ವಿಷಯಕ್ಕೆ ಹೋಗು

ಜಿರಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿರಾಂಡ್ - ನೈಋತ್ಯ ಫ್ರಾನ್ಸಿನ ಕರಾವಳಿಯ ಒಂದು ಡಿಪಾರ್ಟ್‍ಮೆಂಟ್ (ಪ್ರಾಂತ್ಯ). ಜಿರಾಂಡ್ ಅಳಿವೆ, ಗರಾನ್ ಮತ್ತು ಡಾರ್ಡೋನ್ ನದಿಗಳ ಕೆಳ ಕಣಿವೆ-ಇವುಗಳ ಆಚೀಚೆಯ ಮತ್ತು ನಡುವಣ ಪ್ರದೇಶವನ್ನು ಇದು ಒಳಗೊಂಡಿದೆ. ವಿಸ್ತೀರ್ಣ 4,141 ಚ.ಮೈ. ಜನಸಂಖ್ಯೆ 10.09,390 (1968). ಆಡಳಿತ ಕೇಂದ್ರ ಬೋರ್ಡೋ.

ಗರಾನ್ ಮತ್ತು ಡಾರ್ಡೋನ್ ನದಿಗಳು ಮೆಕ್ಕಲುಮಣ್ಣಿನ ವಿಶಾಲವಾದ ಕಣಿವೆಗಳಲ್ಲಿ ಹರಿದು ಅಳಿವೆಯನ್ನು ಪ್ರವೇಶಿಸುತ್ತವೆ. ಅಳಿವೆಯ ಬಾಯಿಯ ಅಗಲ ಬಿಸ್ಕೇ ಕೊಲ್ಲಿಯ ಬಳಿ ಸುಮಾರು 10 ಕಿ.ಮೀ. ವಿಶಾಲ ಅಳಿವೆಯ ದಂಡೆಯ ಮೇಲಿರುವ ದೊಡ್ಡ ವಾಣಿಜ್ಯ ಬಂದರು ನಗರ ಬೋರ್ಡೋ. ಇದು ಸಮುದ್ರದಿಂದ 96 ಕಿ.ಮೀ. ದೂರದಲ್ಲಿದೆ. ಅಳಿವೆಯಲ್ಲಿ ಹಲವು ಸಣ್ಣ ದ್ವೀಪಗಳೂ ಇರುವುದರಿಂದ ನೌಕಾಯಾನ ಕಷ್ಟಕರ. ಆದ್ದರಿಂದ ಹಲವು ಹೊರಬಂದರುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವುಗಳ ಪೈಕಿ ಮುಖ್ಯವಾದ್ದು ಪೋಯಾಕ್. ಡಾರ್ಡೋನ್ ಮತ್ತು ಗರಾನ್ ನದಿಗಳು ಕೂಡುವ ಎಡೆಯಲ್ಲಿರುವ ಆಂಬಿಸ್‍ನಲ್ಲಿ ಆಧುನಿಕ ತೈಲಸಂಸ್ಕರಣ ಸ್ಥಾವರವಿದೆ. ಜಿರಾಂಡ್ ಅಳಿವೆಗೂ ಬಿಸ್ಕೇ ಕೊಲ್ಲಿಗೂ ನಡುವಣ ಪರ್ಯಾಯದ್ವೀಪದ ಪಶ್ಚಿಮದ ಕರಾವಳಿ ಪ್ರದೇಶ ಜವುಗುನೆಲ.

ಜಿರಾಂಡ್ ಡಿಪಾರ್ಟ್‍ಮೆಂಟಿನದು ತೇವಪೂರಿತ ವಾಯುಗುಣ. ಬೇಸಗೆ ದೀರ್ಘ ತಾಪಕರ, ಚಳಿಗಾಲ ತೀವ್ರವಲ್ಲ. ಮೆಕ್ಕೆಜೋಳ, ದ್ರಾಕ್ಷಿ ಮುಖ್ಯ ಬೆಳೆಗಳು. ನದೀಪ್ರದೇಶದ ಹಳೆಯ ಗ್ರಾವೆಲ್ ನೆಲದ ಮೇಲೂ ಪಕ್ಕದ ಬೆಟ್ಟಗಳ ಬದಿಯಲ್ಲೂ ದ್ರಾಕ್ಷಿ ವನಗಳಿವೆ. ತಗ್ಗಿನ ಮೆಕ್ಕಲುಮಣ್ಣಿನ ನೆಲಕ್ಕೂ ಇವು ವಿಸ್ತರಿಸಿವೆ.

ಬೋರ್ಡೋ (2,66.662) ಮುಖ್ಯ ವಾಣಿಜ್ಯಕೇಂದ್ರ. ಜಿರಾಂಡ್ ಡಿಪಾರ್ಟ್‍ಮೆಂಟಿನ ಆಡಳಿತ ಕೇಂದ್ರ. 17, 18ನೆಯ ಶತಮಾನಗಳಲ್ಲಿ ಇದು ಬೆಳೆಯಿತು. ಈಗಲೂ ಇದು ಫ್ರಾನ್ಸಿನ ಮುಖ್ಯ ಪ್ರಾಂತೀಯ ನಗರಗಳಲ್ಲಿ ಒಂದು. ಬ್ಲೇ, ಲ್ಯಾಂಗೊ ಮತ್ತು ಲೀಬರ್ನ್ ಇತರ ಪಟ್ಟಣಗಳು.

ಇತಿಹಾಸ

[ಬದಲಾಯಿಸಿ]

ಫ್ರಾನ್ಸಿನ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿದ ರಾಜಕೀಯ ಗುಂಪಿನವರಿಗೆ ಜಿರಾಂಡಿನರೆಂಬ ಹೆಸರು ಬಂದಿದೆ. ಜಿರಾಂಡ್ ಡಿಪಾರ್ಟ್‍ಮೆಂಟಿನಿಂದ ಬಂದ ಪ್ರತಿನಿಧಿಗಳಿಂದ ಆ ಗುಂಪಿನ ಸದಸ್ಯಬಲ ಹೆಚ್ಚಾಗಿದ್ದುದರಿಂದ ಇತಿಹಾಸಕಾರನೊಬ್ಬ 1847ರಲ್ಲಿ ಅದರ ಸದಸ್ಯರನ್ನು ಜಿರಾಂಡಿನರೆಂದು ಕರೆದು. 1791ರಲ್ಲಿ ಸಮಾವೇಶಗೊಂಡ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ತನ್ನ ಸದಸ್ಯರು ಮತ್ತೆ ಆಯ್ಕೆಯಾಗುವುದನ್ನು ಸಂವಿಧಾನ ಸಭೆ ನಿಷೇಧಿಸಿದ್ದರಿಂದ ಆ ಸಭೆಯಲ್ಲಿ ಸಂಪೂರ್ಣ ಹೊಸಬರೇ ಇದ್ದರು. ಇವರಲ್ಲಿ 136 ಸದಸ್ಯರು ಜಾಕೋಬಿನ್ ಕ್ಲಬ್ ಸೇರಿದರು-ಇವರಿಂದ ಜಿರಾಂಡಿನರ ಗುಂಪು ರೂಪು ತಳೆಯಿತು. ಇದರ ಸದಸ್ಯರು ಸಾಮಾನ್ಯವಾಗಿ ವಿದ್ಯಾವಂತರು, ವೃತ್ತಿನಿರತರು. ಇವರು ಒಳ್ಳೆಯ ವಾಗ್ಮಿಗಳಾಗಿದ್ದರು. ಇವರು ಪ್ರಾಚೀನ ಗ್ರೀಕ್ ಮತ್ತು ರೋಮ್ ಗಣರಾಜ್ಯಗಳನ್ನು ಮೆಚ್ಚಿದ್ದರು. ಫ್ರಾನ್ಸ್ ಗಣರಾಜ್ಯವಾಗಬೇಕೆಂದು ಇವರು ಆಶಿಸಿದ್ದರು. ಇವರ ಮುಖಂಡರಲ್ಲಿ ಮುಖ್ಯರಾದವರು ಬ್ರೀಸೋ, ವೆನ್ರ್ಯೋಕಾಂಡಾರ್ಸೆ ಮತ್ತು ಮೆಡೇಂ ರೋಲ್ಯಾಂಡ್.

1792ರಲ್ಲಿ ವಿಧಾನಸಭೆ ಕೊನೆಗೊಂಡಿತು. ಕ್ರಾಂತಿಕಾರರ ಕಾರ್ಯಾಚರಣೆಯಿಂದ ದೊರೆತನ ಕುಸಿಯಿತು. ಜಿರಾಂಡಿನರು ಇದರಲ್ಲಿ ಭಾಗವಹಿಸಲಿಲ್ಲ. ಪ್ಯಾರಿಸ್ ನಗರದವರೇ ಪ್ರಧಾನವಾಗಿದ್ದರು. ಕ್ರಾಂತಿವಾದಿಗಳು ತಮ್ಮ ಆಡಳಿತವನ್ನು ಸ್ಥಾಪಿಸಬೇಕೆಂದಿದ್ದರು. ಇದನ್ನು ಜಿರಾಂಡಿನರು ವಿರೋಧಿಸುತ್ತಿದ್ದರು. ಜಿರಾಂಡಿನರು ಬಲಪ್ರಯೋಗಕ್ಕೆ ವಿರುದ್ಧವಾಗಿದ್ದರು. 16ನೆಯ ಲೂಯಿ ದೊರೆ ದೇಶದ್ರೋಹಿಯಾದ್ದರಿಂದ ಅವನನ್ನು ವಿಚಾರಣೆಗೆ ಗುರಿಪಡಿಸದೆಯೆ ಮರಣದಂಡನೆ ವಿಧಿಸಬೇಕೆಂಬುದು ಕ್ರಾಂತಿಕಾರರ ಅಭಿಪ್ರಾಯ. ಜಿರಾಂಡಿನರು ಒತ್ತಾಯದಿಂದಾಗಿ ಅವರು ನೆಪಕ್ಕೆ ಒಂದು ವಿಚಾರಣೆ ನಡೆಸಿ ಲೂಯಿ ದೊರೆಯ ತಲೆ ಕಡಿದರು. ಅವರು 1793ರಲ್ಲಿ ಬಲಪ್ರಯೋಗದಿಂದ 29 ಮಂದಿ ಜಿರಾಂಡಿನರನ್ನು ಕನ್‍ವೆನ್‍ಷನ್‍ನಿಂದ ಹೊರದೂಡಿದರು. ಆ ಪಕ್ಷದ ಮುಂದಾಳುಗಳು ಮರಣ ದಂಡನೆಗೆ ಗುರಿಯಾದರ


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: