ವಿಷಯಕ್ಕೆ ಹೋಗು

ಅಂತರಗಂಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅ೦ತರಗ೦ಗೆ ಇಂದ ಪುನರ್ನಿರ್ದೇಶಿತ)
ಅಂತರಗಂಗೆ ದೇವಾಲಯ

ಕೋಲಾರ ಜಿಲ್ಲೆ ಹಲವು ಪುಣ್ಯಕ್ಷೇತ್ರಗಳ ನಾಡು. ದಕ್ಷಿಣಕಾಶಿ ಎಂದೇ ಪ್ರಖ್ಯಾತವಾದ ಅಂತರಗಂಗೆ ಇಲ್ಲಿರುವ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಕೋಲಾರದಿಂದ 4 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿರುವ ಶತಶೃಂಗ ಪರ್ವತ ಎಂದು ಕರೆಯಲಾಗುವ ಬೆಟ್ಟಶ್ರೇಣಿಯೇ ಅಂತರಗಂಗೆ. ಅಂತರಗಂಗೆ ಹೆಸರೇ ಹೇಳುವಂತೆ ಅಂತರ್ಮುಖಿಯಾದ ಗಂಗೆ ಹರಿವ ಕ್ಷೇತ್ರ. ಭಗೀರಥನ ತಪಸ್ಸಿನ ಫಲವಾಗಿ ಸುರಲೋಕದಿಂದ ಭೂಲೋಕಕ್ಕೆ ಬಂದು, ಶಿವನ ಜಟೆಯಿಂದ ಮರುಹುಟ್ಟು ಪಡೆದು ಹರಿವ ಸಾಕ್ಷಾತ್ ಗಂಗಾಮಾತೆ ಕಲ್ಲಿನ ಬಸವನ ಬಾಯಿಯಿಂದ ಇಲ್ಲಿ ಭೂಸ್ಪರ್ಶ ಮಾಡುತ್ತಾಳೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಸಂಗತಿ ಎಂದರೆ ಎತ್ತರದ ಬೆಟ್ಟದ ಮೇಲೆ ದೇವಾಲಯದ ಪಕ್ಕದಲ್ಲಿ ಕಟ್ಟಲಾಗಿರುವ ಮಂಟಪದಲ್ಲಿ ಪ್ರತಿಷ್ಠಾಪಿತನಾದ ಶಿವನ ವಾಹನ ಬಸವಣ್ಣನ ಬಾಯಿಂದ ವರ್ಷದ ೩೬೫ ದಿನದ ಎಲ್ಲ ೨೪ ಗಂಟೆಯೂ ಸಿಹಿನೀರು ಅವ್ಯಾಹತವಾಗಿ ಹರಿಯುತ್ತಿರುತ್ತದೆ. ಬರಗಾಲವಿರಲಿ, ಕ್ಷಾಮವೇ ಇರಲಿ ಇಲ್ಲಿನ ಬಸವನ ಬಾಯಿಂದ ನೀರು ಬರುತ್ತದೆ. ಕಳೆದ ೪೦ ವರ್ಷದಿಂದ ಒಂದು ದಿನವೂ ಇಲ್ಲಿ ನೀರು ನಿಂತಿದ್ದನ್ನು ನಾವು ಕಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ಆದರೆ ಈ ನಂದಿಯ ಬಾಯಿಂದ ಬರುವ ಜಲದ ಸೆಲೆ ಅರ್ಥಾತ್ ಜಲ ಮೂಲ ಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ನೆರೆ ಹೊರೆ ಊರುಗಳಲ್ಲಿ ಕುಡಿವ ನೀರಿನ ಕೊರತೆಯಿಂದ ಸ್ಥಳೀಯರು ದಿನವೂ ನೂರಾರು ಮೆಟ್ಟಿಲೇರಿ ಬಂದು ಕ್ಯಾನ್ ಗಳಲ್ಲಿ, ಕೊಡಗಳಲ್ಲಿ ನೀರು ತುಂಬಿಸಿಕೊಂಡು ಮನೆಗೆ ಹೋಗುತ್ತಾರೆ. ಬೆಟ್ಟದ ಮೇಲೆ ಪುರಾತನವಾದ ಕಾಶಿ ವಿಶ್ವೇಶ್ವರನ ಸನ್ನಿಧಿ ಇದೆ. ವಿಶೇಷವಾದ ಕೆತ್ತನೆಗಳೇನೂ ಇಲ್ಲದ ಸಾಧಾರಣ ಗುಡಿಯ ಗರ್ಭಗೃಹದಲ್ಲಿರುವ ಕಾಶಿ ವಿಶ್ವೇಶ್ವರನ ಲಿಂಗ ಮನಮೋಹಕವಾಗಿದೆ. ಪಕ್ಕದಲ್ಲಿ ಕಲ್ಯಾಣಿ ಇದ್ದು, ಗಣಪತಿಯ ಪುಟ್ಟ ಗುಡಿ ಇದೆ. ಅದೇ ಪ್ರಕಾರದಲ್ಲಿ ಮಂಟಪದಲ್ಲಿ ಎರಡು ನಂದಿಯ ವಿಗ್ರಹಗಳಿದ್ದು, ಒಂದು ನಂದಿಯ ಬಾಯಿಂದ ನಿರಂತರವಾಗಿ ಜಲಧಾರೆ ಹರಿಯುತ್ತದೆ. ಪಕ್ಕದಲ್ಲೇ ಆಂಜನೇಯನ ಮೂರ್ತಿಯೂ ಇದೆ. ಮೆಟ್ಟಿಲುಗಳನ್ನೇರಿ ಹೋಗುವ ಯಾತ್ರಿಕರು ದಣಿವಾರಿಸಿಕೊಳ್ಳಲೆಂದು ಮಾರ್ಗಮಧ್ಯದಲ್ಲಿ ಜಿಂಕೆಯ ಬೀಡಿದೆ. ಇಲ್ಲಿ ತಂತಿಬೇಲಿಯ ಗೂಡಿನಲ್ಲಿ ಎತ್ತರದ ಕೊಂಬಿನ ಜಿಂಕೆಯಿದೆ. ಮಕ್ಕಳ ಜೊತೆ ಚೆಲ್ಲಾಟವಾಡುವ ಜಿಂಕೆಯನ್ನು ಕಂಡು ಆನಂದಿಸುತ್ತಾರೆ. ಪಕ್ಕದಲ್ಲೇ ಉರುಟುಕಲ್ಲುಗಳ ಬೆಟ್ಟದಲ್ಲಿ ವೀಕ್ಷಣಾಗೋಪುರವೂ ಇದೆ. ಇಲ್ಲಿ ನಿಂತು ಸುತ್ತಲ ಪ್ರದೇಶ ನೋಡುವುದೇ ಒಂದು ಅಪೂರ್ವ ಅನುಭವ. (ಟಿ.ಎಂ. ಸತೀಶ್ ourtemples.inನಲ್ಲಿ ಬರೆದ ಲೇಖನ ಇದು. http://www.ourtemples.in/antaragange.html Archived 2018-08-06 ವೇಬ್ಯಾಕ್ ಮೆಷಿನ್ ನಲ್ಲಿ. )