ವಿಷಯಕ್ಕೆ ಹೋಗು

ಗಗನಚುಂಬಿ ಕಟ್ಟಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2009ರಲ್ಲಿ ನಿರ್ಮಾಣ ಪೂರ್ಣಗೊಂಡ ಬುರ್ಜ್ ಖಲೀಫ಼ಾ

ಗಗನಚುಂಬಿ ಕಟ್ಟಡ ಎಂದರೆ ಅನೇಕ ಅಂತಸ್ತುಗಳುಳ್ಳ, ಗಗನವನ್ನೇ ಮುಟ್ಟುವದೋ ಎಂಬಷ್ಟು ಎತ್ತರದ ಬೃಹದಾಕಾರದ ಕಟ್ಟಡ (ಸ್ಕೈಸ್ಕ್ರೇಪರ್). ಇವು ಮಾನವ ಮುಟ್ಟಿರುವ ನಾಗರಿಕತೆಯ ಉನ್ನತ ಮಟ್ಟದ ಗುರುತಾಗಿ, ಇಂಜಿನಿಯರಿಂಗ್‌ನ ಪ್ರಗತಿಯ ಪರಮಾವಧಿಯಾಗಿ ಶೋಭಿಸುತ್ತಿವೆ. ಇತ್ತೀಚಿನ ಶತಮಾನಗಳಲ್ಲಿ ಉಕ್ಕು, ಸಿಮೆಂಟ್, ಕಾಂಕ್ರೀಟ್, ಮತ್ತು ಕಂಪನ ನಿರೋಧಕ ಸಾಮಗ್ರಿಗಳು ಬಳಕೆಗೆ ಬಂದ ಮೇಲೆ ಕಟ್ಟಡಗಳ ರಚನಾಕ್ರಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ.[] ಬಲವಾದ ಉಕ್ಕಿನ ಕಂಬಗಳನ್ನೂ ತೊಲೆಗಳನ್ನೂ ಪರಸ್ಪರ ಜೋಡಿಸುವುದರ ಮೂಲಕ ಕಟ್ಟಡವನ್ನು ಬಹು ಎತ್ತರದ ಮಟ್ಟಕ್ಕೆ ಕೊಂಡೊಯ್ಯಬಹುದು. ಹೀಗೆಯೇ, ಪ್ರಬಲಿತ ಸಿಮೆಂಟ್, ಕಾಂಕ್ರೀಟಿನ ಕಂಬಗಳನ್ನೂ ತೊಲೆಗಳನ್ನೂ ಕ್ರಮವಾಗಿ ಜೋಡಿಸಿ ಅನೇಕ ಅಂತಸ್ತುಗಳುಳ್ಳ ಕಟ್ಟಡವನ್ನು ನಿರ್ಮಿಸಬಹುದು. ಇವಲ್ಲದೆ ಬಹು ಭಾರವಾದ ಸಾಮಾನುಗಳನ್ನು, ಅತ್ಯಂತ ಸುಲಭವಾಗಿ ನೂರಾರು ಅಡಿಗಳ ಮೇಲ್ಮಟ್ಟಕ್ಕೆ ಸಾಗಿಸುವ ಸಲಕರಣೆಗಳೂ, ಯಂತ್ರಗಳೂ ಇಂಥ ಕಟ್ಟಡಗಳ ರಚನೆಯನ್ನು ಅತಿ ಶೀಘ್ರವಾಗಿ ಒಪ್ಪವಾಗಿಯೂ ಸುಭದ್ರವಾಗಿಯೂ ಪೊರೈಸಲು ಅನುಕೂಲವಾಗಿವೆ. ಈ ರೀತಿ ಕಟ್ಟಲ್ಪಟ್ಟಿರುವ ಗಗನಚುಂಬಿ ಕಟ್ಟಡಗಳು ಅಮೆರಿಕದ ನ್ಯೂಯಾರ್ಕಿನ ಮ್ಯಾನ್‍ಹಾಟನ್ ಪ್ರದೇಶದಲ್ಲಿ ಹೇರಳವಾಗಿಯೂ ನಿಬಿಡವಾಗಿಯೂ ಇವೆ. ಪ್ರಪಂಚದ ಇನ್ನಿತರ ಮುಖ್ಯ ಪಟ್ಟಣಗಳಲ್ಲಿ ಇಂಥ ಕಟ್ಟಡಗಳು ನಿರ್ಮಾಣಗೊಂಡಿವೆ.

ಗಗನಚುಂಬಿ ಕಟ್ಟಡಗಳ ಅವಶ್ಯಕತೆ: ನಗರಗಳಲ್ಲಿ ಸೌಧಗಳು ಎತ್ತರವಾಗಿ ಬೆಳೆಯುವುದಕ್ಕೆ ಸ್ಥಳಸಂಕೋಚವೇ ಕಾರಣ. ಅನೇಕ ಅಂತಸ್ತಿನ ಕಟ್ಟಡವೊಂದರಲ್ಲಿ ದೊರಕುವ ವಸತಿಯ ಜಾಗವನ್ನು ಏಕ ಅಂತಸ್ತಿನ ಕಟ್ಟಡದಲ್ಲಿ ದೊರಕಿಸಿಕೊಳ್ಳಬೇಕಾದರೆ ಕಟ್ಟಡವನ್ನು ಅತಿ ಅಗಲವಾಗಿಯೂ ಉದ್ದವಾಗಿಯೂ ಹರಡಬೇಕಾಗುತ್ತದೆ. ಇಂಥ ಏಕ ಅಂತಸ್ತಿನ ಕಟ್ಟಡಗಳು ಹಲವಾರು ಇದ್ದ ಪಕ್ಷದಲ್ಲಿ ಅವೆಲ್ಲಕ್ಕೂ ಬೇಕಾಗುವ ಪ್ರದೇಶ ಅತಿ ವಿಸ್ತಾರವಾಗಿರಬೇಕಾಗುತ್ತದೆ. ಕೆಲವೆಡೆಗಳಲ್ಲಿ ವಿಶಾಲ ಪ್ರದೇಶ ಸಿಕ್ಕದೆ ಇರಬಹುದು. ಅಥವಾ ಸಿಕ್ಕಿದರೂ ವಿಶಾಲವಾಗಿ ಹರಡಿರುವ ಬಡಾವಣೆಯ ಎಲ್ಲ ಕಟ್ಟಡಗಳಿಗೂ ತಲಪುವಂತೆ ಮಾಡಬೇಕಾಗುವ ಒಳಚರಂಡಿ, ವಿದ್ಯುತ್ ವ್ಯವಸ್ಥೆ, ನೀರು ಸರಬರಾಜು, ರಸ್ತೆಗಳು, ಇತ್ಯಾದಿ ನಾಗರಿಕ ಸೌಲಭ್ಯಗಳ ವ್ಯವಸ್ಥೆಗಾಗಿ ಖರ್ಚು ವಿಪರೀತವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಕಟ್ಟಡಗಳನ್ನು ಎತ್ತರವಾಗಿಯೂ ಅನೇಕ ಅಂತಸ್ತುಗಳನ್ನು ಉಳ್ಳವಾಗಿಯೂ ಕಟ್ಟುವುದು ಅನಿವಾರ್ಯವಾಗುತ್ತದೆ. ಹೀಗಾಗಿಯೇ ಗಗನಚುಂಬಿ ಕಟ್ಟಡಗಳು ರೂಪುಗೊಂಡಿವೆ.

ಗಗನಚುಂಬಿ ಕಟ್ಟಡಗಳ ನಿರ್ಮಾಣ

[ಬದಲಾಯಿಸಿ]

ಗಗನಚುಂಬಿ ಕಟ್ಟಡಗಳ ಅಡಿಪಾಯ: ಗಗನಚುಂಬಿ ಕಟ್ಟಡಗಳ ರಚನೆಯಲ್ಲಿಯೂ ಮತ್ತು ಬಳಕೆಯಲ್ಲಿಯೂ ಉದ್ಭವಿಸಿದ ಅನೇಕ ವಿಧವಾದ, ಅಸಾಧಾರಣ ಸಮಸ್ಯೆಗಳಿಗೆಲ್ಲ ಸೂಕ್ತವಾದ ಪರಿಹಾರಗಳನ್ನು ಹುಡುಕಲಾಗಿದೆ. ನೂರು, ಅಥವಾ ನೂರಿಪ್ಪತ್ತು ಅಂತಸ್ತುಗಳುಳ್ಳ ಎತ್ತರವಾದ ಕಟ್ಟಡಗಳಿಗೆ ಅಡಿಪಾಯ ಅತ್ಯಂತ ಸಾಮರ್ಥ್ಯಯುತದ್ದಾಗಿರಬೇಕೆಂಬುದು ನಿರ್ವಿವಾದ ವಿಷಯ. ಇದಕ್ಕಾಗಿ ಇಂಥ ಕಟ್ಟಡಗಳನ್ನು ಭದ್ರವಾದ ಕಾರ್ಗಲ್ಲಿನ ಅಡಿಪಾಯದ ಮೇಲೆಯೇ ನಿಲ್ಲಿಸಬೇಕಾಗುತ್ತದೆ. ಎಷ್ಟು ಆಳ ತೋಡಿದರೂ ಕಲ್ಲು ಸಿಕ್ಕದ ಕಡೆಗಳಲ್ಲಿ ಅಡಿಪಾಯವನ್ನು ವಿಸ್ತಾರವಾಗಿ ಹರಡಿದ, ಮತ್ತು ಪ್ರಬಲಿತ ಕಾಂಕ್ರೀಟಿನ ಹಾಸುಗಲ್ಲಿನ ಮೇಲೆ ಕೂರಿಸಬೇಕಾಗುತ್ತದೆ. ಸ್ಥಳ ಸಂಕೋಚದಿಂದ ಈ ವಿಧಾನವೂ ಸಾಧ್ಯವಾಗದಿದ್ದಲ್ಲಿ ಉಕ್ಕು ಅಥವಾ ಪ್ರಬಲಿತ ಕಾಂಕ್ರೀಟಿನಿಂದ ತಯಾರಿಸಲ್ಪಟ್ಟ ದಸಿಗಳನ್ನು (ಪೈಲ್) ನೆಲದೊಳಗೆ ಇಳಿಸಿ, ಅವುಗಳ ಮೇಲೆ ಕಟ್ಟಡವನ್ನು ರಚಿಸಬೇಕಾಗುತ್ತದೆ.

ಅತ್ಯಂತ ಎತ್ತರವಾದ ಕಟ್ಟಡಗಳು ಸುಲಭವಾಗಿ ನಲುಗಿಸಬಲ್ಲ ಕಂಪನ, ವಾಯು ಒತ್ತಡ, ಉಷ್ಣದ ಏರುಪೇರಿನಿಂದುಂಟಾಗುವ ವಿನಾಶಕ ಶಕ್ತಿ-ಇವೆಲ್ಲವನ್ನೂ ಎದುರಿಸಿ ಸುಭದ್ರವಾಗಿರಬೇಕಾದರೆ ಅವನ್ನು ಕಂಬಗಳು ಮತ್ತು ತೊಲೆಗಳಿಂದ ಬಿಗಿಯಲ್ಪಟ್ಟ ಚೌಕಟ್ಟಿನ ರೂಪದಲ್ಲಿಯೇ ಅಡಿಯಿಂದ ಮೇಲಿನವರೆಗೂ ರಚಿಸಬೇಕಾಗುತ್ತದೆ.

ಹೀಗೆ ರಚಿಸಲ್ಪಟ್ಟ ಉಕ್ಕು ಇಲ್ಲವೆ ಪ್ರಬಲಿತ ಕಾಂಕ್ರೀಟಿನ ಅಸ್ಥಿಪಂಜರದ ಸುತ್ತ, ಒಳಗೆ ಸೂಕ್ತವಾದ ತೆಳುಗೋಡೆಗಳನ್ನು ನಿರ್ಮಿಸಿ ಅವುಗಳಲ್ಲಿ ಗಾಜಿನ ಕಿಟಕಿ, ಬಾಗಿಲು ಮುಂತಾದುವನ್ನು ಕೂರಿಸುತ್ತಾರೆ. ಈಚೆಗೆ ಕಿಟಕಿ ಅಥವಾ ಬಾಗಿಲುಗಳನ್ನೊಳಗೊಂಡ ಪೂರ್ವನಿರ್ಮಿತ (ಪ್ರಿಫ್ಯಾಬ್ರಿಕೇಟೆಡ್) ಗೋಡೆಗಳನ್ನು ಅತಿ ಶೀಘ್ರವಾಗಿ ಜೋಡಿಸುವ ಕ್ರಮ ಬಳಕೆಯಲ್ಲಿದೆ. ಕಟ್ಟಡಕ್ಕೆ ಬೇಕಾಗುವ, ಅಪಾರವಾದ ಭಾರವುಳ್ಳ ಸಾಮಾನುಗಳನ್ನು ಮೇಲಕ್ಕೆ ಎತ್ತಲು, ಮತ್ತು ಕಾರ್ಮಿಕರನ್ನು ಮೇಲಕ್ಕೆ ಕರೆದುಕೊಂಡು ಹೋಗಲು, ಬೃಹದಾಕಾರದ ಎತ್ತುಗ (ಎಲಿವೇಟರುಗಳು) ಮತ್ತು ಕ್ರೇನುಗಳು ಇವೆ.

ಗಗನಚುಂಬಿ ಕಟ್ಟಡಗಳ ಬಳಕೆಯ ಅತಿ ಮುಖ್ಯವಾದ ಸಮಸ್ಯೆಯೆಂದರೆ ಅಂತಸ್ತಿನಿಂದ ಅಂತಸ್ತಿಗೆ ಜನಗಳ ಮತ್ತು ಸಾಮಾನುಗಳು ರವಾನೆ. ಇದಕ್ಕಾಗಿ ವಿದುಚ್ಛಕ್ತಿಯಿಂದ ನಡೆಯುವ ಬಲಯುತವಾದ ಎತ್ತುಗಗಳು ಹಲವಾರು ಇರುತ್ತವೆ. ಆಕಸ್ಮಿಕವಾಗಿ ಅವೇನಾದರೂ ನಿಂತು ಹೋದರೆ ಸಾಗಣೆ ಸೌಲಭ್ಯಕ್ಕೋಸ್ಕರ ಸುತ್ತು ಸೋಪಾನುಗಳಿರುತ್ತವೆ. ಆಕಸ್ಮಿಕ ಸನ್ನಿವೇಶಗಳಲ್ಲಿ ಹಠಾತ್ತನೆ ನಿರ್ಗಮನಕ್ಕೆ ಅನುಕೂಲವಾಗುವಂತೆ ತುರ್ತು ಬಾಗಲುಗಳು, ಉರಿ ಪಾರುದಾರಿಗಳು, ಇಳಿಜಾರುಗಳು, (ಷೂಟುಗಳು)-ಇವುಗಳಲ್ಲಿ ಇರುತ್ತವೆ. ಕೊಠಡಿಯಿಂದ ಕೊಠಡಿಗೂ ಇಲ್ಲವೆ ಕೊಠಡಿಯಿಂದ ಹೊರಕ್ಕೂ ಸಂಪರ್ಕವಿರುವಂತೆ ಅಂತರ ಟೆಲಿಫೋನ್ ವ್ಯವಸ್ಥೆ ಇಂಥ ಕಟ್ಟಡಗಳಲ್ಲಿ ಅಗತ್ಯ ಇರುತ್ತದೆ.

ಇಂಥ ಬೃಹತ್ ಕಟ್ಟಡದ ಪ್ರತಿ ಅಂತಸ್ತಿನಲ್ಲಿಯೂ ಅನೇಕಾನೇಕ ವಸತಿಗೃಹಗಳು, ಕಚೇರಿಗಳು, ಮಾರುಕಟ್ಟೆಗಳು, ವಿದ್ಯಾಲಯ, ಆಟದ ಮೈದಾನಗಳು, ಈಜು ಕೊಳಗಳು, ಸಿನಿಮಾ, ನಾಟಕ ಮುಂತಾದ ಮನೋರಂಜನ ಗೃಹಗಳು, ವ್ಯವಹಾರದ ಗೃಹಗಳು; ಆಸ್ಪತ್ರೆಗಳು ಹೂದೋಟಗಳು-ಮುಂತಾದ ನಾಗರಿಕ ಜೀವನಕ್ಕೆ ಬೇಕಾಗುವ ಸೌಲಭ್ಯಗಳೆಲ್ಲವೂ ಅಡಕವಾಗಿದ್ದು, ಈ ಒಂದೊಂದು ಅಂತಸ್ತೂ ದೊಡ್ಡ ನಗರದಂತಿರುವುದು. ಜನಜೀವನಕ್ಕೆ ಅವಶ್ಯಕವಾದ ವಸ್ತು ಸೌಕರ್ಯಗಳೆಲ್ಲವೂ ಇರುವ ಕಡೆಯಲ್ಲಿಯೇ ದೊರಕುವುದರಿಂದ ಜನರು ದೂರದ ಬೇರೊಂದು ಕಟ್ಟಡಕ್ಕೆ ಹೋಗಿಬರುವ ಅಗತ್ಯವೇ ಇರುವುದಿಲ್ಲ.

ಗಗನಚುಂಬಿ ಕಟ್ಟಡಗಳು ವಾಸ್ತುಶಿಲ್ಪ ಕೌಶಲ್ಯದಲ್ಲಿಯೂ, ಇಂಜಿನಿಯರಿಂಗ್ ಕೌಶಲ್ಯದಲ್ಲಿಯೂ ಮಾನವ ಸಾಧಿಸಿರುವ ಪರಮಾವಧಿ ಘಟ್ಟವನ್ನು ಸೂಚಿಸುವ ಹೆಗ್ಗುರುತುಗಳಾಗಿವೆ.

ಅಮೇರಿಕದಲ್ಲಿ ಗಗನಚುಂಬಿ ಕಟ್ಟಡಗಳು

[ಬದಲಾಯಿಸಿ]

ಅಮೆರಿಕದಲ್ಲಿ ಗಗನಚುಂಬಿ ಕಟ್ಟಡಗಳ ಇತಿಹಾಸ 1883ರಲ್ಲಿ ಪ್ರಾರಂಭವಾಯಿತೆನ್ನಬಹುದು. ಆ ವರ್ಷ ವಿಲಿಯಂ ಬ್ಯಾರನ್ ಜೆನಿ ಎಂಬಾತ ಶಿಕಾಗೊ ನಗರದಲ್ಲಿ 10 ಅಂತಸ್ತಿನ ಗೃಹವೊಂದನ್ನು ನಿರ್ಮಾಣಮಾಡಿದ. ಇದೇ ಅಮೆರಿಕದ ಮೊದಲ ಗಗನಚುಂಬಿ ಕಟ್ಟಡ.[] ಅನಂತರ ನ್ಯೂಯಾರ್ಕಿನಲ್ಲಿ ಫ್ಲ್ಯಾಟಿರಾನ್ ಕಟ್ಟಡ (1902),[] ಮೆಟ್ರೊಪಾಲಿಟನ್ ಲೈಫ್ ಇನ್ಷೂರೆನ್ಸ್ ಕಟ್ಟಡ (1909),[] ವುಲ್‌ವರ್ತ್ ಕಟ್ಟಡ (1913)[] ಮತ್ತು ಎಂಪೈರ್ ಸ್ಟೇಟ್ ಬಿಲ್ಡಿಂಗ್ (1930-31)[] ಇವು ನಿರ್ಮಿತವಾದುವು. ಎಂಪೈರ್ ಸ್ಟೇಟ್ ಬಿಲ್ಡಿಂಗ್ 379.17 ಮೀ. ಎತ್ತರವಿದ್ದು 102 ಅಂತಸ್ತುಗಳನ್ನೊಳಗೊಂಡಿದ್ದು ಪ್ರಪಂಚದ ಅತಿ ಎತ್ತರದ ಕಟ್ಟಡವೆಂದು ಖ್ಯಾತವಾಗಿತ್ತು.[] ನಂತರ ಶಿಕಾಗೋದ ಸಿಯರ್ಸ್ ಟವರ್ ಎಂಬ ಕಛೇರಿ ಸೌಧವು 442 ಮೀಟರ್ ಎತ್ತರವಿದ್ದು ವಿಶ್ವದ ಅತೀ ಎತ್ತರದ ಸೌಧವೆಂದು 1997ರವರೆಗೂ ರಾರಾಜಿಸಿತು.[] ನಂತರ ಮಲೇಷಿಯಾದ ಕೌಲಾಲಂಪೂರಿನ ಪೆಟ್ರೋನಾಸ್ ಟವರ್ಸ್ 452 ಮೀಟರು ಎತ್ತರವಿದ್ದು ವಿಶ್ವದ ಅತೀ ಎತ್ತರದ ಸೌಧವಾಗಿತ್ತು.[] ಇದನ್ನು 508 ಮೀಟರು ಎತ್ತರದ ಟೈಪೇಯ್ 101 ಸೌಧವು 2004ರಲ್ಲಿ ಮೀರಿಸಿತು.[೧೦][೧೧]

ಭಾರತದಲ್ಲಿ

[ಬದಲಾಯಿಸಿ]

ಈಚಿನ ವರ್ಷದಲ್ಲಿ ಭಾರತದ ಪ್ರಮುಖ ಪಟ್ಟಣಗಳಾದ ಮುಂಬಯಿ, ಮದ್ರಾಸು, ಕಲ್ಕತ್ತ ಮತ್ತು ಬೆಂಗಳೂರು ನಗರಗಳಲ್ಲಿ ಎತ್ತರದ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಅತಿ ಎತ್ತರದ ಕಟ್ಟಡವೆಂದರೆ 24 ಮಹಡಿಗಳಿಂದೊಡಗೂಡಿದ 106 ಮೀಟರು ಎತ್ತರದ ಯುಟಿಲಿಟಿ ಬಿಲ್ಡಿಂಗ್. ಭಾರತದ ಅತೀ ಎತ್ತರದ ಗಗನಚುಂಬಿ ಕಟ್ಟಡ ಮುಂಬೈನ 154 ಮೀಟರು ಎತ್ತರದ ಶ್ರೀಪತಿ ಆರ್ಕೇಡ್.[೧೨]

ಉಲ್ಲೇಖಗಳು

[ಬದಲಾಯಿಸಿ]
  1. "Magical Hystory Tour: Skyscrapers". 15 August 2010. Archived from the original on 29 June 2015. The thirteen-story Tower Building (1889) just down the avenue at 50 Broadway, was the first New York skyscraper to use skeletal steel construction.
  2. Smith, Chrysti M. (2006). Verbivore's Feast: Second Course: More Word & Phrase Origins. Farcountry Press. p. 289. ISBN 978-1-56037-402-2. The word skyscraper, in its architectural context, was first applied to the Home Insurance Building, completed in Chicago in 1885.
  3. Alexiou 2010, p. 52.
  4. "NYCityMap". NYC.gov. New York City Department of Information Technology and Telecommunications. Archived from the original on May 24, 2015. Retrieved March 20, 2020.
  5. Gray, Christopher (15 November 1992). "Streetscapes: 40 Wall Street; A Race for the Skies, Lost by a Spire". The New York Times. ISSN 0362-4331. Archived from the original on 7 November 2017. Retrieved 3 November 2017.
  6. Langmead 2009, p. 86.
  7. Willis & Friedman 1998, p. 14.
  8. "Willis Tower – The Skyscraper Center". Council on Tall Buildings and Urban Habitat. June 13, 2015. Archived from the original on December 23, 2019. Retrieved June 13, 2015.
  9. "Petronas Towers 1". The Skyscraper Center. Archived from the original on 24 May 2012.
  10. "Height: The History of Measuring Tall Buildings". Council on Tall Buildings and Urban Habitat. December 2009. Archived from the original on 19 September 2018. Retrieved 7 April 2015.
  11. "Tallest Trends and the Burj Khalifa". Council on Tall Buildings and Urban Habitat. 10 March 2010. Archived from the original on 14 September 2016. Retrieved 7 April 2015.
  12. Emporis


ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: