ರೋಹಿತ
ರೋಹಿತ ಎಂದರೆ ರಾಶಿ, ಸಂವೇಗ, ಅಲೆಯುದ್ದ, ಆವೃತ್ತಿ ಅಥವಾ ಇನ್ನಾವುದೇ ಸಂಬಂಧಿತ ಗುಣದ ಫಲನವಾಗಿ (ಫಂಕ್ಷನ್) ವಿಕಿರಣತೀವ್ರತೆಯ ನಕ್ಷೆ ಅಥವಾ ವ್ಯವಸ್ಥಿತ ಪ್ರದರ್ಶನ (ಸ್ಪೆಕ್ಟ್ರಮ್).[೧][೨] ಬದಲಾಗುತ್ತಿರುವ ಆವೃತ್ತಿ, ರಾಶಿ, ಅಲೆಯುದ್ದ ಅಥವಾ ಶಕ್ತಿಗಳಂಥ ಯಾವುದಾದರೊಂದು ಲಕ್ಷಣವುಳ್ಳ ವಿಕಿರಣತೀವ್ರತೆ ಅಥವಾ ವಿಕಿರಣತರಂಗಾವರ್ತದ ಪ್ರಾವಸ್ಥೆಗಳ ವಿತರಣೆಯ ದೃಶ್ಯ ದಾಖಲೆ ಅಥವಾ ಫೋಟೊಗ್ರಾಫಿಕ್ ದಾಖಲೆ ಎಂಬ ವ್ಯಾಖ್ಯಾನವೂ ಉಂಟು. ಪರಿಮಾಣದ ಆರೋಹ ಅಥವಾ ಅವರೋಹ ಕ್ರಮದಲ್ಲಿ ಕರಾರುವಾಕ್ಕಾಗಿ ಜೋಡಿಸಿದ ಸದೃಶ ಲಕ್ಷಣಗಳ ಅಥವಾ ಅಸ್ತಿತ್ವವುಳ್ಳವುಗಳ(ಎಂಟಿಟೀಸ್) ಯಾವುದೇ ವರ್ಗ ಎಂಬ ಅತಿ ಸಾರ್ವತ್ರೀಕರಿಸಿದ ವ್ಯಾಖ್ಯಾನವೂ ಉಂಟು (ಉದಾ: α-ರೋಹಿತ, β-ರೋಹಿತ, ಶ್ರವ್ಯ ರೋಹಿತ, ರಾಶಿ ರೋಹಿತ). ಸಾಮಾನ್ಯವಾಗಿ ವಿದ್ಯುತ್ಕಾಂತ ವಿಕಿರಣಕ್ಕೆ ಅನ್ವಯಿಸಿ ಈ ಪದದ ವ್ಯಾಪಕ ಬಳಕೆ ಇದೆ. ಗೋಚರ ಬೆಳಕನ್ನು ಅಶ್ರಗದ ಮೂಲಕ ಹಾಯಿಸಿದಾಗ ಪರದೆಯ ಮೇಲೆ ಗೋಚರಿಸುವ ಬಣ್ಣಗಳ ಪಟ್ಟೆಗೆ ರೋಹಿತ ಎನ್ನುವುದು ರೂಢಿ.
ರೋಹಿತದ ಅವಿಚ್ಛಿನ್ನತೆ ವಿಕಿರಣಾಕರದ ಸ್ವಭಾವವನ್ನು ಆಧರಿಸಿದೆ. ಯಾವುದೇ ದೀಪ್ತಕಾಯ ಉತ್ಸರ್ಜಿಸುವ ವಿಕಿರಣದಿಂದ ಅವಿಚ್ಛಿನ್ನ (ಕಂಟಿನ್ಯುಅಸ್) ರೋಹಿತ ಲಭ್ಯ. ಧಾತುಜನಿತ ರೋಹಿತದಲ್ಲಿ ಒಂದು ಅಥವಾ ಹೆಚ್ಚು ವಿವಿಕ್ತ (ಡಿಸ್‌ಕ್ರೀಟ್) ಉಜ್ಜ್ವಲ ರೇಖೆಗಳಿರುತ್ತವೆ. ಅಣು ಅನಿಲಗಳು (ಮಾಲಿಕ್ಯುಲರ್ ಗ್ಯಾಸಸ್) ಪಟ್ಟೆ (ಬ್ಯಾಂಡ್) ರೋಹಿತದ ಉತ್ಪಾದಕಗಳು. ಉಷ್ಣಶಕ್ತಿ, ಎಲೆಕ್ಟ್ರಾನ್ ಅಥವಾ ಅಯಾನುಗಳ ಸಂಘಟನೆ ಮತ್ತು ಫೋಟಾನುಗಳ ಅಪಶೋಷಣೆಯಿಂದ ಉದ್ರೇಕಿತ ಆಕರ ವಿಕಿರಣವನ್ನು ಉತ್ಸರ್ಜಿಸುತ್ತದೆ. ಉತ್ಸರ್ಜಿತ ವಿಕಿರಣವನ್ನು ವಿಕ್ಷೇಪಿಸಿದರೆ ದೊರೆಯುವ ರೋಹಿತ ಉತ್ಸರ್ಜಿತ ರೋಹಿತ. ಇದರಲ್ಲಿ ಉಜ್ಜ್ವಲ ರೇಖೆಗಳಿರುತ್ತವೆ. ವಿಕಿರಣ ಶಕ್ತಿ ಯಾವುದಾದರೂ ಮಾಧ್ಯಮದ ಮೂಲಕ ಹಾಯುವಾಗ ಅದರ ನಿರ್ದಿಷ್ಟ ಘಟಕಗಳನ್ನು ಆ ಮಾಧ್ಯಮ ಅಪಶೋಷಿಸುತ್ತದೆ. ತಜ್ಜನಿತ ಅಪಶೋಷಿತ ರೋಹಿತದಲ್ಲಿ ಕಪ್ಪು ರೇಖೆಗಳಿರುತ್ತವೆ.
ಬಳಸುವ ಸಾಧನಗಳು
[ಬದಲಾಯಿಸಿ]ಗೋಚರ ರೋಹಿತವನ್ನು ಉತ್ಪಾದಿಸಬಲ್ಲ ಉಪಕರಣ ರೋಹಿತ ದರ್ಶಕ (ಸ್ಪೆಕ್ಟ್ರೊಸ್ಕೋಪ್). ರೋಹಿತದ ಫೋಟೊಗ್ರಾಫಿಕ್ ದಾಖಲೆಯನ್ನು ರೋಹಿತಲೇಖಿ (ಸ್ಪೆಕ್ಟ್ರೊಗ್ರಾಫ್) ನೀಡುತ್ತದೆ. ಇನ್ನು ರೋಹಿತದ ವಿಭಿನ್ನ ಭಾಗಗಳ ಉಜ್ಜ್ವಲತೆ ಅಳೆಯುವ ಸಾಧನ ರೋಹಿತದ್ಯುತಿಮಾಪಕ (ಸ್ಪೆಕ್ಟ್ರೊಫೋಟೊಮೀಟರ್). ರೋಹಿತಮಾಪಕವಾದರೋ (ಸ್ಪೆಕ್ಟ್ರೊಮೀಟರ್) ರೋಹಿತಘಟಕಗಳ ಅಲೆಯುದ್ದ ಅಥವಾ ಶಕ್ತಿ ಅಳೆಯುವ ಸಾಧನ. ಅತಿ ನಿಖರ ಅಳತೆ ಬೇಕಾದಾಗ ವ್ಯತಿಕರಣಮಾಪಕದ (ಇಂಟರ್‌ಫೆರೊಮೀಟರ್) ಬಳಕೆಯುಂಟು. ಈ ಎಲ್ಲ ಸಾಧನಗಳ ನೆರವಿನಿಂದ ರೋಹಿತಾಧ್ಯಯನ ಮಾಡುವ ವಿಜ್ಞಾನ ವಿಭಾಗವೇ ರೋಹಿತವಿಜ್ಞಾನ.
ವಿದ್ಯುತ್ಕಾಂತ ರೋಹಿತ
[ಬದಲಾಯಿಸಿ]ವಿದ್ಯುತ್ಕಾಂತ ರೋಹಿತ ಎಂಬುದು ಬೆಳಕಿನ ವೇಗದಲ್ಲಿ ಚಲಿಸುವ ವಿದ್ಯುತ್ಕಾಂತ ವಿಕಿರಣ ಬೀರುವ ರೋಹಿತ. ಇದೊಂದು ವಿಭಿನ್ನ ಅಲೆಯುದ್ದ, ಆವೃತ್ತಿ ಅಥವಾ ಶಕ್ತಿಯುಳ್ಳ ವಿಕಿರಣಗಳ ಸಂತತ ಪಟ್ಟೆ. ಇದರ ಘಟಕಗಳ ಹಾಗೂ ಅವುಗಳ ಪ್ರಮುಖ ವಿಶಿಷ್ಟತೆಗಳ ವಿವರ ಇಂತಿದೆ:
ಘಟಕ | ಅಲೆಯುದ್ದ (ಮೀ) | ಆವೃತ್ತಿ (ಹರ್ಟ್ಸ್) | ಶಕ್ತಿ (ಜೂಲ್) |
---|---|---|---|
ರೇಡಿಯೊ | > 1x10-1 | < 3x109 | < 2x10-24 |
ಮೈಕ್ರೊವೇವ್ | 1x10-3 - 1x10-1 | 3x109 - 3x1011 | 2x10-24 - 2x10-22 |
ಅತಿರಕ್ತ | 7x10-7 - 1x10-3 | 3x1011 - 4x1014 | 2x10-22 - 3x10-19 |
ಗೋಚರ | 4x10-7 - 7x10-7 | 4x1014 - 7.5x1014 | 3x10-19 - 5x10-19 |
ಅತಿನೇರಿಳೆ | 1x10-8 - 4x10-7 | 7.5x1014 - 3x1016 | 5x10-19 - 2x10-17 |
ಎಕ್ಸ್‌ಕಿರಣ | 1x10-11 - 1x10-8 | 3x1016 - 3x1019 | 2x10-17 - 2x10-14 |
ಗ್ಯಾಮಾ ಕಿರಣ | < 1x10-11 | > 3x1019 | > 2x10-14 |
ಶಕ್ತಿ, ಅಲೆಯುದ್ದ ಅಥವಾ ಆವೃತ್ತಿಯ ಪರಿಭಾಷೆಯಲ್ಲಿ ವಿದ್ಯುತ್ಕಾಂತ ತರಂಗವನ್ನು ವಿವರಿಸಬಹುದು. ಇವುಗಳ ನಡುವೆ ಗಣಿತೀಯ ಸಂಬಂಧಗಳು: 1. ಅಲೆಯುದ್ದ= ಬೆಳಕಿನ ವೇಗ / ಆವೃತ್ತಿ; 2. ಶಕ್ತಿ= ಪ್ಲಾಂಕ್ ಸ್ಥಿರ x ಆವೃತ್ತಿ (E=vh).
ರೋಹಿತದ ಸೂಕ್ಷ್ಮ ಸಂರಚನೆ
[ಬದಲಾಯಿಸಿ]ಸ್ಥಾಯೀವೈದ್ಯುತ (ಎಲೆಕ್ಟ್ರೊಸ್ಟ್ಯಾಟಿಕ್) ಆಕರ್ಷಣೆಯಿಂದಾಗಿ ಪರಮಾಣುವಿನಲ್ಲಿ ಶಕ್ತಿಮಟ್ಟಗಳು ಸ್ಥೂಲವಾಗಿ ಏರ್ಪಡುತ್ತವೆ. ಇತರ ಕೆಲವು ಕಾರಣಗಳಿಂದಾಗಿ ನಿಶ್ಚಿತ ಶಕ್ತಿಮಟ್ಟಗಳಲ್ಲಿ ವಿಭಜನೆ ಉಂಟಾಗುವುದು ರೋಹಿತದ ಸೂಕ್ಷ್ಮ (ಫೈನ್) ಮತ್ತು ಅತಿಸೂಕ್ಷ್ಮ (ಹೈಪರ್‌ಫೈನ್) ಸಂರಚನೆಗೆ ಕಾರಣ. ಸ್ವತಃ ಒಂದು ಸೂಕ್ಷ್ಮ ಕಾಂತದಂತೆ ಎಲೆಕ್ಟ್ರಾನ್ ವರ್ತಿಸಿ ಕಾಂತಕ್ಷೇತ್ರವನ್ನು ಸೃಷ್ಟಿಸುತ್ತದೆ. ಎಲೆಕ್ಟ್ರಾನ್ ನಿಶ್ಚಿತ ಕಕ್ಷೆಯಲ್ಲಿ ಚಲಿಸುವುದರಿಂದಲೂ ಕಾಂತಕ್ಷೇತ್ರ ಉಂಟಾಗುತ್ತದೆ. ಇವೆರಡರ ಅಂತರ್ವರ್ತನೆಯಿAದ ಶಕ್ತಿಮಟ್ಟಗಳಲ್ಲಿ ಬದಲಾವಣೆಯಾಗುತ್ತದೆ. ಇದು ರೋಹಿತರೇಖೆಗಳ ಸೂಕ್ಷ್ಮಸಂರಚನೆಗೆ ಕಾರಣವಾಗುತ್ತದೆ. ನ್ಯೂಕ್ಲಿಯಸ್ ಕೂಡ ಕಾಂತದಂತೆ ವರ್ತಿಸಿ ತನ್ನದೇ ಕಾಂತಮಹತ್ತ್ವ (ಮ್ಯಾಗ್ನೆಟಿಕ್ ಮೊಮೆಂಟ್) ಪಡೆಯುತ್ತದೆ. ಗಿರಕಿ (ಸ್ಪಿನ್) ಮತ್ತು ಕಕ್ಷಾಚಲನೆಗಳಿಂದ ಎಲೆಕ್ಟ್ರಾನಿಗೆ ಒಟ್ಟು ಕಾಂತಮಹತ್ತ್ವವೂ ಇರುತ್ತದೆ. ನ್ಯೂಕ್ಲಿಯಸ್ ಮತ್ತು ಎಲೆಕ್ಟ್ರಾನುಗಳ ಈ ಎರಡು ಕಾಂತಮಹತ್ತ್ವಗಳ ಅಂತರ್ವರ್ತನೆಯಿಂದ ರೋಹಿತರೇಖೆಗಳ ಅತಿ ಸೂಕ್ಷ್ಮಸಂರಚನೆ ಉಂಟಾಗುತ್ತದೆ. ಇದಕ್ಕೆ ನ್ಯೂಕ್ಲಿಯಸಿನ ಚತುರ್ಗುಣಿತ (ಕ್ವಾಡ್ರಪಲ್) ವಿದ್ಯುತ್‌ಮಹತ್ತ್ವ ಮತ್ತು ಎಲೆಕ್ಟ್ರಾನುಗಳ ಸ್ಥಾಯೀವೈದ್ಯುತ ಅಂತರ್ವರ್ತನೆಗಳ ಕೊಡುಗೆಯೂ ಇವೆ. ಸಂಭವನೀಯತೆಯ ಆಧಾರದಲ್ಲಿ ಸಂಕ್ರಮಣಗಳು ಒಪ್ಪಿತ (ಅಲೌಡ್) ಅಥವಾ ನಿಷೇಧಿತವಾಗುವುದರಿಂದ (ಫರ್‌ಬಿಡನ್) ರೋಹಿತಸಂರಚನೆ ಹೆಚ್ಚು ಸಂಕೀರ್ಣವಾಗುತ್ತದೆ. ಶಕ್ತಿಮಟ್ಟಗಳ ಮೇಲೆ ಬಾಹ್ಯ ಕಾಂತ ಹಾಗೂ ವಿದ್ಯುತ್ ಕ್ಷೇತ್ರಗಳ ಪ್ರಭಾವವೂ (ಝೀಮನ್ ಮತ್ತು ಸ್ಟಾರ್ಕ್ ಪರಿಣಾಮಗಳು) ಉಂಟು. ಆದುದರಿಂದ ಇವುಗಳಿಂದಲೂ ರೋಹಿತಸಂರಚನೆ ಬದಲಾಗುತ್ತದೆ. ಅಣುವೊಂದರ ಕಂಪನ ಮತ್ತು ಭ್ರಮಣಗಳಿಂದಲೂ ಶಕ್ತಿಮಟ್ಟಗಳು ಸೃಷ್ಟಿಯಾಗುತ್ತವೆ. ಈ ಎಲ್ಲ ವಿದ್ಯಮಾನಗಳ ಒಟ್ಟಾರೆ ಫಲಿತವೇ ಅಣುರೋಹಿತದ ವೈವಿಧ್ಯಮಯ ರೋಹಿತ ಪಟ್ಟೆಗಳು ಮತ್ತು ರೇಖೆಗಳು.
ಉಲ್ಲೇಖಗಳು
[ಬದಲಾಯಿಸಿ]- ↑ Britannica, The Editors of Encyclopaedia. "spectrum". Encyclopedia Britannica, 21 Apr. 2022, https://www.britannica.com/science/spectrum. Accessed 15 July 2023.
- ↑ "Spectrum ." The Gale Encyclopedia of Science. . Encyclopedia.com. 29 Jun. 2023 <https://www.encyclopedia.com>.