ವಿಷಯಕ್ಕೆ ಹೋಗು

ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉದ್ಯಾನವನ ಇಂದ ಪುನರ್ನಿರ್ದೇಶಿತ)
ಆ್ಯಡಲೇಡ್, ಆಸ್ಟ್ರೇಲಿಯಾದಲ್ಲಿನ ವೀಲ್ ಗಾರ್ಡನ್ಸ್

ಉದ್ಯಾನ ಎಂದರೆ ಮಾನವ ಸಂತೋಷ ಮತ್ತು ವಿನೋದಕ್ಕಾಗಿ ಅಥವಾ ವನ್ಯಜೀವಿಗಳು ಅಥವಾ ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆಗಾಗಿ ಮೀಸಲಿಡಲಾದ ನೈಸರ್ಗಿಕ, ಅರೆ-ನೈಸರ್ಗಿಕ ಅಥವಾ ಸಸ್ಯಗಳಿರುವ ಪ್ರದೇಶ. ಇದು ಹುಲ್ಲಿರುವ ಪ್ರದೇಶಗಳು, ಬಂಡೆಗಳು, ಮಣ್ಣು ಮತ್ತು ಮರಗಳನ್ನು ಹೊಂದಿರಬಹುದು, ಆದರೆ ಜೊತೆಗೆ ಕಟ್ಟಡಗಳು ಮತ್ತು ಸ್ಮಾರಕಗಳು, ಕಾರಂಜಿಗಳು ಅಥವಾ ಆಟದ ಮೈದಾನ ರಚನೆಗಳಂತಹ ಇತರ ಮಾನವ ನಿರ್ಮಿತ ಸಾಧನಗಳನ್ನೂ ಹೊಂದಿರಬಹುದು. ಉತ್ತರ ಅಮೇರಿಕದಲ್ಲಿ, ಅನೇಕ ಉದ್ಯಾನಗಳು ಅಸೋಸಿಯೇಷನ್ ಫ಼ುಟ್‍ಬಾಲ್, ಬೇಸ್‍ಬಾಲ್ ಹಾಗೂ ಫ಼ುಟ್‍ಬಾಲ್‍ನಂತಹ ಕ್ರೀಡೆಗಳನ್ನು ಆಡಲು ಮೈದಾನಗಳನ್ನು, ಮತ್ತು ಬಾಸ್ಕೆಟ್‍ಬಾಲ್‍ನಂತಹ ಆಟಗಳಿಗೆ ಕಲ್ಲು ಹಾಸು ಹೊದಿಸಿದ ಪ್ರದೇಶಗಳನ್ನು ಹೊಂದಿರುತ್ತವೆ. ಅನೇಕ ಉದ್ಯಾನಗಳು ನಡಿಗೆ, ಸೈಕಲ್ ಓಡಾಟ ಮತ್ತು ಇತರ ಚಟುವಟಿಕೆಗಳಿಗಾಗಿ ದಾರಿಗಳನ್ನು ಹೊಂದಿರುತ್ತವೆ. ಕೆಲವು ಉದ್ಯಾನಗಳನ್ನು ಜಲಸಮೂಹಗಳು ಅಥವಾ ಜಲಕಾಲುವೆಗಳ ಪಕ್ಕ ನಿರ್ಮಿಸಲಾಗುತ್ತದೆ ಮತ್ತು ಬೀಚ್ ಅಥವಾ ದೋಣಿ ಕಟ್ಟೋ ಪ್ರದೇಶವನ್ನು ಒಳಗೊಂಡಿರಬಹುದು. ಹಲವುವೇಳೆ, ಅತ್ಯಂತ ಚಿಕ್ಕ ಉದ್ಯಾನಗಳು ನಗರ ಪ್ರದೇಶಗಳಲ್ಲಿರುತ್ತವೆ. ಇಂಥ ಕಡೆ ಒಂದು ಉದ್ಯಾನವು ಕೇವಲ ನಗರ ಸಮುಚ್ಚಯದಷ್ಟು ಅಥವಾ ಕಡಿಮೆ ಜಾಗ ತೆಗೆದುಕೊಳ್ಳಬಹುದು ಮತ್ತು ಮೇಲಾಗಿ ಅದರ ನಿವಾಸಿಗಳಿಂದ ೧೦ ನಿಮಿಷ ನಡಿಗೆಯಷ್ಟು ಹತ್ತಿರವಿರುತ್ತದೆ. ನಗರದ ಉದ್ಯಾನಗಳು ಹಲವುವೇಳೆ ಕೂಡಲು ಬೆಂಚ್‍ಗಳು ಮತ್ತು ಪಿಕ್ನಿಕ್ ಮೇಜುಗಳು ಹಾಗೂ ಬಾರ್ಬೆಕ್ಯೂ ಕಂಬಿ ಚೌಕಟ್ಟುಗಳನ್ನು ಹೊಂದಿರಬಹುದು. ಉದ್ಯಾನದಲ್ಲಿ ನಾಯಿಗಳನ್ನು ತರುವುದಕ್ಕೆ ಸಂಬಂಧಿಸಿದಂತೆ ಉದ್ಯಾನಗಳು ಭಿನ್ನ ನಿಯಮಗಳನ್ನು ಹೊಂದಿರುತ್ತವೆ: ಕೆಲವು ಉದ್ಯಾನಗಳು ನಾಯಿಗಳನ್ನು ನಿಷೇಧಿಸುತ್ತವೆ; ಕೆಲವು ಉದ್ಯಾನಗಳು ನಿರ್ಬಂಧಗಳೊಂದಿಗೆ (ಉದಾ. ತೊಗಲ ಪಟ್ಟಿಗಳ ಬಳಕೆಯೊಂದಿಗೆ) ಅವುಗಳನ್ನು ಅನುಮತಿಸುತ್ತವೆ; ಮತ್ತು ಕೆಲವು ಉದ್ಯಾನಗಳು ತೊಗಲು ಪಟ್ಟಿಗಳಿಲ್ಲದೇ ನಾಯಿಗಳು ಓಡಲು ಅನುಮತಿ ನೀಡುತ್ತವೆ.

ಅತ್ಯಂತ ದೊಡ್ಡ ಉದ್ಯಾನಗಳು ನೂರಾರು ಸಾವಿರಾರು ಚದರ ಕಿ.ಮಿ. ವಿಸ್ತೀರ್ಣದ, ಸಮೃದ್ಧ ವನ್ಯಜೀವಿಗಳು ಮತ್ತು ಪರ್ವತಗಳು ಹಾಗೂ ನದಿಗಳಂತಹ ನೈಸರ್ಗಿಕ ಲಕ್ಷಣಗಳಿರುವ ವಿಶಾಲವಾದ ನೈಸರ್ಗಿಕ ಪ್ರದೇಶಗಳಾಗಿರಬಹುದು. ನೇರ ಪ್ರದರ್ಶನಗಳು, ಜಾತ್ರೆಮಾಳ ಸವಾರಿಗಳು, ಉಪಹಾರ, ಮತ್ತು ಅದೃಷ್ಟ/ಕೌಶಲದ ಆಟಗಳನ್ನು ಹೊಂದಿರುವ ಅಮ್ಯೂಸ್‍ಮೆಂಟ್ ಪಾರ್ಕುಗಳೂ ಇವೆ. ಅಮ್ಯೂಸ್‍ಮೆಂಟ್ ಪಾರ್ಕುಗಳು ವಿಶ್ವದಲ್ಲಿನ ಅತ್ಯಂತ ದೊಡ್ಡ ಉದ್ಯಾನಗಳ ಪ್ರಕಾರವಾಗಿವೆ.

ಉಲ್ಲೇಖ

[ಬದಲಾಯಿಸಿ]