ಬ ಕಪ್ತಾನನನ್ನು ನೇಮಿಸಲಾಯಿತು. ಕ್ರಮೇಣ ಈ ಅಧಿಕಾರಿಯ ಹೆಸರು ಗವರ್ನರ್ ಎಂದಾಯಿತು. 1835ರಲ್ಲಿ ಗವರ್ನರ್ ಹುದ್ದೆ ರದ್ದಾಯಿತು; ಇದರ ಆಡಳಿತಕ್ಕೆ ಲೆಫ್ಟ್ಟೆನೆಂಟ್ ಗವರ್ನರನ ನೇಮಕವಾಯಿತು.


14ನೆಯ ಶತಮಾನದ ಇಂಗ್ಲೆಂಡಿನ ಸಂಚಾರಿ ನ್ಯಾಯಾಧೀಶರು ಗರ್ನ್ಸಿ ದ್ವೀಪಕ್ಕೆ ಬಂದು ನ್ಯಾಯ ವಿಚಾರಣೆ ಮಾಡುವ ಪದ್ಧತಿ ಪ್ರಾರಂಭವಾಯಿತು. ತರುವಾಯ ನ್ಯಾಯಾಧಿಕಾರವನ್ನು ವಾರ್ಡನ್ ಎಂಬ ನ್ಯಾಯಾಧಿಕಾರಿಗೂ ಆ ತರುವಾಯ ಬೇಯ್ಲಿಫ್ ಮತ್ತು ನ್ಯಾಯದರ್ಶಿಗಳಿಗೂ ನೀಡಲಾಯಿತು. ಕಾಯಿದೆಯ ಕ್ಲಿಷ್ಟ ಸಮಸ್ಯೆಗಳನ್ನು ಭೂಹಿಡುವಳಿದಾರರೇ ಮುಂತಾದವರು ನ್ಯಾಯಾಲಯದಲ್ಲಿ ಸೇರಿದಾಗ ಬಗೆಹರಿಸುತ್ತಿದ್ದ ಪದ್ಧತಿಯಿಂದ ದಿ ಸ್ಟೇಟ್ಸ್ ಆಫ್ ಡೆಲಿಬರೇಷನ್ಸ್, ಎಂಬ ಶಾಸನ ಸಭೆ ವಿಕಾಸ ಹೊಂದಿತು. 19ನೆಯ ಶತಮಾನದಲ್ಲಿ ಸ್ಟೇಟ್ಸ್ ಸಭೆ ಕಾರ್ಯನಿರ್ವಾಹಕ ಸಮಿತಿಗಳ ಮೂಲಕ ದ್ವೀಪದ ಆಡಳಿತ ವಹಿಸಿತು.


ಗರ್ನ್ಸಿ ದ್ವೀಪ ಯಾವ ಕಾಲದಲ್ಲೂ ಪ್ರಬಲ ರಾಜಮನೆತನಗಳ ಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. ರೈತ ಜನ ಭೂಮಾಲೀಕರಿಂದ ಶೋಷಿತರಾಗದೆ ಸ್ವತಂತ್ರವಾಗಿ ಉಳಿದುಕೊಂಡು ಬಂದಿದ್ದಾರೆ. ವಾಣಿಜ್ಯಾಭಿವೃದ್ಧಿಯಿಂದಾಗಿ ಸೇಂಟ್ ಪೀಟರ್ ಬಂದರು ಅಭಿವೃದ್ಧಿ ಹೊಂದಿ, 19ನೆಯ ಶತಮಾನದಲ್ಲಿ ಕೈಗಾರಿಕೆಗಳು ಮುಂದುವರಿದ ಕಾರಣ ಈ ದ್ವೀಪದಲ್ಲಿ ಊಳಿಗಮಾನ್ಯ ಪದ್ಧತಿ ಸಡಿಲಗೊಂಡಿತು.


ಜನಜೀವನ

ಗರ್ನ್ಸಿಯ ಜನ ನಾರ್ಮನ್ ಬುಡಕಟ್ಟಿನವರು. ಬ್ರಿಟನ್ನಿನ ಜನಾಂಗದವರೊಡನೆ ಕಲೆತಿದ್ದಾರೆ. 19ನೆಯ ಶತಮಾನದಲ್ಲಿ ಕಲ್ಲು ಗಣಿ ಕೆಲಸ ಮತ್ತು ತೋಟಗಾರಿಕೆಗೆ ಹೆಚ್ಚು ಅವಕಾಶವಿದ್ದ ಕಾರಣ ಜನ ಈ ದ್ವೀಪಕ್ಕೆ ವಲಸೆ ಬರಲಾರಂಭಿಸಿ ಜನಸಂಖ್ಯೆ ಹೆಚ್ಚಿತು. ದ್ವೀಪದ ಜನರಲ್ಲಿ 2/5 ಭಾಗ ಸೇಂಟ್ ಪೀಟರ್ಸ ಪೋರ್ಟ್ ನಗರದಲ್ಲಿ ವಾಸಿಸುತ್ತಾರೆ.


ಆಡಳಿತ

ಗರ್ನ್ಸಿ ದ್ವೀಪದ ಆಡಳಿತವನ್ನು ಸ್ಟೇಟ್ಸ್ ಆಫ್ ಡೆಲಿಬರೇಷನ್ಸ್ ಸಭೆ ವಹಿಸಿದೆ. ಅದರ ಅಧ್ಯಕ್ಷ ಬೇಯ್ಲಿಫ್. 12 ಮಂತ್ರಾಲೋಚಕರು (ಕೌನ್ಸೆಲರ್ಸ), 33 ಚುನಾಯಿತ ಪ್ರಜಾಪ್ರತಿನಿಧಿಗಳು, 10 ಡೌಜೇ಼ನ್ ಪ್ರತಿನಿಧಿಗಳು, 2 ಡೆಪ್ಯುಟಿಗಳು ಸಭೆಯ ಸದಸ್ಯರು. ರಾಯಲ್ ನ್ಯಾಯಾಲಯದ ಅಧಿಪತಿ ಬೇಯ್ಲಿಫ್; ಅವನ ನೆರವಿಗೆ 12 ಮಂದಿ ಚುನಾಯಿತ ನ್ಯಾಯದರ್ಶಿಗಳಿದ್ದಾರೆ. ನ್ಯಾಯ ವ್ಯವಹಾರ ಇಂಗ್ಲಿಷಿನಲ್ಲಿ ನಡೆಯುತ್ತದೆ. ಲೆಫ್ಟೆನೆಂಟ್ ಗವರ್ನರ್ ಬ್ರಿಟಿಷ್ ದೊರೆಯ ವೈಯಕ್ತಿಕ ಪ್ರತಿನಿಧಿ.