ವಿಷಯಕ್ಕೆ ಹೋಗು

ಸಿಂಪಿ ಲಿಂಗಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.
ಸಿಂಪಿ ಲಿಂಗಣ್ಣ
ಚಿತ್ರ:Simpi Linganna1.jpg
ಜನನಫೇಬ್ರವರಿ 11ನೇ, 1905
ಚಡಚಣ, ಇಂಡಿ, ವಿಜಯಪುರ
ಮರಣಮೇ 5, 1993
ವೃತ್ತಿಶಿಕ್ಷಕ, ಜಾನಪದ ವಿದ್ವಾಂಸ, ಲೇಖಕ ಹಾಗೂ ಸಾಹಿತಿ

"ಕರ್ನಾಟಕದ ಜಾನಪದ ರತ್ನ" "ಜಾನಪದ ದಿಗ್ಗಜ"ರೆಂದೆ ಖ್ಯಾತರಾದ ಸಿಂಪಿ ಲಿಂಗಣ್ಣನವರು ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗು ಜಾನಪದ ತಜ್ಞರು. ಹಳ್ಳಿಯ ಸಮುದಾಯವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎತ್ತರಿಸಲು ಪ್ರಯತ್ನ ಪಟ್ಟವರು. ಶ್ರೇಷ್ಠ ಶಿಕ್ಷಕರು. ಮಧುರಚನ್ನರ ಒಡನಾಡಿಗಳು. ಅರವಿಂದರ ಭಕ್ತರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ ಅರವಿಂದ ಗ್ರಂಥಾಲಯವನ್ನು ತೆರೆದು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ರಾಜೇಂದ್ರ ಪ್ರಸಾದರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಸಿಂಪಿ ಲಿಂಗ ಣ್ಣನವರು

ಹಿನ್ನಲೆ

ಸಿಂಪಿ ಲಿಂಗಣ್ಣನವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ 10 ಫೆಬ್ರವರಿ 1905ರಲ್ಲಿ ಜನಿಸಿದರು. ಇವರ ತಂದೆ ತಾಯಿಗಳು ಶಿವಯೋಗಿ ಮತ್ತು ಸಾವಿತ್ರಿ ಎಂಬ ಪುಣ್ಯ ಜೀವಿಗಳು.

ಸಾಹಿತ್ಯ

೧೯೨೨ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. ೧೯೨೫ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ೧೯೬೦ರಲ್ಲಿ ನಿವೃತ್ತರಾದರು. ಇವರ ತಾಯಿ ಮತ್ತು ಅತ್ತಿಗೆಯವರು ಹೇಳುತ್ತಿದ್ದ ತ್ರಿಪದಿಗಳನ್ನು ಬಾಲ್ಯದಿಂದಲೇ ಕೇಳುತ್ತಾ ಲಿಂಗಣ್ಣನವರಲ್ಲಿ ಜನಪದ ಸಾಹಿತ್ಯದತ್ತ ಒಲವು ಬೆಳೆಯ ತೊಡಗಿತು.

ಇವರು ಸಂಗ್ರಹಿಸಿದ ಜನಪದ ಹಾಡುಗಳನ್ನು ‘ಗರತಿಯ ಹಾಡು’ ಮತ್ತು ‘ಜೀವನ ಸಂಗೀತ’ ಎಂಬ ಸಂಕಲನಗಳಲ್ಲಿ ಪ್ರಕಟಿಸಿದರು. ನಂತರ ಹೊರತಂದ ಪುಸ್ತಕ ‘ಉತ್ತರ ಕರ್ನಾಟಕದ ಜನಪದ ಕಥೆಗಳು’. ಶಾಸ್ತ್ರೀಯವಾಗಿ ಒಂಬತ್ತು ಭಾಗಗಳಾಗಿ ವಿಭಜಿಸಿ ಪ್ರಕಟಿಸಿದ ಈ ಕೃತಿಯು ಎಂ.ಎ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. ಜಾನಪದ ವಿಮರ್ಶೆಯ ಕೃತಿ ‘ಜನಾಂಗದ ಜೀವಾಳ’ ಪುಸ್ತಕವನ್ನೂ ಮಿಂಚಿನ ಬಳ್ಳಿ ಪ್ರಕಾಶನವು ೧೯೫೭ರಲ್ಲಿ ಪ್ರಕಟಿಸಿತು. ಇದರಲ್ಲಿ ಜನಪದ ಕಥೆಗಳು, ಗಾದೆಗಳು, ಒಗಟುಗಳು, ಬಯಲಾಟದ ಹಾಡುಗಳು, ವಾಕ್ ಸಂಪ್ರದಾಯಗಳು, ಪಡೆನುಡಿಗಳು- ಇವೆಲ್ಲದರ ರಸಭರಿತ ವಿಶ್ಲೇಷಣೆಯ ವಿಶಿಷ್ಟ ಕೃತಿ. ಜಾನಪದ ಕ್ಷೇತ್ರದಷ್ಟೇ ಇವರಿಗೆ ಪ್ರಿಯವಾಗಿದ್ದ ಮತ್ತೊಂದು ಕ್ಷೇತ್ರವೆಂದರೆ ಕಾವ್ಯಪ್ರಕಾರ. ೧೯೩೬ರಲ್ಲಿಯೇ ರಾಮನರೇಶ್‌ ತ್ರಿಪಾಠಿಯವರು ಹಿಂದಿಯಲ್ಲಿ ಬರೆದ ‘ಮಿಲನ’ ಖಂಡ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಇವರು ಹೊರತಂದ ಕವನ ಸಂಕಲನಗಳೆಂದರೆ ಮುಗಿಲಜೇನು, ಪೂಜಾ, ಮಾತೃವಾಣಿ, ನಮಸ್ಕಾರ, ಶ್ರುತಾಶ್ರುತ, ಸಾಯ್‌ಕೊಲ್‌ ಮುಂತಾದವುಗಳು. ಜಾನಪದ, ಕಾವ್ಯದಷ್ಟೇ ಉತ್ಕೃಷ್ಟ ಕೃತಿಗಳನ್ನು ನೀಡಿದ ಮತ್ತೊಂದು ಕ್ಷೇತ್ರವೆಂದರೆ ಪ್ರಬಂಧಪ್ರಕಾರ.

ಭಾರತದ ಇತಿಹಾಸ, ಸಂಸ್ಕೃತಿಯ ಚಿತ್ರಣ, ವೈಚಾರಿಕತೆ ಜೀವನದೃಷ್ಟಿ, ಇವುಗಳನ್ನೊಳಗೊಂಡಂತೆ ಪ್ರಕಟಿಸಿದ ಪ್ರಬಂಧ ಸಂಕಲನಗಳೆಂದರೆ ‘ಸ್ವರ್ಗದೋಲೆಗಳು’. ‘ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?’, ‘ಬಾಳಬಟ್ಟೆ’, ‘ತಲೆಮಾರಿನ ಹಿಂದೆ’, ‘ಬದುಕಿನ ನೆಲೆ’, ‘ನೂರುಗಡಿಗೆ ಒಂದು ಬಡಿಗೆ’ ಮುಂತಾದ ೧೫ ಪ್ರಬಂಧ ಕೃತಿಗಳು. ಭಾರತೀಯ ಮಹಾಪುರುಷರು, ದೇಶಭಕ್ತಿಯ ಕಥೆಗಳು, ಕನ್ನಡಿಗರ ಕುಲಗುರು, ದತ್ತ ಸಾಹಿತ್ಯ, ಶ್ರೀ ಅರವಿಂದರು, ಮಧುರ ಚೆನ್ನರ ಜೀವನ ಹಾಗೂ ಕಾರ್ಯ, ಗಾಂಧಿ ಶತದಲ, ಹಳ್ಳಿಯ ಮಹಾತ್ಮ ಮುಂತಾದ ೧೮ ಜೀವನ ಚರಿತ್ರೆಯ ಕೃತಿಗಳು; ಜನಜೀವನ, ಭಕ್ತಿ ರಹಸ್ಯ, ಭಗವಾನ್‌ ಬುದ್ಧದೇವ, ಮೊದಲನೇ ದೇಶದ್ರೋಹಿ, ಸಪ್ತಪದಿ ಮೊದಲಾದ ೮ ನಾಟಕಗಳು; ‘ಬೆಟ್ಟದ ಹೊಳೆ’-ಒಂದು ಕಾದಂಬರಿ; ಪವಿತ್ರ ಜೀವನ, ಸುಂದರ ಕಥೆಗಳು, ದೀಪವರ್ತಿ, ದೃಷ್ಟಾಂತ ಕಥೆಗಳು ಮೊದಲಾದ ನಾಲ್ಕು ಕಥಾ ಸಂಕಲನಗಳು; ವಿಶ್ವಾಮಿತ್ರನ ಸಾಹಸ, ಲೊಬೊಲೊಬೊ, ಕಿರುಗನ್ನಡಿ, ಅಂದ ಚೆಂದ, ನಾಮದೇವ, ಗುಡ್ಡಾಪುರದ ದಾನಮ್ಮ ಮೊದಲಾದ ೧೬ ಮಕ್ಕಳ ಸಾಹಿತ್ಯ ಕೃತಿಗಳು, ರಾಮತೀರ್ಥರ ಬಗ್ಗೆ ೫ ಕೃತಿಗಳು; ಶ್ರೀ ಅರವಿಂದರ ಬಗ್ಗೆ ಬರೆದ ೧೨ ಕೃತಿಗಳೂ ಸೇರಿ ಒಟ್ಟು ಒಂದು ನೂರಕ್ಕೂ ಹೆಚ್ಚು ಕೃತಿ ಪ್ರಕಟಿತ. ಇವರ ಎಲ್ಲಾ ಸಾಹಿತ್ಯ ಕೃತಿಗಳ ಹಿಂದಿನ ಪ್ರೇರಕ ಶಕ್ತಿಗಳೆಂದರೆ ಹಲಸಂಗಿ ಮಧುರ ಚೆನ್ನ, ಕಾಪಸೆ ರೇವಪ್ಪ ಮತ್ತು ಧೂಲಾಸಾಹೇಬ ಮೊದಲಾದ ಸ್ನೇಹಿತರುಗಳು.

ಸಿಂಪಿ ಲಿಂಗಣ್ಣನವರನ್ನು ಕುರಿತು ಡಾ.ಎಂ.ಎನ್‌.ವಾಲಿಯವರು “ಸಿಂಪಿ ಲಿಂಗಣ್ಣನವರ ಜೀವನ ಸಾಧನೆ” ಕುರಿತ ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಇವರಿಗೆ ಸಂದ ಪ್ರಶಸ್ತಿ, ಗೌರವಗಳೆಂದರೆ – ೧೯೪೪ರಲ್ಲಿ ರಬ ಕವಿಯಲ್ಲಿ ನಡೆದ ೨೮ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯ ಅಧ್ಯಕ್ಷತೆ, (ಸಮ್ಮೇಳನದ ಅಧ್ಯಕ್ಷರು – ಎಸ್‌.ಎಸ್‌. ಬಸವನಾಳರು). ೧೯೬೯ರಲ್ಲಿ ನಡೆದ ಅಖಿಲ ಕರ್ನಾಟಕ ೨ ನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ೧೯೭೨ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೭೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇಳಕಲ್ಲಿನಲ್ಲಿ ಆಯೋಜಿಸಿದ್ದ ಆರನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ೧೯೮೦ರಲ್ಲಿ ಜಮಖಂಡಿಯಲ್ಲಿ ನಡೆದ ವಿಜಾಪುರ ಜಿಲ್ಲಾ ಎರಡನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೮೯ರಲ್ಲಿ ಹೊಸಪೇಟೆಯಲ್ಲಿ ನಡೆದ ಕನ್ನಡ ಶಕ್ತಿ ಕೇಂದ್ರದ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ, ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಜಾನಪದ ಸಾಹಿತ್ಯ ಸಂಗ್ರಹ ಮತ್ತು ವಿವೇಚನೆ

  • ಗರತಿಯ ಹಾಡು (ತ್ರಿಪದಿಗಳು)
  • ಜೀವನ ಸಂಗೀತ (ಲಾವಣಿಗಳು)
  • ಉತ್ತರ ಕರ್ನಾಟಕದ ಜನಪದ ಕಥೆಗಳು
  • ಗರತಿಯ ಬಾಳು
  • ಜನಾಂಗದ ಜೀವಾಳ
  • ಕಿರಿದರೊಳ್ ಪಿರಿದರ್ಥದ ಚಲಕ
  • ಉತ್ತರ ಕರ್ನಾಟಕದ ಜನಪದ ಗೀತೆಗಳು
  • ಲಾವಣಿಗಳು
  • ಹೆಡಿಗೆ ಜಾತ್ರೆ
  • ಗರತಿಯ ಬಾಳ ಸಂಹಿತೆ
  • ಗಾದೆಗಳ ಗಾರುಡಿ

ಕವನ ಸಂಕಲನ

  • ಮಿಲನ
  • ಮುಗಿಲ ಜೇನು
  • ಶ್ರುತಾಶ್ರುತ
  • ಪೂಜಾ
  • ಮಾತೃವಾಣಿ
  • ನಮಸ್ಕಾರ
  • ಸಾಯ್ ಕೋಲ್

ಕಥಾಸಂಕಲನ

  • ಪವಿತ್ರ ಜೀವನ (ಟಾಲ್ಸ್ಟಾಯ್ರ ಕಥೆಗಳು)
  • ಢಾಳಿಸಿದ ದೀಪ

ಕಾದಂಬರಿ

  • ಬೆಟ್ಟದ ಹೊಳೆ

ನಾಟಕ

  • ಜನಜೀವನ
  • ಸಪ್ತಪದಿ
  • ಭಕ್ತಿರಹಸ್ಯ
  • ಮೊದಲನೆ ದೇಶದ್ರೋಹಿ
  • ಮರೆಮಚ್ಚುಕ
  • ಚಂಡಾಳ ಚೌಕಡಿ
  • ಪೃಥ್ವಿರಾಜ

ಲೇಖನ ಸಂಗ್ರಹ

  • ಜೀವನ ದೃಷ್ಟಿ
  • ಸ್ವರ್ಗದೋಲೆಗಳು
  • ಬದುಕಿನ ಬೆಲೆ
  • ಸಾಹಿತ್ಯ ಸಂಪರ್ಕ
  • ತಲೆಮಾರಿನ ಹಿಂದೆ
  • ನಾಟ್ಯ ಸಾಧನೆ
  • ಸನ್ಯಾಸಿ ದಿಬ್ಬ
  • ಬಾಳ ಬೇಸಾಯ
  • ಆರ್ಯದೇಶ ಭಕ್ತಿ
  • ಭಾರತದ ಭವ್ಯ ಸಿದ್ಧತೆ
  • ಭಾರತದ ಸಾಂಸ್ಕೃತಿಕ ಸಂಘಟನೆ
  • ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?
  • ಬಾಳಬಟ್ಟೆ
  • ನೂರು ಗಡಿಗೆ ಒಂದು ಬಡಿಗೆ
  • ಮಕ್ಕಳಿವರೇನಮ್ಮ?
  • ಅಸ್ತವ್ಯಸ್ತ
  • ದಿಟ್ಟಿಸಿ ನೋಡಿದರೆ

ಜೀವನ ಚರಿತ್ರೆ

  • ದೇಶಭಕ್ತಿಯ ಕಥೆಗಳು
  • ಭಾರತೀಯ ಮಹಾಪುರುಷರು
  • ಭಕ್ತರಾಜ ಬಸವಣ್ಣ
  • ಶ್ರೀ ಅರವಿಂದರು
  • ಶ್ರೀ ತಾಯಿಯವರು
  • ಸುಪ್ರಮಾನಸದ ಮಹಾಮಾತೆ
  • ಸಿಡಿಲು ಸನ್ಯಾಸಿ (ವಿವೇಕಾನಂದ ಜೀವನ)
  • ಮಹತ್ಕ್ರಾಂತಿಯ ಮಹಾಮನು (ರಾಮಕೃಷ್ಣ ಪರಮಹಂಸ)
  • ರಾಮತೀರ್ಥರ ತೀರ್ಥ
  • ಮಧುರಚನ್ನರ ಸ್ಮೃತಿಗಳು
  • ಮಧುರಚನ್ನರು: ಅವರ ಕಾರ್ಯ ಮತ್ತು ಸಾಧನೆ
  • ಕನ್ನಡ ಕುಲದೀಪ ಬಸವಣ್ಣ
  • ದತ್ತ ಸಾಹಿತ್ಯ (ಬೇಂದ್ರೆಯವರ ಜೀವನ ಹಾಗೂ ಸಾಹಿತ್ಯ)
  • ಹಳ್ಳಿಯ ಮಹಾತ್ಮ
  • ನಾಮದೇವ
  • ಗುಡ್ಡಾಪುರ ದಾನಮ್ಮ
  • ಬಬಲೇಶ್ವರ ಸ್ವಾಮಿಗಳು
  • ಪ್ರಾಯದರ್ಶಿ ಅಶೋಕ
  • ವಿಶ್ವಕವಿ ರವೀಂದ್ರ
  • ಕನ್ನಡಿಗರ ಕುಲಗುರು (ವಿದ್ಯಾರಣ್ಯ)
  • ಬಾಳಿನಲ್ಲಿ ಬೆಳಕು (ಟಾಲಸ್ಟಾಯರ ಜೀವನ)
  • ಹಾವಿನಾಳ ಕಲ್ಲಯ್ಯ
  • ಕರೆಯಿಸಿಕೊಂಡು ಬಂದವರು
  • ಮಕ್ಕಳ ಶ್ರೀ ಅರವಿಂದರು
  • ಗಾಂಧಿ ಶತದಲ
  • ಗಣದಾಸಿ ವೀರಣ್ಣ
  • ಮಹಾಪುರುಷರ ಜೀವನ

ಆತ್ಮಚರಿತ್ರೆ

  • ಬಾಳಸಂಜೆಯ ಹಿನ್ನೋಟ.
  • ನಾಗಾಲೋಟ.

ರಾಮತೀರ್ಥರ ಸಾಹಿತ್ಯ

  • ಸುಖದ ನೆಲೆ
  • ಭಾರತದ ಸಮಸ್ಯೆ
  • ಮನೆಯಲ್ಲೇ ಮುಕ್ತಿಯ ದಾರಿ
  • ರಾಮತೀರ್ಥರ ಪತ್ರಗಳು
  • ಬಿಚ್ಚುಮೊಗ್ಗೆ

ಅರವಿಂದ ಸಾಹಿತ್ಯ

  • ಧರ್ಮ ಹಾಗು ರಾಷ್ಟ್ರೀಯತ್ವ
  • ಶ್ರೀ ಅರವಿಂದರ ಪತ್ರಗಳು
  • ಗೀತೆಯ ಭೂಮಿಕೆ
  • ಪೂರ್ಣಯೋಗದ ಜೀವಾಳ
  • ಪೂರ್ಣಯೋಗ
  • ಯೋಗದೀಕ್ಷೆ
  • ಉತ್ತರಪಾದಾ ಉಪನ್ಯಾಸ
  • ದೀಪವರ್ತಿ
  • ಸುಂದರ ಕಥೆಗಳು
  • ದುರ್ಗಾಸ್ತೋತ್ರ
  • ಧರ್ಮಕ್ಷೇತ್ರೆ ಕುರುಕ್ಷೇತ್ರೆ
  • ಪ್ರಾರ್ಥನಾ ಪದ್ಯಗಳು

ಪ್ರೌಢಸಾಕ್ಷರ ಸಾಹಿತ್ಯ

  • ಲೋಬೋಲೋಬೋ
  • ಭಗವಾನ್ ಬುದ್ಧದೇವ
  • ವಿಶ್ವಾಮಿತ್ರ
  • ಸ್ವಾರ್ಥತ್ಯಾಗ
  • ಪೌರನೀತಿಯ ಅ ಆ
  • ಅಕ್ಕತಂಗಿಯರಿಗೆ
  • ಹರಿಜನೋದ್ಧಾರ
  • ಅಂದ ಚಂದ
  • ಕವಿ ಮತ್ತು ಕಾವ್ಯ
  • ತಿರುವಲ್ಲವರ
  • ಕಿರುಗನ್ನಡಿ (ಕನ್ನಡ ವ್ಯಾಕರಣ ಮೂಲಪಾಠಗಳು)

ಪ್ರಶಸ್ತಿಗಳು

  • ಆದರ್ಶ ಶಿಕ್ಷಕರೆಂದು ರಾಷ್ಟ್ರಾಧ್ಯಕ್ಷ ಡಾ|| ರಾಜೇಂದ್ರ ಪ್ರಸಾದರಿಂದ ಪ್ರಶಸ್ತಿ.
  • 1968: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಗೌರವ ಡಾಕ್ಟರೇಟ್ []
  • ಬಾಂಬೆ ಸರ್ಕಾರದ ಪ್ರಶಸ್ತಿ.
  • ಮೈಸೂರು ಸರ್ಕಾರದ ಪ್ರಶಸ್ತಿ.
  • 1993 - ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿದ್ದರು.

೧೯೫೬ರಲ್ಲಿ ‘ಸ್ವರ್ಗದೋಲೆಗಳು’ ಕೃತಿಗೆ ಮುಂಬೈ ಸರಕಾರದ ಬಹುಮಾನ, ೧೯೫೯ರಲ್ಲಿ ‘ಗರತಿಯ ಬಾಳು’ ಕೃತಿಗೆ ಮೈಸೂರು ಸರಕಾರದ ಬಹುಮಾನ, ೧೯೬೦ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದ ‘ಆದರ್ಶ ಶಿಕ್ಷಕ’ ಪ್ರಶಸ್ತಿ, ೧೯೬೦ರಲ್ಲಿ ‘ಜನಾಂಗದ ಜೀವಾಳ’ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಬಹುಮಾನ, ೧೯೬೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮತ್ತು ಬಹುಮಾನ, ೧೯೭೭ರಲ್ಲಿ ‘ನಾಟ್ಯಸಾಧನೆ’ (ಪ್ರಬಂಧ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ೧೯೮೦ರಲ್ಲಿ ಜಾನಪದ ಟ್ರಸ್ಟ್‌ನಿಂದ ಸನ್ಮಾನ, ಮತ್ತು ‘ನೂರು ಗಡಿಗೆ ಒಂದು ಬಡಿಗೆ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ೧೯೮೮ರಲ್ಲಿ ಕರ್ನಾಟಕ ಜಾನಪದ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ೧೯೯೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಮತ್ತು ರಾಜ್ಯ ಸರಕಾರದ ಜಾನಪದ ಸೇವೆಗಾಗಿ ರಾಜ್ಯ ಪ್ರಶಸ್ತಿಗಳ ಜೊತೆಗೆ ೧೯೮೯ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ದೊರೆತವು. ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಸಿಂಪಿ ಲಿಂಗಣ್ಣನವರು ನಿಧನರಾದದ್ದು ೧೯೯೩ ರ ಮೇ ೫ ರಂದು. ಸಿಂಪಿ ಲಿಂಗಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕುಟುಂಬದ ಸದಸ್ಯರು ಪ್ರಾರಂಭಿಸಿರುವ ‘ಜಾನಪದ ಅಧ್ಯಯನ ವೇದಿಕೆ’ಯಿಂದ ಪ್ರತಿವರ್ಷ ನೀಡುತ್ತಿರುವ ‘ಸಿಂಪಿ ಲಿಂಗಣ್ಣ ಪ್ರಶಸ್ತಿ’.

ಬಾಹ್ಯ ಕೊಂಡಿಗಳು

ಉಲ್ಲೇಖಗಳು

  1. Lal, M. (1992). Encyclopaedia of Indian Literature: Sasay to Zorgot. Sahitya Akademi. p. 4101. ISBN 9788126012213. Retrieved June 25, 2015.