ಪೌಲ್ ಡಿರಾಕ್
ಪೌಲ್ ಡಿರಾಕ್ (ಆಗಸ್ಟ್ 8, 1902 – ಅಕ್ಟೋಬರ್ 20, 1984)ಬ್ರಿಟನ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ಜ. ಕ್ವಾಂಟಮ್ ಬಲವಿಜ್ಞಾನದ ನಿರ್ಮಾತೃಗಳ ಪೈಕಿ ಓರ್ವ.
'ಪೌಲ್ ಡಿರಾಕ್' | |
---|---|
ಜನನ | ಆಗಸ್ಟ್ 8, 1902 ಬ್ರಿಸ್ಟಲ್, ಇಂಗ್ಲೆಂದ್ |
ಮರಣ | ಅಕ್ಟೋಬರ್ 20, 1984 ಫ್ಲೊರಿಡಾ,ಅಮೆರಿಕ |
ರಾಷ್ಟ್ರೀಯತೆ | ಬ್ರಿಟನ್ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಫ್ಲೊರಿಡಾ ವಿಶ್ವವಿದ್ಯಾಲಯ |
ಅಭ್ಯಸಿಸಿದ ಸಂಸ್ಥೆ | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಬ್ರಿಸ್ಟಲ್ ವಿಶ್ವವಿದ್ಯಾಲಯ |
ಡಾಕ್ಟರೆಟ್ ಸಲಹೆಗಾರರು | ರಾಲ್ಫ್ ಫೌಲರ್ |
ಡಾಕ್ಟರೆಟ್ ವಿದ್ಯಾರ್ಥಿಗಳು | ಹೋಮಿ ಬಾಬಾ,ಹರೀಶ್ಚಂದ್ರ ಮೆಹ್ರೋತ್ರಾ |
ಪ್ರಸಿದ್ಧಿಗೆ ಕಾರಣ | ಡಿರಾಕ್ ಸಮೀಕರಣ,ಡಿರಾಕ್ ಬೀಜಗಣಿತ ಇತ್ಯಾದಿ |
ಗಮನಾರ್ಹ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ |
ಇವರು ಎಲೆಕ್ಟ್ರಾನ್‌ಗಳ ಗುಣಸ್ವಭಾವಗಳನ್ನು ವಿವರಿಸುವ ಗಣಿತ ಸಮೀಕರಣಗಳನ್ನು ಪ್ರತಿಪಾದಿಸಿ ಪ್ರಸಿದ್ಧರಾದರು.ಇವರಿಗೆ ಈ ಸಾಧನೆಗೆ ಹಾಗೂ ಕ್ವಾಂಟಮ್ ಯಂತ್ರ ವಿಜ್ಞಾನ(Quantum Mechanics)ನಲ್ಲಿ ನೀಡಿದ ಕೊಡುಗೆಗಳಿಗಾಗಿ ೧೯೩೩ ರಲ್ಲಿ ನೋಬೆಲ್ ಪ್ರಶಸ್ತಿ ದೊರೆಯಿತು.
ಬದುಕು ಮತ್ತು ಸಾಧನೆ
ಬದಲಾಯಿಸಿಜನನ ಇಂಗ್ಲೆಂಡಿನ ಬ್ರಿಸ್ಟಲ್ಲಿನಲ್ಲಿ (8-8-1902). ಬಾಲ್ಯದಿಂದಲೇ ಒಲವು ಗಣಿತದತ್ತ ಹರಿದಿತ್ತು. ಆದರೆ ಶುದ್ಧ ಗಣಿತಾಧ್ಯಯನದಿಂದ ಜೀವನ ನಿರ್ವಹಣೆ ಆಗಲಾರದು ಎಂಬ ಅರಿವು ಮೂಡಿದ್ದರಿಂದ ತರುಣ ಡಿರಾಕ್ (1918) ವಿದ್ಯುತ್ ಎಂಜಿನಿಯರಿಂಗಿನ ಅಧ್ಯಯನಕ್ಕೆ ತೆರಳಿದ. ಡಿರಾಕನ ಗಣಿತಪ್ರಿಯಮನಸ್ಸು ಎಂಜಿನಿಯರಿಂಗಿನ ಸನ್ನಿಹಿತ ಗಣನೆಗಳ (ಅಪ್ರಾಕ್ಸಿಮೇಟ್ ಕ್ಯಾಲ್ಕುಲೇಶನ್ಸ್) ತಳಪಾಯದಲ್ಲಿ ಹುದುಗಿದ್ದ ಗಣಿತಸೌಂದರ್ಯವನ್ನು ಅನ್ವೇಷಿಸದಿರಲಿಲ್ಲ. ಎಂಜಿನಿಯರಿಂಗಿನಲ್ಲಿ ಪದವಿಯನ್ನು ಪಡೆದ (1921) ಬಳಿಕ, ಉದ್ಯೋಗ ದೊರೆಯದ್ದರಿಂದ, ಸ್ಟ್ರೋಬೊಸ್ಕೋಪ್ ಬಗ್ಗೆ ಸಂಶೋಧನೆ ನಡೆಸಲು ನಿರ್ಧರಿಸಿದ. ಡಿರಾಕನ ಗಣಿತಾಸಕ್ತಿಯನ್ನು ಗಮನಿಸಿದ್ದ ಬ್ರಿಸ್ಟಲ್ ವಿಶ್ವವಿದ್ಯಾಲಯ ಈತನನ್ನು ಶುಲ್ಕರಹಿತವಾಗಿ ಗಣಿತಾಧ್ಯಯನ ಮಾಡಲು ತನ್ನಲ್ಲಿಗೆ ಆಹ್ವಾನಿಸಿತು. ಮೂರು ವರ್ಷಗಳಲ್ಲಿ ಕಲಿಯಬೇಕಾದ ಶುದ್ಧ ಹಾಗೂ ಅನ್ವಿತ ಗಣಿತಗಳನ್ನು ಕಲಿತು ಪರಿಣತನಾದ ಡಿರಾಕ್ ಮುಂದೆ ವಿಜ್ಞಾನಿಯಾಗಿ (ಎಂಜಿನಿಯರ್ ಆಗಿ ಅಲ್ಲ) ಕಾರ್ಯೋದ್ಯುಕ್ತನಾದ.
ಎಂಜಿನಿಯರಿಂಗ್ ವಿದ್ಯಾರ್ಥಿ ಆದಾಗಿನಿಂದಲೂ ಡಿರಾಕನ ಒಲವು ರಿಲೆಟಿವಿಟಿ ಕಡೆಗಿತ್ತು. ಆಗ ತಾನೇ (1918) ಪ್ರಬುದ್ಧತೆಗೆ ಬರುತ್ತಿದ್ದ ಈ ಸಿದ್ಧಾಂತದ ಬಗ್ಗೆ ಡಿರಾಕ್ ಸ್ವತಃ ಚಿಂತನೆ ಹರಿಸಿ ಅಧ್ಯಯನ ನಡೆಸಿದ. 1923ರಲ್ಲಿ ಡಿರಾಕ್ ಕೇಂಬ್ರಿಜ್ಜಿನ ಸೇಂಟ್ ಜಾನ್ ಕಾಲೇಜನ್ನು ಸಂಶೋಧನ ವಿದ್ಯಾರ್ಥಿಯಾಗಿ ಸೇರಿಕೊಂಡ. ಪ್ರಾರಂಭದ ದಿವಸಗಳಲ್ಲಿ ಹ್ಯಾಮಿಲ್ಟೋನಿಯನ್ ವಿಧಾನಗಳ ಬಗ್ಗೆ ತೀವ್ರವಾದ ಅಧ್ಯಯನ ನಡೆಸಿ ಮುಂದೆ ಉಷ್ಣತೆಯ ಓಟದಿಂದ (ಟೆಂಪರೆಚರ್ ಗ್ರೇಡಿಯೆಂಟ್) ವಿಯೋಜನೆ (ಡಿಸೋಸಿಯೇಷನ್) ಎಂಬ ಸಮಸ್ಯೆಯನ್ನು ಕುರಿತು ಚಿಂತನೆಯನ್ನು ಹರಿಸಿದ. ಬೋರ್ ಪರಮಾಣು ಮಾದರಿಯ (ಬೋರ್ಸ್ ಆ್ಯಟಮ್ ಮೋಡೆಲ್) ಅಭ್ಯಾಸವನ್ನು ಮಾಡಿ ಸಂಖ್ಯಾಕಲನ ಬಲ ವಿಜ್ಞಾನವನ್ನು (ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್) ಕಲಿತುಕೊಂಡ. ಈ ವಿಷಯದ ಮೇಲೆ ಬರೆದ ಒಂದು ಸಂಶೋಧನ ಪ್ರಬಂಧ (ಪರಮಾಣುಗಳು, ಎಲೆಕ್ಟ್ರಾನುಗಳು ಮತ್ತು ವಿಕಿರಣ-ಇವುಗಳ ನಡುವಿನ ಸಂಖ್ಯಾಕಲನೀಯ ಸಮತೋಲದ ನಿರ್ಬಂಧಗಳು), ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿಯಲ್ಲಿ ಪ್ರಕಟವಾಯಿತು. ರಾಸಾಯನಿಕ ಕ್ರಿಯೆ ನಡೆಸಬಲ್ಲ ಅನಿಲಗಳನ್ನು ಒಳಗೊಂಡಿರುವ ಒಂದು ನಾಳದ ಎರಡು ಕೊನೆಗಳಲ್ಲಿ ಉಷ್ಣತಾ ಓಟವನ್ನು ಪ್ರಯುಕ್ತಿಸಿದಾಗ ಸಾರತೆಗಳಲ್ಲಿ (ಕನ್ಸೆಂಟ್ರೇಷನ್) ತಲೆದೋರುವ ಮತ್ತು ಅಳತೆ ಮಾಡಬಹುದಾದ ವ್ಯತ್ಯಾಸವನ್ನು ಡಿರಾಕ್ ಗಣನೆ ಮಾಡಿ ಶೋಧಿಸಿದ. ರಾಸಾಯನಿಕ ಕ್ರಿಯಾಸ್ಥಿರಾಂಕದ (ರಿಆ್ಯಕ್ಷನ್ ಕಾನ್ಸ್‍ಟೆಂಟ್) ಮೇಲೆ ಉಷ್ಣತೆಯ ಅವಲಂಬನೆಯು ರಿಲೆಟಿವಿಟ್ಯಾತ್ಯಕ ವ್ಯವಸ್ಥೆಗಳಲ್ಲಿ ಸಹ ವಾಂಟ್‍ಹಾಫ್‍ನ ನಿಯಮವನ್ನು ಅನುಸರಿಸುತ್ತದೆ ಎಂಬುದಾಗಿ ಡಿರಾಕ್ ತೀರ್ಮಾನಿಸಿದ. ಅಂತಿಮವಾಗಿ ಆತ ಸಂಖ್ಯಾಕಲನೀಯ ಸಮತೋಲದಲ್ಲಿರುವ ಒಂದು ಏಕಪರಮಾಣ್ವಕ ಅನಿಲದ ಅಯಾನೀಕರಣವನ್ನು ಗಣಿಸಿ ಸಹಾರವರ ಸಿದ್ಧಾಂತ ಹಾಗೂ ಇದರ ಫೌಲರ್ ಸಾರ್ವತ್ರೀಕರಣ ಎರಡನ್ನೂ ಪಡೆದ. ಹೀಗೆ ಸಾಗಿದ ಡಿರಾಕನ ಫಲವಂತ ಚಿಂತನೆ ಕ್ವಾಂಟಮ್ ಬಲವಿಜ್ಞಾನದ ಹಳೆಯ ಸಮಸ್ಯೆಗಳನ್ನು ಹೊಸತಾಗಿ ಎತ್ತಿಕೊಂಡಿತು. ನೀಲ್ಸ್ ಬೋರನ ಆವೃತ್ತಿ (ಫ್ರೀಕ್ವೆನ್ಸಿ) ನಿಯಮಕ್ಕೆ ಡಾಪ್ಲರ್ ತತ್ತ್ವವನ್ನು ಅನ್ವಯಿಸಿದ. 1925ರಲ್ಲಿ ಹೈಸನ್‍ಬರ್ಗನ ಕ್ವಾಂಟಮ್ ಬಲವಿಜ್ಞಾನದ ಸೆಮಿನಾರಿನಲ್ಲಿ ಭಾಗವಹಿಸಿದ ಡಿರಾಕನು ವ್ಯತ್ಯಯನ ಆವರಣಗಳಿಗೂ (ಕಾಮ್ಯುಟೇಷನ್ ಬ್ರ್ಯಾಕೆಟ್ಸ್) ಅಭಿಜಾತ (ಕ್ಲ್ಯಾಸಿಕಲ್) ಪಾಯಿಸ್ಸಾನ್ ಆವರಣಗಳಿಗೂ ಇರುವ ಸಾದೃಶ್ಯವನ್ನು ಕಂಡುಕೊಂಡ. ಈ ಚಿಂತನೆಯ ಫಲವಾಗಿ ಮಾಡಿದ ಸಂಶೋಧನ ಪ್ರಬಂಧ ಕ್ವಾಂಟಮ್ ಬಲವಿಜ್ಞಾನದ ಮೂಲಭೂತ ಸಮೀಕರಣಗಳೂ (ಫಂಡಮೆಂಟಲ್ ಇಕ್ವೇಷನ್ಸ್ ಆಫ್ ಕ್ವಾಂಟಮ್ ಮೆಕ್ಯಾನಿಕ್ಸ್) ಎಂಬ ಹೆಸರಿನಿಂದ ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿಯಲ್ಲಿ ಪ್ರಕಟವಾಯಿತು. ಕ್ವಾಂಟಮ್ ಬೀಜಗಣಿತವನ್ನೂ ಅವಕಲನವನ್ನೂ (ಡಿಫರೆನ್ಸಿಯೇಷನ್) ಡಿರಾಕ್ ವಿಕಾಸಗೊಳಿಸಿದ. ಇವುಗಳ ಮೂಲಕ ಕ್ವಾಂಟೀಕರಣದ (ಕ್ವಾಂಟೈಸೇಷನ್) ನಿಯಮಗಳು ಮತ್ತು ಕ್ವಾಂಟಮ್ ವ್ಯವಸ್ಥೆಗಳ ಚಲನ ಸಮೀಕರಣಗಳನ್ನು ನಿರೂಪಿಸುವುದಕ್ಕೆ ಸಾಧ್ಯವಾಯಿತು. ಸೃಷ್ಟಿ ಮತ್ತು ಸಂಹಾರ ಪರಿಕರ್ಮಿಗಳನ್ನೂ (ಕ್ರಿಎಟಿವ್ ಅಂಡ್ ಅನಿಹಿಲೇಷನ್ ಆಪರೇಟರ್ಸ್) ಬಳಕೆಗೆ ತರಲಾಯಿತು. ಡಿರಾಕನ ಇನ್ನೊಂದು ಪ್ರಮುಖ ಕೊಡುಗೆ ಫರ್ಮಿ-ಡಿರಾಕ್ ಸಂಖ್ಯಾಕಲನ. ಡಿರಾಕ್-ಜೋರ್ಡನ್‍ರ ಪರಿವರ್ತನ ಸಿದ್ಧಾಂತವು (ಟ್ರಾನ್ಸ್‍ಫಾರ್ಮೇಷನ್ ಥಿಯರಿ) ಕ್ವಾಂಟಮ್ ಸಿದ್ಧಾಂತವನ್ನು ಸುಭದ್ರ ತಳಹದಿಯ ಮೇಲೆ ನೆಲೆಗೊಳಿಸಿತು.
1926ರಲ್ಲಿ ಡಿರಾಕ್ ಕೊಪನ್‍ಹೇಗನ್ನಿಗೆ ಪಯಣಿಸಿ ಆ ವರ್ಷದ ಕೊನೆಯವರೆಗೂ ನೀಲ್ಸ್ ಬೋರ್‍ನ ಸಂಸ್ಥೆಯಲ್ಲಿದ್ದ. ಮುಂಚೆ ಗಟಿಂಗೆನ್ನಿಗೆ ಸಾಗಿ ವಿಜ್ಞಾನದ ಇತರ ಸೀಮಾಪುರುಷರಾದ ಪೌಲಿ, ಸಮರ್‍ಫೆಲ್ಡ್, ಬಾರ್ನ್ ಫ್ರ್ಯಾಂಕ್, ಹಿಲ್ಬರ್ಟ್, ಕುರಾಂಟ್ ಮುಂತಾದವರೊಂದಿಗೆ ವಿಚಾರ ವಿನಿಮಯ ನಡೆಸಿದ. ಎಲೆಕ್ಟ್ರಾನಿಗೆ ಸಂಬಂಧಿಸಿದ ಕ್ವಾಂಟಮ್ ಬಲವಿಜ್ಞಾನವನ್ನು 1928ರಲ್ಲಿ ಡಿರಾಕ್ ನಿರೂಪಿಸಿದ. ಅನಿರ್ಬಂಧಿತ ಎಲೆಕ್ಟ್ರಾನಿಗೆ ರಷ್ಟು ಗಿರಕಿ (ಸ್ಪಿನ್) ಇರಬೇಕೆಂದು ಇದರಿಂದ ಸಿದ್ಧವಾಯಿತು. ಡಿರಾಕ್ ಬರೆದು 1930ರಲ್ಲಿ ಪ್ರಕಟವಾದ ದಿ ಪ್ರಿನ್ಸಿಪಲ್ಸ್ ಆಫ್ ಕ್ವಾಂಟಮ್ ಮೆಕ್ಯಾನಿಕ್ಸ್ ಎಂಬ ಗ್ರಂಥವು ಇಂದಿಗೂ (1957) ಒಂದು ಶ್ರೇಷ್ಠ ಶಿಷ್ಟ ಆಕರ ಗ್ರಂಥವಾಗಿದೆ. ರಂಧ್ರಸಿದ್ಧಾಂತ (ಹೋಲ್ ಥಿಯರಿ, ಮತ್ತು ಋಣಾತ್ಮಕ ಶಕ್ತಿಸ್ಥಿತಿಗಳು (ನೆಗಟಿವ್ ಎನರ್ಜಿ ಸ್ಟೇಟ್ಸ್) ಎಂಬುವನ್ನು ಡಿರಾಕನು ಎಲೆಕ್ಟ್ರಾನುಗಳ ಮತ್ತು ಪ್ರೋಟಾನುಗಳ ಒಂದು ಸಿದ್ಧಾಂತ ಎಂಬ ಲೇಖನದಲ್ಲಿ ವಿವರಿಸಿದ್ದಾನೆ. ಈತನ ಕ್ರೋಡೀಕರಣದ ಪ್ರಕಾರ ಎಲೆಕ್ಟ್ರಾನ್ ಮತ್ತು ಪ್ರೋಟಾನುಗಳು ಕೂಡಿ ಭೌತವಸ್ತುಗಳು ಆಗಿವೆ ಎಂದಿದೆ. ತಾತ್ತ್ವಿಕವಾಗಿ ನಿರೂಪಿಸಿದ್ದ ರಂಧ್ರ ಸಿದ್ಧಾಂತಕ್ಕೆ ಪ್ರಾಯೋಗಿಕ ಸಮರ್ಥನೆ ದೊರೆತದ್ದು 1932ರಲ್ಲಿ. ಮರುವರ್ಷ (1933) ಡಿರಾಕನು ಪಾಸಿಟ್ರಾನ್ ಸಿದ್ಧಾಂತವನ್ನು ಪ್ರಕಟಿಸಿದ. ಎರಡನೆಯ ಕ್ವಾಂಟೀಕರಣದ (ಸೆಕೆಂಡ್ ಕ್ವಾಂಟೈಸೇಷನ್) ಫಲವಾಗಿ ಪ್ರತಿಕಣ (ಆ್ಯಂಟಿ ಪಾರ್ಟಿಕಲ್) ಹಾಗೂ ಕಾಂತೀಯ ಏಕಧ್ರುವ (ಮ್ಯಾಗ್ನೆಟಿಕ್ ಮಾನೋಪೋಲ್) ಎಂಬ ಪರಿಕಲ್ಪನೆಗಳನ್ನು ಡಿರಾಕ್ ತನ್ನ ಸಂಶೋಧನೆಗಳ ಹಾದಿಯಲ್ಲಿ ಪ್ರಕಟಿಸಿದ. ಕಾಂತೀಯ ಏಕಧ್ರುವದ ಅಸ್ತಿತ್ವವನ್ನು ಗುರುತಿಸಲಾಗಿದೆ ಎಂದು 1975ರಲ್ಲಿ ವರದಿ ಆಗಿದ್ದರೂ ಅದು ಇನ್ನೂ ಮನ್ನಣೆಪಡೆದಿಲ್ಲ. ಈಥರ್ ಸಿದ್ಧಾಂತದ ಪುನಃ ಪರೀಕ್ಷೆ ಹಾಗೂ ಗುರುತ್ವ ಕ್ಷೇತ್ರದ ಕ್ವಾಂಟೀಕರಣಗಳು ಕೂಡ ಈತನ ಕೊಡುಗೆಗಳೇ. ಅಲೆ ಬಲವಿಜ್ಞಾನದಲ್ಲಿ (ವೇವ್ ಮೆಕ್ಯಾನಿಕ್ಸ್) ಈತ ಮಾಡಿದ ಕೆಲಸಕ್ಕಾಗಿ ಹಾಗೂ ಪ್ರತಿಕಣಗಳ ಸಿದ್ಧಾಂತದ ಮಂಡನೆಗಾಗಿ ಡಿರಾಕನಿಗೆ 1933ರಲ್ಲಿ ಶ್ರೇಡಿಂಗರನೊಡನೆ ಭೌತವಿಜ್ಞಾನದ ನೊಬೆಲ್ ಪಾರಿತೋಷಿಕ ಲಭಿಸಿತು. ಡಿರಾಕನಿಗೆ ಲಭಿಸಿರುವ ಇತರ ಗೌರವ ಮನ್ನಣೆಗಳು ವಿಫುಲವಾಗಿವೆ. ಹಿಂದೊಮ್ಮೆ ಸರ್ ಐಸಾಕ್ ನ್ಯೂಟನ್ ಅಲಂಕರಿಸಿದ್ದ ಲುಕ್ಯಾಷಿಯನ್ ಗಣಿತ ಪ್ರಾಧ್ಯಾಪಕ ಹುದ್ದೆಯು ಡಿರಾಕ್‍ಗೆ ಲಭಿಸಿದ್ದು ಆತನ ಹಿರಿಮೆಯನ್ನು ತೋರಿಸುತ್ತದೆ.
ಅಕ್ಟೋಬರ್ 20, 1984ರಲ್ಲಿ ಅಮೆರಿಕಾದ ಫ್ಲಾರಿಡಾದ ತಲ್ಲಹಸೆಯಲ್ಲಿ ಡಿರಾಕ್ ನಿಧನರಾದರು.
ಬಾಹ್ಯಸಂಪರ್ಕಗಳು
ಬದಲಾಯಿಸಿ- Dirac Medal Archived 2007-02-08 ವೇಬ್ಯಾಕ್ ಮೆಷಿನ್ ನಲ್ಲಿ. of the International Centre for Theoretical Physics
- Dirac Medal of the World Association of Theoretically Oriented Chemists (WATOC)
- The Paul Dirac Collection at Florida State University Archived 2008-04-13 ವೇಬ್ಯಾಕ್ ಮೆಷಿನ್ ನಲ್ಲಿ.
- The Paul A. M. Dirac Collection Finding Aid at Florida State University Archived 2007-04-02 ವೇಬ್ಯಾಕ್ ಮೆಷಿನ್ ನಲ್ಲಿ.
- Photocopies of Dirac's papers from the Florida State University collection Archived 2009-11-16 ವೇಬ್ಯಾಕ್ ಮೆಷಿನ್ ನಲ್ಲಿ., held under Dirac's name in the Archive Centre of Churchill College, Cambridge, UK
- Letters from Dirac (1932-36) and other papers Archived 2009-11-16 ವೇಬ್ಯಾಕ್ ಮೆಷಿನ್ ನಲ್ಲಿ., held in the Personal Papers archives of St John's College, Cambridge, UK
- Annotated bibliography for Paul Dirac from the Alsos Digital Library for Nuclear Issues Archived 2019-05-02 ವೇಬ್ಯಾಕ್ ಮೆಷಿನ್ ನಲ್ಲಿ.