ವಿಷಯಕ್ಕೆ ಹೋಗು

ಐವಿ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಹೆಸರಿನ ಅನೇಕ ಜಾತಿಯ ಗಿಡಗಳಿವೆ[]. ಇವುಗಳಲ್ಲಿ ಮುಖ್ಯವಾದುವು ಎರಡು. ಅವು ಇಂಗ್ಲಿಷ್ ಅಥವಾ ಯುರೋಪಿಯನ್ ಐವಿ ಮತ್ತು ವಿಷ ಐವಿ.

ಇಂಗ್ಲಿಷ್ ಐವಿ

[ಬದಲಾಯಿಸಿ]

ಇಂಗ್ಲಿಷ್ ಐವಿ[] ಎಂಬುದು ಲಹೆಡೆರ ಹೆಲಿಕ್ಸ್‌ ಎಂಬ ಶಾಸ್ತ್ರೀಯ ಹೆಸರುಳ್ಳ ಏರಾಲಿಯೇಸಿ ಕುಟುಂಬಕ್ಕೆ ಸೇರಿದ ಬಳ್ಳಿ. ಇದೇ ಹೆಡೆರ ಜಾತಿಗೆ ಸೇರಿದ ಇನ್ನೂ ಹಲವಾರು ಪ್ರಭೇದಗಳೂ ಇವೆ. ಅಲ್ಲದೆ ಹೆಡರ ಹೆಲಿಕ್ಸ್‌ ಪ್ರಭೇದದಲ್ಲಿಯೇ ಅನೇಕ ವಿಧಗಳೂ ಇವೆ. ಇದು ಸಾಮಾನ್ಯವಾಗಿ ಯುರೋಪ್, ಉತ್ತರ ಆಫ್ರಿಕ, ರಷ್ಯ, ಜಪಾನ್ ಮತ್ತು ಅಮೆರಿಕಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಲ್ಲದೆ ಇದನ್ನು ತೋಟಗಳಲ್ಲಿ, ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ನಮ್ಮ ದೇಶದಲ್ಲಿ ಹಿಮಾಲಯದಲ್ಲಿ ಹಾಗೂ ಅಸ್ಸಾಂಗಳಲ್ಲಿ ಬೆಳೆಯುತ್ತದೆ.

ಐವಿ

ಸುಂದರವಾದ, ಯಾವಾಗಲೂ ಹಸಿರಾದ ವಿವಿಧ ಆಕಾರಗಳ ಎಲೆಗಳುಳ್ಳ ಬಳ್ಳಿ ಇದು. ಬೇರೆ ಗಿಡಮರಗಳು, ಕಲ್ಲುಬಂಡೆಗಳು, ಗೋಡೆಗಳು ಇತ್ಯಾದಿ ಆಸರೆಗಳನ್ನು ತನ್ನ ಅಡರು ಬೇರುಗಳ ಸಹಾಯದಿಂದ ಹತ್ತಿಕೊಂಡು ಬೆಳೆಯುತ್ತದೆ. ತನ್ನ ಬೆಳೆವಣಿಗೆಯಲ್ಲಿ ಎರಡು ಅವಸ್ಥೆಗಳನ್ನು ತೋರಿಸುತ್ತದೆ. ಬೆಳೆವಣಿಗೆಯ ಪ್ರಥಮ ಹಂತದಲ್ಲಿ ಆಸರೆಯನ್ನು ಹಬ್ಬಿಕೊಂಡು ಮೇಲ್ಮುಖವಾಗಿ ಬೆಳೆಯುತ್ತದೆ. ಆಗ ಬಿಡುವ ಎಲೆಗಳಲ್ಲಿ 3-5 ಪತ್ರಪಾಲಿಗಳು (ಲೋಬ್ಸ್‌) ಇರುತ್ತವೆ. ಇದೇ ಹಂತದಲ್ಲಿ ವಿಪುಲವಾಗಿ ಅಡರು ಬೇರುಗಳು ಹೊರಟು ಗಿಡ ಆಸರೆಯನ್ನು ಹತ್ತಲು ಸಹಾಯಕವಾಗುತ್ತವೆ. ಬಳ್ಳಿ ಆಶ್ರಯದ ಮೇಲ್ತುದಿಯನ್ನು ತಲಪಿದ ಮೇಲೆ ಬೆಳೆವಣಿಗೆಯ ಎರಡನೆಯ ಅವಸ್ಥೆ ಕಾಣಬರುತ್ತದೆ. ಆಗ ಹೊರಡುವ ಕವಲುಗಳು ನೇರವಾಗಿ ಮೇಲಕ್ಕೆ ಬೆಳೆಯದೆ ಅಡ್ಡವಾಗಿ ಬೆಳೆಯತೊಡಗುತ್ತವೆ. ಎಲೆಗಳು ಕಿರಿದು; ಪತ್ರಪಾಲಿಗಳಿರುವುದಿಲ್ಲ. ಇದೇ ಅವಸ್ಥೆಯಲ್ಲಿಯೇ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಹೂಗಳ ಬಣ್ಣ ಕೊಂಚ ಹಸಿರು. ಅವು ಅಂಬೆಲ್ ರೀತಿಯ ಹೂಗೊಂಚಲುಗಳಲ್ಲಿ ಇರುತ್ತವೆ. ಹಣ್ಣಿನ ಬಣ್ಣ ಕಪ್ಪು, ಹಳದಿ ಅಥವಾ ಕೆಂಪು. ಕೊಂಚ ಹಸಿರು. ಅವು ಅಂಬೆಲ್ ರೀತಿಯ ಹೂಗೊಂಚಲುಗಳಲ್ಲಿ ಇರುತ್ತವೆ. ಹಣ್ಣಿನ ಬಣ್ಣ ಕಪ್ಪು, ಹಳದಿ ಅಥವಾ ಕೆಂಪು.

ಐವಿ ಎಂಥ ಭೂಮಿಯಲ್ಲಾದರೂ ಬೆಳೆಯುತ್ತದೆ. ಅಲ್ಲದೆ ಇದಕ್ಕೆ ಬೆಳಕಿನ ಆವಶ್ಯಕತೆ ಹೆಚ್ಚಾಗಿಲ್ಲ. ಇದರ ಸುಂದರವಾದ ಎಲೆಗಳಿಗೋಸ್ಕರ ತೋಟಗಳಲ್ಲಿ, ಉದ್ಯಾನಗಳಲ್ಲಿ ತುಂಡುಗಳ ಮುಖಾಂತರ ಅಥವಾ ಬೀಜಗಳ ಮುಖಾಂತರ ಬೆಳೆಸುತ್ತಾರೆ.

ಇಂಗ್ಲಿಷ್ ಐವಿಯ ಅಪಾಯಗಳ

[ಬದಲಾಯಿಸಿ]

ಒಂದು ಕಾಲದಲ್ಲಿ ಇದರ ಎಲೆ ಮತ್ತು ಕಾಯಿಗಳನ್ನು ಹಲವು ರೋಗಗಳ ನಿವಾರಣೆಗೆ ಬಹಳವಾಗಿ ಬಳಸುತ್ತಿದ್ದರು. ಆದರೆ ಈಚೆಗೆ ಇದರ ಬಳಕೆ ಕಡಿಮೆಯಾಗಿದೆ. ಎಲೆ ಮತ್ತು ಕಾಯಿಗಳ ಉತ್ತೇಜಕ, ಸ್ವೇದಕಾರಿ ಮತ್ತು ವಿರೇಚಕಗಳೆಂದು ಹೇಳುತ್ತಾರೆ. ಎಲೆ, ಬೀಜ ಮತ್ತು ಕಾಯಿಗಳಲ್ಲಿ ಆಲ್ಫ-ಹೆಡರಿನ್ ಎಂಬ ವಿಶೇಷ ವಸ್ತುವಿದೆ. ಇದರ ಸೇವನೆ ದೇಹದ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ. ಅನ್ನನಾಳವನ್ನು ಉದ್ರೇಕಗೊಳಿಸುವುದಲ್ಲದೆ, ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ರಕ್ತದ ಒತ್ತಡ ಮತ್ತು ಹೃದಯದ ಬಡಿತದ ಗತಿಯನ್ನು ಕ್ಷೀಣಗೊಳಿಸುವುದರ ಮೂಲಕ ಉಸಿರಾಟಕ್ಕೆ ತೊಂದರೆಯನ್ನು ಉಂಟುಮಾಡಿ ಸಾವನ್ನು ತರಬಲ್ಲುದು. ಅಲ್ಲದೆ ಎಲೆಗಳನ್ನು ತಿಂದರೆ ಚರ್ಮದ ಊತವೂ ಬರಬಹುದೆನ್ನುತ್ತಾರೆ. ಆದರೂ ಇದರ ಎಲೆಗಳ ಕಷಾಯವನ್ನು ಹೇನುಗಳನ್ನು ನಿವಾರಿಸಲು ಕೂದಲಿಗೆ ಹಚ್ಚುತ್ತಾರೆ; ಕಾಯಿಗಳಿಂದ ತಯಾರಿಸಿದ ಕಷಾಯವನ್ನು ಸಂಧಿವಾತರೋಗದ ನಿವಾರಣೆಯಲ್ಲಿ ಉಪಯೋಗಿಸುತ್ತಾರೆ.

ವಿಷ ಐವಿ

[ಬದಲಾಯಿಸಿ]

ಇನ್ನೊಂದು ಬಗೆಯ ಐವಿ ಗಿಡವಾದ ವಿಷ ಐವಿಯೆಂಬುದು ಅನಕಾರ್ಡಿಯೇಸಿ ಕುಟುಂಬಕ್ಕೆ ಸೇರಿದ ರ್ಹುಸ್ ಟಾಕ್ಸಿಕೊಡೆಂಡ್ರಾನ್ ಅಥವಾ ಟಾಕ್ಸಿಕೊಂಡೆಡ್ರಾನ್ ರಾಡಿಕನ್ಸ್‌ ಎನ್ನುವ ಪ್ರಭೇದ. ಮೂಲತಃ ಉತ್ತರ ಅಮೆರಿಕದ ನಿವಾಸಿಯಾದ ಇದೂ ಕೂಡ ಇಂಗ್ಲಿಷ್ ಐವಿಯಂತೆ ಬಳ್ಳಿ. ಇದರಲ್ಲಿಯೂ ಹಲವಾರು ಬಗೆಗಳಿದ್ದು ಕೆಲವು ಬಳ್ಳಿಯಂತೆಯೂ ಕೆಲವು ಸಣ್ಣ ಮರಗಳಾಗಿಯೂ ಬೆಳೆಯುತ್ತವೆ. ಸಾಮಾನ್ಯವಾಗಿ ಬಳ್ಳಿಯಂತೆ ಬೆಳೆಯುವ ಈ ಗಿಡದಲ್ಲಿಯೂ ಅಡರು ಬೇರುಗಳಿದ್ದು ಗಿಡ ಆಶ್ರಯವನ್ನು ಹತ್ತಿ ಬೆಳೆಯಲು ಸಹಾಯ ಮಾಡುತ್ತವೆ. ಇದರ ಎಲೆಗಳು ಸಂಯುಕ್ತ ಎಲೆಗಳಾಗಿದ್ದು ಒಂದೊಂದರಲ್ಲೂ ಮೂರು ಉಪಪತ್ರಗಳಿರುತ್ತವೆ. ಇದರ ಹೂಗಳೂ ಹಸಿರು. ಕಾಯಿಗಳ ಬಣ್ಣ ಮಾತ್ರ ಬಿಳಿ.

ವಿಷ ಐವಿ

ವಿಷ ಐವಿಯಿಂದ ಅಪಾಯಗಳ

[ಬದಲಾಯಿಸಿ]

ಇದರ ಎಲ್ಲ ಪ್ರಭೇದಗಳೂ ವಿಷಪುರಿತ. ಗಿಡವನ್ನಾಗಲಿ, ಎಲೆಗಳನ್ನಾಗಲಿ ಮುಟ್ಟಿದರೆ ತೀವ್ರವಾದ ಚರ್ಮದ ಊತ ಉಂಟಾಗುತ್ತದೆ. ಎಲೆ, ಹೂ, ಹಣ್ಣು, ತೊಗಟೆ ಮತ್ತು ಬೇರುಗಳಲ್ಲಿ ಅಂಟಿನಂಥ ಯೂರೊಷಿಯೊಲ್ ಎಂಬ ದ್ರವವಿರುತ್ತದೆ. ಚರ್ಮದ ಊತಕ್ಕೆ ಇದೇ ಪ್ರಮುಖ ಕಾರಣವೆಂದು ಕಂಡುಬಂದಿದೆ. ಈ ವಸ್ತು ಬೇಗ ಒಣಗದೆ ಇರುವುದರಿಂದ ಇದರ ಮಾರಕಗುಣ ವರ್ಷಾನುಗಟ್ಟಲೆ ಕಡಿಮೆಯಾಗದಂತೆ ಇರುತ್ತದೆ. ಅಲ್ಲದೆ ಈ ವಸ್ತು ಬಟ್ಟೆ, ಪಾದರಕ್ಷೆ, ಉಪಕರಣಗಳಿಗೆ ಅಂಟಿಕೊಂಡಿದ್ದರೆ, ಅವುಗಳ ಸಂಪರ್ಕಕ್ಕೆ ಬಂದ ಯಾರಲ್ಲಾದರೂ ಚರ್ಮದ ಊತವನ್ನುಂಟುಮಾಡಬಹುದು.

ಉಲ್ಲೇಖಗಳು

[ಬದಲಾಯಿಸಿ]