ವಿಷಯಕ್ಕೆ ಹೋಗು

ಜಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಜಿ (ಜ್ಯಾಸ್ಮಿನಮ್ ಗ್ರ್ಯಾಂಡಿಫ಼್ಲೋರಮ್) ದಕ್ಷಿಣ ಏಷ್ಯಾ ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಅಜ್ಜಿಗೆ, ಜಾತಿಮಲ್ಲಿಗೆ ಪರ್ಯಾಯ ನಾಮಗಳು. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಹಾಗೂ ಮಾರೀಷಸ್, ಜಾವಾ, ಮಧ್ಯ ಅಮೇರಿಕಾ ಇತ್ಯಾದಿಗಳಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. ಇದು ಉತ್ತರ ಹಿಮಾಲಯ, ಪಶ್ಚಿಮ ಬಂಗಾಳ, ಆಂಧ್ರದ ವಿಶಾಖಪಟ್ಟಣ, ತಮಿಳುನಾಡಿನ ತಿರುನಲ್ಲೇರಿ ಗುಡ್ಡ ಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುತ್ತದೆ.

ವ್ಯಾಪ್ತಿ

[ಬದಲಾಯಿಸಿ]

ಭಾರತದ ವಿವಿಧ ಭಾಗಗಳಲ್ಲೂ ಯೂರೊಪ್ ಮತ್ತು ಮೆಡಿಟರೇನಿಯನ್ ಪ್ರದೇಶದ ವಿವಿಧ ದೇಶಗಳಲ್ಲೂ ಇದನ್ನು ವ್ಯಾಪಕವಾಗಿ ಕೃಷಿ ಮಾಡಲಾಗಿದೆ. ಉತ್ತರ ಪ್ರದೇಶದ ಘಾಜಿಪುರ, ಫರೂಕಾಬಾದ್, ಬಲಿಯ ಜಿಲ್ಲೆಯ ಸಿಕಂದರ್‌ಪುರ, ಜೋನ್‌ಪುರ ಇದರ ಬೇಸಾಯಕ್ಕೆ ಹೆಸರುವಾಸಿಯಾಗಿವೆ. ಫ್ರಾನ್ಸಿನ ಗ್ರಾಸ್, ಇಟಲಿಯ ಸಿಸಿಲಿ ಹಾಗೂ ಕೆಲಬ್ರಿಯಗಳಲ್ಲಿ ಬೇಸಾಯದಲ್ಲಿರುವ ಮಲ್ಲಿಗೆಗಳ ಪೈಕಿ ಇದೇ ಮುಖ್ಯವಾದ್ದು. ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್, ಸಿರಿಯ, ಆಲ್ಜೀರಿಯ ಮತ್ತು ಮೊರಕೊಗಳಲ್ಲಿ ಜಾಜಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ.

ಗುಣಲಕ್ಷಣಗಳು

[ಬದಲಾಯಿಸಿ]

ಇದು ೨-೪ ಮಿ. ಎತ್ತರ ಬೆಳೆಯುವ, ಆಸರೆಗಳನ್ನು ಅವಲಂಬಿಸಿ ಸುತ್ತಿಕೊಂಡು ಬೆಳೆಯುವ ಪರ್ಣಪಾತಿ ಪೊದೆ ಸಸ್ಯ.

ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿದೆ. ಇದರ ತವರೂರು ಭಾರತ. ಇದು ಕಡುಹಸಿರು ಬಣ್ಣದ ಚಿಕ್ಕ ಎಲೆಗಳನ್ನು ಹೊಂದಿದ್ದು, ಪೊದೆಯಾಗಿ ಅಥವಾ ಚಪ್ಪರಗಳಲ್ಲಿ ಬೆಳೆಯಬಲ್ಲ ಬಳ್ಳಿಯಾಗಿದೆ.

ಇದು ನೋಡಲು ಸಣ್ಣ ಜಾಜಿ ಗಿಡದಂತೆಯೇ ಇದೆಯಾಗಿ ಕೆಲವರು ಜಾಜಿಯನ್ನು ಜಾಸ್ಮಿನಮ್ ಅಫಿಸಿನೇಲ್ ಪ್ರಭೇದದ ಒಂದು ರೂಪ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಹೆಚ್ಚು ಸುಪುಷ್ಟ ಬೆಳವಣಿಗೆ, ಎಲೆಯಲ್ಲಿ ಹೆಚ್ಚು ಸಂಖ್ಯೆಯ ಪತ್ರಕಗಳನ್ನು (7-11) ಪಡೆದಿರುವುದು, ಹೂಮಂಜರಿಯ ಆಕಾರ ಹಾಗೂ ಗಾತ್ರ ಭಿನ್ನತೆ ಮುಂತಾದ ಲಕ್ಷಣಗಳಿಂದ ಇದು ಸಣ್ಣ ಜಾಜಿಗಿಂತ ಬೇರೆಯಾಗಿದೆ. ಅಂತೆಯೇ ಇದರ ಹೂವಿನಲ್ಲಿ ದಳ ಹಾಗೂ ನಿದಳ ಪುಂಜಗಳು ತಲಾ ಐದು ಹಾಳೆಗಳನ್ನು ಪಡೆದಿವೆ.

ಇತರ ಭಾಷೆಯ ಹೆಸರುಗಳು

[ಬದಲಾಯಿಸಿ]

ಕನ್ನಡ: ಜಾಜಿ ಮಲ್ಲೆ, ಜಾಜಿ ಮಲ್ಲಿಗೆ, ಜಾಜಿ ಹೂವು

ಸಂಸ್ಕೃತ: ಜಾತೀ, ಮಾಲತಿ, ಚೇತಿಕ, ಮನೋಜ್ಞ, ಮಾಲಿನಿ, ಮನೋಹರ, ರಾಜಪುತ್ರಿ, ಸಂಧ್ಯಾಪುಷ್ಠಿ, ಸುಮನ

ಹಿಂದಿ: ಚಮೇಲಿ, ಚಂಬೇಲಿ, ಜಾಟಿ

ಇಂಗ್ಲೀಷ್: ಸ್ಪಾನಿಶ್ ಜಾಸ್ಮಿನ್

ಉಪಯೋಗಗಳು

[ಬದಲಾಯಿಸಿ]

ಜಾಜಿ ಹೂವು, ಎಲೆ ಹಾಗೂ ಬೇರು ಔಷಧೀಯ ಗುಣವನ್ನು ಹೊಂದಿದೆ.[][] ಇದನ್ನು ಸುಗಂಧ ದ್ರವ್ಯ ತಯಾರಿಸಲು ಬಳಸುತ್ತಾರೆ. ಈ ಹೂವುಗಳಲ್ಲಿ ಸುಗಂಧ ನೀಡುವ `ಇಂಡೋಲ್' ಎಂಬ ರಾಸಾಯನಿಕ ಪದಾರ್ಥ ಇದೆ.

  1. ಮಗುವಿಗೆ ಹಾಲುಣಿಸುವುದನ್ನು ಬಿಡಬೇಕೆಂಬ ಇಚ್ಛೆಯುಳ್ಳ ಸ್ತ್ರೀಯರು ಜಾಜಿ ಮಲ್ಲಿಗೆ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬಹುದು ಇಲ್ಲವೇ ಹೂಗಳನ್ನು ತೆಳುವಾದ ಬಟ್ಟೆಯಲ್ಲಿ ಹರಡಿ ಅದನ್ನು ಎದೆಗೆ ಕಟ್ಟಿಕೊಳ್ಳಬಹುದು.
  2. ಮಕ್ಕಳಿಗೆ ಕಜ್ಜಿ-ತುರಿಕೆಗಳಾದಾಗ ಜಾಜಿ ಮಲ್ಲಿಗೆ ಹೂವನ್ನು ಹಾಕಿ ತಯಾರಿಸಿದ ಎಣ್ಣೆಯನ್ನು ಹಚ್ಚಬೇಕು. ಬಾಯಿಯ ಹುಣ್ಣಿನ ತೊಂದರೆಯಿಂದ ಬಳಲುವವರು ಜಾಜಿ ಹೂವಿನ ಬಳ್ಳಿಯ ಎಲೆಗಳನ್ನು ಅಗಿದು ತಿನ್ನಬೇಕು.
  3. ತಲೆಯಲ್ಲಿ ಹುಳಕಡ್ಡಿಯಾಗಿ ನಾಣ್ಯದಾಕಾರದಲ್ಲಿ ಕೂದಲು ಉದುರುತ್ತಿದ್ದರೆ ಜಾಜಿ ಎಲೆಯ ರಸವನ್ನು ಹಚ್ಚಿ ಆ ಜಾಗದಲ್ಲಿ ಉಜ್ಜಿಕೊಳ್ಳಬೇಕು.
  4. ಗಾಯವಾದಾಗ ಜಾಜಿ ಎಲೆಯನ್ನು ಅರೆದು ಅದರ ಲೇಪನ ಹಾಕಬಹುದು ಇಲ್ಲವೇ ಹೂವನ್ನು ಹಾಕಿ ತಯಾರಿಸಿದ ಎಣ್ಣೆ ಹಚ್ಚಬಹುದು.
  5. ಮುಟ್ಟು ನಿಯಮಿತವಾಗಿ ಆಗದಿದ್ದರೆ ಜಾಜಿ ಎಲೆಯ ರಸವನ್ನು ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು.
  6. ದೀರ್ಘಕಾಲಿಕ ಜ್ವರದಿಂದ ಬಳಲುವವರಿಗೆ ಜಾಜಿ ಬೇರಿನ ಕಷಾಯವನ್ನು ಕುಡಿಯಲು ಕೊಡಬಹುದು. ಕಣ್ಣುರಿ ಉಂಟಾದಾಗ ಜಾಜಿ ಹೂವಿನ ರಸದಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಯಿಸಿ ಆ ಬಟ್ಟೆಯನ್ನು ಕಣ್ಣಿನ ಮೇಲೆ ಹಾಕಿಕೊಳ್ಳಬೇಕು.
  7. ವಸಡಿನಿಂದ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬಹುದು.
  8. ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸಿಕೊಳ್ಳಬಹುದು.
  9. ಇದರ ಎಲೆಗಳಿಗೆ ಪ್ರತಿಬಂಧಕ ಗುಣ ಇದೆ.
  10. ಬೇರನ್ನು ಗಜಕರ್ಣದ ಚಿಕಿತ್ಸೆಯಲ್ಲಿ ಬಳಸುವರೆನ್ನಲಾಗಿದೆ.
  11. ಎಲೆಗಳ ತಾಜಾರಸ ಕಾಲಿನ ಆಣಿಗಳಿಗೆ ಒಳ್ಳೆಯ ಮದ್ದು.
  12. ಇಡೀ ಗಿಡ ಜಂತು ನಿವಾರಕ, ಮೂತ್ರೋತ್ತೇಜಕ ಎಂದು ಹೇಳಲಾಗಿದೆ.
  13. ಇದರ ಎಣ್ಣೆ ಹಾಗೂ ಅತ್ತರುಗಳು ಚರ್ಮರೋಗಗಳಿಗೂ ತಲೆನೋವು ಮತ್ತು ಕಣ್ಣು ಬೇನಿಗಳಿಗೂ ತಂಪುಕಾರಕವೆನಿಸಿವೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: