ವಿಷಯಕ್ಕೆ ಹೋಗು

ಕೆಫೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಫೀನ್ ಅಣುವಿನ ರಚನೆ
ಕೆಫೀನ್ ಅಣುವಿನ ರಚನೆ

ಕೆಫೀನ್ ಮಾನವರಲ್ಲಿ ಉತ್ತೇಜನವನ್ನು ಉಂಟು ಮಾಡುವ ಒಂದು ರಾಸಾಯನಿಕ ವಸ್ತು. ಇದು ಕಾಫಿ ಮೊದಲಾದ ಪೇಯಗಳು ಉತ್ತೇಜನಕಾರಿಯಾಗಿರುವುದಕ್ಕೆ ಕಾರಣವಾದ ರಾಸಾಯನಿಕ.

ಮುಖ್ಯವಾಗಿ ಕಾಫಿ ಗಿಡದ ಬೀಜಗಳಲ್ಲಿ ಕಂಡುಬರುವ ಕೆಫೀನ್, ಕಾಫಿಯಷ್ಟೇ ಅಲ್ಲದೆ ಚಹ, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಅಲ್ಪ ಪ್ರಮಾಣದಲ್ಲಿ ಕಂಡುಬರುತ್ತದೆ. ಒಟ್ಟು ೬೦ ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಎಲೆ, ಹಣ್ಣು ಬೀಜಗಳಲ್ಲಿ ಕೆಫೀನ್ ಇರುತ್ತದೆ. ಇದರ ನೈಸರ್ಗಿಕ ಉದ್ದೇಶ ಈ ಗಿಡಗಳನ್ನು ತಿನ್ನಲು ಪ್ರಯತ್ನಿಸುವ ಕೆಲವು ಕೀಟಗಳ ಪಾಲಿಗೆ ಕೀಟನಾಶಕವಾಗಿ ವರ್ತಿಸಿ ಅವುಗಳನ್ನು ಕೊಲ್ಲುವುದು.

ಮನುಷ್ಯರಲ್ಲಿ ಕೆಫೀನ್ ಕೇಂದ್ರ ನರ ಮಂಡಲದ ಮೇಲೆ ಪ್ರಭಾವ ಬೀರಿ ಉತ್ತೇಜನಕಾರಿಯಾಗಿ ವರ್ತಿಸುತ್ತದೆ. ಇದರಿಂದಾಗಿ, ತಾತ್ಕಾಲಿಕವಾಗಿ ನಿದ್ರೆ ದೂರವಾಗಿ ಹೆಚ್ಚಿನ "ಚುರುಕು" ಮಾನಸಿಕವಾಗಿ ಅನುಭವಕ್ಕೆ ಬರುತ್ತದೆ. ಕೆಫೀನ್ ಮನುಷ್ಯರು ಅತಿ ಹೆಚ್ಚಾಗಿ ಸೇವಿಸುವ ಮನೋಪರಿವರ್ತಕ ವಸ್ತು.

ಆಕರಗಳು

[ಬದಲಾಯಿಸಿ]
ಹುರಿದ ಕಾಫಿ ಬೀಜಗಳು

ಕೆಫೀನ್ ಮುಖ್ಯವಾಗಿ ಸಸ್ಯಗಳಲ್ಲಿ ಕಂಡುಬರುವ "ಆಲ್ಕಲಾಯ್ಡ್" ಗುಂಪಿಗೆ ಸೇರಿದ ರಾಸಾಯನಿಕ ವಸ್ತು. ಅತಿ ಹೆಚ್ಚು ಕೆಫೀನ್ ಹೊಂದಿರುವ ಸಸ್ಯಗಳೆಂದರೆ ಕಾಫಿ, ಚಹಾ ಮತ್ತು ಕೋಕೋ. ಇದಲ್ಲದೆ, ಯೆರ್ಬಾ ಮೇಟ್, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಕೆಫೀನ್ ಕಂಡುಬರುತ್ತದೆ.

ಕೆಫೀನ್ ಮಾನವರ ದೇಹವನ್ನು ಸೇರುವುದು ಪ್ರಮುಖವಾಗಿ ಹುರಿದ ಕಾಫಿ ಬೀಜಗಳ ಮೂಲಕ. ಕಾಫಿ ಬೀಜಗಳಲ್ಲಿನ ಕೆಫೀನ್ ಪ್ರಮಾಣ ಕಾಫಿ ಗಿಡದ ಪ್ರಭೇದ ಮತ್ತು ಬೀಜಗಳನ್ನು ಸಂಸ್ಕರಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಕುಡಿಯುವ ಒಂದು ಲೋಟ ಕಾಫಿಯಲ್ಲಿ ೪೦-೧೦೦ ಮಿಲಿಗ್ರಾಮ್ ಗಳಷ್ಟು ಕೆಫೀನ್ ಇರುತ್ತದೆ. ಕಾಫಿ ಗಿಡಗಳ ಮುಖ್ಯ ಪ್ರಭೇದಗಳಾದ ಅರಾಬಿಕ ಮತ್ತು ರೋಬಸ್ಟ ತಳಿಗಳಲ್ಲಿ ರೋಬಸ್ಟ ಬೀಜಗಳು ಹೆಚ್ಚು ಕೆಫೀನ್ ನ್ನು ಹೊಂದಿರುತ್ತವೆ.

ಕೆಫೀನ್ ನ ಇನ್ನೊಂದು ಸಾಮಾನ್ಯ ಆಕರ ಚಹಾ ಗಿಡಗಳು. ಚಹಾದಲ್ಲಿ ಕಾಫಿಯಲ್ಲಿರುವ ಪ್ರಮಾಣದ ಸುಮಾರು ಅರ್ಧದಷ್ಟು ಕೆಫೀನ್ ಮಾತ್ರ ಇರುತ್ತದೆ. ಚಹಾ ಗಿಡಗಳಲ್ಲೂ ವಿವಿಧ ತಳಿಗಳಲ್ಲಿ ಕೆಫೀನ್ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಚಹಾವನ್ನು ಮನೆಯಲ್ಲಿ ತಯಾರಿಸುವ ವಿಧಾನ ಕೆಫೀನ್ ಪ್ರಮಾಣದ ಮೇಲೆ ಮುಖ್ಯ ಪ್ರಭಾವ ಹೊಂದಿರುತ್ತದೆ.

ಕೋಕೋ ಗಿಡಗಳು, ಮತ್ತು ಕೋಕೋ ದಿಂದ ತಯಾರಿಸಲಾಗುವ ಚಾಕೊಲೇಟ್ ಗಳಲ್ಲಿ ಸಹ ಅಲ್ಪ ಪ್ರಮಾಣದಲ್ಲಿ ಕೆಫೀನ್ ದೊರಕುತ್ತದೆ. ಇದಲ್ಲದೆ, ಕೋಕಾ ಕೋಲಾ ದಂತಹ ತಂಪು ಪಾನೀಯಗಳಲ್ಲೂ ಕೆಫೀನ್ ಇರುತ್ತದೆ.

ಚರಿತ್ರೆ

[ಬದಲಾಯಿಸಿ]
೧೯೦೦ ರ ಸುಮಾರಿನಲ್ಲಿ ಪ್ಯಾಲೆಸ್ಟೈನ್ ನ ಒಂದು ಕಾಫಿ ಮನೆ

ಮಾನವರು ಶಿಲಾಯುಗದ ಕಾಲದಿಂದಲೂ ಕೆಫೀನ್ ಅನ್ನು ಸೇವಿಸುತ್ತಾ ಬಂದಿದ್ದಾರೆ. ಕೆಲವು ಗಿಡಗಳ ಬೀಜ, ತೊಗಟೆ ಅಥವಾ ಎಲೆಗಳನ್ನು ಜಗಿಯುವುದರಿಂದ ಸುಸ್ತು ಕಡಿಮೆಯಾಗಿ ಮನಸ್ಸಿಗೆ ಮುದ ದೊರಕುತ್ತದೆಂಬುದನ್ನು ಜನ ಅರಿತುಕೊಂಡರು. ನಂತರ, ಈ ಗಿಡಗಳನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದ ನಂತರ ಸೇವಿಸುವ ಮೂಲಕ ಅವುಗಳ ಪ್ರಭಾವ ಹೆಚ್ಚುತ್ತದೆ ಎಂಬುದನ್ನು ಅರಿತುಕೊಂಡರು.

ಕಾಫಿಯ ಮೊದಲ ಲಿಖಿತ ಉಲ್ಲೇಖ ದೊರಕುವುದು ೯ ನೆಯ ಶತಮಾನದ ಪರ್ಷಿಯನ್ ವೈದ್ಯ ಅಲ್-ರಾಜಿ ಅವರ ಲೇಖನಗಳಲ್ಲಿ. ೧೫೮೭ ರಲ್ಲಿ, ಅರಾಬಿಕ್ ಲೇಖಕ ಮಲಾಯೆ ಜಜೀರಿ ಕಾಫಿಯ ಚರಿತ್ರೆ ಮತ್ತು ಕಾನೂನಿಗೆ ಸಂಬಂಧಪಟ್ಟ ವಿವಾದಗಳ ಬಗ್ಗೆ ಒಂದು ಪುಸ್ತಕವನ್ನು ಸಂಪಾದಿಸಿದರು. ಈ ಪುಸ್ತಕದಲ್ಲಿನ ವಿವರದಂತೆ, ೧೫ ನೆಯ ಶತಮಾನದ ಯೆಮೆನ್ ದೇಶದ ಸೂಫಿ ಸಂತರು ರಾತ್ರಿ ಪ್ರಾರ್ಥನೆಯ ಸಮಯ ಎಚ್ಚರವಿರುವುದಕ್ಕಾಗಿ ಸರ್ವೇಸಾಮಾನ್ಯವಾಗಿ ಕಾಫಿಯನ್ನು ಉಪಯೋಗಿಸುತ್ತಿದ್ದರು.

೧೬ ನೆಯ ಶತಮಾನದ ಕೊನೆಯ ಕಾಲಕ್ಕೆ ಈಜಿಪ್ಟ್ ನಲ್ಲಿದ್ದ ಯುರೋಪಿಯನ್ ರೆಸಿಡೆಂಟ್ ಒಬ್ಬರು ಅಲ್ಲಿ ಕಾಫಿಯ ಉಪಯೋಗವನ್ನು ದಾಖಲಿಸಿದರು. ಯುರೋಪಿನಲ್ಲಿ ೧೭ನೆಯ ಶತಮಾನದಿಂದ ಮುಂದಕ್ಕೆ ಕಾಫಿಯ ಉಪಯೋಗ ಜನಪ್ರಿಯವಾಯಿತು. ಈ ಕಾಲಕ್ಕೆ ಕಾನ್‍ಸ್ಟಾಂಟಿನೋಪಲ್ ಮತ್ತು ವೆನೀಸ್ ನಗರಗಳಲ್ಲಿ "ಕಾಫಿ ಹೋಟಲುಗಳು" ಆರಂಭವಾದವು. ಅಲ್ಲಿಂದ ಮುಂದಕ್ಕೆ ಯುರೋಪಿಯನ್ ದೇಶಗಳ ಮುಖಾಂತರ ಕಾಫಿಯ ಉಪಯೋಗ ಪ್ರಪಂಚದಾದ್ಯಂತ ಹರಡಿತು.

ಕಾಫಿ ಮತ್ತು ಚಹಾ ಗಿಡಗಳಂತೆ, ಕೆಫೀನ್ ನ ಇನ್ನೊಂದು ಆಕರವಾದ ಕೋಲಾ ಬೀಜಗಳ ಉಪಯೋಗ ಸಹ ಪುರಾತನ ಕಾಲದಿಂದ ಪ್ರಚಲಿತದಲ್ಲಿದೆ. ಅನೇಕ ಪಶ್ಚಿಮ ಆಫ್ರಿಕದ ದೇಶಗಳಲ್ಲಿ ಹಸಿವಿನ ನಿಯಂತ್ರಣಕ್ಕೆ ಮತ್ತು ಸುಸ್ತಿನ ನಿವಾರಣೆಗಾಗಿ ಇದನ್ನು ಜಗಿಯಲಾಗುತ್ತದೆ. ಕೋಲಾ ಸಸ್ಯದ ಉತ್ಪನ್ನಗಳನ್ನು ಕೋಕಾ ಕೋಲ ಮೊದಲಾದ ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕೋಕೋ ಬೀಜಗಳ ಉಪಯೋಗದ ಮೊದಲ ಪುರಾವೆ ದೊರಕುವುದು ಕ್ರಿ.ಪೂ. ೬೦೦ ರ ಮಾಯಾ ನಾಗರೀಕತೆಯ ಒಂದು ಮಡಕೆಯಿಂದ. ಮಾಯಾ ನಾಗರೀಕತೆಯಲ್ಲಿ ಚಾಕೊಲೇಟ್ ಅನ್ನು ಶೊಕೋಟಲ್ ಎಂಬ ಕಹಿ ಮತ್ತು ಮಸಾಲೆ-ಭರಿತ ಪೇಯದ ರೂಪದಲ್ಲಿ ಸೇವಿಸಲಾಗುತ್ತಿತ್ತು. ಈ ಪೇಯ ದಣಿವಿನ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿತ್ತು. ಇದು ಕೋಕೋ ಬೀಜಗಳ ಕೆಫೀನ್ ಮತ್ತು ಥಿಯೋಬ್ರೋಮೀನ್ ರಾಸಾಯನಿಕದ ದೆಸೆಯಿಂದ ಎಂದು ಊಹಿಸಲಾಗಿದೆ.

ಶುದ್ಧ ಕೆಫೀನ್ ಅನ್ನು ಮೊದಲ ಬಾರಿಗೆ ೧೮೧೯ ರಲ್ಲಿ ಬೇರ್ಪಡಿಸಲಾಯಿತು. ಇದನ್ನು ಸಾಧಿಸಿದವರು ಜರ್ಮನ್ ರಸಾಯನಶಾಸ್ತ್ರಜ್ಞ ಫ್ರೆಡೆರಿಕ್ ರುಂಜ್.

ಪ್ರಪಂಚದಲ್ಲಿ ಒಟ್ಟು ವರ್ಷಕ್ಕೆ ೧,೨೦,೦೦೦ ಟನ್ ಗಳಷ್ಟು ಕೆಫೀನ್ ಸೇವನೆ ನಡೆಯುತ್ತದೆ.

ಪರಿಣಾಮಗಳು

[ಬದಲಾಯಿಸಿ]
ಕೆಫೀನ್ ಜೇಡರ ಹುಳುಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ, ಕೆಫೀನ್ ಸೇವಿಸಿದ ಜೇಡ ನೇಯ್ದ ಬಲೆ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.

ಕೆಫೀನ್ ಕೇಂದ್ರ ನರಮಂಡಲದ ಉತ್ತೇಜಕ. ಇದನ್ನು ಚಟಕ್ಕಾಗಿಯೂ ಸೇವಿಸಲಾಗುತ್ತದೆ; ವೈದ್ಯಕೀಯವಾಗಿ ದಣಿವು, ತಲೆನೋವು ಮೊದಲಾದ ಬಾಧೆಗಳ ಚಿಕಿತ್ಸೆಗಾಗಿಯೂ ಉಪಯೋಗಿಸಲಾಗುತ್ತದೆ. ಕೆಫೀನ್ ನ ಪರಿಣಾಮಗಳಲ್ಲಿ ಮುಖ್ಯ ಪರಿಣಾಮಗಳೆಂದರೆ ನಿದ್ರೆಯನ್ನ ತಾತ್ಕಾಲಿಕವಾಗಿ ಹೋಗಲಾಡಿಸಿ ಮನಸ್ಸನ್ನು "ಚುರುಕಾಗಿಸುವುದು", ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದು. ಕೆಫೀನ್ ಅನ್ನು ಹೆಚ್ಚಿನ ಪ್ರಮಾಣಗಳಲ್ಲಿ ಸೇವಿಸಿದರೆ ಕೇಂದ್ರ ನರಮಂಡಲವೇ ಅಲ್ಲದೆ ಬೆನ್ನೆಲುಬು ನಿಯಂತ್ರಿಸುವ ನರಮಂಡಲದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಪರಿಣಾಮಗಳು ಕಂಡುಬರಲು ಬೇಕಾಗುವ ಕೆಫೀನ್ ನ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ - ದೇಹ ತೂಕ ಮತ್ತು ಕೆಫೀನ್ ಅಭ್ಯಾಸ ಆ ವ್ಯಕ್ತಿಗೆ ಎಷ್ಟಿದೆ ಎಂಬುವನ್ನು ಇದು ಅವಲಂಬಿಸಿರುತ್ತದೆ. ಕೆಫೀನ್ ಸೇವನೆಯಾದ ಒಂದು ಗಂಟೆಯೊಳಗೆ ಅದು ಪರಿಣಾಮ ಬೀರತೊಡಗಿ, ಕೆಫೀನ್ ನ ಪರಿಣಾಮ ೩-೪ ಗಂಟೆಗಳ ವರೆಗೆ ಸಕ್ರಿಯವಾಗಿರುತ್ತದೆ.

ಹೀಗಾಗಿ ಕೆಫೀನ್ ದೈಹಿಕ ಮತ್ತು ಮಾನಸಿಗ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ೧೯೭೯ ರಲ್ಲಿ ನಡೆದ ಒಂದು ಅಧ್ಯಯನದಂತೆ, ಸೈಕಲ್ ಸವಾರರು ಎರಡು ಗಂಟೆಗಳ ಅವಧಿಯಲ್ಲಿ ಕ್ರಮಿಸಿದ ದೂರ ಕೆಫೀನ್ ಸೇವನೆಯ ನಂತರ ಶೇ. ೭ ರಷ್ಟು ಹೆಚ್ಚಿತು. ಇತರ ಅಧ್ಯಯನಗಳು ಇನ್ನೂ ಬಲವಾದ ಪರಿಣಾಮಗಳನ್ನು ತೋರಿದವು; ಓಟಗಾರರ ಮೇಲೆ ನಡೆಸಿದ ಒಂದು ಪ್ರಯೋಗದ ಫಲಿತಾಂಶದಂತೆ, ದೇಹತೂಕದ ಪ್ರತಿ ಕೆಜಿಗೆ ೯ ಮಿಗ್ರಾಂ ಗಳಷ್ಟು ಕೆಫೀನ್ ಸೇವನೆಯಾದ ನಂತರ ಓಡುವ ಸಾಮರ್ಥ್ಯದಲ್ಲಿ ಶೇ. ೪೪ ರಷ್ಟು ಹೆಚ್ಚಳ ಉಂಟಾಯಿತು.

ಅತಿಸೇವನೆ

[ಬದಲಾಯಿಸಿ]

ಕೆಫೀನ್ ಅನ್ನು ಹೆಚ್ಚು ಪ್ರಮಾಣಗಳಲ್ಲಿ ಸೇವಿಸಿದಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. "ಕೆಫೀನಿಸಮ್" ಎಂಬ ಸ್ಥಿತಿ ಸೇವಿಸುವವರಲ್ಲಿ ಉಂಟಾಗುತ್ತದೆ - ಕೆಫೀನ್ ನ "ಚಟ" ಆರಂಭವಾಗುವುದಲ್ಲದೆ, ಆತಂಕ, ಅಸಹನೆ, ಮಾಂಸಖಂಡಗಳ ಅನೈಚ್ಛಿಕ ಅದುರುವಿಕೆ (muscle twitching), ನಿದ್ರಾಹೀನತೆ ಮತ್ತು ಹೃದಯ ಬಡಿತದಲ್ಲಿ ಏರುಪೇರು - ಮೊದಲಾದ ಪರಿಣಾಮಗಳು ಕಂಡುಬರತೊಡಗುತ್ತವೆ. ಇಷ್ಟಲ್ಲದೆ, ಕೆಫೀನ್ ಜಠರದಲ್ಲಿ ಆಮ್ಲವಸ್ತುಗಳ ಉತ್ಪತ್ತಿಯನ್ನು ಪ್ರಚೋದಿಸುತ್ತದೆ. ಹೀಗಾಗಿ, ದೀರ್ಘ ಕಾಲ ಕೆಫೀನ್ ನ ಸೇವನೆಯನ್ನು ಹೆಚ್ಚಿನ ಪ್ರಮಾಣಗಳಲ್ಲಿ ಮಾಡಿದ್ದಾದರೆ ಅಸಿಡಿಟಿ, ಅಲ್ಸರ್ ಗಳು ಮೊದಲಾದ ತೊಂದರೆಗಳು ಆರಂಭವಾಗುವ ಸಾಧ್ಯತೆ ಹೆಚ್ಚುತ್ತದೆ.

ಕೆಫೀನ್ ನ ಅತಿಸೇವನೆಗೆ ಸಂಬಂಧಪಟ್ಟ ನಾಲ್ಕು ಮಾನಸಿಕ ತೊಂದರೆಗಳಿವೆ: ಕೆಫೀನ್ "ನಶೆ", ಕೆಫೀನ್ ಗೆ ಸಂಬಂಧಪಟ್ಟ ಆತಂಕ ಮನೋಭಾವ, ಕೆಫೀನ್ ಗೆ ಸಂಬಂಧಪಟ್ಟ ನಿದ್ರಾಹೀನತೆ, ಮತ್ತು ಇತರ ತೊಂದರೆಗಳು.

ಕೆಫೀನ್ ನಶೆ

[ಬದಲಾಯಿಸಿ]

ಕೆಫೀನ್ ಸೇವನೆಯ ಪ್ರಮಾಣ ಅತಿ ಹೆಚ್ಚಾದಾಗ - ಸುಮಾರು ೨೫೦ ಮಿಗ್ರಾಂ ಗಳನ್ನು ದಾಟಿದಾಗ (ಉದಾ: ೩ ಲೋಟಗಳಿಗಿಂತ ಹೆಚ್ಚು ಕಾಫಿ), ಕೇಂದ್ರ ನರಮಂಡಲಕ್ಕೆ ದೊರಕುವ ಉತ್ತೇಜನೆ ಮಿತಿಮೀರುತ್ತದೆ. ಈ ಮಾನಸಿಕ ಪರಿಸ್ಥಿತಿಯನ್ನು "ಕೆಫೀನ್ ನಶೆ" ಎಂದು ಕರೆಯಲಾಗುತ್ತದೆ. ಕೆಫೀನ್ ನಶೆಯ ಪರಿಣಾಮಗಳಲ್ಲಿ ಕೆಲವೆಂದರೆ: ಉತ್ಸಾಹ, ಆತಂಕ, ನಿದ್ರಾಹೀನತೆ, ಮುಖದಲ್ಲಿ ರಕ್ತಚಲನೆಯ ಹೆಚ್ಚಳ, ಹೆಚ್ಚಿನ ಮೂತ್ರದ ಉತ್ಪಾದನೆ, ಹೊಟ್ಟೆ ಕೆಡುವುದು, ಮಾಂಸಖಂಡಗಳ ಅದುರುವಿಕೆ, ಹೃದಯಬಡಿತದ ಏರುಪೇರು, ಇತ್ಯಾದಿ.

ಕೆಫೀನ್ ಸೇವನೆ ಮಿತಿ ಮೀರಿದರೆ, ಸಾವು ಸಹ ಪರಿಣಮಿಸಬಹುದು. ಮನುಷ್ಯರಲ್ಲಿ, ದೇಹತೂಕದ ಪ್ರತಿ ಕೆಜಿಗೆ ಒಂದೇ ದಿನದಲ್ಲಿ ೧೫೦-೨೦೦ ಮಿಗ್ರಾಂ ಗಳಷ್ಟು ಕೆಫೀನ್ (ಉದಾ: ೧೫೦-೨೦೦ ಕಪ್ ಕಾಫಿ) ಸೇವಿಸಿದಲ್ಲಿ ಜೀವಹಾನಿಯ ಸಂಭವ ಉಂಟಾಗುತ್ತದೆ. ಈ ಪ್ರಮಾಣದಲ್ಲಿ ಕಾಫಿಯನ್ನು ಯಾರೂ ಕುಡಿಯಲಾರರೂ, ಕೆಫೀನ್ ಮಾತ್ರೆಗಳ ಅತಿಸೇವನೆಯಿಂದ ಸಾವು ಸಂಭವಿಸಿರುವ ಉದಾಹರಣೆಗಳುಂಟು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]