ವಿಷಯಕ್ಕೆ ಹೋಗು

ಇರಾಕಿನ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೨೨:೦೪, ೩೧ ಆಗಸ್ಟ್ ೨೦೧೯ ರಂತೆ 124.123.104.168 (ಚರ್ಚೆ) ಇವರಿಂದ (+ವರ್ಗ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಇರಾಕ್ ದೇಶ ಪಶ್ಚಿಮ ಏಷ್ಯದ ಒಂದು ಪುರಾತನ ಪ್ರದೇಶ. ಇದಕ್ಕೆ ಮೆಸೊಪೊಟೇಮಿಯ (ನದಿಗಳ ನಡುವಣ ನಾಡು) ಎಂಬುದು ಪುರಾತನವಿಟ್ಟ ಅನ್ವರ್ಥನಾಮ. ಸುಮಾರು ನೂರು ವರ್ಷಗಳಿಂದ ಇಲ್ಲಿ ನಡೆದ ಭೂಶೋಧನೆಗಳಿಂದ ಈ ಪ್ರದೇಶ ಅತ್ಯಂತ ಪ್ರಾಚೀನ ನಾಗರಿಕತೆಗಳ ತೌರು ಮಾತ್ರವಲ್ಲದೆ ಇತಿಹಾಸಪೂರ್ವ ಯುಗದಲ್ಲೂ ಆದಿಮಾನವನ ಕಾರ್ಯರಂಗವಾಗಿದ್ದು ನಾಗರಿಕತೆಯ ತೊಟ್ಟಿಲು ಎಂಬ ಬಿರುದನ್ನು ಸಾರ್ಥಕಗೊಳಿಸಿಕೊಂಡಿದೆ.

ಇರಾಕ್ ದೇಶದಲ್ಲಿ ನಡೆದಿರುವ 6,400 ಕ್ಕಿಂತಲೂ ಹೆಚ್ಚಿನ ಭೂಶೋಧನೆಗಳಿಂದ ದೇಶದ ಪುರಾತನ ಚರಿತ್ರೆ ತಿಳಿದುಬರುತ್ತದೆ. ನವಶಿಲಾಯುಗದಲ್ಲಿ ಕೊರೆದ ಮತ್ತು ಬಣ್ಣಗಳಿಂದ ಚಿತ್ರಿತವಾದ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತ ಒಂದೇ ಸ್ಥಳದಲ್ಲಿ ಸ್ಥಿರಜೀವನ ನಡೆಸುತ್ತಿದ್ದ ಜನರ ಸಂಸ್ಕøತಿಯ ಚಿತ್ರ ಟೆಲ್ ಹಸೂನಾದ ಭೂಶೋಧನೆಗಳಿಂದ ಕಂಡು ಬರತ್ತದೆ. ಟೆಲ್ ಹಲಾಫೆ ಭೂಶೋಧನೆಗಳು ವಿವಿಧ ಬಣ್ಣಬಳಿದ ರಮ್ಯವಾಗಿ ಅಲಂಕೃತವಾದ ಮಣ್ಣಿನ ಪಾತ್ರೆಗಳನ್ನೂ ಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದ ಜನರ ಜೀವನವನ್ನು ನಿರೂಪಿಸುತ್ತದೆ.

ತಾಮ್ರ ಶಿಲಾಯುಗದವರಿಗೆ ಅಂದವಾದ ಬಣ್ಣದ ಮಡಕೆಗಳು, ತಾಮ್ರ, ಇತರ ಮೊದಲಾದ ಲೋಹಗಳ ಉಪಯೋಗ ತಿಳಿದಿತ್ತು. ಮೊತ್ತ ಮೊದಲನೆಯ ದೇವಸ್ಥಾನ ಕಟ್ಟಿದ್ದ ಆ ಜನರ ಜೀವನಚಿತ್ರ ಅಲ್ ಉಬೈದ್ ಭೂಶೋಧನೆಗಳಿಂದ ದೊರಕುತ್ತದೆ. ದಕ್ಷಿಣ ಇರಾಕಿನಲ್ಲಿ ಉರುಕ್ ಸಂಸ್ಕøತಿ ಕಾಲದಲ್ಲಿ ದೊಡ್ಡ ದೊಡ್ಡ ದೇವಾಲಯಗಳೂ ಹೊಸನಗರಗಳೂ ಉರುಳೆಯಾಕಾರದ ಮುದ್ರೆಗಳೂ ಚಿತ್ರಲಿಪಿಯೂ ಇದ್ದುದಕ್ಕೆ ಉತ್ಪನ್ನಗಳು ಸಾಕ್ಷಿ ಒದಗಿಸಿವೆ. ಖಫಾಜೆ ಮತ್ತು ಟೆಲ್ ಅಸಮಾರ್ ಭೂಶೋಧನೆಗಳಿಂದ ತಿಳಿದುಬರುವಂತೆ ಪ್ರಾಚೀನರಾಜ್ಯವಂಶದ ಕಾಲದಲ್ಲಿ ದೇಶ ನೀರಾವರಿ ವ್ಯವಸಾಯದಿಂದ ಸಂಪದ್ಯುಕ್ತವಾಗಿದ್ದು, ಇರಾಕ್ ಅಂದಿನ ಜಗತ್ತಿನ ಧಾನ್ಯ ಕಣಜದಂತಿತ್ತು. ಅರ್ ನಗರದ ಆಳರಸರ ಶ್ಮಶಾನ ಶೋಧನೆಗಳಿಂದ ಆ ಕಾಲದ ಐಶ್ವರ್ಯ ಮತ್ತು ಸಂಸ್ಕøತಿಯ ಮಟ್ಟ ತಳಿದು ಬರುತ್ತದೆ (ನೋಡಿ- ಅರ್). ಮಾರಿ, ನೂಜಿ, ದುರ್ ಕುರಿಕಾಲ್ಜುಗಳ ಭೂಶೋಧನೆಗಳಲ್ಲಿ ದೊರೆತ ಜೇಡಿಮಣ್ಣಿನ ಲಿಖಿತ ಫಲಕಗಳಿಂದ ಕ್ರಿ. ಪೂ. 3ನೆಯ ಸಹಸ್ರಾಬ್ಧದ ಇತಿಹಾಸ ತಿಳಿದುಬರುತ್ತದೆ. ಅಸ್ಸೂರ್, ನಿನೆವೆ, ನಿಮ್ರುಸ್, ನಿಪ್ಪೂರ್ ಮುಂತಾದ ಸ್ಥಳಗಳ ಭೂಶೋಧನೆಗಳಿಂದ ಕ್ರಿ.ಪೂ 3 ರಿಂದ 1ನೆಯ ಸಹಸ್ರಾಬ್ದಗಳ ಇರಾಕಿ ಸಂಸ್ಕøತಿಯ ಅನೇಕ ವಿಷಯಗಳು ಗೊತ್ತಾಗಿವೆ. ಇವುಗಳ ಕೆಲವು ವಿವರಗಳನ್ನಿಲ್ಲಿ ಸಂಗ್ರಹಿಸಲಾಗಿದೆ.

ಉತ್ತರ ಇರಾಕಿನ ಬಾರ್ದಾಬಲ್ಕಾ ಎಂಬಲ್ಲಿ ದೊರಕಿರುವ ನಾಜೂಕಿಲ್ಲದ ಕೈ ಕೊಡಲಿ ಮತ್ತು ಕಲ್ಲಿನ ಚಕ್ಕೆಗಳಿಂದ ಮಾಲಡ್ಪಟ್ಟ ಆಯುಧಗಳು ಅತ್ಯಂತ ಪುರಾತನವಾದವು. ಇವನ್ನು ಪೂರ್ವಶಿಲಾಯುಗದ ಆಯುಧಗಳನ್ನು ಹಜರ್‍ಮರ್ದ್ ಮತ್ತು ಷನಿದಾರ್ ಗುಹೆಗಳಲ್ಲಿ ಕಂಡುಬಂದಿವೆ. ಈ ಪದರಗಳಲ್ಲಿ ಹಳೆಯ ಕೈಕೊಡಲಿಗಳು ಹೊಸರೀತಿಯ ಚಕ್ಕೆ ಆಯುಧಗಳ ಜೊತೆಯಲ್ಲಿ ಕಂಡುಬರುವುದರಿಂದ ಇದು ಆದಿ ಮಾನ್ ಸಂಸ್ಕøತಿಯ ಅವಿಚ್ಛಿನ್ನ ಬೆಳವಣಿಗೆಯನ್ನು ಸಾಕ್ಷೀಕರಿಸುತ್ತದೆ. ಹಜರ್‍ಮರ್ದ್, ನಿದಾರ್, ಜರ್ಜಿ ಮತ್ತು ಪಲೇಗ್ರಾವ್ರಾ ಎಂಬೆಡೆಗಳಲ್ಲಿ ಅಂತ್ಯಶಿಲಾಯುಗದ ಕೂಲಗುಳ್ಳ ಚಕ್ಕೆಗಳೂ ಸೂಕ್ಷ್ಮ ಶಿಲಾಯುಗದ ಆಯುಧಗಳ ಬೆರಕೆಯಿದ್ದು ಕಾಲಗಣನೆಯಲ್ಲಿ ಇವು ಯೂರೋಪಿನ ಸೂಕ್ಷ್ಮ ಶಿಲಾಯುಧಗಳಿಗಿಂತಲೂ ಹಳೆಯವಾಗಿರುವುವೆಂದೂ ಪಶ್ಚಿಮದ ಏಷ್ಯದಲ್ಲಿ ಈ ಕಾಲದ ಮಾನವ ಹೆಚ್ಚು ಪ್ರಗತಿಪರನಾಗಿದ್ದನೆಂದೂ ಅಂತ್ಯಶಿಲಾಯುಗದ ಯೂರೋಪಿನ ಸಂಸ್ಕøತಿಗಳು ಕೂಡ ಇಲ್ಲಿ ಆವಿರ್ಭವಿಸಿ ಅನಂತರ ಯೂರೋಪಿಗೆ ಹರಡಿದುವೆಂದೂ ಪಂಡಿತರ ಅಭಿಪ್ರಾಯ

ಇದರ ಮುಂದಿನ ಸಂಸ್ಕøತಿಗಳ ಅವಶೇಷಗಳು ಇರಾಕಿನಲ್ಲಿ ಹೆಚ್ಚಾಗಿ ದೊರೆತಿಲ್ಲ. ಕೇವಲ ಷನಿದಾರ್ ಗುಹೆಗಳಲ್ಲಿ ಮಾತ್ರ ನಾಗರಿಕತೆಯ ಉಗಮಕಾಲದವರೆಗೂ ಮಾನವ ಅವಿಚ್ಛಿನ್ನವಾಗಿ ವಾಸಿಸಿದ ಮಾಹಿತಿಗಳು ದೊರಕಿವೆ. ಇಲ್ಲಿನ ತಳಮಟ್ಟದ ಪದರಗಳಲ್ಲಿ ಮೊದಮೊದಲು ನೂತನಶಿಲಾಯುಗದ ಅವಶೇಷಗಳೂ ಮೇಲ್ಭಾಗದಲ್ಲಿ ಚರಿತ್ರ ಪೂರ್ವ ಅಕ್ಷರಸ್ಥನಾಗರಿಕತೆಯ ಕುರುಹುಗಳೂ ದೊರಕಿವೆ.

ನೂತನ ಶಿಲಾಯುಗದಲ್ಲಿ ಇರಾಕಿನಲ್ಲಿ ಹೆಚ್ಚಿನ ಅಭಿವೃದ್ಧಿಯ ಮಾಹಿತಿಗಳು ದೊರಕುತ್ತವೆ. ಪಶ್ಚಿಮ ಏಷ್ಯ ಪ್ರದೇಶಗಳಲ್ಲಿ ಮಾನವನ ಪುರೋಗಾಮಿತ್ವ ಮತ್ತು ನಾಗರಿಕತೆಯ ಬೆಳವಣಿಗೆಯ ಮೂಲಾಧಾರವಾದ ಆಹಾರೋತ್ಪತ್ತಿಯ ಉದ್ಘಾಟನೆ ನಡೆದದ್ದು ನಿರ್ವಿವಾದ ಸಂಗತಿ. ಇರಾಕಿನ ಚಾವಿ ಷಮಿಷನಿದಾರ್, ಕರೀಮ್ ಷಾಹಿರ್, ಮ್ಲಾಫಾತ್ ಮುಂತಾದ ನೆಲೆಗಳಲ್ಲಿ ಈ ಸಂಸ್ಕøತಿಯ ಅತ್ಯಂತ ಪ್ರಾಚೀನ ಅವಶೇಷಗಳು ದೊರಕಿವೆ. ಇವು ಸುಮಾರು ಕ್ರಿ. ಪೂ. 9000 ವರ್ಷಗಳಷ್ಟು ಹಳೆಯವೆಂದು ನಿರ್ಣಯಿಸಲಾಗಿದೆ. ಈ ಸಂಸ್ಕøತಿಯಲ್ಲಿ ನಯಮಾಡಿದ ಕಲ್ಲಿನ ಕೊಡಲಿಗಳೂ ಅಗೆಯುವ ಕೋಲಿನ ಭಾರದಗುಂಡುಗಳೂ ಅರೆಯುವ ಕಲ್ಲುಗಳೂ ಒರಟಾಗಿ ಕಟ್ಟಿದ ಗುಡಿಸಲ ಅವಶೇಷಗಳೂ ಸಾಕುಪ್ರಾಣಿಯಾದ ಆಡು, ಕುರಿ, ಹಂದಿ ಮತ್ತು ದನಗಳ ಅವಶೇಷಗಳೂ ಸಿಕ್ಕಿವೆಯಾದರೂ ಬೇಟೆಯೇ ಆಹಾರೋತ್ಪತ್ತಿಯ ಮುಖ್ಯ ವಿಧಾನವಾಗಿತ್ತೆಂದು ಹೇಳಲಾಗಿದೆ. ವ್ಯವಸಾಯವನ್ನೇ ಮುಖ್ಯ ಆಹಾರೋತ್ಪತ್ತಿಮಾರ್ಗವಾಗುಳ್ಳ ಜನ ಗ್ರಾಮಗಳಲ್ಲಿ ನೆಲೆನಿಂತು ಉತ್ತರದ ಕುರ್ದಿಸ್ತಾನ್ ಬೆಟ್ಟಗಳ ಬುಡದಲ್ಲಿರುವ ಕಾಲಾತ್ ಚಾರ್ಮೋ ಎಂಬಲ್ಲಿ ದೊರಕಿವೆ. ಇಲ್ಲಿನ ಕ್ರಮಾಗತ 12 ಪದರಗಳಲ್ಲಿ ದೊರಕುವ ಸಾಕ್ಷ್ಯಗಳಲ್ಲೂ ನೂತನ ಶಿಲಾಯುಗಕ್ಕೆ ಸೇರಿದ್ದುವಾದರೂ ಆ ಜನಗಳಿಗೆ ಇನ್ನೂ ಮಣ್ಣಿನ ಪಾತ್ರೆಗಳನ್ನು ಮಾಡುವ ಕಲೆ ಗೊತ್ತಿರಲಿಲ್ಲ. ಕಲ್ಲಿನ ಆಸ್ತಿಭಾರದ ಮೇಲೆ ಮಣ್ಣಿನಿಂದ ಕಟ್ಟಿದ ಅನೇಕ ಆಯತಾಕಾರದ ಕೊಠಡಿಗಳಿಂದ ಕೂಡಿದ ಮನೆಗಳು, ಗಾರ್ಕಿ ಗೋದಿಗಳ ವ್ಯವಸಾಯ ಇವು ಮೊದಲಿನ ಹಂತದಲ್ಲೂ ಸಾಕುಆಡು, ಕುರಿ, ಹಂದಿಗಳು ಮೇಲಿನ ಪದರಗಳಲ್ಲೂ ದೊರಕಿರುವುದು ಈ ಸಂಸ್ಕøತಿಯ ಮುನ್ನಡೆಗೆ ಸಾಕ್ಷಿ. ಚಕಮಕಿ ಕಲ್ಲಿನಿಂದ ಮತ್ತು ಜ್ವಾಲಾಮುಖಿಯಿಂದ ಉತ್ಪನ್ನವಾದ ಅಬ್ಸಿಡಿಯನ್ ಗಾಜಿನಿಂದ ಮಾಡಿದ ಸೂಕ್ಷ್ಮ ಶಿಲಾಯುಧಗಳು, ನಯಮಾಡಿದ ಕಲ್ಲಿನ ಕೊಡಲಿಗಳು, ಬಾಚಿಗಳು, ಮಣಿಯ ಕೈಗಡಗಳು ಮತ್ತು ಅತಿ ಕೌಶಲದಿಂದ ಮಾಡಲಾದ ಕಲ್ಲಿನ ಪಾತ್ರೆಗಳು ಆಗ ಬಳಕೆಯಲ್ಲಿದ್ದವು. ಮಣ್ಣಿನಲ್ಲಿ ಮಾಡಿದ ಬೆತ್ತಲೆ ಗರ್ಭಿಣಿ ಗೊಂಬೆಗಳು ಪೂರ್ವಶಿಲಾಯುಗದಿಂದಲೂ ಈ ಜನಗಳಲ್ಲಿ ಬೆಳೆದುಬಂದ ಮಾಂತ್ರಿಕ ಹಾಗೂ ಬಹುಸಂತಾನ ಪಂಥದ ಕುರುಹುಗಳಾಗಿವೆ. ಕಡೆಕಡೆಗೆ ಕೈಯಲ್ಲಿ ಮಾಡಿದ ಮಣ್ಣಿನ ಮಡಕೆಗಳೂ ಬಳಕೆಗೆ ಬಂದಿದ್ದವು. ಈ ಸಂಸ್ಕøತಿ ಕ್ರಿ. ಪೂ. 6750ರಷ್ಟು ಹಳೆಯದೆಂದು ಇಂಗಾಲ-14ರ ಪ್ರಯೋಗದಿಂದ ಗುರುತಿಸಲಾಗಿದೆ. ಇವರು ಹೊರಗಿನಿಂದ ಬಂದಿರಬಹುದೆಂಬುದಕ್ಕೆ ಅನೇಕ ಸೂಚ್ಯ ಆಧಾರಗಳಿವೆ.

ಇದರ ಮುಂದಿನ ಹಂತವೂ ಉತ್ತರ ಇರಾಕಿನ ಟೈಗ್ರಿಸ್ ನದೀತೀರದಲ್ಲಿರುವ ಹಸ್ಸುನಾ ಎಂಬೆಡೆಯಲ್ಲಿ ದೊರಕಿದೆ. ಇದೇ ರೀತಿಯ ಮಾಹಿತಿಗಳು ಮಟಾರ್ರಾನಿನೆವ್ಹೇ, ಅರ್ಪಾಚಿಯಾ ಹಾಗೂ ಗಾವ್ರಾ ಎಂಬ ಎಡೆಗಳಲ್ಲಿ ದೊರಕಿವೆ. ಚಕಮಕಿ ಕಲ್ಲಿನಾಯುಧಗಳು, ಅಗೆಯುವ ಗುದ್ದಲಿ ಮತ್ತು ಅರೆಯುವ ಕಲ್ಲಿನ ಉಪಕರಣಗಳನ್ನು ಈ ಬೇಟೆಗಾರ ಜನ ಉಪಯೋಗಿಸುತ್ತಿದ್ದರು. ಅವರ ಹಿಂದುಳಿದ ವ್ಯವಸಾಯದ ರೀತಿಗಳು, ವ್ಯವಸಾಯಾತ್ಮಕ ಸಂಸ್ಕøತಿಯ ಕಡೆಗೆ ಕ್ರಮಕ್ರಮವಾಗಿ ಅವರ ಮುನ್ನಡೆ, ಸ್ವಲ್ಪಮಟ್ಟಿನ ಅಲೆಮಾರಿತನ-ಇವು ಈ ಸಂಸ್ಕøತಿಯ ಲಕ್ಷಣಗಳೆಂದು ಹೇಳಬಹುದು. ಅವರ ಮಡಕೆ ಕುಡಿಕೆಗಳು ಸಾಮಾನ್ಯವಾಗಿ ಅಲಂಕಾರ ರಹಿತವಾಗಿದ್ದವು. ಕೆಂಪು, ಕಂದು, ಕಪ್ಪು; ಬಣ್ಣಗಳ ಒರಟು ಚಿತ್ರಗಳಿರುವ ಮಡಕೆಗಳೂ ಕೆಲವು ಸಿಕ್ಕಿವೆ. ಇವಲ್ಲದೆ ಮೂಲವಸ್ತು ಒರಟಾದ ಕಪ್ಪು ಮಣ್ಣು. ಶಿಲಾಜಿತು (ಬಿಟ್ಯೂಲಮೆನ್) ಮತ್ತು ಸುಣ್ಣದಿಂದ ಪಕ್ಕಗಳನ್ನೂ ತಳಭಾಗವನ್ನೂ ಹದಮಾಡಿದ್ದ ಹಳ್ಳಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಕಟ್ಟಡಗಳನ್ನು ಕಟ್ಟಲು ಹಸಿ ಇಟ್ಟಿಗೆಗಳನ್ನು ಬಳಸುತ್ತಿದ್ದರು. ಬಿದಿರು ಹಣಿಗೆ ಮತ್ತು ಬಟ್ಟೆ ನೇಯ್ಗೆ ಕ್ರಮಗಳು ಇವರಿಗೆ ತಿಳಿದಿದ್ದಿರಬಹುದು. ಮಕ್ಕಳ ಶವಗಳನ್ನು ಜಾಡಿಗಳಲ್ಲೂ ವಯಸ್ಕರ ಶವಗಳನ್ನು ಹಳ್ಳಗಳಲ್ಲೂ ಹೂಳುತ್ತಿದ್ದರು. ಈ ಸಂಸ್ಕøತಿಯ ಕಾಲ ಕ್ರಿ. ಪೂ. 5000-4000. ಇದರ ಮುಂದಿನ ಹಲಾಫ್ ಸಂಸ್ಕøತಿಯ ಜನ ಕೈಯಲ್ಲಿ ಮಾಡಿದ, ವಿವಿಧ ಆಕಾರದ, ವರ್ಣಚಿತ್ರಗಳಿಂದ ಕೂಡಿದ ಮಡಕೆಗಳನ್ನು ಬಳಸುತ್ತಿದ್ದರು. ಇವರಿಗೆ ತಾಮ್ರದ ಕೆಲವು ಅಲಂಕರಣ ಸಾಮಗ್ರಿಗಳ ಪರಿಚಯವಿದ್ದರೂ ಇವರ ಆಯುಧೋಪಕರಣಗಳು ಕಲ್ಲಿನವೇ ಆಗಿದ್ದವು. ಕಲ್ಲಿನ ಗುಂಡಿ ಮುದ್ರೆಗಳೂ (ಬಟನ್ ಸೀಲ್ಸ್) ಮಣಿಗಳೂ ಯಂತ್ರಗಳೂ (ಆಮ್ಯುಲೆಟ್ಸ್) ಮತ್ತು ಸಣ್ಣ ಪಾತ್ರೆಗಳೂ ಬಳಕೆಯಲ್ಲಿದ್ದವು. ಇತರ ವಿಷಯಗಳಲ್ಲಿ ಹಳೆಯ ಸಂಸ್ಕøತಿಯ ಚಿಹ್ನೆಗಳೇ ಕಂಡು ಬಂದರೂ ಅವು ಹೆಚ್ಚು ಮುಂದುವರಿದಿದ್ದವು. ಮೇಲೆ ಹೇಳಿದ ಸಂಸ್ಕøತಿಗಳೆಲ್ಲವೂ ಉತ್ತರ, ಮಧ್ಯ ಇರಾಕಿನಲ್ಲಿ ಮಾತ್ರ ನೆಲೆಸಿದ್ದವು. ದಕ್ಷಿಣ ಪ್ರದೇಶ ಚೌಗುಪ್ರದೇಶವಾಗಿದ್ದು ಜನವಸತಿಗೆ ಅನುಕೂಲವಾಗಿರಲಿಲ್ಲ. ಸುಮಾರು ಆ ಕಾಲಕ್ಕೆ ಯೂಫ್ರೆಟಿಸ್ ಟೈಗ್ರಿಸ್ ನದಿಗಳು ಒತ್ತಳ್ಳಿದ ಮೆಕ್ಕಲುಮಣ್ಣಿನ ಹರಡುವಿಕೆಯಿಂದ ನೆಲ ವಾಸಯೋಗ್ಯವಾದದ್ದಲ್ಲದೆ ಬಹಳ ಫಲವತ್ತಾದ ಭೂಮಿಯಾಗಿ ಹೆಚ್ಚು ಬೆಳೆ ಕೊಡುವಂತಾಯಿತು. ಈ ಸುಮಾರಿಗೆ ಪ್ರಾರಂಭವಾದ ತಾಮ್ರಶಿಲಾಯುಗದ ಸಂಸ್ಕøತಿಯ ಅವಶೇಷಗಳು ಇರಾಕಿನ ಎಲ್ಲೆಡೆಗಳಲ್ಲೂ ದೊರಕಿವೆ. ಉಬೈದ್ ಸಂಸ್ಕøತಿಯ ಮೊದಲ ಹಂತದಲ್ಲಿ ವ್ಯವಸಾಯ ಸುಧಾರಿತವಾಯಿತು. ನೀರಾವರಿ ಕಾಲುವೆಗಳಿಂದ ಉತ್ತಮ ಬೆಳೆಗಳನ್ನು ತೆಗೆಯುತ್ತಿದ್ದರು. ಲೋಹಗಳ ಕೆಲಸ ಉತ್ತಮಮಟ್ಟದ್ದಾಗಿ ತಾಮ್ರದ ಆಯಧೋಪಕರಣಗಳು ಮಾತ್ರವಲ್ಲದೆ ಮನೆಬಳಕೆ ಪಾತ್ರೆಗಳೂ ರೂಢಿಗೆ ಬಂದಿದ್ದವು. ತಮಗೆ ಅವಶ್ಯಕವಾದ ಕಚ್ಚಾಪದಾರ್ಥಗಳನ್ನು ದೂರ ದೇಶಗಳಿಂದ ವ್ಯಾಪಾರಮುಖೇನ ತರಿಸಿಕೊಳ್ಳುತ್ತಿದ್ದರು. ತಮ್ಮ ಬೆಳೆಗಳನ್ನು ಚಕಮಕಿಕಲ್ಲಿನ ಹಲ್ಲುಗಳಿಂದ ಸಜ್ಜಾದ ಕುಡುಗೀಲುಗಳಿಂದ ಕುಯ್ಯುತ್ತಿದ್ದರು. ಹುಲ್ಲು ಮತ್ತು ಮಣ್ಣಿನ ಗೋಡೆಗಳನ್ನೂ ನೆಲವನ್ನೂ ಸಗಣಿಯಿಂದ ಹದಗೊಳಿಸುತ್ತಿದ್ದರು. ಕೈಯಲ್ಲಿ ಮಾಡಿದ ಮಡಕೆಗಳನ್ನು ವಿವಿಧ ಬಣ್ಣಗಳ ಜ್ಯಾಮಿತಿಕ ಆಕಾರಗಳಿಂದ ಚಿತ್ರಿಸುತ್ತಿದ್ದರು. ವ್ಯವಸಾಯೋತ್ಪನ್ನವೇ ಮುಖ್ಯ ಆಹಾರವಾದರೂ ಬೇಟೆ ಮೀನುಗಾರಿಕೆಗಳೂ ರೂಢಿಯಲ್ಲಿದ್ದವು. ಗ್ರಾಮಜೀವನದ ಜೊತೆಗೆ ನಗರ ಜೀವನವೂ ಈ ಕಾಲದಲ್ಲೇ ಪ್ರಾರಂಭವಾದ ಚಿಹ್ನೆಗಳು ಕಂಡುಬರುತ್ತವೆ. ಈ ಜನ ಮೊತ್ತಮೊದಲಿಗೆ ಸಾಮಾಜಿಕ ಜೀವನದ ಅಂಗವಾಗಿ ದೇವಾಲಯಗಳನ್ನು ನಿರ್ಮಿಸಿದರು. ಅಬು ಷಹರೀನ್ ಎಂಬಲ್ಲಿ 13 ಸಲ ಪುನರ್‍ನಿರ್ಮಿತವಾದ ದೇವಾಲಯವೊಂದರ ಅವಶೇಷಗಳು ದೊರಕಿವೆ. ಮೊದಲಿಗೆ ಈ ದೇವಾಲಯದಲ್ಲಿ ಆಯತಾಕಾರದ ಒಂದು ಕೊಠಡಿ, ಅದರ ಒಂದು ಮೂಲೆಯಲ್ಲಿ ಬಾಗಿಲು ವೇದಿಕೆ ಮತ್ತು ಬಲಿಪೀಠಗಳಿದ್ದು ಕ್ರಮೇಣ ಮಧ್ಯಕೋಣೆಯ ಎರಡು ಪಾಶ್ರ್ವಗಳಲ್ಲಿ ಮತ್ತೆರಡು ಕೋಣೆಗಳು ನಿರ್ಮಿತವಾದವು. ಈ ಕಾರಣಗಳಿಂದ ಉಬೈದ್ ಜನ ಇರಾಕಿನ ನಾಗರಿಕತೆಯ ಆದ್ಯಪ್ರವರ್ತಕರೆನ್ನಬಹುದು. ಈ ಉಬೈದ್ ಸಂಸ್ಕøತಿಯ ಅಸ್ತಿಭಾರದ ಮೇಲೆ ಮುಂದಿನ ಹಂತ್ವಾದ ಉರಕ್ ಸಂಸ್ಕøತಿ ಬೆಳೆಯಿತು. ಪ್ರಾಯಶಃ ಅನಟೋಲಿಯ ಪ್ರಾಂತ್ಯದಿಂದ ಆಮದಾದ, ಗಟ್ಟಿ ಮುಟ್ಟಾದ, ವರ್ಣಚಿತ್ರಗಳಿಂದ ಹೊಸರೀತಿಯ ಮಡಕೆಗಳು ಬಳಕೆಗೆ ಬಂದವು. ಇವು ಚಕ್ರಯಂತ್ರದಿಂದ ತಯಾರಾದವು. ವಾಸ್ತುಶಿಲ್ಪಕಲೆ ಆಗ ಚೆನ್ನಾಗಿ ಬೆಳೆಯಿತು. ಆ ಕಾಲದ ಅತ್ಯುತ್ತಮವಾದ ಶ್ವೇತದೇವಾಲಯ ಎರಡು ಪಟ್ಟಣದಲ್ಲಿ ನಿರ್ಮಿತವಾಯಿತು. 70 ಮೀ. ಉದ್ದ 66 ಮೀ. ಅಗಲ ಮತ್ತು 13 ಮೀ. ಎತ್ತರದ ಜಗತಿಯ ಮೇಲಿದ್ದ ಈ ದೇವಾಲಯದ ವಿಸೀರ್ಣ 22.3 ( 17.5 ಮೀ. ಇರಾಕೀ ಸಂಸ್ಕøತಿಯ ವಿಶಿಷ್ಟಲಕ್ಷಗಳಲ್ಲೊಂದಾದ ಜಿಗುರೇಟ್ ಅಥವಾ ಪವಿತ್ರ ಶಿಖರ ಈ ರೀತಿ ಹುಟ್ಟಿಕೊಂಡಿತು. ಇತರ ವಿಶಿಷ್ಟ ಕುರುಹುಗಳಾದ ಉರುಳೆಯಾಕಾರದ ಮುದ್ರೆ ಮತ್ತು ಲೇಖನಕಲೆಗಳೂ ಈ ಕಾಲದಲ್ಲೇ ಪ್ರಾರಂಭವಾದಂತೆ ಕಂಡುಬರುತ್ತದೆ.

ಮುಂದಿನ ಹಂತವಾದ ಜಿಮೆಡೆಟ್ ನಾಸ್ರ್ ಸಂಸ್ಕøತಿಗೆ ಲೇಖನಪೂರ್ವ ಸಂಸ್ಕøತಿಯೆಂದೂ ಹೆಸರಿಟ್ಟಿದ್ದಾರೆ. ದೇವಾಲಯಕ್ಕೆ ಅಭಿವೃದ್ಧಿಹೊಂದಿ ಹಂತ ಹಂತವಾದ ಜಗತಿ ಅಥವಾ ತಾಜಾ ಜಿಗುರೇಟ್ ಬೆಳೆದು ಬಂದು ದೊಡ್ಡ ಸ್ತಂಭಗಳಿಂದೊಡಗೂಡಿದ ಮೂರು ಕೋಣೆಗಳುಳ್ಳ ದೇವಾಲಯಗಳು ರೂಢಿಗೆ ಬಂದವು. ಗೋಡೆಗಳಿಗೆ ಸುಟ್ಟ ಮಣ್ಣಿನ, ಬಣ್ಣಬಣ್ಣದ ಶಂಕುವಿನಾಕಾರದ ಕೊಳವೆಗಳ ಅಲಂಕಾರ ಬಳಕೆಗೆ ಬಂತು. ಇವು ಅಲಂಕರಣದ ಜೊತೆಗೆ ಭದ್ರತೆಯನ್ನೂ ಹೆಚ್ಚಿಸಿದವು. ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳು, ಭವ್ಯ ಶಿಲ್ಪಕೃತಿಗಳು ಮತ್ತು ಚಿತ್ರಲಿಪಿ, ದಶಮಾಂಶ ಮತ್ತು ಷಷ್ಠ್ಯಂಶ ಗಣಪದ್ಧತಿಗಳು ಬಳಕೆಗೆ ಬಂದವು. ಈ ಶಿಲ್ಪಗಳಿಗೆ ಶಂಖದ ಕಣ್ಣುಗುಡ್ಡೆಗಳನ್ನಿಡುತ್ತಿದ್ದರು. ಭೂ ಸಾರಿಗೆ ರೂಢಿಗೆ ಬಂತು. ದೇವಾಲಯ ಕೇಂದ್ರಸ್ಥವಾದ ನಾಗರಿಕತೆ ಸರ್ವತೋಮುಖವಾಗಿ ಬೆಳೆದು ಕ್ರಿ. ಪೂ. 3ನೆಯ ಸಹಸ್ರಮಾನದ ಆದಿಯಲ್ಲಿ ಅದು ಇನ್ನೂ ಹೆಚ್ಚಿನ ಮಟ್ಟ ಮುಟ್ಟಿತು. (ಬಿ.ಕೆ.ಜಿ.) ಕ್ರಿ. ಪೂ. 3000 ರಿಂದ ಕ್ರಿ. ಶ. 600 ರವರೆಗೆ : ಕ್ರಿ. ಪೂ. 3ನೆಯ ಸಹಸ್ರ ಮಾನದ ಕೆಲವು ಲಿಖಿತ ದಾಖಲೆಗಳು ಇರಾಕಿನ ಚರಿತ್ರೆಯ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತವೆ. ಇವುಗಳ ಪ್ರಕಾರ ಇರಾಕಿನಲ್ಲಿ ಯಾವುದೋ ಕಾಲದಲ್ಲಿ ಬಂದ ಒಂದು ಮಹಾಪೂರ ಹಿಂದಿನ ರಾಜವಂಶಗಳ ಬಗ್ಗೆ ಈ ದಾಖಲೆಗಳಲ್ಲಿ ದೊರಕುವ ವಿಷಯ ನಂಬಲರ್ಹವಲ್ಲ. ಆದರೆ ಆ ಪ್ರವಾಹಾನಂತರದ ವಿಷಯಗಳ ಬಗ್ಗೆ ಸಿಗುವ ಹೇಳಿಕೆಗಳಲ್ಲು ಪೂರ್ಣವಾಗಿ ನಿರ್ದಿಷ್ಟವಾಗಿಲ್ಲವಾದರೂ ಹೆಚ್ಚು ಕಡಿಮೆ ಸರಿಯಾಗಿದ್ದು, ಭೂಶೋಧನೆಗಳಲ್ಲಿ ದೊರಕಿರುವ ಅನೇಕ ಸಾಮಗ್ರಿಗಳ ಸಹಾಯದಿಂದ ಒಂದು ಸ್ಪಷ್ಟಚಿತ್ರವನ್ನು ಕಲ್ಪಸಿಕೊಳ್ಳಲು ಸಹಾಯಮಾಡುತ್ತವೆ. ಪ್ರವಾಹದ ಅನಂತರ ಅನೇಕ ನಗರರಾಜ್ಯಗಳು ದಕ್ಷಿಣ ಇರಾಕಿನಲ್ಲಿ (ಸುಮೇರಿಯ) ಸ್ಥಾಪಿತವಾದವು. ಅವುಗಳಲ್ಲಿ ಕ್ರಿ.ಶ. ಎರೆಕ್ ಮತ್ತು ಅರ್ ಮುಖ್ಯವಾದವು. ಈ ನಗರರಾಜ್ಯಗಳ ಪ್ರಭಾವ ಬಹುಮಟ್ಟಿಗೆ ಆಯಾ ನಗರಗಳಿಗೆ ಮಾತ್ರ ಸೀಮಿತವಾಗಿರುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ಒಂದೆರೆಡು ನಗರರಾಜ್ಯಗಳು ಮಿಕ್ಕವುಗಳ ಮೇಲೆ ಮೇಲ್ಗೈಯನ್ನು ಸಾಧಿಸಿಕೊಂಡಿದ್ದುದೂ ಕಂಡುಬರುತ್ತದೆ. ಕ್ರಿ.ಪೂ. 2350ರ ಸುಮಾರಿನಲ್ಲಿ ಅಕ್ಕಾಡಿನ ಸಾರಗಾನ್ ಈ ನಗರರಾಜ್ಯಗಳನ್ನೆಲ್ಲ ಮೂಲೆಗೊತ್ತಿ ದೊಡ್ಡ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದೆ. (ನೋಡಿ- ಅಕ್ಕಾಡ್) ಈ ಸಾಮ್ರಾಜ್ಯ ಅನತಿಕಾಲದಲ್ಲಿ ಅನೇಕ ಮೆಲಜನರ ದಾಳಿಗಳಿಂದಾಗಿ ಶಿಥಿಲಗೊಂಡು, ಇರಾಕ್ ಪುನಃ ಸಣ್ಣ ರಾಜ್ಯಘಟಕಗಳಾಗಿ ಹಂಚಿಹೋಯಿತು. ಈ ಸಂದರ್ಭದಲ್ಲಿ ಇಸಿನ್ ಮತ್ತು ಲಾಸ ಎಂಬ ಎರಡು ನಗರಗಳಲ್ಲಿದ್ದ ರಾಜ್ಯಪಾಲ ಕುಲಗಳು ಬಹಳ ಪ್ರಭಾವ ಬೆಳೆಸಿಕೊಂಡಿದ್ದವು.

ಕ್ರಿ. ಪೂ. 18ನೆಯ ಶತಮಾನದಿಂದ ಇರಾಕಿನ ಬ್ಯಾಬಿಲೋನಿಯ ಒಂದು ಮುಖ್ಯ ಸ್ಥಾನವನ್ನಾಕ್ರಮಿಸಿತು. ಇಲ್ಲಿ ಆಳಿದವರಲ್ಲಿ ಪ್ರಸಿದ್ಧ ನ್ಯಾಯವಾದಿ ಹಮ್ಮುರಬಿ (1728-1686) ಮತ್ತು ಅವನ ಮಗ ಶಂಸುಲಿನ್ ಮುಖ್ಯರು. ಆದರೆ ಬ್ಯಾಬಿಲೋನಿಯ ಸಾಮ್ರಾಜ್ಯ ಸಹ ಕ್ರಿ. ಪೂ. 16ನೆಯ ಶತಮಾನದಲ್ಲಿ ಹೆವ್ವೈವ್ ಜನರ ದಾಳಿಯಿಂದ ನಾಶವಾಗಿ, ಈ ಪ್ರದೇಶ ಇಂಡೊ-ಯೂರೋಪಿಯನ್ ಜನಾಂಗಕ್ಕೆ ಸೇರಿದ ಕ್ಯಾಸೈಟ್ ಕುಲದ ಅರಸರ ಕೈಸೇರಿತು.

ಇದೇ ಸುಮಾರಿನಲ್ಲಿ ಉತ್ತರ ಇರಾಕಿನ ಅಶುರ್ ಎಂಬಲ್ಲಿ ಒಂದು ರಾಜವಂಶದವರು ಪ್ರವರ್ಧಮಾನಕ್ಕೆ ಬರುತ್ತಿದ್ದರು. ಈ ರಾಜವಂಶ ಮೊದಮೊದಲು ಅಷ್ಟೇನು ಪ್ರಭಾವಶಾಲಿಯಾಗಿರದಿದ್ದರೂ ಮುಂದೆ ಆ ಕುಲದ ಅದದ್ ನಿಕರಿ (ಕ್ರಿ. ಪೂ. 14ನೆಯ ಶತಮಾನ) ಮುಂತಾದ ಶೂರರ ಸಾಹಸಗಳಿಂದಾಗಿ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿತು. ಇದೇ ಪ್ರಸಿದ್ಧವಾದ ಅಸ್ಸೀರಿಯನ್ ಸಾಮ್ರಾಜ್ಯ. ತಿಗಲಕ್ ಪಲೆಸರ್, ಶಲ್ಮನೆಸ್ಸರ್, ಅಶುರ್ ಬನಿಪಾಲ್ ಮುಂತಾದವರು ಈ ವಂಶದ ಪ್ರಖ್ಯಾತ ದೊರೆಗಳು. ಸುಮಾರು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಪ್ರಭಾವಶಾಲಿಯಗಿದ್ದ ಈ ಸಾಮ್ರಾಜ್ಯ ಕ್ರಿ. ಪೂ. 606ರಲ್ಲಿ ಮೀಡರ ದಾಳಿಯಿಂದ ಅಳಿಸಿಹೋಯಿತು. ಅನಂತರ ಪುನಃ ಬ್ಯಾಬಿಲಾನನ್ನು ರಾಜ್ಯ ಕೇಂದ್ರವಾಗಿ ಹೊಂದಿದ್ದ ಕಾಲ್ಡೀಯ ಸಾಮ್ರಾಜ್ಯ ಹಟ್ಟಿ ಕ್ರಿ. ಪೂ. 539ರಲ್ಲಿ ಪರ್ಷಿಯದ ಅಖಮೇನಿಯನ್ ವಂಶದ ಸೈರಸ್ನ ಕೈವಶವಾಗುವವರೆಗೆ ಮುಂದುವರೆಯಿತು. ಕ್ರಿ. ಪೂ. 539ರಂದು ಸುಮಾರು ಹನ್ನೊಂದು ಶತಮಾನಗಳ ಕಾಲ ಇರಾಕ್ ಪರಕೀಯರ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿ. ಪೂ. 330ರಲ್ಲಿ ಅಖಮೇನಿಯನ್ನರಿಂದ ಮ್ಯಾಸಿಡೋನಿಯದ ಅಲೆಕ್ಸಾಂಡರ್ ಇರಾಕನ್ನು ಸ್ವಾಧೀನಪಡಿಸಿಕೊಂಡ. ಅನಂತರ ಕ್ರಿ. ಪೂ. ಸು. 2ನೆಯ ಶತಮಾನದ ಕೊನೆಯವರೆಗೆ ಸೆಲ್ಯೂಕೀ ಗ್ರೀಕರ, ಅನಂತರ ಕ್ರಿ. ಶ. 3ನೆಯ ಶತಮಾನದ ಆದಿಭಾಗದವರೆಗೆ ಪಾರ್ಥಿಯನ್ ಪರ್ಷಿಯನ್ನರ, ಆಮೇಲೆ ಸಸ್ಸಾನೀಯ ಪರ್ಷಿಯನ್ನರ ವಶದಲ್ಲಿದ್ದ ಇರಾಕ್ ಕ್ರಿ. ಶ. 637ರ ಸುಮಾರಿನಲ್ಲಿ ದೇಶೀಯ ಇಸ್ಸಾಮೀ ಸಾಮ್ರಾಜ್ಯದ ಸ್ಥಾಪನೆಯಿಂದಾಗಿ ಸ್ವತಂತ್ರವಾಯಿತು.

ಏಳನೆಯ ಶತಮಾನದಿಂದ: ಬೈಜಾಂಟಿಯಂ ಮತ್ತು ಪರ್ಷಿಯ ಸಾಮ್ರಾಜ್ಯಗಳ ಘರ್ಷಣೆಗಳ ಪರಿಣಾಮವಾಗಿ ಉಂಟಾದ ಕಲಹಗಳನ್ನು ನಿಲ್ಲಿಸಿ ಎಲ್ಲ ಇರಾಕಿಗಳು ಮತ್ತು ಅರಬರು ಒಂದುಗೂಡಲು ಮಹಮ್ಮದ್ ಪೈಗಂಬರ್ ಮತಪ್ರಚಾರ ಸಹಾಯಮಾಡಿತು. ಮಹಮ್ಮದನ ಮರಣಾನಂತರ ಅವನ ಸ್ಥಾನಕ್ಕೆ ಯಾರು ಬರಬೇಕೆಂಬ ವಿಷಯದಲ್ಲಿ ವಿವಾದ ಬಂತು. ಅಳಿಯನಾದ ಆಲಿಯ ಪರವಾಗಿ ವಾದಿಸಿದವರು ಷೀಯ ಪಂಥದವರಾದರು. ವಿರೋಧಿಸಿದವರು ಸುನ್ನಿ ಪಂಥದವರಾದರು. ಇವರ ಕಲಹ ಐಕ್ಯಮತ್ಯಕ್ಕೆ ಭಂಗ ತರುವ ಹಾಗಾಯಿತು. ಷೀಯಗಳು ಗೆದ್ದು ಅಬುಬೇಕರನ್ನು ಕಲೀಫನನ್ನಾಗಿ ಆರಿಸಿದರು. ಪರ್ಷಿಯದ ಜನರೂ ಷೀಯಗಳಾಗಿ, ಐರೋಪ್ಯ ರಾಷ್ಟ್ರಗಳಾದ ಗಾಲ್ ಸ್ಪೇನ್ಗಳನ್ನು ಜಯಿಸಿ, ಅನೇಕ ರಾಷ್ಟ್ರಗಳ ಆಕ್ರಮಣ ಮಾಡಿ, ಆಫ್ರಿಕದ ಬಹುಭಾಗವನ್ನು ಸ್ವಾಧೀನಪಡಿಸಿಕೊಂಡು ಇಸ್ಲಾಂ ಮತಕ್ಕಾಗಿ ದೊಡ್ಡ ಸಾಮ್ರಾಜ್ಯವನ್ನು ಗಳಿಸಿದರು. ಅತ್ಯಲ್ಪ ಕಾಲದಲ್ಲಿ ಅಷ್ಟು ದೊಡ್ಡ ರಾಜ್ಯವನ್ನು ಕಟ್ಟಲು ಅವರಿಗೆ ಸಾಧ್ಯವಾದದ್ದಕ್ಕೆ ಎರಡು ಕಾರಣಗಳನ್ನು ಹೇಳಬಹುದು. ಒಂದು-ತಾವು ಅವಲಂಬಿಸಿದ ಹೊಸ ಮತಧರ್ಮದ ಬಗ್ಗೆ ಅವರಿಗಿದ್ದ ಆಸಕ್ತಿ. ಎರಡು-ಅನ್ಯ ರಾಷ್ಟ್ರಗಳ ದೌರ್ಬಲ್ಯ. ಬಾಗ್‍ದಾದ್ ನಗರ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಯಾಯಿತು. ಆಳಿದ ಅತಿ ಮುಖ್ಯ ಕಲೀಫರಲ್ಲಿ ಮೂವರು ಮೂರು ಖಂಡಗಳನ್ನಾವರಿಸಿಕೊಂಡ ಸಾಮ್ರಾಜ್ಯವನ್ನೂ ಅಖಂಡ ಸಂಪತ್ತನ್ನೂ ಗಳಿಸಿದರು. ಅವರಲ್ಲಿ ಅತ್ಯಂತ ಪ್ರಸಿದ್ಧನೆಂದರೆ ಹಾರೂನ್ ಅಲ್ ರಷೀದ್. ಇವನ ಸಾಮರ್ಥ್ಯ ಸದ್ಗುಣಗಳನ್ನು ಅರೇಬಿಯನ್ ನೈಟ್ಸ್ ಗ್ರಂಥ ಮನೋರಂಜಕವಾಗಿ ವಿವರಿಸಿದೆ. ಇಸ್ಲಾಂ ಧರ್ಮ ಮೊದಲು ಹರಡಿ ಇಡೀ ರಾಷ್ಟ್ರದ ಜನರನ್ನೇ ತನ್ನ ಕಡೆಗೆಳೆದದ್ದು ಇರಾಕ್ ರಾಜ್ಯದಲ್ಲಿ. ಮತ ತತ್ತ್ವದ ಜೊತೆಗೆ ಅರಬ್ಬೀ ಭಾಷೆಯೂ ಅಲ್ಲಿ ಮೊದಲು ಪ್ರಚಾರಕ್ಕೆ ಬಂತು. ಉಮಾಯದ್ದ ಕಲೀಫರ ಕಾಲದಲ್ಲಿ ಗರೀಕ್ ಮತ್ತು ಪಾರಸಿ ಸಂಸ್ಕøತಿಗಳ ಪ್ರಭಾವಕ್ಕೆ ಒಳಗಾಗಿ ಸಮನ್ವಯದ ಒಂದು ನೂತನ ದರ್ಶನವನ್ನೂ ಇರಾಕ್ ಜನ ಪಡೆದರು. ಪೈಗಂಬರನ ಮಾವನಾದ ಅಬ್ಬಾಸಿದ್ದನ ಪರವಾಗಿ ಇರಾಕ್ ಮತ್ತು ಖುರೇಸಾನ್ ಜನ ಹೋರಾಟ ನಡೆಸಿ ಉಮಾಯದ್ದರನ್ನು ಸೋಲಿಸಿ ಅಬ್ಬಾಸಿದ್ ರಾಜ್ಯ ಭಾರವನ್ನು ಬಾಗ್‍ದಾದ್‍ನಲ್ಲಿ ಸ್ಥಾಪಿಸಿದರು. ಇರಾಕಿನ ದಕ್ಷಿಣ ಪ್ರಾಂತ್ಯಗಳ ಸುನ್ನಿಪಂಥದವರ ಅಸಹ್ಯ ದೌರ್ಜನ್ಯಗಳನ್ನು ತಡೆಯಲಾರದೆ ಪ್ರಬಲರಾಗಿದ್ದ ಷೀಯ ಜನ ವಲಸೆ ಹೋದರು. 1945ರಲ್ಲಿ ಅಬ್ಬಾಸಿದ್ ಕಲೀಫರು ಷೀಯಪಂಗಡದ ಬುವೇಹಿದ್ ಜನರ ಆಕ್ರಮಣಕ್ಕೆ ಒಳಗಾದರು. 1400ರಲ್ಲಿ ತೈಮೂರ್‍ಲೇನನ ಯುದ್ಧಗಳ ಮತ್ತು ದೌರ್ಜನ್ಯಕೃತ್ಯಗಳ ಪರಿಣಾಮವಾಗಿ ಸುಸಂಸ್ಕøತರೂ ಶಾಂತಿ ಮತಧರ್ಮ ಪೋಷಕರೂ ಆದ ಇರಾಕಿನ ಬಹು ಮಂದಿ ಹತರಾದರು. ಬಾಗ್‍ದಾದ್ ನಾಶಹೊಂದಿತು.

