ಕಿತ್ತಳೆ
ಕಿತ್ತಳೆ | |
---|---|
ಕಿತ್ತಳೆ ಹೂವುಗಳು ಮತ್ತು ಹಣ್ಣು | |
Scientific classification | |
ಸಾಮ್ರಾಜ್ಯ: | plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. × sinensis
|
Binomial name | |
Citrus × sinensis |
ಕಿತ್ತಳೆಯು ಸಿಟ್ರಸ್ ಪಂಗಡದ ಸಿಟ್ರಸ್ ×ಸಿನೇನ್ಸಿಸ್ (ಪರ್ಯಾಯ ಪದ ಸಿಟ್ರಸ್ ಆರೇಂಟಿಯಂ) ಸಸ್ಯ ಮತ್ತು ಅದರ ಹಣ್ಣು. ಕಿತ್ತಳೆಯು ಪ್ರಾಚೀನವಾಗಿ ಬೇಸಾಯ ಮಾಡಲಾದ ಮೂಲದ ಒಂದು ಮಿಶ್ರತಳಿ, ಸಂಭಾವ್ಯವಾಗಿ ಪಾಮಲೋ (ಸಿಟ್ರಸ್ ಮ್ಯಾಕ್ಸಿಮಾ) ಮತ್ತು ಟ್ಯಾಂಜರೀನ್ (ಸಿಟ್ರಸ್ ರೆಟಿಕ್ಯೂಲೇಟಾ) ನಡುವಿನ ಮಿಶ್ರತಳಿ. ಅದು ಸುಮಾರು ೧೦ ಮಿ ಎತ್ತರಕ್ಕೆ ಬೆಳೆಯುವ, ಪ್ರತಿಯಾಗಿ ಜೋಡಣೆಗೊಂಡ ಅಂಡಾಕಾರದ ಕಚ್ಚುಳ್ಳ ಅಂಚುಗಳಿರುವ ೪-೧೦ ಸೆ.ಮಿ. ಉದ್ದದ ನಿತ್ಯಹರಿದ್ವರ್ಣ ಎಲೆಗಳನ್ನು ಹೊಂದಿರುವ, ಒಂದು ಚಿಕ್ಕದಾದ ಹೂಬಿಡುವ ಮರ.
ವೈಜ್ಞಾನಿಕ ವರ್ಗೀಕರಣ
[ಬದಲಾಯಿಸಿ]ರೂಟೇಸೀ ಕುಟುಂಬಕ್ಕೆ ಸೇರಿದ ಸಿಟ್ರಸ್ ಎಂಬ ವೈಜ್ಞಾನಿಕ ಹೆಸರಿನ ಜಾತಿಯ ರೆಟಿಕ್ಯುಲೇಟ ಪ್ರಭೇದಕ್ಕಿರುವ ಸಾಮಾನ್ಯ ಬಳಕೆಯ ಹೆಸರು (ಆರಿಂಜ್). ಇಂಗ್ಲಿಷಿನಲ್ಲಿ ಇದನ್ನು ಮ್ಯಾಂಡರಿನ್ ಆರಿಂಜ್ ಅಥವಾ ಮ್ಯಾಂಡರಿನ್ ಎಂದೂ ಇದರ ಕೆಲವು ಬಗೆಗಳನ್ನು ಟ್ಯಾಂಜರಿನ್ ಎಂದೂ ಕರೆಯುವುದುಂಟು. ಇಂಗ್ಲಿಷಿನ ಆರಿಂಜ್ ಪದ ಸಿಟ್ರಸ್ ಜಾತಿಯ ಸೈನೆನ್ಸಿಸ್ (ಚೀನ ಅಥವಾ ಮೊಜಾಂಬಿಕ್ ಆರಿಂಜ್) ಮತ್ತು ಆರ್ಯಾಂಶಿಯಮ್ (ಸೌರ್ ಆರಿಂಜ್) ಪ್ರಭೇದಗಳಿಗೂ ಅನ್ವಯವಾಗುತ್ತದೆ. ಕನ್ನಡದಲ್ಲಿ ಸೈನೆನ್ಸಿಸ್ ಪ್ರಭೇದಕ್ಕೆ ಮೋಸಂಬಿ ಎಂಬ ಹೆಸರಿದೆ. ಇದರ ಹಣ್ಣನ್ನು ಬಹು ರುಚಿಯಾದ ಹಾಗೂ ಪುಷ್ಟಿಕರವಾದ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು ಇದು ಮಾನವನಿಗೆ ಬಹಳ ಹಿಂದಿನಿಂದಲೂ ಪರಿಚಿತವಾಗಿದೆ.
ವಿವಿಧ ತಳಿಗಳು
[ಬದಲಾಯಿಸಿ]ಸಾಮಾನ್ಯ ಕಿತ್ತಳೆ ಎಲ್ಲಾ ಕಿತ್ತಳೆ ಉತ್ಪಾದನೆಯ ಸುಮಾರು ಎರಡು ಭಾಗದಷ್ಟು ಇರುತ್ತದೆ. (ಸಹ "ಉದ್ದ" ಕಿತ್ತಳೆ "ಬಿಳಿ", "ಸುತ್ತಿನಲ್ಲಿ", "ಹೊಂಬಣ್ಣದ" ಸಹ ಕರೆಯುತ್ತಾರೆ). ಈ ಬೆಳೆ ಬಹುತೇಕ ರಸ ತೆಗೆಯುವುದಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ.
ಭೌಗೋಳಿಕ ಹರಡುವಿಕೆ
[ಬದಲಾಯಿಸಿ]ಏಷ್ಯಖಂಡದ ಉಷ್ಣವಲಯ ಅದರಲ್ಲೂ ಮಲಯ ದ್ವೀಪಸ್ತೋಮಗಳು ಕಿತ್ತಳೆಯ ತವರು ಎಂದು ನಂಬಲಾಗಿದೆ. ಇಲ್ಲಿಂದ ಅದು ತನ್ನ ಬೆಳೆವಣಿಗೆಗೆ ಅನುಕೂಲ ವಾಯುಗುಣವಿರುವ ಪ್ರದೇಶಗಳಿಗೆ ಹಬ್ಬಿದೆ ಎಂದು ಹೇಳಲಾಗಿದೆ. ಇಂದು ಕಿತ್ತಳೆ ಪ್ರಪಂಚದ ಉಷ್ಣ ಹಾಗೂ ಉಪೋಷ್ಣ ವಲಯಗಳಲ್ಲೆಲ್ಲ ಬೇಸಾಯದಲ್ಲಿದೆ. ಕಿತ್ತಳೆಯನ್ನು ಬೆಳೆಯುವ ದೇಶಗಳಲ್ಲಿ ಪ್ರಮುಖವಾದವು ಭಾರತ, ಉತ್ತರ ಅಮೆರಿಕ, ಇಂಗ್ಲೆಂಡ್, ಯೂರೋಪಿನ ಮೆಡಿಟರೇನಿಯನ್ ಪ್ರದೇಶ, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ. ಭಾರತದಲ್ಲಿ ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಕಿತ್ತಳೆಬೇಸಾಯ ಇದೆ. ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಿತ್ತಳೆಯನ್ನು ಬೆಳೆಸಲಾಗುತ್ತಿದೆ.
ಕಿತ್ತಳೆ ಪುರಾತನ ಕಾಲದಿಂದಲೂ ರೂಟೇಸೀ ಕುಟುಂಬದ ನಿಂಬೆ ಮುಂತಾದ ಪ್ರಭೇದಗಳೊಡನೆ ಬೇಸಾಯದಲ್ಲಿತ್ತೆಂದು ನಂಬಿಕೆಯಿದೆ. ಆದರೆ ಇದು ತನ್ನ ಮೂಲವಾಸಸ್ಥಾನದಿಂದ ಬೇರೆ ಪ್ರದೇಶಗಳಿಗೆ ಹೇಗೆ ಹರಡಿತೆಂಬ ಬಗ್ಗೆ ಖಚಿತ ವಿವರಣೆ ಇಲ್ಲ. ಕಿತ್ತಳೆ ತನ್ನ ತವರಿನಿಂದ ಭಾರತಕ್ಕೂ ಅನಂತರ ಆಫ್ರಿಕದ ಪೂರ್ವತೀರ ಪ್ರದೇಶಗಳಿಗೂ ಅಲ್ಲಿಂದ ಮೆಡಿಟರೇನಿಯನ್ ಪ್ರದೇಶಗಳಿಗೂ ಹರಡಿತೆಂದು ಹೇಳಲಾಗಿದೆ. ಸ್ಯಾಮ್ಯುಯಲ್ ಟಾಲ್ಕಾವ್‍ಸ್ಕಿ ಎಂಬಾತ ಸಿಟ್ರಸ್ ಜಾತಿಯ ಸಸ್ಯಗಳ ಇತಿಹಾಸವನ್ನು ಕುರಿತು ಬರೆದಿರುವ ತನ್ನ ಪುಸ್ತಕದಲ್ಲಿ ಕ್ರಿಸ್ತಶಕದ ಮೊದಲನೆಯ ಶತಮಾನದ ಮಧ್ಯದ ವೇಳೆಗೆ ಇಟಲಿಯಲ್ಲಿ ಕಿತ್ತಳೆಯ ಬೇಸಾಯವಿತ್ತೆಂದು ಉಲ್ಲೇಖಿಸಿದ್ದಾನೆ. 15ನೆಯ ಶತಮಾನದ ಕೊನೆಯ ವೇಳೆಗೆ ಕಿತ್ತಳೆ ಪಶ್ಚಿಮ ಗೋಳಾರ್ಧಕ್ಕೆ ಹರಡಿತು. ಕೊಲಂಬಸ್ ತನ್ನ ಎರಡನೆಯ ವಿಶ್ವಪರ್ಯಟನದಲ್ಲಿ ಕ್ಯಾನರಿ ದ್ವೀಪದಿಂದ ಕಿತ್ತಳೆ ಬೀಜಗಳನ್ನು ಕೊಂಡೊಯ್ದನೆಂದು ಹೇಳಲಾಗಿದೆ. ಅನಂತರ ಕಿತ್ತಳೆ ದಕ್ಷಿಣ ಅಮೆರಿಕ ಹಾಗೂ ಉತ್ತರ ಅಮೆರಿಕಗಳೆರಡಕ್ಕೂ ಪಸರಿಸಿತು.
ಲಕ್ಷಣಗಳು
[ಬದಲಾಯಿಸಿ]ಕಿತ್ತಳೆಸಸ್ಯ ಸುಮಾರು 20' ಎತ್ತರಕ್ಕೆ ಬೆಳೆಯುವ ಸಣ್ಣಮರ. ಎಲೆಗಳು ಸರಳ; ಪರ್ಯಾಯವಾಗಿ ಜೋಡಣೆಯಾಗಿವೆ. ವೃಂತಪರ್ಣಗಳಿಲ್ಲ. ಎಲೆಗಳ ತೊಟ್ಟಿನ ಮೇಲೆ ಅಗಲವಾದ ರೆಕ್ಕೆಯಿದೆ. ಎಲೆಗಳ ಆಕಾರ ಅಂಡದಂತೆ; ತುದಿ ಮೊನಚು. ಎಲೆಗಳು ಕಂಕುಳಲ್ಲಿ ಮುಳ್ಳುಗಳಿವೆ. ಹೂಗೊಂಚಲು ಅಂತ್ಯಾರಂಭಿ ಮಾದರಿಯ ಕಾರಿಂಬ್ ಎಂಬ ಬಗೆಯದು. ಹೂಗಳು ದ್ವಿಲಿಂಗಿಗಳು; ಆರೀಯಸಮಾಂಗತೆಯುಳ್ಳವು. ಒಂದೊಂದು ಹೂವಿನಲ್ಲೂ 3-5 ಹಾಲೆಗಳುಳ್ಳ ಪುಷ್ಪಪಾತ್ರೆಯೂ 4-8 ದಪ್ಪವಾದ ದಳಗಳೂ ಹೇರಳ ಸಂಖ್ಯೆಯಲ್ಲಿ ಕೇಸರಗಳೂ ಹಲವು ಕಾರ್ಪೆಲ್‍ಗಳಿಂದ ಕೂಡಿದ ಸಂಯುಕ್ತ ಮಾದರಿಯ ಉಚ್ಚಸ್ಥಾನದ ಅಂಡಾಶಯವೂ ಇವೆ. ಅಂಡಾಶಯಕ್ಕೂ ಕೇಸರದಂಡಗಳಿಗೂ ನಡುವೆ ವರ್ತುಲಾಕಾರದ ತಟ್ಟೆಯಿದೆ. ಅಂಡಕೋಶದಲ್ಲಿ ಹಲವಾರು ಕೋಣೆಗಳಿದ್ದು ಒಂದೊಂದರಲ್ಲೂ ದ್ವಿಲಂಬ ಸಾಲುಗಳಲ್ಲಿ ಜೋಡಣೆಯಾಗಿರುವ ಅಂಡಕಗಳಿವೆ; ಅಂಡಕಗಳ ಸಂಖ್ಯೆ ಪ್ರತಿಕೋಣೆಗೆ 4-8. ಫಲ ಗುಂಡಗಿನ ಆಕಾರದ ಬೆರಿಮಾದರಿಯದು. ಇದರಲ್ಲಿ ಚರ್ಮಿಲವಾದ ಹೊರಸಿಪ್ಪೆಯೂ (ಎಪಿಕಾರ್ಪ್) ತೆಳುವಾದ ಮತ್ತು ಬಿಳಿಯ ಬಣ್ಣದ ನಡುಸಿಪ್ಪೆಯೂ (ಮೀಸೋಕಾರ್ಪ್) ತೆಳುವಾದ ಒಳಸಿಪ್ಪೆಯೂ (ಎಂಡೋಕಾರ್ಪ್) ಇವೆ. ಹೊರಸಿಪ್ಪೆಯಲ್ಲಿ ಅಸಂಖ್ಯಾತವಾಗಿ ತೈಲಗ್ರಂಥಿಗಳಿವೆ. ಈ ತೈಲವೇ ಹಣ್ಣಿನ ವಿಶಿಷ್ಟವಾಸನೆಗೆ ಕಾರಣ. ಹೊರಸಿಪ್ಪೆಯೂ ನಡುಸಿಪ್ಪೆಯೂ ಒಂದಕ್ಕೊಂದು ಬಲವಾಗಿ ಅಂಟಿಕೊಂಡಿವೆ. ಒಳಸಿಪ್ಪೆ ಫಲದ ಕೋಣೆಗಳೊಳಗೆ ನುಗ್ಗಿ ಅವನ್ನು ಹಲವಾರು ಕೋಣೆಗಳಾಗಿ ವಿಂಗಡಿಸಿದೆಯಲ್ಲದೆ ಒಳಸಿಪ್ಪೆಯ ಒಳಭಾಗದಿಂದ ಹಲವಾರು ರಸಭರಿತವಾದ ಏಕಕೋಶಿ ರೋಮಗಳು ಹೊರಟು ಅಂಡಾಶಯದ ಕೋಣೆಗಳನ್ನೆಲ್ಲ ಆವರಿಸಿವೆ. ಈ ರೋಮಗಳಿಂದ ಕೂಡಿದ ಮೃದುವಾದ ಹಾಗೂ ರಸಭರಿತವಾದ ಭಾಗವೇ ನಾವು ತಿನ್ನುವ ತಿರುಳು. ಕೋಣೆಗಳೇ ಕಿತ್ತಳೆ ತೊಳೆಗಳು (ಸೋಳೆಗಳು). ಕಿತ್ತಳೆಹಣ್ಣಿನಸಿಪ್ಪೆ ತಿರುಳಿನೊಂದಿಗೆ ಅಂಟಿಕೊಂಡಿಲ್ಲದೆ ಸಡಿಲವಾಗಿರುವುದು ಅದರ ಇನ್ನೊಂದು ವಿಶೇಷ ಲಕ್ಷಣ. ಕಿತ್ತಳೆ ಹಣ್ಣಿನ ಹೆಸ್ಪೆರಿಡಿಯಮ್ ಎಂಬ ಶಾಸ್ತ್ರೀಯ ಹೆಸರಿದೆ.
ಕಿತ್ತಳೆಯ ಬಗೆಗಳು
[ಬದಲಾಯಿಸಿ]ಕಿತ್ತಳೆಯಲ್ಲಿ ಒಂದು ನೂರಕ್ಕೂ ಹೆಚ್ಚು ಬಗೆಗಳಿವೆ. ಮೆಡಿಟರೇನಿಯನ್ ಪ್ರದೇಶದಲ್ಲಿ ಬೆಳೆಯಲಾಗುವ ಜಾಫ, ಶಮೂಟಿ, ಬೆಲ್ಲಾಡಿ, ಅಮೆರಿಕದ ಫ್ಲಾರಿಡದಲ್ಲಿ ಬೆಳೆಯಲಾಗುವ ಡ್ಯಾನ್ಸಿ ಟ್ಯಾಂಜರಿನ್, ದಿ ಟೆಂಪಲ್, ಜಪಾನ್ ದೇಶದ ಮೂಲವಾಸಿಯಾದ ಸಾಟ್ಸುಮ, ಭಾರತದ ನಾಗಪುರಿ, ಕೊಡಗು, ಉನ್ಷು ಮತ್ತು ಕುನ್ಷು ಬಗೆಗಳು ಮುಖ್ಯವಾದುವು. ಶಮೂಟಿ ಬಗೆಯಲ್ಲಿ ಬೀಜಗಳಿಲ್ಲ. ಸಾಟ್ಸುಮ ಬಗೆ ಬೇರಾವ ಬಗೆಗಳಿಗಿಂತ ಹೆಚ್ಚು ಚಳಿಯನ್ನು ತಡೆದುಕೊಳ್ಳಬಲ್ಲುದು. ಭಾರತದ ನಾಗಪುರಿ ಕಿತ್ತಳೆ ಕೊಡಗಿನ ಬಗೆಗಿಂತ ಹೆಚ್ಚು ರುಚಿಯುಳ್ಳದ್ದು. ಉನ್ಷು ಮತ್ತ ಕುನ್ಷು ಬಗೆಗೆಳು ಪರದೇಶದಿಂದ ಬಂದಿರುವ ಮಿಶ್ರ ಜಾತಿಯವು; ಕಿತ್ತಳೆರಸದ ಉತ್ಪಾದನೆಗೆ ಮಾತ್ರ ಉಪಯುಕ್ತವಾಗಿವೆ. ಇವುಗಳಲ್ಲೂ ಬೀಜಗಳಿಲ್ಲ.
ಕಿತ್ತಳೆ ಬೇಸಾಯ
[ಬದಲಾಯಿಸಿ]ಕಿತ್ತಳೆಬೇಸಾಯಕ್ಕೆ ತಂಪಾದ ಹವೆ ಸೂಕ್ತವಾದುದು. ಉಷ್ಣತೆ 500-1100 ಫ್ಯಾ. ವ್ಯಾಪ್ತಿಯಲ್ಲಿರಬೇಕು. ಕಿತ್ತಳೆಯನ್ನು 40"-100" ಮಳೆ ಬೀಳುವ ಮತ್ತು ಸಮುದ್ರಮಟ್ಟದಿಂದ 2,000' ಎತ್ತರವಿರುವ ಪ್ರದೇಶಗಳಲ್ಲಿ ಬೆಳೆಸಬಹುದು. ಕಿತ್ತಳೆಗಿಡ ಮೆಕ್ಕಲು ಮತ್ತು ಜಂಬಟ್ಟಿಗೆ ಮಣ್ಣುಗಳಲ್ಲಿ ಉತ್ಕøಷ್ಟವಾಗಿ ಬೆಳೆಯುತ್ತದೆ. ಜಾಗಿಲ್ಲದ ಕಪ್ಪು ಜೇಡುಮಣ್ಣು ಕೂಡ ಇದರ ಬೇಸಾಯಕ್ಕೆ ಉತ್ತಮವಾದುದು. ಕಿತ್ತಳೆ ಸಸ್ಯದ ಬೇರು ಭೂಮಿಯಲ್ಲಿ ಆಳವಾಗಿ ಬೆಳೆಯುವುದಾದರೂ ಸಸ್ಯಕ್ಕೆ ಬೇಕಾದ ನೀರನ್ನು ಹೀರಿಕೊಳ್ಳುವ ಬೇರುಗಳು ಭೂಮಿಯ ಮೇಲುಭಾಗದ ಎರಡು ಅಡಿ ಮಣ್ಣಿನಲ್ಲಿರುವುದರಿಂದ ಇದರ ಬೇಸಾಯಕ್ಕೆ ಅತಿ ಆಳವಾದ ಮಣ್ಣಿನ 5.5 ರಿಂದ 6.5ರ ವರೆಗಿರಬೇಕು.
ಸಸ್ಯಾಭಿವೃದ್ಥಿ
[ಬದಲಾಯಿಸಿ]ಕಿತ್ತಳೆ ಸಸ್ಯವನ್ನು ಎರಡು ರೀತಿಗಳಿಂದ ವೃದ್ಥಿ ಮಾಡಬಹುದು.
- ಲಿಂಗರೀತಿ
- ನಿರ್ಲಿಂಗರೀತಿ
ಲಿಂಗರೀತಿ
[ಬದಲಾಯಿಸಿ]ಕಿತ್ತಳೆಗಿಡದಲ್ಲಿ ಪರಕೀಯ ಪರಾಗಸ್ಪರ್ಶವಾದ ಗರ್ಭಧಾರಣೆಯಾಗಿ ಬೀಜಗಳಾಗುವುದರಿಂದ ಲಿಂಗರೀತಿಯಲ್ಲಿ ವೃದ್ಧಿ ಮಾಡಬಹುದು. ಆದರೆ ಬೀಜಗಳಿಂದ ವೃದ್ಧಿ ಮಾಡಿದ ಸಸಿಗಳು ತಮ್ಮ ತಾಯಿ ಸಸಿಗಳಂತೆ ಇಳುವರಿ ಕೊಡುವುದು. ಬಹಳ ಕಡಿಮೆಯಾದರೂ ಒಂದೇ ಬೀಜದಲ್ಲಿ ಬಹು ಭ್ರೂಣಗಳಿರುವುದರಿಂದ ಬೀಜಗಳಿಂದ ವೃದ್ಧಿ ಮಾಡುವುದು ಬಹಳ ಲಾಭದಾಯಕ. ಬೀಜಗಳನ್ನು ಮೊದಲು ಒಟ್ಲುಪಾತಿಯಲ್ಲಿ ಮೊಳೆಯಿಸಿ, ಬಂದ ಸಸಿಗಳನ್ನು ವರ್ಗಾವಣೆ ಮಾಡಿ ಕಿತ್ತಳೆಯನ್ನು ಬೆಳೆಸುತ್ತಾರೆ. ಒಟ್ಲುಪಾತಿಯಲ್ಲಿ ಎರಡು ವಿಧಗಳಿವೆ. (i) ನೆಲದ ಮೇಲೆ : ಪಾತಿ ಮಾಡುವ ಮಣ್ಣುನ್ನು 2-3 ಬಾರಿ ಚೆನ್ನಾಗಿ ಅಗೆದು. ಕಳೆ ತಗೆದು, ಹೆಂಟೆಯನ್ನು ಪುಡಿ ಮಾಡಿ ಅಗತ್ಯವಿದ್ದಲ್ಲಿ ಹದವಾಗಿ ನೀರು ಹಾಕಿ, 20' ಉದ್ದ 3' ಅಗಲ ಮತ್ತು 9" ಎತ್ತರದ ಪಾತಿಗಳನ್ನು ಮಾಡಬೇಕು. ಪಾತಿಗಳ, ಮೇಲೆ 3" ಎತ್ತರ ಮರಳನ್ನು ಹಾಕಿ ಒಂದೇ ಮಟ್ಟದ ಪಾತಿಯನ್ನು 1/8 ಆಳವಾಗಿ ಮತ್ತು ಸುಮಾರು 1" ಅಂತರಗಳನ್ನು ಬೀಜಗಳನ್ನು ಬಿತ್ತಬೇಕು. ಇರುವೆಗಳು ಹಾವಳಿ ಮಾಡುವ ಸಾಧ್ಯತೆ ಇರುವುದರಿಂದ ವಾರಕ್ಕೆ ಒಂದು ಸಾರಿ ಹೆಪ್ಪಕ್ಲೋರ್ ಅಥವಾ ಗೆಮಾಕ್ಸಿನ್ ಪುಡಿಯನ್ನು ಪಾತಿಗಳ ಸುತ್ತಲೂ ಚಮುಕಿಸಬೇಕು. (ii) ಚಪ್ಪರದ ಮೇಲೆ ಒಟ್ಲುಪಾತಿ: ಕಿತ್ತಳೆ ಸಸಿಗಳನ್ನು ಚಪ್ಪರದ ಮೇಲೆ ಒಟ್ಲುಪಾತಿ ಮಾಡಿ ಬೆಳೆಸಬಹುದಾದರೂ ಕೂಡ ಈ ಪದ್ಧತಿ ಹೆಚ್ಚು ಬಳಕೆಯಲ್ಲಿಲ್ಲ.
ನಿರ್ಲಿಂಗರೀತಿ
[ಬದಲಾಯಿಸಿ]ನಿರ್ಲಿಂಗರೀತಿಯಲ್ಲಿ ಲೇಯರ್ ಮಾಡುವುದು. ಗೂಟ ಕಟ್ಟುವುದು, ಕಸಿ ಮಾಡುವುದು ಮುಂತಾದ ಹಲವು ವಿಧಗಳಿದ್ದರೂ ಕಣ್ಣು ಹಾಕಿಕೆಯ ಕ್ರಮ ಹೆಚ್ಚಿನ ಬಳಕೆಯಲ್ಲಿದೆ. ಕಣ್ಣು ಹಾಕುವುದು ಇತರ ವಿಧಾನಗಳಿಗಿಂತ ಸುಲಭ. ಮತ್ತು ಇದರಲ್ಲಿ ಅಲ್ಪ ಸಮಯದಲ್ಲೇ ಯಶಸ್ಸು ಪಡೆಯಬಹುದು. ಉತ್ತಮ ಕಿತ್ತಳೆ ತಳಿಗಳು ಕೆಲವು ಬಾರಿ ರೋಗಗಳಿಗೆ ತುತ್ತಾಗುತ್ತವೆ ಅಥವಾ ಭೂಮಿಗೆ ಹೊಂದಿಕೊಳ್ಳುವುದಿಲ್ಲ. ಆಗ ಇಂಥ ರೋಗಗಳಿಗೆ ನಿರೋಧಕ ಗುಣ ಹೊಂದಿರುವ ಆದರೆ ಇಳುವರಿ ದೃಷ್ಟಿಯಿಂದ ಕೀಳುಮಟ್ಟದ ಕೆಲವು ತಳಿಗಳನ್ನು ಬೇರು ಸಸಿಯಾಗಿ (ರೂಟ್ಸ್‍ಸ್ಟಾಕ್) ತೆಗೆದುಕೊಂಡು ಅವುಗಳ ಮೇಲೆ ಉತ್ತಮ ತಳಿಯಿಂದ ಕಣ್ಣು ತೆಗೆದು ಹಾಕಿ ಬೆಳೆಸಿದರೆ, ಕಣ್ಣು ಸಸಿ ಉತ್ತಮ ತಳಿಯಂತೆ ಅಧಿಕ ಇಳುವರಿಯನ್ನು ಕೊಡುತ್ತದೆ. ಬೇರು ಸಸಿಯನ್ನು ಬೆಳೆಯುವುದಕ್ಕೆ ಮೊದಲು ತೋಟಗಾರನಿಗೆ ಯಾವ ಬೇರು ಸಸಿಯ ಮೇಲೆ ಯಾವ ಕಾಂಡ ಸಸ್ಯದ ಕಣ್ಣುಹಾಕಿದರೆ ಯಶಸ್ವಿಯಾಗುತ್ತದೆ ಎಂಬುದರ ಪೂರ್ಣ ಅರಿವು ಇರಬೇಕು. ಭಾರತ ದೇಶದಲ್ಲಿ ಸಾಮಾನ್ಯವಾಗಿ ಕಿತ್ತಳೆಯನ್ನು ಸಿಹಿನಿಂಬೆಯ ತಳಿಗಳ ಮೇಲೆ ಬೆಳೆಸುತ್ತಾರೆ. ಮೈಸೂರು ತೋಟಗಾರಿಕೆ ಇಲಾಖೆಗೆ ಸೇರಿದ ಗೋಣಿಕೊಪ್ಪಲು ಮತ್ತು ಚೆಟ್ಟಳ್ಳಿ ಕಿತ್ತಳೆ ಸಂಶೋಧನ ಕೇಂದ್ರಗಳಲ್ಲಿ ಕೊಡಗು ಕಿತ್ತಳೆಯನ್ನು ಮಲೆನಾಡು ಮತ್ತು ಕೊಡಗು ಪ್ರದೇಶಗಳಲ್ಲಿ ಬೇಸಾಯದಲ್ಲಿರುವ ಗಜನಿಂಬೆ ಮತ್ತು ಟ್ರೈಫೋಲಿಯೇಟ್ ತಳಿಗಳ ಮೇಲೆ ಕಣ್ಣು ಹಾಕಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.
ಬೇರು ಸಸಿಗಳನ್ನು ಬೆಳೆಸುವುದು
[ಬದಲಾಯಿಸಿ]ಬೇಕಾದ ತಳಿಗಳಿಂದ ಬೀಜಗಳನ್ನು ಪಡೆದು ಬೂದಿಯನ್ನು ಬೆರೆಸಿ ಪಾತಿಗಳಲ್ಲಿ ನೆಡುವುದು ರೂಢಿಯಲ್ಲಿದೆ. ಬೀಜಗಳನ್ನು ತೆಗೆದ ತತ್‍ಕ್ಷಣ ಪಾತಿಗಳಲ್ಲಿ ಹಾಕುವುದು ಲೇಸು, ಹೆಚ್ಚು ದಿವಸ ಬೀಜಗಳನ್ನು ಬಿತ್ತದೆ ಇಟ್ಟರೆ ಅವುಗಳ ಮೊಳೆಯುವ ಶಕ್ತಿ ಕಡಿಮೆಯಾಗುತ್ತದೆ. ಬೀಜ ಪಡೆದ ಎರಡು ವಾರಗಳಲ್ಲಿ ಮೊಳೆಸದಿದ್ದರೆ ಅನಂತರ ಮೊಳೆಯುವ ಸೇಕಡ ಸಂಖ್ಯೆ ಕಡಿಮೆಯಾಗುತ್ತದೆ. ಬೀಜಗಳು ಬಿತ್ತಿದ 20 ದಿವಸಗಳ ಅನಂತರ ಮೊಳೆಯುತ್ತವೆ. ಬೀಜ ಬಿತ್ತಿದ 1 ವರ್ಷದ ಅನಂತರ ಸಸಿಗಳು ಸುಮಾರು 1'ಎತ್ತರ ಬೆಳೆಯುತ್ತವೆ. ಒಂದು ವರ್ಷದ ಸಸಿಗಳನ್ನು ಎರಡನೆಯ ಪಾತಿಗೆ ಹಾಕುವುದು ಉತ್ತಮ. ಎರಡನೆಯ ಪಾತಿಯ ಅಳತೆ 10' ಉದ್ದ 3' ಅಗಲ ಇರುವುದು ಸೂಕ್ತ ಸಸಿಗಳನ್ನು ಎರಡನೆಯ ಪಾತಿಯಲ್ಲಿ ನೆಡುವಾಗ ಸಾಲಿನಿಂದ ಸಾಲಿಗೆ 1' ಸಸಿಯಿಂದ ಸಸಿಗೆ 11/2' ಅಂತರ ಕೊಡಬೇಕು. ಎರಡನೆಯ ಪಾತಿಯಲ್ಲಿ ಸಸಿಗಳನ್ನು ನೆಟ್ಟ ಮೇಲೆ ಕಾಲ ಕಾಲಕ್ಕೆ ಸರಿಯಾಗಿ ನೀರು ಕೊಟ್ಟು ಎಚ್ಚರಿಕೆ ವಹಿಸಬೇಕು ಸಸಿಗಳನ್ನು ಪೂದೆಯಂತೆ ಬೆಳೆಸುವುದು ಉತ್ತಮ. ಕಸಿಮಾಡಲು ಉಪಯೋಗಿಸುವ ಕಣ್ಣನ್ನು ಉತ್ತಮ ಹಾಗೂ ಅಧಿಕ ಫಲ ಕೊಡುವ ಸಸ್ಯಗಳಿಂದ ಆರಿಸಬೇಕು ಆರಿಸಿದ ಕಣ್ಣು ಚೆನ್ನಾಗಿ ಬಲಿತಿರಬೇಕು ಕಣ್ಣುಗಳನ್ನು ಹೊರ ಊರುಗಳಿಗೆ ಸಾಗಿಸುವಾಗ ತೇವ ಸಾಗಿಸಬೇಕು. ಕಣ್ಣು ಹಾಕುವುದಕ್ಕೆ ಮೊದಲು ಎಲೆಯ ತೊಟ್ಟನ್ನು ಕಣ್ಣಿನೊಂದಿಗೆ ಉಳಿಸಿಕೊಂಡು ಎಲೆಗಳನ್ನು ಕತ್ತರಿಸಿ ತೆಗೆದು ಹಾಕಬೇಕು.
ಕಣ್ಣು ಹಾಕುವುದು
[ಬದಲಾಯಿಸಿ]ನವಂಬರ್‍ನಿಂದ ಡಿಸೆಂಬರ್ ತಿಂಗಳು ಕಣ್ಣು ಹಾಕಲು ಯೋಗ್ಯವಾದ ಕಾಲ. ಕಣ್ಣು ಹಾಕುವ ಕಾಲಕ್ಕೆ ಬೇರು ಸಸಿಯ ಕಾಂಡ ಸುಮಾರು 1/4"-1/2" ದಪ್ಪವಿರಬೇಕು. ಕಣ್ಣು ಹಾಕುವಾಗ ಬೇರು ಸಸಿಯ ಕಾಂಡದ ಮೇಲೆ ನೆಲದ ಮಟ್ಟದಿಂದ 6"-9" ಎತ್ತರದಿಂದ ಖಿ ಆಕಾರದಲ್ಲಿ ಹರಿತವಾದ ಚಾಕುವಿಂದ ಮೇಲು ಭಾಗದ ತೊಗಟೆಯನ್ನು ಕತ್ತರಿಸಬೇಕು. ಅನಂತರ ಚಾಕುವಿನ ಮೊನಚಾದ ತುದಿಯಿಂದ ಕತ್ತರಿಸಿರುವ ತೊಗಟೆಯ ಎರಡು ಭಾಗಗಳನ್ನು ಕೂಡಿಸಿ ಕಣ್ಣಿನ ಮಧ್ಯಭಾಗವನ್ನು ಬಿಟ್ಟು, ಮೇಲೆ ಮತ್ತು ಕೆಳಭಾಗದಲ್ಲಿ ಪಾಲಿತಿನ್ ಅಥವಾ ನೆನೆಸಿದ ಬಾಳೆಯ ನಾರಿನಿಂದ ಬಿಗಿಯಾಗಿ ಸುತ್ತಬೇಕು. ಕಣ್ಣು ಹಾಕಿದ 4 ವಾರಗಳಲ್ಲಿ ಕಣ್ಣು ಹಸಿರಾಗಿದ್ದು ಉಳಿದಿರುವ ಎಲೆಯ ತೊಟ್ಟು ಉದುರಿ ಹೋದರೆ ಕಣ್ಣು ಬೇರು ಸಸಿಗೆ ಅಂಟಿಕೊಂಡಿದೆ ಎಂದು ಗೊತ್ತಾಗುತ್ತದೆ. ಕಣ್ಣು ಚಟುವಟಿಕೆಯಿಂದ ಬೆಳೆಯಲು ಪ್ರಾರಂಭಿಸಿದರೆ ಕಣ್ಣಿನ ಮೇಲಿನ 8" ಕಾಂಡವನ್ನು ಉಳಿಸಿ ಮಿಕ್ಕದ್ದನ್ನು ಕತ್ತರಿಸಿ ಹಾಕಬೇಕು. ಕಣ್ಣು ಚಿಗುರಿ 3" ಬೆಳೆದ ಅನಂತರ ಕಣ್ಣಿನಿಂದ ಮೇಲ್ಭಾಗದಲ್ಲಿರುವ ಮೊದಲಿನ ಕಾಂಡವನ್ನು ಕತ್ತರಿಸಿ ಹಾಕಬೇಕು. ಅನಂತರ ಕಣ್ಣು ಸಸಿಯನ್ನು ಬೇಕಾದ ಸ್ಥಳಗಳಲ್ಲಿ ನೆಡಲು ಉಪಯೋಗಿಸಬಹುದು.
ಭೂಮಿಯನ್ನು ಸಿದ್ಧಪಡಿಸುವಿಕೆ
[ಬದಲಾಯಿಸಿ]ಕಿತ್ತಳೆ ಹಣ್ಣಿನ ಸಸ್ಯಗಳನ್ನು ನೆಡಲು ಆರಿಸಿದ ಭೂಮಿಯಲ್ಲಿ ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ 20'25' ಅಂತರವಿರುವಂತೆ 2 /1/2 ಉದ್ದ, 2/1/2' ಅಗಲ, 2/1/2'ಆಳದ ಗುಂಡಿಗಳನ್ನು ಮೇ-ಜೂನ್ ತಿಂಗಳಲ್ಲಿ ತೆಗೆಯಬೇಕು ಗುಂಡಿಗಳನ್ನು ತೆಗೆಯುವಾಗ ಮೇಲು ಭಾಗದ ಮತ್ತು ಕೆಳಭಾಗದ ಮಣ್ಣನ್ನು ಬೇರೆ ಬೇರೆ ಹಾಕಬೇಕು. ಅನಂತರ ಮೇಲುಭಾಗದ ಮಣ್ಣಿಗೆ 25 ಕೆಜಿ ಕೊಟ್ಟಿಗೆ ಗೊಬ್ಬರ, 1 ಕೆಜಿ ಮೂಳೆಪುಡಿ ಮತ್ತು 2 ಕೆಜಿ ಒಲೆ ಬೂದಿಯನ್ನು ಹಾಕಿ ಮಿಶ್ರಮಾಡಿ ಗುಂಡಿಗಳಿಗೆ ತುಂಬಬೇಕು. ಸಸಿಗಳನ್ನು ನೆಡವುದಕ್ಕೆ 1 ವಾರ ಮೊದಲು ನೀರು ಹಾಯಿಸುವುದರಿಂದ ಮಣ್ಣು ಸರಿಯಾಗಿ ಕುಳಿತುಕೊಳ್ಳುತ್ತದೆ. ಸಸಿಗಳನ್ನು ಮುಂಗಾರು ಮಳೆಯ ಪ್ರಾರಂಭದಲ್ಲಿ (ಜೂನ್-ಜುಲೈ)ನೆಡುವುದು ಉತ್ತಮ.
ಸಸಿಗಳನ್ನು ಆರಿಸುವಿಕೆ
[ಬದಲಾಯಿಸಿ]ಒಳ್ಳೆಯ ಸಸಿಗಳನ್ನು ನೆಡಲು ಆರಿಸದಿದ್ದರೆ ಬೇಸಾಯ ಲಾಭದಾಯಕವಾಗುವುದಿಲ್ಲ. ಆದ್ದರಿಂದ ಸಸಿಗಳನ್ನು ಆರಿಸುವಾಗ ಕೆಳಗೆ ಕಾಣಿಸಿರುವ ಅಂಶಗಳನ್ನು ಗಮನಿಸಬೇಕು. (i) ಸಸಿಗೆ 3-5 ಆಹಾರವನ್ನು ಒದಗಿಸುವ 9" ಎತ್ತರದಲ್ಲಿರಬೇಕು. (ii) ಕಣ್ಣಿನ ಕೂಡಿಕೆ (ಬಡ್ ಜಾಯಿಂಟ್) ನೆಲದ ಮಟ್ಟದಿಂದ 9" ಎತ್ತರದಲ್ಲಿರಬೇಕು. (iii) ಕಾಂಡದಿಂದ ಹೊರಟ ತಾಯಿ ಬೇರು ಸುಮಾರು 10" ಕ್ಕಿಂತಲೂ ಉದ್ದವಾಗಿದ್ದರೆ ಲೇಸು.
ನೆಡುವಿಕೆ
[ಬದಲಾಯಿಸಿ]ಸಾಮಾನ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಪ್ರಾರಂಭದಲ್ಲಿ ಕಿತ್ತಳೆ ಹಣ್ಣಿನ ಸಸಿಯನ್ನು ನೆಡುವುದು ರೂಢಿಯಲ್ಲಿದೆ. ಸಸಿಗಳನ್ನು ಗುಂಡಿಯ ಮಧ್ಯದಲ್ಲಿ ನೆಡಬೇಕು ಕಣ್ಣುಕೂಡಿಕೆ ನೆಲಮಟ್ಟದಿಂದ 9" ಎತ್ತರದಲ್ಲಿರಬೇಕು. ನೆಟ್ಟ ಅನಂತರ ನೀರು ಹಾಯಿಸಿ ಸಸ್ಯದ ಸುತ್ತಲೂ ಒಣಹಲ್ಲು ಮತ್ತು ತರಗನ್ನು ಹೊದಿಸುವುದು ರೂಢಿಯಲ್ಲಿದೆ. ಸಸಿಗಳನ್ನು ನೆಟ್ಟ ಮೇಲೆ ಊರುಗೋಲು ಕೊಡಬೇಕು.
ನೀರಾವರಿ
[ಬದಲಾಯಿಸಿ]ಸಾಮಾನ್ಯವಾಗಿ ನೀರಾವರಿ ಮಳೆಯನ್ನು ಅನುಸರಿಸುತ್ತದೆ. ವರ್ಷಕ್ಕೆ 50"-100" ಮಳೆ ಬಿದ್ದು 400-600 ಫ್ಯಾ ಉಷ್ಣತೆ ಇರುವ ಪ್ರದೇಶಗಳಲ್ಲಿ ನೀರಾವರಿಯ ಆವಶ್ಯಕತೆ ಇಲ್ಲ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮಳೆಗಾಲವನ್ನು ಬಿಟ್ಟು ಉಳಿದ ಎಲ್ಲ ಕಾಲಗಳಲ್ಲಿ ಅಗತ್ಯವಾಗಿ ನೀರು ಹಾಯಿಸಬೇಕು ಸಸಿಗಳು ಬೆಳೆದಂತೆಲ್ಲ ಆವಶ್ಯಕವಾಗುವ ನೀರಿನ ಪ್ರಮಾಣ ಅಧಿಕವಾಗುತ್ತದೆ. ಕಿತ್ತಳೆ ಗಿಡಗಳು 4-5 ವರ್ಷಗಳವರೆಗೆ ಇಳುವರಿಯನ್ನು ಕೊಡುವುದಿಲ್ಲ. ಗಿಡಗಳ ಮಧ್ಯೆ ಸಾಕಷ್ಟು ಸ್ಥಳವಿರುವುದರಿಂದ ಆಸ್ಥಳದಲ್ಲಿ ಒಂದು ವರ್ಷದ ಅವಧಿಯಲ್ಲಿ ಫಲ ಕೊಡುವ ಹಣ್ಣಿನ ಬೆಳೆಗಳನ್ನಾಗಲಿ ತರಕಾರಿ ಮುಂತಾದ ಬೆಳೆಗಳನ್ನಾಗಲಿ ಉಪಬೆಳೆಯಾಗಿ ಬೆಳೆಸಬಹುದು. ಇದರಿಂದ ಉಪಬೆಳೆಯ ಲಾಭಬರುವುದಲ್ಲದೆ ಮುಖ್ಯ ಬೆಳೆಗೆ ಬೇಸಾಯ ಮಾಡಿದಂತಾಗುತ್ತದೆ.
ಗೊಬ್ಬರ ಹಾಕುವುದು
[ಬದಲಾಯಿಸಿ]ಕಾಲಕ್ಕೆ ಸರಿಯಾಗಿ ನೀರಾವರಿ ಮಾಡಿ, ಗೊಬ್ಬರ ಹಾಕಿ, ಉತ್ತಮ ಬೇಸಾಯ ಪದ್ಧತಿಗಳನ್ನು ಅನುಸರಿಸುವುದರಿಂದ ಲಾಭದಾಯಕವಾದ ಫಸಲನ್ನು ಪಡೆಯಬಹುದು. ಅಲ್ಲದೆ ಮರಗಳು ಹೆಚ್ಚು ಕಾಲ ಬದುಕುತ್ತವೆ. ಸಸಿಗಳನ್ನು ನೆಟ್ಟಮೇಲೆ ಒಂದೆರಡು ವರ್ಷ ಸಸ್ಯವೊಂದಕ್ಕೆ 23 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು. ಫಸಲು ಬಿಡಲು ಪ್ರಾರಂಭಿಸಿದ ಅನಂತರ ಮರಕ್ಕೆ 46-92 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಪ್ರತಿವರ್ಷವೂ ಕೊಡುತ್ತಿರಬೇಕು. ಕೊಡುವ ಗೊಬ್ಬರ ಯಾವುದೇ ಆಗಲಿ ಹೂ ಬಿಡುವುದಕ್ಕೆ ಮುಂಚೆ ಗೊಬ್ಬರ ಕೊಡುವುದು ಉತ್ತಮ. ಮೈದಾನ ಪ್ರದೇಶಗಳಲ್ಲಿ ಡಿಸೆಂಬರ್-ಜನವರಿ ತಿಂಗಳಲ್ಲಿ ಗೊಬ್ಬರ ಹಾಕುತ್ತಾರೆ. ಮಲೆನಾಡು ಮತ್ತು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಪ್ರದೇಶಗಳಲ್ಲಿ ಜೂನ್-ಆಗಸ್ಟ್ ತಿಂಗಳಲ್ಲಿ ಒಂದು ಸಲ ಗೊಬ್ಬರ ಹಾಕುವುದು ಸೂಕ್ತ. ಮರಳು ಭೂಮಿಯಲ್ಲಿ ಮತ್ತು ಕಡಿಮೆ ಫಲವತ್ತಾಗಿರುವ ಇತರ ಬಗೆಯ ಭೂಮಿಗಳಲ್ಲಿ ವರ್ಷಕ್ಕೆ ಎರಡು ಬಾರಿ ಗೊಬ್ಬರ ಕೊಡುವುದು ಅಗತ್ಯ. ಗೊಬ್ಬರವನ್ನು ಪಾತಿಗಳ ಮೇಲೆ ಹರಡಿ. ಕೈಗುದ್ದಲಿಯಿಂದ ಕೆದಕಿ ಮಣ್ಣಿನೊಡನೆ ಮಿಶ್ರ ಮಾಡಬೇಕು. ನೈಸರ್ಗಿಕ ಗೊಬ್ಬರವಲ್ಲದೆ ಸೀಮೆ ಗೊಬ್ಬರ ಹಾಕುವುದು ರೂಢಿಯಲ್ಲಿದೆ. ಸೀಮೆಗೊಬ್ಬರವನ್ನು ಮೂರು ಕಂತುಗಳಲ್ಲಿ ಅಂದರೆ ಏಪ್ರಿಲ್-ಮೇ, ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಹಾಕುವುದು ಉತ್ತಮ. ಸೀಮೆಗೊಬ್ಬರವನ್ನು ಮರದ ಬುಡದಿಂದ 18" ದೂರದಲ್ಲಿ ಬುಡದ ಸುತ್ತಲೂ ಹಾಕಿ. ಮುಳ್ಳುಗುದ್ದಲಿಯಿಂದ ಗೊಬ್ಬರವನ್ನು ಮಣ್ಣಿನೊಡನೆ ಮಿಶ್ರ ಮಾಡಿ ಅನಂತರ ನೀರು ಹಾಯಿಸಬೇಕು. ಹೀಗೆ ಹಾಕಲಾಗುವ ಸೀಮೆ ಗೊಬ್ಬರದಲ್ಲಿ ಮುಖ್ಯವಾದುವು ಕ್ಯಾಲ್ಸಿಯಮ್ ಅಮೋನಿಯಮ್ ನೈಟ್ರೇಟ್. ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು ಮ್ಯೂರಿಯೇಟ್ ಆಫ್ ಪೊಟ್ಯಾಷ್.
ಮಧ್ಯವರ್ತಿ ಬೇಸಾಯ
[ಬದಲಾಯಿಸಿ]ನೀರು ಹಾಯಿಸುವುದು. ಮಳೆ ಬೀಳುವುದು ಮತ್ತು ಜನರ ತುಳಿತ ಇತ್ಯಾದಿಗಳಿಂದ ಭೂಮಿಯ ಮೇಲುಭಾಗ ಗಟ್ಟಿಯಾಗುತ್ತದೆ. ಈ ರೀತಿ ಗಟ್ಟಿಯಾಗುವುದು ಕಿತ್ತಳೆ ಸಸ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಭೂಮಿಯ ಮೇಲುಭಾಗವನ್ನು ಅಗೆದು. ಕಳೆ ತೆಗೆದು ಭೂಮಿಯನ್ನು ಚೊಕ್ಕಟವಾಗಿಡುವುದು ಉತ್ತಮ.
ಸವರುವುದು
[ಬದಲಾಯಿಸಿ]ಸಸಿ ನೆಟ್ಟ ಒಂದು ವರ್ಷದಲ್ಲಿ ಮುಖ್ಯ ರೆಂಬೆಗಳು ಹೆಚ್ಚು ಸಂಖ್ಯೆಯಲ್ಲಿ ಹುಟ್ಟಲು ಪ್ರಾರಂಭವಾಗುತ್ತವೆ. ಇದರಿಂದ ಕೊಂಬೆಗಳು ಜಡೆಯಂತೆ ಹೆಣೆದುಕೊಂಡು ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಯೋಗ್ಯವಾದ ಎರಡು ಅಥವಾ ಮೂರು ರೆಂಬೆಗಳನ್ನು ಬಿಟ್ಟು ಉಳಿದವನ್ನು ಕತ್ತರಿಸಿ ತೆಗೆದು ಹಾಕುವುದು ಲೇಸು. ಸಸಿ ನೆಟ್ಟ ಸುಮಾರು 5 ವರ್ಷಕ್ಕೆ ಹುಸಿ ಕೊಂಬೆಗಳು ಬಂದು ಅಧಿಕವಾಗಿ ಎಲೆಗಳನ್ನು ಬಿಟ್ಟು. ಫಲ ಕಡಿಮೆಯಾಗುವುದರಿಂದ ಹುಸಿ ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಫಲ ಕೊಡುವುದಕ್ಕೆ ಪ್ರಾರಂಭಿಸಿದ ಅನಂತರ ಸವರುವ ಆವಶ್ಯಕತೆ ಇಲ್ಲ. ಕೊಟ್ಟಿಗೆ ಗೊಬ್ಬರ. ಸೀಮೆಗೊಬ್ಬರ ಹಾಕುವುದು ಮತ್ತು ಆಗಾಗ ನೀರಾವರಿ ಮಾಡುವುದರಿಂದ ಕಿತ್ತಳೆ ಗಿಡ ವರ್ಷದ ಎಲ್ಲ ಕಾಲಗಳಲ್ಲಿ ಹೂ ಬಿಡುವುದಕ್ಕೆ ಪ್ರಾರಂಭಿಸುತ್ತದೆ. ಆದರೆ ಬೆಳೆಯ ಹಿತದೃಷ್ಠಿಯಿಂದ ಇದು ಉತ್ತಮವಲ್ಲ. ಆದ್ದರಿಂದ ವಿಶೇಷ ಬೇಸಾಯ ಪದ್ಧತಿಯನ್ನು ಅನುಸರಿಸಿ, ಗಿಡಗಳಿಗೆ ವಿಶ್ರಾಂತಿ ಕೊಟ್ಟು, ಒಂದೇ ಒಂದು ಋತುವಿನಲ್ಲಿ ಹೆಚ್ಚು ಫಲ ಬಿಡುವಂತೆ ಮಾಡಬೇಕು.
ಇಳುವರಿ
[ಬದಲಾಯಿಸಿ]ಕಣ್ಣುಹಾಕಿದ ಸಸ್ಯ ನೆಟ್ಟ 4 ವರ್ಷಗಳ ಅನಂತರ ಫಲ ಕೊಡಲು ಪ್ರಾರಂಭಿಸುತ್ತದೆ. ಬೀಜಗಳಿಂದ ಬೆಳೆಸಿದ ಸಸ್ಯಗಳು 9 ವರ್ಷದ ಅನಂತರ ಫಲಕೊಡಲು ಪ್ರಾರಂಭಿಸುತ್ತವೆ. ವರ್ಷಕ್ಕೆ ಒಂದು ಗಿಡದಿಂದ 1,000 ಹಣ್ಣುಗಳನ್ನು ಪಡೆಯಬಹುದು. ಒಂದು ಕಿತ್ತಳೆ ಗಿಡದಿಂದ ಸುಮಾರು 40 ವರ್ಷಗಳ ಕಾಲ ಹಣ್ಣನ್ನು ಪಡೆಯಬಹುದು. ಕಿತ್ತಳೆ ಹಣ್ಣುಗಳನ್ನು ಅವು ಗಿಡದ ಮೇಲೆ ಚೆನ್ನಾಗಿ ಮಾಗಿದ ಮೇಲೆಯೇ ಕೊಯ್ಯಬೇಕು. ಹೀಗಲ್ಲದೆ ಎಳೆಯವಾಗಿದ್ದಾಗಲೇ ಕೊಯ್ದರೆ ಅನಂತರ ಅವು ಚೆನ್ನಾಗಿ ಮಾಗುವುದಿಲ್ಲ. ಅಲ್ಲದೆ ಗಿಡದ ಮೇಲೆಯೇ ಮಾಗಲು ಬಿಟ್ಟರೆ ಸಕ್ಕರೆಯ ಅಂಶವೂ ಹೆಚ್ಚಾಗುತ್ತದೆ. ಹಣ್ಣುಗಳನ್ನು ಕೀಳುವಾಗ ಅವು ಒಡೆಯದಂತೆ, ಸಿಪ್ಪೆ ತರಚಿಹೋಗದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಅವು ಒಡೆದ ಕಡೆ ಬೂಷ್ಟು ಬೆಳೆದು ಹಣ್ಣು ಹಾಳಾಗಬಹುದು. ಆದ್ದರಿಂದ ಹಣ್ಣನ್ನು ಕೊಯ್ಯುವಾಗ ಕೈಗೆ ಗವಸು ಹಾಕಿಕೊಂಡು ಕೊಯ್ಯುವುದೇ ವಾಡಿಕೆಯಲ್ಲಿರುವ ಕ್ರಮ.
ಕೀಟಗಳು ಮತ್ತು ರೋಗಗಳು
[ಬದಲಾಯಿಸಿ]ಕಿತ್ತಳೆಗೆ ಹಲವಾರು ಕೀಟಗಳು ರೋಗಗಳು ತಗುಲಿ ಗಣನೀಯವಾದ ನಷ್ಟವನ್ನುಂಟುಮಾಡುತ್ತವೆ. ಕೆಲಿಡೋನಿಯಂ ಸಿಂಕ್ಟಂ ಎಂಬ ಹುಳು ಕಾಂಡವನ್ನು ಕೊರೆದು ಕಿತ್ತಳೆ ಬೆಳೆಯನ್ನು ನಾಶಮಾಡುತ್ತದೆ. ಕ್ಯಾಲಿಫೋರ್ನಿಯ ಪ್ರದೇಶಗಳಲ್ಲಿ ಕೆಲವು ಹುರುಪೆ ಕೀಟಗಳು ಕಿತ್ತಳೆ ಬೆಳೆಯನ್ನು ಹಾಳುಮಾಡುತ್ತವೆ. ಇವುಗಳಲ್ಲಿ ಮುಖ್ಯವಾದುವು ಕೆಂಪುಸ್ಕೇಲ್ (ಅಯೊನಿಡಿಯೆಲ ಆರಂಶಿಯೈ) ಕಪ್ಪುಸ್ಕೇಲ್ (ಸಾಸೆಟ್ಟಿಯ ಓಲಿಯೆ) ಹಳದಿ ಸ್ಕೇಲ್ (ಅಯೊನಿಡಿಯೆಲ ಸಿಟ್ರಿನ) ಊದಾ ಸ್ಕೇಲ್ (ಲೆಪಿಡೊಸಾಫಿಸ್ ಬೆಕಿಯೈ) ಮತ್ತು ಸಿಟ್ರಿಕೋಲ ಸ್ಕೇಲ್ (ಕಾಕಸ್ ಸೂಡೊಮ್ಯಾಗ್ನೋಲಿಯಾನಮ್.) ಇವುಗಳಲ್ಲದೆ ಈ ಕೆಳಗೆ ಕಂಡ ಕೀಟಗಳೂ ಕೂಡ ಕಿತ್ತಳೆ ಸಸ್ಯಗಳಲ್ಲಿ ಕಂಡುಬರುತ್ತವೆ. ಹಣ್ಣಿನ ರಸ ಹೀರುವ ಚಿಟ್ಟೆ (ಆಫಿಡಿರಿಸ್) ಹೇನುಗಳು, ತಿಗಣೆ ಕೀಟಗಳು (ಮೀಲೀ ಬಗ್ಸ್) ಫಲಮಕ್ಷಿಕಗಳು ಮತ್ತು ಉಣ್ಣಿಗಳು. ರೋಗಗಳಲ್ಲಿ ಏಕಾಣುಜೀವಿಯಿಂದ ಬರುವ ಕರ್ಜಿರೋಗ ಮತ್ತು ಅನೇಕ ಶಿಲೀಂದ್ರ ರೋಗಗಳು ಕಿತ್ತಳೆ ಬೆಳೆಗೆ ತಗಲುತ್ತದೆ. ಫೈಟಾಫ್ತರ ಜಾತಿಯ ಶಿಲೀಂಧ್ರ್ರದಿಂದ ಹಾನಿಕರವಾದ 'ಬ್ರೌನ್‍ರಾಟ್ ಗಮ್ಮೋಸಿಸ್' ಅಥವಾ 'ಘುಟ್‍ರಾಟ್' ರೋಗಗಳು ಬರುತ್ತವೆ. ಇದರಿಂದ ಕಾಂಡದ ಕೆಳಭಾಗ ಮತ್ತು ಬೇರುಗಳು ಕೊಳೆಯುತ್ತವೆ. ಶೀತ ಹವೆಯಲ್ಲಿ ಹಣ್ಣುಗಳಿಗೆ ಬ್ರೌನ್ ರಾಟ್ ಹರಡಿ ಹಣ್ಣುಗಳು ಕೊಳೆಯುತ್ತವೆ. ಶೇಖರಿಸಿರುವ ಹಣ್ಣುಗಳನ್ನು ಫೈಟಾಫ್ತರ ಪೆನಿಸಿಲಿಯಂ. ಫೈ, ಡಿಜಿಟೇಟಮ್ (ಹಸಿರು ಬೂಸಲು) ಪೆನಿಸಿಲಿಯಂ ಇಟಾಲಿಕಂ, ಆಲ್ಟರ್‍ನೇರಿಯ ಸಿಟ್ರಸ್‍ಗಳು ನಾಶ ಮಾಡುತ್ತವೆ. ಅತಿ ಹಾನಿಕರವಾದ ವೈರಸ್ ರೋಗವೆಂದರೆ ಟ್ರಿಸ್ಪಿಸû ಇದು ಫ್ಲಾರಿಡ, ಕ್ಯಾಲಿಫೋರ್ನಿಯ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಜಾವಗಳಲ್ಲಿ ಸಾಮಾನ್ಯ. ಈ ರೋಗದಿಂದ ಗಿಡಗಳು ತಕ್ಷಣ ಸಾಯುತ್ತವೆ. ಇವುಗಳ ಜೊತೆಗೆ ಕಾಂಡದ ಒಣಗುವಿಕೆ (ಡೈಬ್ಯಾಕ್) ಎಲೆಗಳ ಮಚ್ಚೆರೋಗ, ಬೂದುರೋಗಗಳು ಕಿತ್ತಳೆ ಬೆಳೆಗೆ ಹಾನಿಕರ.
ಉಪಯೋಗಗಳು
[ಬದಲಾಯಿಸಿ]- ಕಿತ್ತಳೆಯಲ್ಲಿ ಸಿಟ್ರಸ್ ಲೆಮನಾಯ್ಡ್ ಅಂಶ ಹೇರಳವಾಗಿರುವುದರಿಂದ ಚರ್ಮ, ಶ್ವಾಸಕೋಶ, ಹೊಟ್ಟೆ ಮತ್ತು ಹಲವಾರು ಬಗೆಯ ಕ್ಯಾನ್ಸರ್ ಅನ್ನು ದೂರವಿರಿಸುತ್ತದೆ[೨].
- ಕಿತ್ತಳೆಯ ರಸವನ್ನು ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲುಗಳು ಕರಗಲು ಸಹಾಯವಾಗುವುದರ ಜೊತೆಗೆ ಕಿಡ್ನಿಗೆ ಸಂಬಂಧ ಪಟ್ಟ ತೊಂದರೆಗಳನ್ನು ದೂರವಿರಿಸುತ್ತದೆ[೩].
- ನಾರಿನಾಂಶ ಹೇರಳವಾಗಿರುವುದರಿಂದ ಮಲಬದ್ಧತೆಯನ್ನು ದೂರಮಾಡುತ್ತದೆ.
- ಕಿತ್ತಳೆಯಲ್ಲಿರುವ ಪಾಲಿಫೆನಾಲ್ ವೈರಸ್ ಸೋಂಕನ್ನು ಎದುರಿಸಲು ಸಹಾಯಕವಾಗಿದೆ.
- ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕೂದಲಿನ ಪೋಷಣೆಗೆ ಬೇಕಾದ ಕೊಲಾಜಿನ್ ವೃದ್ಧಿಗೆ ಸಹಾಯಕ, ಅಂತೆಯೇ ಕೂದಲು ಉದುರುವುದನ್ನು ತಪ್ಪಿಸುತ್ತದೆ.
- ಈ ಹಣ್ಣು ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ.
- ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಸೋಂಕು ಮತ್ತು ರೋಗಗಳಿಂದ ನಿಮ್ಮನ್ನೂ ದೂರವಿರಿಸುವಲ್ಲಿ ಸಹಾಯಕವಾಗಿರುತ್ತದೆ.
ಚಿತ್ರಗಳು
[ಬದಲಾಯಿಸಿ]-
ಗ್ರೇಪ್ ಹಣ್ಣು.
-
This white grapefruit is cushioned with a thick mesocarp layer
-
ಪಿಂಕ್ ಗ್ರೇಪ್ ಹಣ್ಣು
-
ಭಾರತದಲ್ಲಿ ಬೆಳೆದ ಹಣ್ಣು
-
ದ್ರಾಕ್ಷಿಯ ಗೊಂಚಲುಗಳಂತೆ ಬೆಳೆಯುವ ಗ್ರೇಪ್ ಹಣ್ಣು
ಉಲ್ಲೇಖಗಳು
[ಬದಲಾಯಿಸಿ]- ↑ Taxon: Citrus sinensis (L.) Osbeck U.S. National Plant Germplasm System
- ↑ "ಆರ್ಕೈವ್ ನಕಲು". Archived from the original on 2017-05-31. Retrieved 2017-03-14.
- ↑ http://kannada.boldsky.com/health/wellness/2014/top-health-benefits-orange-peels-008890-008895-008895.html