ಮ್ಯಾಮಲೂಕರ ರಾಜ್ಯಭಾರ ಕ್ಷೀಣವಾಯಿತು. ನೂರ ಇಪ್ಪತ್ತೆಂಟು ವರ್ಷಗಳಲ್ಲಿ ಇಪ್ಪತ್ತೊಂಬತ್ತು ರಾಜರು ಆಳಿದರು. 1480ರಲ್ಲಿ ಟರ್ಕೊಮನ್ ಮತ್ತು ಬಿದೂಯಿನ್ ಪರ್ವತವಾಸಿಗಳು ದಾಳಿ ನಡೆಸಿ ರಾಜ್ಯದ ಬಹುಭಾಗವನ್ನು ನಾಶ ಮಾಡಿದರು. ನಾಗರಿಕತೆಯ ಪರಾಕಾಷ್ಠೆಯನ್ನು ಮುಟ್ಟಿದ್ದ ಇರಾಕಿನ ಜನ ದಿಕ್ಕೆಟ್ಟು ಹೋದರು. ಪಾಶ್ಚಾತ್ಯ ರಾಷ್ಟ್ರಗಳ ಸ್ವಾಧೀನಕ್ಕಾಗಿ ಆಟೊಮನ್ ಮತ್ತು ಪರ್ಷಿಯ ರಾಷ್ಟ್ರಗಳ ಭಯಂಕರ ಸ್ಪರ್ಧೆ, ಅಂತರ್ಯುದ್ಧಗಳಲ್ಲೂ-ಇವು ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಇರಾಕ್ ಜನರ ಇಡೀ ಇತಿಹಾಸವನ್ನೇ ರೂಪಾಂತರಗೊಳಿಸಿದವು.

ಆಟೊಮನ್ನರು ಇರಾಕನ್ನು ಗೆದ್ದು ರಾಜ್ಯಾಡಳಿತವನ್ನು ಸರಿಪಡಿಸಿ ಇರಾಕೀ ಶ್ರೀಮಂತರಿಗೂ ಪರ್ವತವಾಸಿಗಳಾದ ಕುರ್ಡನಾಯಕರಿಗೂ ರಾಜ್ಯಭಾರವನ್ನು ಒಪ್ಪಿಸಿದ ಪರಿಣಾಮವಾಗಿ ಕೆಲವು ಕಾಲ ಶಾಂತಿ ಸೌಹಾರ್ದಗಳು ನೆಲೆಗೊಂಡವು. ಆದರೆ ಕೆಲವು ಕಾಲದಲ್ಲಿಯೇ ಅನಾಯಕತ್ವ ಮತ್ತೆ ತಲೆದೋರಿತು. ಈ ಮಧ್ಯ ವಾಣಿಜ್ಯ, ವ್ಯಾಪಾರ ಬೆಳವಣಿಗೆಗಳನ್ನೇ ಪರಮ ಧ್ಯೇಯವಾಗಿಟ್ಟಿಕೊಂಡ ಫ್ರೆಂಚ್ ಮತ್ತು ಇಂಗ್ಲೆಂಡಿನ ವ್ಯಾಪಾರ ಸಂಸ್ಥೆ ಪ್ರಬಲವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಭಾವ ಕ್ಷೇತ್ರಗಳನ್ನು ಸ್ಥಾಪಿಸಿ, ಅಂತರ ರಾಜಕೀಯದಲ್ಲಿ ಪ್ರವೇಶಿಸಿ, ರಾಜಮನೆತನಗಳನ್ನು ಒಡೆದು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿಕೊಂಡಿತು. ಫ್ರೆಂಚ್ ಸಮ್ರಾಟನಾದ ಲೂಯಿಯ ಲಿವಾಂಟ್ ಕಂಪನಿ, ಈಸ್ಟ್ ಇಂಡಿಯ ಕಂಪನಿಗಳು ಇವುಗಳಲ್ಲಿ ಬಹು ಮುಖ್ಯ. ಪರ್ಷಿಯ ಕೊಲ್ಲಿ ವ್ಯಾಪಾರ ಸ್ಪರ್ಧೆಗೆ ಮುಖ್ಯ ಕೇಂದ್ರವಾಯಿತು. ಬಾಬಲ್ ಮಂಡಬ್, ಬಸ್ರ, ಬಾಗ್‍ದಾದ್ ಮತ್ತು ಇತರ ಪಟ್ಟಣಗಳು ಐರೋಪ್ಯ ಜನರ ಧನಾರ್ಜನೆಯ ದಾಹಕ್ಕೆ ಬಲಿಯಾದವು.

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಇತರ ರಾಷ್ಟ್ರಗಳಲ್ಲಿ ಉಂಟಾದ ಹಾಗೆ ಇಲ್ಲೂ ರಾಷ್ಟ್ರೀಯ ಭಾವನೆ ಮೂಡಿತು. ಐರೋಪ್ಯ ವ್ಯಾಪಾರಸ್ಥರು ಪ್ರತಿಭಾವಂತರು, ಪ್ರಗಲ್ಫರು, ಸಾಹಸಿಗಳು. ಅವರು ಮಧ್ಯಪ್ರಾಚ್ಯ, ರಾಷ್ಟ್ರಗಳಲ್ಲಿ ತಿರುಗಿ ಆಧುನಿಕ ಭಾವನೆಗಳನ್ನು ಹರಡಿದರು. ವೃತ್ತಪತ್ರಿಕೆಗಳು ಹೊಸ ಸ್ಫೂರ್ತಿಯನ್ನು ಕೊಟ್ಟವು. 1853ರಲ್ಲಿ ಪ್ರಗತಿಪರ ಭಾವನೆಗಳಿಂದ ಕೂಡಿದ ಮಹಮ್ಮದ್ ರಷೀದ್ ಪಾಷಾ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಜನಗಳಿಗೆ ಅಂತರರಾಷ್ಟ್ರೀಯ ಉದ್ಯಮ ವ್ಯಾಪಾರ ಮತ್ತು ಸಂಸ್ಕøತಿಯ ವೈವಿಧ್ಯಗಳ ಪರಿಚಯವನ್ನು ಮಾಡಿಸಿದ. ನಿರಂಕುಶ ಆಳ್ವಿಕೆಗೆ ಮನಸೋತ ಪಾಷಗಳನ್ನು ಪದಚ್ಯುತರನ್ನಾಗಿ ಮಾಡಿ, ನೌಕರಿ ದರ್ಜೆಯ ಜನರನ್ನು ಹದಗೊಳಿಸಿ, ಈಫೆಂಡಿ ಎಂಬ ಹೆಸರಿನ ಉನ್ನತ ಅಧಿಕಾರಿಗಳನ್ನು ನಾನಾ ಕ್ಷೇತ್ರಗಳಲ್ಲಿ ನೇಮಿಸಿ, ಬಟ್ಟೆ ನೀತಿನಡೆಗಳನ್ನು ತಿದ್ದಿ, ಇರಾಕ್ ರಾಷ್ಟ್ರಜೀವನದ ಮಾರ್ಪಾಟಿಗಾಗಿ ಬಹಳ ಶ್ರಮ ವಹಿಸಿದ. ಪರಿಣಾಮವಾಗಿ ಹೊರ ಜನಾಂಗಗಳ ಪ್ರಭಾವ ಕ್ಷೇತ್ರಗಳನ್ನೂ ಅವುಗಳ ಅಧಿಕಾರಿಗಳನ್ನೂ ಹೊರದೂಡುವ ಪ್ರಯತ್ನಗಳು ನಡೆದವು. ಆಟೊಮನ್ ಸೇನೆಯಲ್ಲಿ ಅಧಿಕಾರಿಯಾಗಿದ್ದ ಅಜಿûೀeóï ಆಲಿ ಅಲ್ ಅಹದ್ ಸಾಲೆಂ ಲೀಗ್ ಮತ್ತು ಕಾವನೆಂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಬ್ರಿಟಿಷ್ ಜನರನ್ನೂ ಹೊರದೂಡುವಂತೆ ಪ್ರೇರೇಪಿಸಿದ.

ಅರಬ್ಬಿ ಕ್ರಾಂತಿಗಳು ಜರುಗಿದವು. ಬ್ರಿಟಿಷ್ ಸೇನಾನಾಯಕ ಕಿಚನ್, ರೊನಾಲ್ಡ್ ಸ್ಕಾಟ್ ಮತ್ತು ಇತರ ಪ್ರತಿಭಾವಂತರು ಗೊಂದಲಕ್ಕೆ ಸಿಕ್ಕರು. ಅನೇಕ ಕಾರಣಗಳಿಂದ ಹೋರಾಟ ಯಶಸ್ವಿಯಾಗಲಿಲ್ಲ. 1918ರಲ್ಲಿ ಆಂಗ್ಲೊ-ಫ್ರೆಂಚ್ ಒಪ್ಪಂದ ಅರಬ್ಬರ ರಾಷ್ಟ್ರಪ್ರೇಮವನ್ನು ಲಾಲಿಸಿ ಅವರ ಸ್ವತಂತ್ರ್ಯದ ಹಾದಿಯನ್ನು ತೆರೆಯಿತು. ಜಿಲ್ಲಾ ಸಮಿತಿಗಳಾದವು. ಸೆವರಸ್ ಒಪ್ಪಂದದ ಪ್ರಕಾರ ಸಮಿತಿಗಳ ಮೂಲಕ ಏಕರಾಷ್ಟ್ರ ಸಿದ್ಧಿಗಾಗಿ ವಿಲ್ಸನ್ ಉತ್ತಮ ಸಲಹೆಗಳನ್ನು ಮಾಡಿದ. ಬ್ರಿಟಿಷರ ಪ್ರತಿನಿಧಿಗಳೇ ಅರಬ್ಬರ ಪ್ರತಿನಿಧಿಗಳಿಗಿಂತ ಹೆಚ್ಚು ಅಧಿಕಾರವನ್ನು ಗಳಿಸಿದರು. ಸಮಿತಿಗಳು ಬ್ರಿಟಿಷರ ಕೈವಾಡಕ್ಕೆ ಸಿಕ್ಕಿದವು. ಸರ್ ಪರ್ಸಿ ಕಾಕ್ಸ್ ಮುಖ್ಯಾಧಿಕಾರಿಯಾಗಿ ಇರಾಕ್ ಸ್ವತಂತ್ರ ರಾಷ್ಟ್ರವಾಗುವುದಕ್ಕೆ ಬೇಕಾದ ಸಲಹೆಗಳನ್ನು ಸೂಚಿಸಿದ. ಉಜ್ವಲ ರಾಷ್ಟ್ರ ಪ್ರೇಮಿಗಳು ಸಣ್ಣ ಸಣ್ಣ ಸುಧಾರಣೆಗಳನ್ನು ಒಪ್ಪದೆ ಮತ್ತೆ ಉಗ್ರ ವಿಪ್ಲವಗಳನ್ನು ಎಬ್ಬಿಸಿದರು. ಭಾರತ ಸರ್ಕಾರದ ಸೇನಾದಳ ಪ್ರಭಾವಯುತವಾಗಿ ಹೋರಾಡಿ, ಬ್ರಿಟಿಷ್ ಸರ್ಕಾರಕ್ಕೆ ಯಶಸ್ಸನ್ನು ತಂದಿತು. 1924ರಲ್ಲಿ ಮತ್ತೆ ಒಪ್ಪಂದವಾಯಿತು. ಸರ್ ಜಾರ್ಜ್ ಕ್ಲೇಟನ್ ಎಂಬ ಅಧಿಕಾರಿ ಬ್ರಿಟಿಷ್ ಮತ್ತು ಇರಾಕ್ ಜನರ ಪರಸ್ಪರ ಸಹಕಾರ ಸದ್ಭಾವನೆಗಳಿಗಾಗಿ ಮತ್ತೆ ಒಪ್ಪಂದ ಮಾಡಿ ಯುದ್ಧ ಸಮಯಗಳಲ್ಲಿ ಇರಾಕ್ ಜನ ಸಹಕಾರ ನೀಡಬೇಕೆಂದು ಸಲಹೆ ಮಾಡಿದ. ಲೀಗ್ ಆಫ್ ನೇಷನ್ಸ್‍ನಲ್ಲಿ ಇರಾಕಿಗೆ ಪ್ರಾತಿನಿಧ್ಯ ಕೊಡಲು ಬ್ರಿಟಿಷ್ ಸರ್ಕಾರಕ್ಕೆ ಸಲಹೆಮಾಡಿದ.

ಆದರೂ ಅಸ್ಸೀರಿಯ ಮಧ್ಯ ಯುಫ್ರಟಿಸ್ ಪ್ರದೇಶಗಳಲ್ಲಿ ಅಶಾಂತಿ ಇದ್ದೇ ಇತ್ತು. ಕ್ರಾಂತಿಗಳು, ರಕ್ತಪಾತ, ದೌರ್ಜನ್ಯ ಕೃತ್ಯಗಳು 1940ರಲ್ಲೂ ಜರುಗುತ್ತಲೇ ಇದ್ದವು. ಫೈಸಲ್ ದೊರೆಯ ಮರಣಾನಂತರ 1933ರಲ್ಲಿ ಪಟ್ಟಕ್ಕೆ ಬಂದ ಘಾಸಿಯೂ ಶಾಂತಿ ಪ್ರಯತ್ನದಲ್ಲಿ ವಿಫಲನಾದ. ಎರಡನೆಯ ಮಹಾಯುದ್ಧದಲ್ಲಿ ಅನೇಕ ಉತ್ಪಾದಕರ ಘಟನೆಗಳು ಜರುಗಿದವು. ಅಬ್ದುಲ್ಲನ ಉತ್ಕಟಾಕಾಂಕ್ಷೆ ಸಿರಿಯ ರಾಷ್ಟ್ರವನ್ನು ಅರಬ್ಬರ ಧರ್ಮಸಾಮ್ರಾಜ್ಯವನ್ನಾಗಿ ಮಾಡಬೇಕೆಂಬುದಾಗಿತ್ತು. ಆ ಪ್ರಯತ್ನಕ್ಕೆ ಅನೇಕ ವಿರೋಧಿಗಳು ಹುಟ್ಟಿಕೊಂಡರು. ಯುದ್ಧದ ತರುವಾಯ ಕಮ್ಯೂನಿಸ್ಟ ಸಾಮ್ಯಾಜ್ಯದ ನಾಯಕನಾದ ಸ್ಟಾಲಿನ್ನನ ಪ್ರಭಾವ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಲವಾಯಿತು. ಬ್ರಿಟಿಷ್ ಮತ್ತು ಫ್ರೆಂಚ್ ಸಾಮ್ರಾಜ್ಯಗಳ ಅಧಿಕಾರ ವ್ಯಾಪ್ತಿ ಕುಂಠಿತವಾಯಿತು. ಈ ರಾಷ್ಟ್ರಗಳಲ್ಲಿ ಇನ್ನೂ ಶಾಂತಿ ಸ್ಥಾಪನೆಯಾಗಿಲ್ಲ. ಪೂರ್ಣ ಸ್ವಾತಂತ್ರ್ಯ ಸಾಧ್ಯವಾಗಿಲ್ಲ. ಪ್ರಪಂಚದ ದೊಡ್ಡ ಸಾಮ್ರಾಜ್ಯಗಳ ಕೈವಾಡದಿಂದ ಕಮ್ಯೂನಿಸಂ ತತ್ತ್ವ ಮತ್ತು ಇಸ್ಲಾಂ ಧರ್ಮಗಳ ಸಮನ್ವಯ ಸಾಧ್ಯವೇ ಎಂಬ ಪ್ರಶ್ನೆ ಜಟಿಲವಾಗಿದೆ. ಈ ಸಂದಿಗ್ಥ ಸ್ಥಿತಿಯಲ್ಲಿ ಆಗಿಂದಾಗ್ಗೆ ವಿಪ್ಲವಗಳು, ಪುಟ್ಟ ಪುಟ್ಟ ಕ್ರಾಂತಿಗಳು ಆಗುತ್ತಿವೆ. ಅಂತರರಾಷ್ಟ್ರೀಯ ಪರಿಸ್ಥಿತಿಗನುಗುಣವಾಗಿ, ಎಣ್ಣೆ ವ್ಯಾಪಾರದ ರಾಜಕೀಯ ಆಂದೋಲನಗಳು ಜರುಗಿವೆ. ಅಂತರ್ಯುದ್ಧಗಳು, ದೌರ್ಜನ್ಯ, ಶ್ರೀಮಂತರ ಕೊಲೆ, ಅಶಾಂತಿ-ಇವೆಲ್ಲ ಸರ್ಕಾರದ ಸುಭದ್ರತೆಯನ್ನು ಅಲುಗಿಸಿವೆ. ಭವಿಷ್ಯ ಕಷ್ಟವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: