ವಿಷಯಕ್ಕೆ ಹೋಗು

ವಸ್ತುಸಂಗ್ರಹಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ವಸ್ತುಸಂಗ್ರಹಾಲಯ
 
Rescuing 1 sources and tagging 0 as dead.) #IABot (v2.0.9.2
೧೦೯ ನೇ ಸಾಲು: ೧೦೯ ನೇ ಸಾಲು:
==ಬಾಹ್ಯ ಕೊಂಡಿಗಳು==
==ಬಾಹ್ಯ ಕೊಂಡಿಗಳು==
* [http://icom.museum/ International Council of Museums]
* [http://icom.museum/ International Council of Museums]
* [https://museist.com Museums of the World]
* [https://museist.com Museums of the World] {{Webarchive|url=https://web.archive.org/web/20211104041146/https://museist.com/ |date=2021-11-04 }}
* [https://web.archive.org/web/20121212063856/http://archives.icom.museum/vlmp/ VLmp directory of museums]
* [https://web.archive.org/web/20121212063856/http://archives.icom.museum/vlmp/ VLmp directory of museums]
* {{dmoz|Reference/Museums|Museums}}
* {{dmoz|Reference/Museums|Museums}}

೧೯:೧೫, ೧೬ ಅಕ್ಟೋಬರ್ ೨೦೨೨ ನಂತೆ ಪರಿಷ್ಕರಣೆ

ಪ್ಯಾರಿಸ್‍ನ ಲೂವರ್ ವಸ್ತುಸಂಗ್ರಹಾಲಯ

ವಸ್ತುಸಂಗ್ರಹಾಲಯವು ಸಾಂಸ್ಕೃತಿಕ, ವೈಜ್ಞಾನಿಕ, ಚಾರಿತ್ರಿಕ ಅಥವಾ ಆಲಂಕಾರಿಕ ಮೌಲ್ಯವುಳ್ಳ ವಸ್ತುಗಳನ್ನು ಸಂಗ್ರಹಿಸುವ, ರಕ್ಷಿಸುವ, ಅಧ್ಯಯನ ಮಾಡುವ, ಪ್ರದರ್ಶಿಸುವ ಮತ್ತು ಶೈಕ್ಷಣಿಕ ಉಪಯೋಗಕ್ಕೆ ಒದಗಿಸುವ ಒಂದು ಸಂಸ್ಥೆ (ಮ್ಯೂಸಿಯಮ್).

ವಸ್ತುಗಳನ್ನು ಸಂಗ್ರಹಿಸುವ ಮಾನವನ ಆಸಕ್ತಿ ಅವನಷ್ಟೇ ಪ್ರಾಚೀನ. ವಸ್ತುಸಂಗ್ರಹಾಲಯ ಎಂಬ ಪದವನ್ನು ಇಂಗ್ಲಿಷಿನ ಮ್ಯೂಸಿಯಮ್ ಎಂಬುದಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ. ಇದು ಗ್ರೀಕ್ ಭಾಷೆಯ ಮ್ಯೂಸಿಯನ್‍ನಿಂದ ಬಂದಿದೆ. ಇದಕ್ಕೆ ಮ್ಯೂಸ್ ದೇವತೆಗಳ ಆಸನ ಎಂಬ ಅರ್ಥವಿದೆ. ಇದು ಮೊದಲು ಲಲಿತಕಲೆ ಮತ್ತು ವಿಜ್ಞಾನ ದೇವತೆಗಳಿಗೆ ಅರ್ಪಿಸಿದ ಪವಿತ್ರ ಸ್ಥಳವಾಗಿತ್ತು. ಅನಂತರ ಭಕ್ತರ ಹರಕೆ ಮತ್ತು ಕೊಡುಗೆ ವಸ್ತುಗಳನ್ನಿಡುವ ಸ್ಥಳವಾಯಿತು; ಇಂಥ ಸ್ಥಳಗಳನ್ನು ಪುರಾತತ್ತ್ವ ಸಂಶೋಧಕರು ಪತ್ತೆಮಾಡಿದ್ದಾರೆ. ಸೂರ್ಯಾರಾಧಕ ರಾಜ ಅಮೆನ್ಹೋಟೆಪ್ Iಗಿ (ಕ್ರಿ.ಪೂ. ಸು. 1379-62) ಈಜಿಪ್ಟಿನ ತನ್ನ ರಾಜಧಾನಿ ಟೆಲ್-ಎಲ್-ಅಮಾರ್ನದಲ್ಲಿ ಅವನ ವಂಶಜರು ಮತ್ತು ಜನರು ನೀಡಿದ ಕೊಡುಗೆಗಳ ಸಂಗ್ರಹವಿದ್ದ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿದ್ದ. ಕ್ರಿ.ಪೂ. 3ನೆಯ ಶತಮಾನದವರೆಗೂ ಮ್ಯೂಸಿಯಮ್ ಪದ ಖಚಿತವಾಗಿ ಬಳಕೆಯಾಗಿರಲಿಲ್ಲ. ಟಾಲಮಿ ಸಾಟರ್, ವೈಜ್ಞಾನಿಕ ಅಧ್ಯಯನಕ್ಕಾಗಿ ಅಲೆಕ್ಸಾಂಡ್ರಿಯದಲ್ಲಿ ಗ್ರಂಥಾಲಯವೊಂದನ್ನು ಸ್ಥಾಪಿಸಿದಾಗ ಇದರ ಮೊದಲ ಪ್ರಯೋಗ ಖಚಿತವಾಗಿ ಆಯಿತು. ಇದು ಇಂದಿನ ಸಸ್ಯ ಮತ್ತು ಪ್ರಾಣಿ ಉದ್ಯಾನಗಳಲ್ಲಿ ಇರುವಂಥ ಪ್ರಾಕ್‍ರೂಪದ ಸಸ್ಯ, ಪ್ರಾಣಿ ಸಂಗ್ರಹಗಳ ಕಟ್ಟಡವಾಗಿತ್ತು. ಇದು ಮೂರು ಶತಮಾನಗಳ ಕಾಲ ಬೇರೆ ಕಡೆಯ ವಿಜ್ಞಾನ, ತತ್ತ್ವಶಾಸ್ತ್ರ, ಸಾಹಿತ್ಯ ಮತ್ತು ಕಲೆಗಳ ವಿದ್ವಾಂಸರನ್ನು ಅಲೆಕ್ಸಾಂಡ್ರಿಯದತ್ತ ಆಕರ್ಷಿಸಿತು. ಸರಿಸುಮಾರು ಇದೇ ವೇಳೆಗೆ ಗ್ರೀಸ್‍ನಲ್ಲಿ ಯಾವುದೇ ಕಲಾಕೃತಿಗಳು ಜನರ ಸ್ವತ್ತಾಗಿದ್ದುವು. ಅಥೆನ್ಸ್‌ನ ಅಕ್ರೋಪೊಲಿಸ್ ಕಟ್ಟಡದಲ್ಲಿನ ಚಿತ್ರಶಾಲೆ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿತ್ತು. ಕೆತ್ತನೆಗಳು, ಮೂರ್ತಿಶಿಲ್ಪಗಳು ದೇವಾಲಯಗಳಲ್ಲಿ ನಿರಂತರವಾಗಿ ಪ್ರದರ್ಶಿತವಾಗುತ್ತಿದ್ದುವು.

ರೋಮ್‍ನಲ್ಲಿ 2ನೆಯ ಪಾಲ್, 2ನೆಯ ಜ್ಯೂಲಿಯಸ್, 10ನೆಯ ಲಿಯೋ ಮುಂತಾದವರು ಮಧ್ಯಯುಗದಲ್ಲಿ ವಸ್ತುಸಂಗ್ರಹಣೆಗೆ ಒತ್ತುನೀಡಿದರು. ಇಟಲಿ ಮತ್ತು ರೋಮ್‍ಗಳ ಅಪರೂಪದ ವಸ್ತುಗಳನ್ನು ಶ್ರೀಮಂತ ಮೆಡಿಸಿ ಕುಟುಂಬ ಫ್ಲಾರೆನ್ಸ್‍ನಲ್ಲಿ ಸಂಗ್ರಹಿಸಿತು. ಇದನ್ನು ಗ್ಯಾಲರಿಯಾ ಎನ್ನತ್ತಿದ್ದರು. 15ನೆಯ ಶತಮಾನದಲ್ಲಿ ಮ್ಯೂಸೊ ಮತ್ತೆ ಬಳಕೆಗೆ ಬಂದಿತು. ಇಂಗ್ಲೆಂಡ್‍ನಲ್ಲಿ ವೇಲ್ಸ್‍ನ ರಾಜಕುಮಾರ 1ನೆಯ ಚಾಲ್ರ್ಸ್ (1600-49) ನಿಂದ ವಸ್ತುಸಂಗ್ರಹ ಆರಂಭವಾಯಿತು. ಅನಂತರದ ಅಂತರ್ ಯುದ್ಧದಲ್ಲಿ ಇದು ನಾಶವಾಯಿತು. ಈ ಸಂಗ್ರಹವನ್ನು 2ನೆಯ ಚಾಲ್ರ್ಸ್ (1630-85) ಮತ್ತೆ ಮುಂದುವರಿಸಿದ. ದುರದೃಷ್ಟವಶಾತ್ ಇದು ವೈಟ್‍ಹಾಲ್ ಅಗ್ನಿದುರಂತದಲ್ಲಿ ನಾಶವಾಯಿತು(1689).

ಫ್ರಾನ್ಸ್‌ನಲ್ಲಿ 1ನೆಯ ಫ್ರಾನ್ಸಿಸ್ (1494-1547), ಸ್ಪೇನ್‍ನಲ್ಲಿ ಸ್ಪ್ಯಾನಿಷ್ ಆಸ್ಟ್ರಿಯನ್ ರಾಜ 5ನೆಯ ಚಾಲ್ರ್ಸ್ (1500-58) ಅಪರೂಪದ ವಸ್ತುಸಂಗ್ರಹಗಳಿಗೆ ತೊಡಗಿದರು. 17ನೆಯ ಶತಮಾನದಲ್ಲಿ ಆಧುನಿಕ ಸ್ವರೂಪದ ವಸ್ತುಸಂಗ್ರಹಾಲಯ ಪರಿಕಲ್ಪನೆ ಮೂಡತೊಡಗಿತು. ವಿವಿಧ ಕ್ಷೇತ್ರಗಳ, ತಾಂತ್ರಿಕ, ನೈಸರ್ಗಿಕ, ಕಲಾತ್ಮಕ ಸಂಗ್ರಹಗಳಿಗೆ ಆಸಕ್ತರು ಮುಂದಾದರು. ಸಮುದ್ರಯಾನದ ಹೊಸ ಮಾರ್ಗಗಳು ಮತ್ತು ವಿಧಾನಗಳು ತಿಳಿದ ಮೇಲೆ ಉಷ್ಣವಲಯದ ಅಪರೂಪದ ಹಕ್ಕಿ, ಪ್ರಾಣ, ಸಸ್ಯ, ಶಿಲೆ ಹಾಗೂ ಕೀಟಗಳನ್ನು ಸಂಗ್ರಾಹಕರು ಕೂಡಿಡತೊಡಗಿ ದರು. ಇಂಥ ಸಂಗ್ರಹಗಳನ್ನು ಪ್ರಾಚೀನಾನ್ವೇಷಕ ಎಲಿಯಾಸ್ ಆಶ್‍ಮೋಲ್ (1617-92) ಎಂಬಾತ ತನ್ನ ಡಚ್ ಸಂಬಂಧಿ ಜಾನ್ ಟ್ರೆಡೆಸ್ಕಾಂಟ್‍ನಿಂದ ಬಳುವಳಿಪಡೆದು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಕ್ಕೆ ನೀಡಿದ. ಇದನ್ನು ಬಳಸಿಕೊಂಡು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಆಶ್‍ಮೋಲಿಯನ್ ಮ್ಯೂಸಿಯಮ್ ಅನ್ನು ಸ್ಥಾಪಿಸಿತು(1683). ಇಂದು ಇದು ಪ್ರಪಂಚಪ್ರಸಿದ್ಧವಾಗಿದೆ. ಇದು ಇಂಗ್ಲೆಂಡ್‍ನ ಮೊದಲನೆಯ ಸಾರ್ವಜನಿಕ ಮ್ಯೂಸಿಯಮ್. ಇಂಗ್ಲೆಂಡ್‍ನ ವೈದ್ಯ ಹಾನ್ಸ್ ಸ್ಲೋನ್ (1666-1753) ಪುಸ್ತಕ, ನೈಸರ್ಗಿಕ ವಸ್ತುಗಳು, ಗಣಿತ ಉಪಕರಣ, ಅಮೂಲ್ಯ ಹರಳು, ಖನಿಜ, ನಾಣ್ಯ, ಪದಕ ಮುಂತಾದ 69,352 ವಸ್ತುಗಳನ್ನು 1735ರಲ್ಲಿ ಕಲೆಹಾಕಿ, ತನ್ನ ತರುವಾಯ ಇದು ಸರ್ಕಾರಕ್ಕೆ ಸೇರಿ ಸಾರ್ವಜನಿಕಗೊಳ್ಳಬೇಕೆಂದು ಉಯಿಲು ಬರೆದಿದ್ದ. ಅನಂತರ ಈ ವಸ್ತುಗಳಿಗೆ 20,000 ಪೌಂಡ್‍ಗಳನ್ನು ಪರಿಹಾರವಾಗಿ ನೀಡಿದ ಸರ್ಕಾರ ಬ್ರಿಟಿಷ್ ಮ್ಯೂಸಿಯಮ್ ಸ್ಥಾಪಿಸಿತು. ಸರ್ಕಾರ ನೀಡಿದ ಹಣ, ಹಾನ್ಸ್ ವ್ಯಯಿಸಿದ ವೆಚ್ಚದ ಕಾಲುಭಾಗ ಮಾತ್ರವಾಗಿತ್ತು. ಅಮೆರಿಕದಲ್ಲಿ ಯುರೋಪ್‍ನ ಪ್ರಭಾವದಿಂದ ವಸ್ತುಸಂಗ್ರ ಹಣೆ ಆರಂಭವಾಯಿತು. ಹಾರ್ವರ್ಡ್ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ್ದ. ಇದು ಬೆಂಕಿಗೆ ಆಹುತಿಯಾಯ್ತು(1760). ಚಾಲ್ರ್ಸ್‍ಟೌನ್‍ನ ಲೈಬ್ರರಿ ಸೊಸೈಟಿಯು ದಕ್ಷಿಣ ಕರೋಲಿನದಲ್ಲಿ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹವನ್ನು ಆರಂಭಿಸಿದ ಮೇಲೆ, ಅಂದರೆ 1773ರಲ್ಲಿ, ಅಮೆರಿಕ ದಲ್ಲಿ ಮ್ಯೂಸಿಯಮ್ ಆರಂಭವಾಯಿತು.

ಪ್ರಪಂಚದ ಎಲ್ಲ ದೇಶಗಳ ಮಹಾನಗರಗಳಲ್ಲಿಯೂ ಇಂದು ವಸ್ತುಸಂಗ್ರಹಾಲಯಗಳು ಸರ್ವೇಸಾಮಾನ್ಯವಾಗಿವೆ. ಪ್ರಪಂಚಪ್ರಸಿದ್ಧವಾದ ವಸ್ತುಸಂಗ್ರಹಾಲಯಗಳನ್ನು ಇಲ್ಲಿ ಗಮನಿಸಬಹುದು. ಉತ್ತರ ಆಫ್ರಿಕದ ಲೆ-ಬಾರ್ಡೊ ನ್ಯಾಷನಲ್ ಮ್ಯೂಸಿಯಮ್(1888), ಟ್ಯುನಿಶಿಯ, ಆಫ್ರಿಕದ ಸಾಂಸ್ಕøತಿಕ ಕಲಾ ಸಂಪತ್ತನ್ನು ಪರಿಚಯಿಸುತ್ತದೆ. ಕೈರೋದ ಈಜಿಪ್ಶಿಯನ್ ಮ್ಯೂಸಿಯಮ್ (1900) ಈಜಿಪ್ಟ್ ಸಂಸ್ಕøತಿಯ, ಪಿರಮಿಡ್ ಉತ್ಖನನದಲ್ಲಿ ದೊರೆತ ಅಮೂಲ್ಯ ವಸ್ತುಗಳ ಅಪೂರ್ವ ಸಂಗ್ರಹಗಳನ್ನು ಹೊಂದಿದೆ. ಪಶ್ಚಿಮ ಆಫ್ರಿಕದ ನೈಜೀರಿಯದಲ್ಲಿನ ಬೆನಿನ್ ಮ್ಯೂಸಿಯಮ್(1960), ನಿಯಾಮೆಯ ನ್ಯಾಷನಲ್ ಮ್ಯೂಸಿಯಮ್, ಘಾನ ನ್ಯಾಷನಲ್ ಮ್ಯೂಸಿಯಮ್, ಆಕ್ರಾ, ಅಬಿಜಾನ್‍ನ ನ್ಯಾಷನಲ್ ಮ್ಯೂಸಿಯಮ್ ಆಫ್ ದಿ ಐವರಿಕೋಸ್ಟ್-ಇವು ಆಫ್ರಿಕದ ಜನ-ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ. ಪೂರ್ವ ಆಫ್ರಿಕದ ಕಂಪಾಲದ ನ್ಯಾಷನಲ್ ಮ್ಯೂಸಿಯಮ್ ಆಫ್ ಉಗಾಂಡ (1908) ಆಫ್ರಿಕನ್ ಮೂಲ ನಿವಾಸಿಗಳ ಸಂಗೀತ ಉಪಕರಣಗಳಿಗೆ ಪ್ರಸಿದ್ಧವಾಗಿದೆ. ಕೀನ್ಯದ ನ್ಯಾಷನಲ್ ಮ್ಯೂಸಿಯಮ್ ವನ್ಯಜೀವಿ ಸಂಗ್ರಹವನ್ನು ಹೊಂದಿದೆ. ನ್ಯಾಷನಲ್ ಮ್ಯೂಸಿಯಮ್ ಆಫ್ ಟ್ಯಾಂಜನೀಯ (1940) ಪುರಾತತ್ತ್ವ ಉತ್ಖನನದ ವಸ್ತುಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕದ ಜಿಂಬಾಬ್ವೆಯಲ್ಲಿ ನಾಲ್ಕು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಿವೆ. ದಕ್ಷಿಣ ಆಫ್ರಿಕದ ನ್ಯಾಷನಲ್ ಮ್ಯೂಸಿಯಮ್‍ನಲ್ಲಿ ಜುರಾಸಿಕ್ ಕಾಲದ ಬೃಹತ್ ಪ್ರಾಣಿಗಳ (ಡೈನೊಸಾರ್) ಅವಶೇಷಗಳಿವೆ.

ಜೋರ್ಡಾನಿನ ನ್ಯಾಷನಲ್ ಆರ್ಕಿಯಲಾಜಿಕಲ್ ಮ್ಯೂಸಿಯಮ್ (1979), ಇಸ್ರೇಲಿನ ಬೆಜಾಲೆಲ್ ನ್ಯಾಷನಲ್ ಆರ್ಟ್  ಮ್ಯೂಸಿಯಮ್ (1906)-ಇವು ಯಹೂದಿಗಳ ಕಲಾ ಸಂಗ್ರಹಾಲಯಗಳಾಗಿವೆ. ಯಾದ್ ವಾಶೆಮ್(1953) ಹಿಟ್ಲರ್‍ನ ಸಾಮೂಹಿಕ ಹತ್ಯೆಗೆ (ಹೋಲುಕಾಸ್ಟ್) ಬಲಿಯಾದವರ ಸ್ಮರಣೆಯ ಮೂರು ಮ್ಯೂಸಿಯಮ್‍ಗಳಲ್ಲಿ ದೊಡ್ಡದು. ಇಲ್ಲಿ ಹಿಟ್ಲರ್‍ನ ಚಿತ್ರಹಿಂಸೆಯ ಪ್ರತಿಕೃತಿಗಳಿವೆ. ಪಾಕಿಸ್ತಾನದ ಲಾಹೋರ್ ಮ್ಯೂಸಿಯಮ್(1864) ಬೃಹತ್ತಾದುದು. ಕರಾಚಿಯ ನ್ಯಾಷನಲ್ ಮ್ಯೂಸಿ ಯಮ್ ಆಫ್ ಪಾಕಿಸ್ತಾನ್(1950), ಹರಪ್ಪ ಮತ್ತು ಮೊಹೆಂಜೊದಾರೊ ಗಳಲ್ಲಿ ದೊರೆತ ಸಿಂಧೂ ಬಯಲಿನ ನಾಗರಿಕತೆಯ ಉತ್ಖನನದ ಅಪೂರ್ವ ವಸ್ತುಗಳ ಸಂಗ್ರಹಾಲಯವಾಗಿದೆ.

ಚೀನದಲ್ಲಿ ಎರಡು ಪ್ರಮುಖ ವಸ್ತುಸಂಗ್ರಹಾಲಯಗಳಿವೆ. ಬೀಜಿಂಗ್‍ನ ಪ್ಯಾಲೇಸ್ ಮ್ಯೂಸಿಯಮ್‍ನಲ್ಲಿ (1925) 900,000 ಚಾರಿತ್ರಿಕ ಮತ್ತು ಸಾಂಸ್ಕøತಿಕ ವಸ್ತುಗಳ ಪ್ರದರ್ಶನವಿದೆ. ಷಾಂಗೈ ಮ್ಯೂಸಿಯಮ್ ಆಫ್ ಆರ್ಟ್ ಅಂಡ್ ಹಿಸ್ಟರಿ (1952) ಚೀನದ ಮತ್ತೊಂದು ಮುಖ್ಯ ವಸ್ತುಸಂಗ್ರಹಾಲಯ. ಚೀನದ ಸಮಗ್ರ ಕಲೆ-ಇತಿಹಾಸದ ಚಿತ್ರಣ ಇಲ್ಲಿದೆ. ಜಪಾನಿನ ಟೋಕಿಯೋ ನ್ಯಾಷನಲ್ ಮ್ಯೂಸಿಯಮ್(1871) ಅತ್ಯಂತ ದೊಡ್ಡ ಮತ್ತು ಹಳೆಯ ವಸ್ತುಸಂಗ್ರಹಾಲಯ. ಹಿರೋಷಿಮ-ನಾಗಾಸಾಕಿಯ ಅಣುಬಾಂಬ್ ದುರಂತದ ಕಥೆಯ ಪ್ರದರ್ಶನವೂ ಇಲ್ಲಿದೆ. ಜಪಾನ್ ಫೋಕ್-ಕ್ರಾಫ್ಟ್ ಮ್ಯೂಸಿಯಮ್(1936) ಜಪಾನೀ ಜನಪದರ ಸಾಂಸ್ಕøತಿಕ ಸಂಪತ್ತಿನ ಜೀವಂತ ದಾಖಲೆಯಾಗಿದೆ.

ಫಿಲಿಪೀನ್ಸ್‌ನ ಎರಡು ಪ್ರಮುಖ ವಸ್ತುಸಂಗ್ರಹಾಲಯಗಳು ಮನಿಲದಲ್ಲಿವೆ. ನ್ಯಾಷನಲ್ ಮ್ಯೂಸಿಯಮ್ ಆಫ್ ದಿ ಫಿಲಿಪೀನ್ಸ್(1901) ಚರಿತ್ರೆ, ವಿಜ್ಞಾನ ಮತ್ತು ಪ್ರಾಕೃತಿಕ ವಸ್ತುಸಂಗ್ರಹಾಲಯವಾಗಿದೆ. ಏಷ್ಯದ ಅಮೂಲ್ಯ ವಸ್ತುಸಂಗ್ರಹಗಳು ಇಲ್ಲಿವೆ. ಇಂಡೊನೇಷ್ಯದ ನ್ಯಾಷನಲ್ ಮ್ಯೂಸಿಯಮ್ ಜಕಾರ್ತದಲ್ಲಿದೆ(1868). ಅಲ್ಲಿನ ಚರಿತ್ರೆ, ಕಲೆ, ಸಂಸ್ಕøತಿಯ ಪ್ರದರ್ಶನ ಇಲ್ಲಿದೆ.

ಕೊರಿಯದ ಸಿಯೋಲ್‍ನ ನ್ಯಾಷನಲ್ ಮ್ಯೂಸಿಯಮ್ ಆಫ್ ಕೊರಿಯ(1915), ಆ ದೇಶದ ಸಮಗ್ರ ಇತಿಹಾಸ, ಕಲೆ, ಸಂಸ್ಕøತಿಯನ್ನು ಪರಿಚಯಿಸುತ್ತದೆ. ಜಾನಪದಕ್ಕೆ ಮೀಸಲಾದ ಎರಡು ವಿಶಿಷ್ಟ ವಸ್ತುಸಂಗ್ರಹಾಲಯಗಳು ಕೊರಿಯದಲ್ಲಿದ್ದು ಇವು ಪ್ರಪಂಚಪ್ರಸಿದ್ಧವಾಗಿವೆ. ನ್ಯಾಷನಲ್ ಫೋಕ್‍ಲೋರ್ ಮ್ಯೂಸಿಯಮ್ ಮತ್ತು ಕೊರಿಯನ್ ಫೋಕ್ ವಿಲೇಜ್(1974)-ಇವು ಕೊರಿಯದ ಜನಪದ ಸಂಸ್ಕøತಿಯನ್ನು ಸಮಗ್ರವಾಗಿ ಪ್ರತಿಬಿಂಬಿಸುತ್ತದೆ.

ಆಸ್ಟ್ರೇಲಿಯದಲ್ಲಿ ಕೆಲವು ವಿಶಿಷ್ಟ ವಸ್ತುಸಂಗ್ರಹಾಲಯಗಳಿವೆ. ಇವುಗಳಲ್ಲಿ ಸಿಡ್ನಿಯಲ್ಲಿರುವ ಆಸ್ಟ್ರೇಲಿಯನ್ ಮ್ಯೂಸಿಯಮ್(1828) ಅತ್ಯಂತ ಹಳೆಯದು. ಆಸ್ಟ್ರೇಲಿಯ ಜನ-ಜೀವನ, ಕಲೆ ಸಾಹಿತ್ಯ, ಚರಿತ್ರೆಗಳನ್ನು ಇದು ಪ್ರದರ್ಶಿಸುತ್ತದೆ. ಕ್ಯಾನ್‍ಬೆರದ ಆಸ್ಟ್ರೇಲಿಯನ್ ವಾರ್ ಮೆಮೋರಿ ಯಲ್(1979) ಆಸ್ಟ್ರೇಲಿಯದ ಮಿಲಿಟರಿ ಚರಿತ್ರೆಗೆ ಸಂಬಂಧಿಸಿದ್ದು, ಪ್ರಾಚೀನ ಮತ್ತು ಆಧುನಿಕ ಸಮರೋಪಕರಣಗಳನ್ನು ಪರಿಚಯಿಸುತ್ತದೆ. ಆಸ್ಟ್ರೇಲಿಯನ್ ನ್ಯಾಷನಲ್ ಗ್ಯಾಲರಿ(1982) ಮತ್ತೊಂದು ಪ್ರಮುಖ ವಸ್ತುಸಂಗ್ರಹಾಲಯ. ಇಲ್ಲಿ ಆಸ್ಟ್ರೇಲಿಯನ್ ಮೂಲ ನಿವಾಸಿಗಳ ಬದುಕು-ಸಂಸ್ಕøತಿಯ ಪೂರ್ಣ ಚಿತ್ರಣ ದೊರಕುತ್ತದೆ. ನ್ಯಾಷನಲ್ ಗ್ಯಾಲರಿ ಆಫ್ ವಿಕ್ಟೋರಿಯ(1861) ಪ್ರಾಕೃತಿಕ ವಸ್ತುಗಳಿಗೆ ಸಂಬಂಧಿಸಿದ ಮತ್ತೊಂದು ಆಸ್ಟ್ರೇಲಿಯನ್ ವಸ್ತುಸಂಗ್ರಹಾಲಯವಾಗಿದೆ.

ನ್ಯೂಜಿಲೆಂಡ್‍ನ ಆಕ್ಲೆಂಡ್ ಇನ್‍ಸ್ಟಿಟ್ಯೂಟ್ ಆ್ಯಂಡ್ ಮ್ಯೂಸಿಯಮ್ (1852), ಆಕ್ಲೆಂಡ್ ಸಿಟಿ ಆರ್ಟ್ ಗ್ಯಾಲರಿಗಳು(1888) ನ್ಯೂಜಿಲೆಂಡ್ ಜನಜೀವನದ ಪರಿಪೂರ್ಣ ವಿವರಗಳನ್ನು ನೀಡುತ್ತವೆ. ವೆಲ್ಲಿಂಗ್‍ಟನ್‍ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್(1865) ಮಾನವ ಮತ್ತು ನೈಸರ್ಗಿಕ ವಸ್ತು ಇತಿಹಾಸಕ್ಕೆ ಸಂಬಂಧಿಸಿದೆ. ಕ್ರೈಸ್ಟ್‍ಚರ್ಚ್‍ನ ರಾಬರ್ಟ್ ಮ್ಯಾಕ್‍ಡಗಾಲ್ ಆರ್ಟ್ ಗ್ಯಾಲರಿ(1932) ನ್ಯೂಜಿಲೆಂಡಿನ ಕಲಾ ಪರಂಪರೆಯನ್ನು ತೆರೆದು ತೋರಿಸುತ್ತದೆ.

ಕೆನಡ ದೇಶ ವಸ್ತುಸಂಗ್ರಹಾಲಯಗಳಿಗೆ ಪ್ರಸಿದ್ಧವಾಗಿದ್ದು, ಇಲ್ಲಿ 1,500 ವಸ್ತುಸಂಗ್ರಹಾಲಯಗಳಿವೆ. ನ್ಯಾಷನಲ್ ಮ್ಯೂಸಿಯಮ್ ಆಫ್ ಮ್ಯಾನ್(1957) ಮಾನವೇತಿಹಾಸದ ಚಿತ್ರಣ ನೀಡುವ ಆಕರ್ಷಕ ವಸ್ತುಸಂಗ್ರಹಾಲಯ. ನ್ಯಾಷನಲ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಸೈನ್ಸ್(1957) ನೈಸರ್ಗಿಕ ಸಸ್ಯ, ಪ್ರಾಣಿ, ಖನಿಜಗಳಿಗೆ ಸಂಬಂಧಿಸಿದ ಅಪೂರ್ವ ವಸ್ತುಸಂಗ್ರಹಾಲಯ. ಕೆನಡದಲ್ಲಿ ಹೆಚ್ಚಾಗಿ ಕಲಾ ಗ್ಯಾಲರಿಗಳು ಕಂಡುಬರುತ್ತವೆ. ಇವುಗಳಲ್ಲಿ ಮಾಂಟ್ರಿಯಲ್ ಮ್ಯೂಸಿಯಮ್ ಆಫ್ ಆಟ್ರ್ಸ್ (1860), ಆರ್ಟ್ ಗ್ಯಾಲರಿ ಆಫ್ ಒಂಟಾರಿಯೊ(1900), ವಾಂಕೋವರ್ ಆರ್ಟ್ ಗ್ಯಾಲರಿ(1931), ರಾಯಲ್ ಒಂಟಾರಿಯೊ ಮ್ಯೂಸಿಯಮ್ (1912), ಮುಖ್ಯವಾದುವು. ಕೆನಡದ ದೇಶೀ ಸಂಸ್ಕøತಿಯನ್ನು ಪ್ರದರ್ಶಿಸುವ ವಿಕ್ಟೋರಿಯದ ಬ್ರಿಟಿಷ್ ಕೊಲಂಬಿಯ ಪ್ರೊವಿನ್ಶಿಯಲ್ ಮ್ಯೂಸಿಯಮ್ (1886), ಗ್ಲೆನ್ ಬೊ ಮ್ಯೂಸಿಯಮ್(1966) ಈ ಕಾರಣದಿಂದ ವಿಶಿಷ್ಟವೆನಿಸಿವೆ.

ಅಮೆರಿಕದ ದಕ್ಷಿಣ ಹಾಗೂ ಕೇಂದ್ರ ಭಾಗಗಳಲ್ಲಿ ಹಲವಾರು ಪ್ರಮುಖ ಮ್ಯೂಸಿಯಮ್‍ಗಳಿವೆ. ಮೆಕ್ಸಿಕೋದ ನ್ಯಾಷನಲ್ ಮ್ಯೂಸಿಯಮ್ ಆಫ್ ಆಂತ್ರೊಪಾಲಜಿ(1964) ಮಾನವಶಾಸ್ತ್ರ, ಮನುಕುಲ ವಿವರಣಾ ಶಾಸ್ತ್ರಗಳಿಗೆ ಸಂಬಂಧಿಸಿದ ವಿಶಿಷ್ಟ ವಸ್ತುಸಂಗ್ರಹಾಲಯ ವೆನಿಸಿದೆ. ಚಿಲಿಯ ಆರ್ಕಿಯಾಲಜಿಕಲ್ ಮ್ಯೂಸಿಯಮ್ ಆಫ್ ಲಾ ಸೆರೆನ(1943), ಲೀಮದ ಆರ್ಕಿಯಾಲಜಿಕಲ್ ಮ್ಯೂಸಿಯಮ್‍ಗಳು, ಪುರಾತತ್ತ್ವ ವಿಜ್ಞಾನಕ್ಕೆ ಸಂಬಂಧಿಸಿದ, ಪ್ರಾಗಿತಿಹಾಸದ ವಸ್ತುಗಳ ಸಂಗ್ರಹವನ್ನು ಹೊಂದಿವೆ. ಪ್ರಪಂಚದ ವಿಶಿಷ್ಟ ವಸ್ತುಸಂಗ್ರಹಾಲಯಗಳಲ್ಲಿ ಕೊಲಂಬಿಯದ ಮ್ಯೂಸಿಯಮ್ ಆಫ್ ಗೋಲ್ಡ್(1939) ಉಲ್ಲೇಖಾರ್ಹವಾದುದು. ಇಲ್ಲಿ ವಿವಿಧ ವಿನ್ಯಾಸಗಳ, ವಿವಿಧ ಜನಸಮುದಾಯಗಳಲ್ಲಿ ಪ್ರಚಲಿತವಿರುವ ರಾಜ-ಮಹಾರಾಜ ಮನೆತನಗಳ ಅಮೂಲ್ಯ ಚಿನ್ನಾಭರಣಗಳನ್ನು ಮಾತ್ರ ಪ್ರದರ್ಶಿಸಲಾಗಿದೆ. ಬ್ಯೂನಸ್‍ಐರಿಸ್‍ನಲ್ಲಿರುವ ಆರ್ಜೆಂಟೈನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಸೈನ್ಸ್(1823), ಶೀತ ಮತ್ತು ಉಷ್ಣವಲ ಯಗಳ ಸಸ್ಯ, ಪ್ರಾಣಿ, ಕೀಟ, ಪಕ್ಷಿ ಇವೇ ಮುಂತಾದವುಗಳ ಸಂಗ್ರಹಕ್ಕೆ ಮೀಸಲಾಗಿದೆ. ರಿಯೋ-ಡಿ-ಜಿನೈರೋದ ನ್ಯಾಷನಲ್ ಮ್ಯೂಸಿಯಮ್ ಆಫ್ ಬ್ರಜಿಲ್(1818) ಗ್ರೀಸ್‍ನ ಈಜಿಪ್ಟ್ ಉತ್ಖನನದ ಅಪೂರ್ವ ವಸ್ತು-ವಿಷಯಗಳ ಅಮೂಲ್ಯ ಸಂಗ್ರಹಗಳನ್ನು ಪ್ರದರ್ಶಿಸುತ್ತದೆ. ಇವುಗಳಲ್ಲದೆ ಮೆಕ್ಸಿಕೋದ ನ್ಯಾಷನಲ್ ಮ್ಯೂಸಿಯಮ್ ಆಫ್ ಹಿಸ್ಟರಿ (1825), ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್ ಆಫ್ ಅರ್ಜೆಂಟೀನ (1889), ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್ ಆಫ್ ಬ್ರಜಿಲ್ (1922) - ಇವು ಚಾರಿತ್ರಿಕ ವಸ್ತು-ವಿಷಯಗಳನ್ನು ದಾಖಲಾತಿ ಮಾಡಿರುವ ಹೆಸರಾಂತ ವಸ್ತುಸಂಗ್ರಹಾಲಯಗಳೆನಿಸಿವೆ. ಮೆಕ್ಸಿಕೋದ ಪ್ಯಾಲೇಸ್ ಆಫ್ ಫೈನ್ ಆರ್ಟ್ಸ್, ಲಲಿತ ಕಲೆಗಳಿಗೆ ಸಂಬಂಧಿಸಿದ ಹೆಸರಾಂತ ವಸ್ತುಸಂಗ್ರಹಾಲಯ ಎನಿಸಿದೆ.

ಇಂಗ್ಲೆಂಡಿನ ಸೌತ್ ಕೆನ್‍ಸಿಂಗ್‍ಟನ್‍ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್‍ನಲ್ಲಿ 40 ಮಿಲಿಯನ್ ಸಂಖ್ಯೆಯ ಅಪೂರ್ವ ವಸ್ತುಗಳಿವೆ. ಇದು ಯುರೋಪಿನ ದೊಡ್ಡ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮ್‍ನಲ್ಲಿರುವ ರೊಸೆಟ್ಟಾ ಶಿಲೆ ಹಾಗೂ ಎಲ್ಜಿಲ್ ಅಮೃತಶಿಲೆಗಳು ಆಸಕ್ತರ ಗಮನ ಸೆಳೆಯುವ ಅಪೂರ್ವ ವಸ್ತುಗಳಾಗಿದ್ದು, ಇವುಗಳನ್ನು ಅಥೆನ್ಸ್‍ನ ಪಾರ್ಥೆನಾನ್‍ನಿಂದ ಪಡೆಯಲಾಯಿತು. ಮಾನವೇತಿಹಾಸದ ಅರಿವು ಮೂಡಿಸುವ ಮ್ಯೂಸಿಯಮ್ ಆಫ್ ಮ್ಯಾನ್ ಕೈಂಡ್ ಬ್ರಿಟನ್ನಿನ ಇನ್ನೊಂದು ಪ್ರತಿಷ್ಠಿತ ವಸ್ತುಸಂಗ್ರಹಾಲಯವಾಗಿದೆ. ರಷ್ಯದ ಸ್ಟೇಟ್ ಹಿಸ್ಟಾರಿಕಲ್ ಮ್ಯೂಸಿಯಮ್(1873) ರಷ್ಯನ್ ಜನ ಸಂಸ್ಕøತಿ, ಚರಿತ್ರೆಗಳಿಗೆ ಮೀಸಲಾಗಿದೆ.

ಕಲೆ, ಸಂಸ್ಕøತಿ, ಚರಿತ್ರೆ, ಪ್ರಕೃತಿಗಳಿಗೆ ಸಂಬಂಧಿಸಿದ ಸಾಮಾನ್ಯ ವಸ್ತುಸಂಗ್ರಹಾಲಯ ಗಳಲ್ಲದೆ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ವಿಶೇಷ ವಸ್ತುಸಂಗ್ರಹಾಲಯಗಳು ಪ್ರಪಂಚಾದ್ಯಂತ ಕಂಡುಬರುತ್ತವೆ. ಮಕ್ಕಳ ವಸ್ತುಸಂಗ್ರಹಾಲಯಗಳು, ವಿಜ್ಞಾನ-ತಂತ್ರಜ್ಞಾನ, ಸಾರಿಗೆ, ಸಮುದ್ರ ವಿಜ್ಞಾನ, ಖಗೋಳ ಮುಂತಾದ ಸಂಗತಿಗಳಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳಿವೆ. ವೈಜ್ಞಾನಿಕ ವಸ್ತು ವಿವರಗಳ ಮೊದಲ ವಸ್ತುಸಂಗ್ರಹಾಲಯ ಆರಂಭವಾದುದು ಲಂಡನ್ನಿನಲ್ಲಿ. ಲಂಡನ್ನಿನ ಸೈನ್ಸ್ ಮ್ಯೂಸಿಯಮ್(1853) ಪ್ರಪಂಚಾದ್ಯಂತ ಈ ಬಗೆಯ ವಸ್ತುಸಂಗ್ರಹ ಮಾಹಿತಿಗಳಿಗೆ ಪ್ರೇರೇಪಣೆ ನೀಡಿತು. ಇಂಥ ಪ್ರಸಿದ್ಧ ವಸ್ತುಸಂಗ್ರಹಾಲ ಯಗಳಲ್ಲಿ ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡ್ ಮ್ಯೂಸಿಯಮ್(1855), ಬ್ರಿಸ್ಬೇನ್, ಮಾಸ್ಕೋದ ಪಾಲಿಟೆಕ್ನಿಕಲ್ ಮ್ಯೂಸಿಯಮ್(1872), ಮ್ಯೂನಿಚ್‍ನ ಚೆಚೆಸ್ ಮ್ಯೂಸಿಯಮ್(1903), ಬಾರ್ಸಿಲೋನದ ಮ್ಯೂಸಿಯಮ್ ಆಫ್ ಸೈನ್ಸ್, ಇಟಲಿಯ ಲಿಯೊನಾರ್ಡೊ ಡ ವಿಂಚಿ ನ್ಯಾಷನಲ್ ಮ್ಯೂಸಿಯಮ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಮಿಲಾನ್ (1949), ನ್ಯಾಷನಲ್ ಮಾರಿಟೈಮ್ ಮ್ಯೂಸಿಯಮ್, ಬ್ರಿಟನ್, ನ್ಯೂಜಿಲೆಂಡಿನ ಮ್ಯೂಸಿಯಮ್ ಆಫ್ ಟ್ರಾನ್ಸ್‍ಪೋರ್ಟ್ ಆ್ಯಂಡ್ ಟೆಕ್ನಾಲಜಿ(1964) ಆಕ್ಲೆಂಡ್, ಕೆನಡದ ಟೊರೆಂಟೋದಲ್ಲಿನ ಒಂಟಾರಿಯೋ ಸೈನ್ಸ್ ಸೆಂಟರ್(1964), ಟೋಕಿಯೋದ ನ್ಯಾಷನಲ್ ಸೈನ್ಸ್ ಮ್ಯೂಸಿಯಮ್(1964), ಫಿಲಿಪೀನ್ಸ್‍ನ ಮ್ಯೂಸಿಯಮ್ ಆಫ್ ಆಟ್ರ್ಸ್ ಆ್ಯಂಡ್ ಸೈನ್ಸ್, ಕೆನಡದ ನ್ಯಾಷನಲ್ ಮ್ಯೂಸಿಯಮ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (1966), ಪಾಕಿಸ್ತಾನದ ನ್ಯಾಷನಲ್ ಮ್ಯೂಸಿಯಮ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (1976), ಲಾಹೋರ್., ಸಿಂಗಪುರದ ಸೈನ್ಸ್ ಸೆಂಟರ್ (1977)-ಇವು ಅತ್ಯಂತ ಪ್ರಸಿದ್ಧವಾಗಿವೆ.

ಮಕ್ಕಳಿಗಾಗಿ ಮೀಸಲಾಗಿರುವ ವಸ್ತುಸಂಗ್ರಹಾಲಯಗಳಲ್ಲಿ ಬ್ರೂಕ್ಲಿನ್ ಚಿಲ್ಡ್ರನ್ ಮ್ಯೂಸಿಯಮ್-ನ್ಯೂಯಾರ್ಕ್, ಬಾಸ್ಟನ್‍ನ ಚಿಲ್ಡ್ರನ್ಸ್ ಮ್ಯೂಸಿಯಮ್, ಮಾಂಟ್ ರೈಂಟ್ ಚಿಲ್ಡ್ರನ್ಸ್ ಮ್ಯೂಸಿಯಮ್-ಆಲ್ಜಿಯರ್ಸ್-ಅತ್ಯಂತ ಪ್ರಸಿದ್ಧವಾದವು. ಭಾರತದಲ್ಲೂ ಇಂಥ ಒಂದು ವಸ್ತುಸಂಗ್ರಹಾಲಯವನ್ನು ನವದೆಹಲಿಯಲ್ಲಿ ಮೊದಲು ಆರಂಭಿಸಲಾಯಿತು. ನ್ಯಾಷನಲ್ ಚಿಲ್ಡ್ರನ್ಸ್ ಮ್ಯೂಸಿಯಮ್ ಎಂಬ ಹೆಸರಿನಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದರ ಪ್ರೇರೇಪಣೆಯಿಂದ ಕೊಲ್ಕತ್ತದಲ್ಲಿ ನೆಹ್ರೂ ಚಿಲ್ಡ್ರನ್ಸ್ ಮ್ಯೂಸಿಯಮ್ ಮಕ್ಕಳಿಗಾಗಿಯೇ ಸ್ಥಾಪಿತವಾಗಿದೆ.

ಭಾರತದಲ್ಲಿ

ಭಾರತದಲ್ಲಿ ವಸ್ತುಸಂಗ್ರಹಾಲಯಗಳ ಆಧುನಿಕ ಪರಿಕಲ್ಪನೆ ಆರಂಭ ವಾದುದು. ಪಾಶ್ಚಾತ್ಯರಿಂದ. ಹರಪ್ಪ ಮತ್ತು ಮೊಹೆಂಜೊದಾರೊ ಉತ್ಖನನಗಳಲ್ಲಿ ದೊರೆತ ಸಾಮಗ್ರಿಗಳು, ಪ್ರಾಚೀನ ಭಾರತೀಯರು ವಸ್ತುಸಂಗ್ರಹಗಳಲ್ಲಿ ಆಸಕ್ತರಾಗಿದ್ದರೆಂಬ ಪುರಾವೆಯನ್ನು ತೋರಿಸುತ್ತವೆ. ಪ್ರಾಚೀನ ದೇವಾಲಯಗಳಲ್ಲಿ ಭಿತ್ತಿಚಿತ್ರಗಳನ್ನು, ದೇವಾನುದೇವತೆಗಳ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದರು. ಅಯೋಧ್ಯೆಯ ನ್ನಾಳಿದ ರಾಜರ ವಿಗ್ರಹಗಳನ್ನು ಊರಹೊರಗೆ ಪ್ರದರ್ಶಿಸಲಾಗಿತ್ತೆಂದು ರಾಮಾಯಣದಿಂದ ತಿಳಿದುಬರುತ್ತದೆ. ಮಯ ನಿರ್ಮಿಸಿದ ಅರಮನೆಯಲ್ಲಿ ವರ್ಣಮಯ ಭಿತ್ತಿಚಿತ್ರಗಳಿದ್ದುವೆಂದು ಮಹಾಭಾರತ ಹೇಳುತ್ತದೆ. ಇಂಥ ಉಲ್ಲೇಖಗಳ ಜೊತೆಗೆ ಭಾರತದ ಹಲವಾರು ಸ್ಥಳಗಳಲ್ಲಿ ನಡೆದ ಉತ್ಖನನಗಳು ಅಸಂಖ್ಯಾತ ಅಪೂರ್ವ ವಸ್ತುಸಂಗ್ರಹಗಳನ್ನು ಹೊರತೆಗೆದಿವೆ. ಆದರೆ, ಪ್ರಾಚೀನ ಭಾರತದಲ್ಲಿ ಪ್ರತ್ಯೇಕ ವಸ್ತುಸಂಗ್ರಹಾಲಯ ಸ್ವರೂಪದ ಕಟ್ಟಡಗಳು, ಪುರಾವೆಗಳು ದೊರೆತ ಬಗ್ಗೆ ಮಾಹಿತಿಗಳು ಸಿಗುವುದಿಲ್ಲ.

ಬ್ರಿಟಿಷರು ಕೋಲ್ಕತದಲ್ಲಿ ಆರಂಭಿಸಿದ ಇಂಡಿಯನ್ ಮ್ಯೂಸಿಯಮ್ (1814) ದಕ್ಷಿಣ ಪೂರ್ವ ಏಷ್ಯದ ಅತ್ಯಂತ ಹಳೆಯ ಹಾಗೂ ಬೃಹತ್ ಸ್ವರೂಪದ ವಸ್ತುಸಂಗ್ರಹಾಲಯವಾಗಿದೆ. ಇದರಲ್ಲಿ ಆರು ಪ್ರಮುಖ ಪ್ರದರ್ಶನ ಘಟಕಗಳಿವೆ. ಕಲೆ, ಪುರಾಣ, ಪುರಾತತ್ತ್ವ, ಮಾನವಶಾಸ್ತ್ರ, ಭೂಗೋಳ, ಪ್ರಾಣಿವಿಜ್ಞಾನ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗಗಳಿವೆ. ಅಪೂರ್ವ ಹಾಗೂ ಲಕ್ಷಾಂತರ ಸಂಖ್ಯೆಯ ವಸ್ತುಗಳಿಂದ, ಪ್ರದರ್ಶನ ವಿಧಾನದಿಂದ ಇದು ಪ್ರಪಂಚ ಪ್ರಸಿದ್ಧವಾಗಿದೆ. ನವದೆಹಲಿಯ ನ್ಯಾಷನಲ್ ಮ್ಯೂಸಿಯಮ್(1949), ಮತ್ತೊಂದು ಪ್ರಮುಖ ವಸ್ತುಸಂಗ್ರಹಾಲಯ. ಇಲ್ಲಿ ಚಿತ್ರ, ಶಿಲ್ಪ, ನಾಣ್ಯ ಮತ್ತು ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ. ಅಧ್ಯಯನ, ಸಂಶೋಧನೆ ಗಳಿಗೂ ಇಲ್ಲಿ ಅವಕಾಶವಿದೆ. ನೆಹರೂ ಮೆಮೋರಿಯಲ್ ಮ್ಯೂಸಿಯಮ್ ನವದೆಹಲಿಯ ಮತ್ತೊಂದು ಪ್ರಮುಖ ವಸ್ತುಸಂಗ್ರಹಾಲಯ. ಇದು ನೆಹರೂ ಮನೆತನ ಹಾಗೂ ಅದರ ಸಂಗ್ರಹವನ್ನು ವಿಶೇಷವಾಗಿ ಒಳಗೊಂಡಿದೆ. ಚಿತ್ರಕಲೆ, ಶಿಲ್ಪಗಳಿಗೂ ಪ್ರಾಧಾನ್ಯ ನೀಡಲಾಗಿದೆ.

ಆಂಧ್ರಪ್ರದೇಶದಲ್ಲಿ ಹಲವಾರು ಪ್ರತಿಷ್ಠಿತ ವಸ್ತುಸಂಗ್ರಹಾಲಯಗಳಿವೆ. ಹೈದರಾಬಾದಿನ ಸಾಲಾರ್‍ಜಂಗ್ ಮ್ಯೂಸಿಯಮ್‍ನಲ್ಲಿ ಕಲೆ, ಶಿಲ್ಪ, ನಾಣ್ಯ, ಪುರಾತತ್ತ್ವ, ಜಾನಪದ, ಇತಿಹಾಸ, ವಿಜ್ಞಾನ ಮುಂತಾದ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ಐವತ್ತು ಸಾವಿರಕ್ಕೂ ಮಿಕ್ಕಿದ ವಸ್ತುಗಳಿವೆ. ತೆರೆದ ಗಾಳಿಯ, ಮುಕ್ತ ಪ್ರದರ್ಶನ ವಿಧಾನದಿಂದಾಗಿ ಇದು ಗಮನ ಸೆಳೆಯುತ್ತದೆ. ಆಂಧ್ರಪ್ರದೇಶದ ಸ್ಟೇಟ್ ಮ್ಯೂಸಿಯಮ್ ಅ್ಯಂಡ್ ಆರ್ಟ್ ಗ್ಯಾಲರಿಯಲ್ಲಿ ಭಾರತೀಯ ಕಲೆ, ಆಂಧ್ರಪ್ರದೇಶದ ಶಿಷ್ಟ ಮತ್ತು ಜನಪದ ಕಲೆ, ವಾಸ್ತು ಮತ್ತು ಚಿತ್ರ ಪ್ರದರ್ಶನವನ್ನು ಕಾಣಬಹುದು. ನೆಹರು ಜೂವಾಲಾಜಿಕಲ್ ಪಾರ್ಕ್ ಆಂಧ್ರಪ್ರದೇಶದ ಮತ್ತೊಂದು ಪ್ರಮುಖ ಕೇಂದ್ರ. ಇಲ್ಲಿ ಭೂವಿಜ್ಞಾನ, ಸಸ್ಯ ಹಾಗೂ ಪ್ರಾಣಿ ಸಂಬಂಧಿಯಾದ ವಸ್ತುಪ್ರದರ್ಶನವಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಂಡಮಾನಿನ ಪೋರ್ಟ್‍ಬ್ಲೇರ್‍ನಲ್ಲಿರುವ ಆಂತ್ರೊಪಾಲಜಿಕಲ್ ಮ್ಯೂಸಿಯಮ್ ಉಲ್ಲೇಖಾರ್ಹ. ಇಲ್ಲಿ ಅಂಡಮಾನ್‍ನ ಮೂಲ ನಿವಾಸಿಗಳಾದ ಝರವಾ, ಓಂಗೇ, ಷೊಂಪೇನ್ ಮತ್ತು ಗ್ರೇಟ್ ಅಂಡಮಾನೀಸ್ ಜನ ಸಮುದಾಯಗಳ ಬದುಕು ಮತ್ತು ಸಂಸ್ಕøತಿಯ ಸಾಹಿತ್ಯ, ಕಲೆ, ಉಡುಗೆ, ಆಹಾರ ಸಾಮಗ್ರಿ, ಬೇಟೆಯ ಆಯುಧಗಳು, ಸಂಗೀತ ವಾದ್ಯ ಪರಿಕರಗಳು ಮುಂತಾದವನ್ನು ಪ್ರದರ್ಶಿಸಲಾಗಿದೆ. ಆದಿವಾಸಿ ಅಧ್ಯಯನಕ್ಕೆ ಸಂಬಂಧಿಸಿದ ಗ್ರಂಥಾಲಯ, ಸಂಶೋಧನೆ, ದಾಖಲಾತಿ ಕೇಂದ್ರಗಳೂ ಇದರಲ್ಲಿ ಸೇರಿವೆ. ಅಂಡಮಾನಿನ ಸೆಲ್ಯುಲಾರ್ ಜೈಲು ಇನ್ನೊಂದು ಪ್ರಮುಖ ವಸ್ತುಸಂಗ್ರಹಾಲಯವಾಗಿದ್ದು, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರ ಚಿತ್ರ, ಸಮಗ್ರ ವಿವರ, ವಿದೇಶೀಯರು ನೀಡಿದ ಚಿತ್ರಹಿಂಸೆ, ಶಿಕ್ಷೆಗಳ ಪುನರ್ ಸೃಷ್ಟಿ, ವೀರರನ್ನು ಗಲ್ಲಿಗೇರಿಸುತ್ತಿದ್ದ ಕುಣಿಕೆ, ವಿಧಾನ ಮುಂತಾದ ಎಲ್ಲ ವಿವರಗಳನ್ನೂ ಇದು ಪ್ರದರ್ಶಿಸುತ್ತದೆ. ಚಂಡೀಗಡದ ಮ್ಯೂಸಿಯಮ್, ಆರ್ಟ್ ಗ್ಯಾಲರಿ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಪೋಟ್ರೇಟ್ಸ್ ಮುಖ್ಯ ಎನಿಸಿವೆ. ಇವು ವಿಶೇಷವಾಗಿ ಕಲೆ ಮತ್ತು ಸಂಸ್ಕøತಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿವೆ. ನ್ಯಾಷನಲ್ ಗ್ಯಾಲರಿ ಆಫ್ ಪೋಟ್ರೇಟ್ಸ್‍ನಲ್ಲಿ ರಾಷ್ಟ್ರನಾಯಕರ ಅಪೂರ್ವ ಚಿತ್ರ ಪ್ರದರ್ಶನವಿದೆ. ಕೊಲ್ಕತ್ತದ ವಿಕ್ಟೋರಿಯ ಮೆಮೋರಿಯಲ್ ವಿಶೇಷವಾಗಿ ಚಿತ್ರಶಾಲೆಯಾಗಿ ದ್ದರೂ ಶಿಲ್ಪಕಲೆಯ ಅಪೂರ್ವ ವಸ್ತುಸಂಗ್ರಹವೂ ಇಲ್ಲಿದೆ. ಅಶುತೋಶ್ ಮ್ಯೂಸಿಯಮ್ ಆಫ್ ಆಟ್ರ್ಸ್ ಚಿತ್ರಕಲೆಗೆ ಮೀಸಲಾದ ಮ್ಯೂಸಿಯಮ್. ಇಲ್ಲಿ ಭಾರತದ ಪ್ರಾಚೀನ ಹಾಗೂ ಅರ್ವಾಚೀನ ಪರಂಪರೆಯ ವಿಭಿನ್ನ ಕಲಾಕೃತಿಗಳಿವೆ. ಚಿತ್ರಕಲಾ ತರಬೇತಿಯನ್ನೂ ಇದು ನೀಡುತ್ತದೆ. ಕವಿ ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಸಾಹಿತ್ಯ, ಕಲೆ, ರವೀಂದ್ರ ನಾಥರ ಬದುಕು-ಬರೆಹ ಪ್ರದರ್ಶಿಸುವ ಅಪೂರ್ವ ವಸ್ತುಸಂಗ್ರಹಾಲಯ ವಿದೆ.

ಚೆನ್ನೈನಲ್ಲಿರುವ ಪೋರ್ಟ್ ಮ್ಯೂಸಿಯಮ್ ಸಮುದ್ರಯಾನ ಸಂಬಂಧಿಯಾದ ಹಡಗು, ಅದರ ಉಪಕರಣಗಳಿಗೆ ಸಂಬಂಧಿಸಿದ ಅಪೂರ್ವ ವಸ್ತುಸಂಗ್ರಹಾಲಯ. ಕಲೆ, ಸಾಹಿತ್ಯ, ಶಿಲ್ಪ, ಜಾನಪದ ಮುಂತಾದವುಗಳಿಗೆ ಸಂಬಂಧಿಸಿದ ಎಗ್‍ಮೋರ್ ಮ್ಯೂಸಿಯಮ್ ಚೆನ್ನೈನ ಮತ್ತೊಂದು ಪ್ರಮುಖ ವಸ್ತುಸಂಗ್ರಹಾಲಯವಾಗಿದೆ. ತಮಿಳುನಾಡಿನ ಊಟಿಯಲ್ಲಿ ಆದಿವಾಸಿ ಸಂಶೋಧನ ಕೇಂದ್ರ.

ತಮಿಳುನಾಡಿನ ತೋಡ, ಕೋತ, ಬಡಗ ಮುಂತಾದ ಆದಿವಾಸಿಗಳ ಉಡುಗೆ, ತೊಡುಗೆ, ವಾದ್ಯ, ಆಹಾರ, ಬೇಟೆ ಮುಂತಾದ ಸಮಗ್ರ ಜೀವನ-ಸಂಸ್ಕøತಿಯ ವಸ್ತುಸಂಗ್ರಹಾಲಯವನ್ನು ಹೊಂದಿದೆ. ಆದಿವಾಸಿ ಅಧ್ಯಯನ ಸಂಬಂಧಿಯಾದ ಅಪೂರ್ವ ಗ್ರಂಥಾಲಯ, ದಾಖಲಾತಿ ಕೇಂದ್ರವೂ ಇದಕ್ಕೆ ಹೊಂದಿಕೊಂಡಿವೆ.

ಲಕ್ಷದ್ವೀಪದ ಆಕ್ವೇರಿಯಮ್-ಮ್ಯೂಸಿಯಮ್ ಕವರತ್ತಿಯಲ್ಲಿದೆ. ಸಮುದ್ರ ಮೀನುಗಳ, ಹವಳ, ನಕ್ಷತ್ರಮೀನು ಮೊದಲಾದ ಸಮುದ್ರ ಸಂಪತ್ತಿನ ಅದ್ಭುತ ಲೋಕವನ್ನು ಈ ವಸ್ತುಸಂಗ್ರಹಾಲಯ ತೆರೆದಿಟ್ಟಿದೆ. ಮಧ್ಯಪ್ರದೇಶದ ಭೋಪಾಲ್‍ನ ಇಂದಿರಾಗಾಂಧಿ ನ್ಯಾಷನಲ್ ಎತ್ನೋ ಮ್ಯೂಸಿಯಮ್ ಭಾರತದ ಅತ್ಯಂತ ದೊಡ್ಡ ಮನುಕುಲ ವಿವರಣ ವಸ್ತುಸಂಗ್ರಹಾಲಯವಾಗಿದೆ. ಸು.200 ಎಕರೆ ಪ್ರದೇಶದಲ್ಲಿ ಇದು ಹರಡಿಕೊಂಡಿದೆ. ಭಾರತದ ವೈವಿಧ್ಯಮಯ ಸಂಸ್ಕøತಿಯನ್ನು ಬಿಂಬಿಸುವ ಕಲೆ, ಸಂಸ್ಕøತಿಯ ಪ್ರತ್ಯೇಕ ವಿಭಾಗಗಳಿವೆ. 11,000 ಮಾನವ ಕುಲ ಸಂಬಂಧಿ ವಿವರಗಳು, 24,000 ಸ್ಲೈಡ್ ಹಾಗೂ ಛಾಯಾಚಿತ್ರಗಳು, 16,000 ಪುಸ್ತಕಗಳು, ಬುಡಕಟ್ಟು ಭಾಷೆಯ 4,000 ಪುಸ್ತಕಗಳು ಇಲ್ಲಿವೆ.

ಪಂಜಾಬ್‍ನ ರೂಪರ್, ಸಿಂಧೂ ಬಯಲಿನ ನಾಗರಿಕತೆಯ ಕೇಂದ್ರವಾಗಿದೆ. ಇಲ್ಲಿ ಹರಪ್ಪ-ಮೊಹೆಂಜೊದಾರೊ ಉತ್ಖನನಗಳಿಂದ ಸಂಗ್ರಹಿಸಿದ ಅಪೂರ್ವ ವಸ್ತುಪ್ರದರ್ಶನವಿದೆ. ಭಾರತದ ಪ್ರಾಚೀನ ನಾಗರಿಕತೆಯ ಜೀವಂತ ಪ್ರದರ್ಶನ ಇಲ್ಲಿದೆ. ಪಾಂಡಿಚೇರಿಯ ಸರ್ಕಾರಿ ಮ್ಯೂಸಿಯಮ್ ಕಲೆ, ಇತಿಹಾಸ, ಸಂಸ್ಕøತಿಗೆ ಸಂಬಂಧಿಸಿದೆ. ಭಾರತಿ ಮತ್ತು ಭಾರತೀದಾಸನ್ ಸ್ಮಾರಕ ಮ್ಯೂಸಿಯಮ್ ಸಾಹಿತ್ಯ-ಸಂಸ್ಕøತಿಯ ವೈವಿಧ್ಯವನ್ನು ಪ್ರದರ್ಶಿಸುತ್ತದೆ.

ಕಲೆ, ಸಾಹಿತ್ಯ, ಇತಿಹಾಸ, ಜಾನಪದಗಳಿಗೆ ಹೊರತಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧವಾದ ವಸ್ತುಸಂಗ್ರಹಾಲಯಗಳ ಪರಿಕಲ್ಪನೆ ಭಾರತದಲ್ಲಿ 1980ರ ತರುವಾಯ ಕಾಣಿಸಿಕೊಂಡಿತು. ಮುಂಬೈನ ನೆಹರೂ ಸೈನ್ಸ್ ಸೆಂಟರ್(1985) ಭಾರತದ ವೈಜ್ಞಾನಿಕ ಇತಿಹಾಸ, ಸಾಧನ-ಸಾಮಗ್ರಿಗಳನ್ನು ಸಮಗ್ರವಾಗಿ ಚಿತ್ರಿಸುತ್ತದೆ. ಕೊಲ್ಕತ್ತದ ಬಿರ್ಲಾ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಮ್ಯೂಸಿಯಮ್ ಕೈಗಾರಿಕೆ ಹಾಗೂ ತಂತ್ರಜ್ಞಾನ ಸಂಬಂಧಿಯಾದ ಯಂತ್ರೋಪಕರಣಗಳ ಬೃಹತ್ ಸ್ವರೂಪದ ಪ್ರದರ್ಶನವಾಗಿದೆ. ಅಂಡಮಾನಿನ ಮರೀನ್ ಮ್ಯೂಸಿಯಮ್ ಸಮುದ್ರ ವಿಜ್ಞಾನ, ನೌಕಾಪಡೆಗೆ ಸಂಬಂಧಿಸಿದ ವೈಜ್ಞಾನಿಕ ವಸ್ತುಸಂಗ್ರಹಾಲಯ.

ವಸ್ತುಗಳನ್ನು, ಸಾಧನೆ-ಸಿದ್ಧಿಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳ ಚಿತ್ರ-ಶಿಲ್ಪಗಳನ್ನು ಪ್ರದರ್ಶಿಸುವುದರ ಜೊತೆಗೆ ವಿಜ್ಞಾನ-ತಂತ್ರಜ್ಞಾನದ ವಸ್ತುಸಂಗ್ರಹಾಲಯಗಳು ಎಲ್ಲ ವಯೋಮಾನದವರಲ್ಲಿ ವೈಜ್ಞಾನಿಕ ಮನೋಭಾವ ಹುಟ್ಟಿಸುವ ಸಂಶೋಧನೆ, ಪ್ರಕಟಣೆಗಳಲ್ಲೂ ತೊಡಗಿಸಿ ಕೊಂಡಿವೆ. ವೈಜ್ಞಾನಿಕ ಪ್ರಜ್ಞೆ ಬೆಳೆಯುವಂತೆ ಮಾಡುವಲ್ಲಿ ಭಾರತದಂಥ ಸಂಪ್ರದಾಯನಿಷ್ಠ ದೇಶದಲ್ಲಿ ವಸ್ತುಸಂಗ್ರಹಾಲಯಗಳ ಪಾತ್ರ ಬಹಳ ಹಿರಿದಾದುದಾಗಿದೆ.

ಕರ್ನಾಟಕದಲ್ಲಿ

ಕರ್ನಾಟಕ ರಾಜ್ಯದಲ್ಲಿ ಪ್ರಾಚ್ಯ ಇಲಾಖೆ ಮತ್ತು ವಸ್ತುಸಂಗ್ರಹಾಲಯ ಸಂಸ್ಥೆ ರೂಪುಗೊಂಡ ಮೇಲೆ ಸಂಗ್ರಹಾಲಯಗಳ ಬೆಳೆವಣಿಗೆ ಆಗತೊಡಗಿತು. ಈಗ ಇಲ್ಲಿ ಅನೇಕ ವಸ್ತುಸಂಗ್ರಹಾಲಯಗಳಿವೆ. ರಾಜ್ಯ ಪ್ರಾಚ್ಯ ಇಲಾಖೆಯವರ ಅಧೀನದಲ್ಲಿ 9 ಸಂಗ್ರಹಾಲಯಗಳಿವೆ. ಭಾರತ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಅಧೀನದಲ್ಲಿ 4 ಸಂಗ್ರಹಾಲಯಗಳು ಮತ್ತು 3 ಶಿಲ್ಪಕಲಾಸಂಗ್ರಹಾಲಯಗಳಿವೆ. ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನ ಇಲಾಖೆಗೆ ಸೇರಿದ 3 ಸಂಗ್ರಹಾಲಯಗಳಿವೆ. 9 ಖಾಸಗಿ ಸಂಗ್ರಹಾಲಯಗಳಿವೆ. ಇವಲ್ಲದೆ 3 ವಿಶ್ವವಿದ್ಯಾಲಯಗಳ ಸಂಗ್ರಹಾಲಯಗಳಿವೆ. ಈ ಲೇಖನದಲ್ಲಿ ಕರ್ನಾಟಕದ ಸಂಗ್ರಹಾಲಯಗಳ ಸ್ಥೂಲ ಸಮೀಕ್ಷೆಯನ್ನು ಕೊಡಲಾಗಿದೆ.

1960ಕ್ಕೂ ಮೊದಲು ಸರ್ಕಾರಿ ಸಂಗ್ರಹಾಲಯಗಳು ಕೈಗಾರಿಕಾ ಇಲಾಖೆಗೆ ಸೇರಿದ್ದುವು. 1960ರಲ್ಲಿ ಇವೆಲ್ಲವನ್ನೂ ಪ್ರಾಚ್ಯ ಇಲಾಖಾ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು.

ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯ 1865ಕ್ಕೂ ಹಿಂದೆ ಬಾಡಿಗೆ ಕಟ್ಟಡದಲ್ಲಿತ್ತು. ಪಾಶ್ಚಾತ್ಯ ರೀತಿಯಲ್ಲಿ ಕಬ್ಬನ್ ಪಾರ್ಕಿನಲ್ಲಿ ನೂತನ ಕಟ್ಟಡ 1879ರಲ್ಲಿ ಸಿದ್ಧವಾಗಿ 1880ರಲ್ಲಿ ಸಂಗ್ರಹಾಲಯ ಪ್ರಾರಂಭವಾಯಿತು. ಇಲ್ಲಿ ಪ್ರಾಚೀನ ಕಾಲದ ನಾಣ್ಯಗಳು, ಶಿಲ್ಪಕೃತಿಗಳು, ತಾಳೆಗರಿಗಳು, ಪ್ರಾಚ್ಯ ಇಲಾಖೆಯ ಸಂಶೋಧನ ಸಾಮಗ್ರಿಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿ ಚಿತ್ರಶಿಲ್ಪ ಕಲಾವಸ್ತುಗಳ ಪ್ರದರ್ಶನಕ್ಕೆ ಪ್ರತ್ಯೇಕ ಅವಕಾಶ ಕೂಡ ಇದೆ. 1935ರಿಂದ ಅನೇಕ ಅಪರೂಪದ ವಸ್ತುಗಳನ್ನು ಕೊಳ್ಳುವುದರ ಮೂಲಕ, ದಾನ ಪಡೆಯುವುದರ ಮೂಲಕ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಯಿತು. ಎರಡು ಮತ್ತು ಮೂರನೆಯ ಪಂಚವಾರ್ಷಿಕ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಈಗಿನ ಕಟ್ಟಡವನ್ನು ಹಿಗ್ಗಿಸಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲು ಹಣ ಸಹಾಯ ಮಾಡಿತು.

ಚಿತ್ರದುರ್ಗದ ವಸ್ತುಸಂಗ್ರಹಾಲಯ ಅಪೂರ್ವವಾದ ಅನೇಕ ಕಲಾವಸ್ತುಗಳನ್ನು ಹೊಂದಿದೆ. ಪ್ರಸಿದ್ಧ ವಿದ್ವಾಂಸರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಶ್ರಮದ ಫಲವಾಗಿ ಈ ಸಂಗ್ರಹಾಲಯ ಪ್ರಾರಂಭವಾಯಿತು. ಮೊದಲು ಚಂದ್ರವಳ್ಳಿ, ಬ್ರಹ್ಮಗಿರಿ ಪ್ರದೇಶದಲ್ಲಿ ದೊರೆತ ಅವಶೇಷಗಳು ಮಾತ್ರ ಇಲ್ಲಿ ಪ್ರದರ್ಶನಗೊಂಡಿದ್ದುವು. 1947ರಲ್ಲಿ ಈ ಸಂಗ್ರಹಾಲಯ ರಾಜ್ಯ ಪ್ರಾಚ್ಯ ಇಲಾಖೆಯ ಆಡಳಿತಕ್ಕೆ ಸೇರಿತು. ಇಲ್ಲಿ ಚಿತ್ರದುರ್ಗದ ಪಾಳೆಯಗಾರರಿಗೆ ಸಂಬಂಧಿಸಿದಂತೆ ಅನೇಕ ಆಯುಧೋಪಕರಣಗಳನ್ನೂ ವಸ್ತುವಿಶೇಷಗಳನ್ನೂ ನೋಡಬಹುದಾಗಿದೆ.

ಶಿವಮೊಗ್ಗದಲ್ಲಿರುವ ಜಿಲ್ಲಾ ವಸ್ತುಸಂಗ್ರಹಾಲಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡದಲ್ಲಿದೆ. ಈ ಪ್ರದೇಶದಲ್ಲಿ ಆಳಿದ ರಾಜರು, ಪಾಳೆಯಗಾರರು ಬಳಸುತ್ತಿದ್ದಂಥ ಅನೇಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಕೆಳದಿ ಅರಸರ ಕಾಲದ ವಿಗ್ರಹಗಳು, ನಾಣ್ಯಗಳು, ಆಯುಧಗಳು, ಫಿರಂಗಿಗಳು, ವೇಷಭೂಷಣಕ್ಕೆ ಸಂಬಂಧಿಸಿದ ವಸ್ತುಗಳು ಮುಂತಾದ ವನ್ನು ಇಲ್ಲಿ ನೋಡಬಹುದು. ಇಲ್ಲಿನ ಸಂಗ್ರಹದಲ್ಲಿರುವ ಅಪೂರ್ವ ವಸ್ತುವೆಂದರೆ ಆ್ಯಮ್‍ಸ್ಟರ್‍ಡ್ಯಾಮ್‍ನಲ್ಲಿ ತಯಾರಿಸಲಾದ ಒಂದು ಗಂಟೆ. ಇದು ಕೆಳದಿಯ ಚೆನ್ನಮ್ಮಾಜಿಯ ಕಾಲದ್ದು. ಸಾಗರ, ಸೊರಬ ಮುಂತಾದ ಕಡೆಯ ಹಿಂದಿನ ಹಾಗೂ ಇಂದಿನ ಗುಡಿಗಾರರ ದಂತದ ಕುಸುರಿನ ಕೆತ್ತನೆ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ.

ಮಡಿಕೇರಿಯ ಜಿಲ್ಲಾ ವಸ್ತುಸಂಗ್ರಹಾಲಯ 1971ರಲ್ಲಿ ಕೋಟೆಯ ಒಳಭಾಗದಲ್ಲಿರುವ ಹಳೆಯ ಕಾಲದ ಸುಂದರ ಚರ್ಚಿನಲ್ಲಿ ಪ್ರಾರಂಭವಾ ಯಿತು. ಈ ಜಿಲ್ಲೆಯ ಪ್ರದೇಶದಲ್ಲಿ ಸಂಗ್ರಹಿಸಿದ ವಿವಿಧ ಶಿಲಾಮೂರ್ತಿ ಗಳು, ನಾಣ್ಯಗಳು, ಕೊಡಗಿನ ರಾಜರ ಕಾಲದ ಹಸ್ತಪ್ರತಿಗಳು, ವೇಷಭೂ ಷಣಗಳು, ಕತ್ತಿ, ಕಠಾರಿಗಳು, ಅಲ್ಲದೆ ತೀರ್ಥಂಕರ ವಿಗ್ರಹಗಳು ಮುಂತಾದುವು ಇಲ್ಲಿ ಪ್ರದರ್ಶಿತವಾಗಿವೆ.

ಮಂಗಳೂರಿನ ಶ್ರೀಮಂತಿಬಾಯಿ ವಸ್ತುಸಂಗ್ರಹಾಲಯ ಎತ್ತರವಾದ ಗುಡ್ಡದ ಮೇಲಿರುವ ಕಟ್ಟಡದಲ್ಲಿ ಇದೆ. ಖ್ಯಾತ ಕರ್ನಲ್ ವಿ.ಆರ್. ಮಿರಜ್‍ಕರ್ ಅವರು ತಮ್ಮ ತಾಯಿಯವರ ಸ್ಮರಣೆಗಾಗಿ 1906ರಲ್ಲಿ ಈ ಸಂಗ್ರಹಾಲಯವನ್ನು ಪ್ರಾರಂಭಿಸಿ ಅನಂತರ ಸರ್ಕಾರದ ವಶಕ್ಕೆ ಕೊಟ್ಟರು. ದಕ್ಷಿಣ ಕನ್ನಡದ ಗುರುಮಠಗಳಲ್ಲಿ, ಖಾಸಗಿ ಶ್ರೀಮಂತರ ಮನೆಗಳಲ್ಲಿ ಇದ್ದ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ತಂದು ಈ ಸಂಗ್ರಹಾಲಯವನ್ನು ಶ್ರೀಮಂತಗೊಳಿಸಲಾಗಿದೆ. ಈ ಸಂಗ್ರಹಾಲಯದಲ್ಲಿ ವರ್ಣಚಿತ್ರಗಳು, ಲೋಹಮೂರ್ತಿಗಳು, ಶಿಲಾಪ್ರತಿಮೆಗಳು, ಪ್ರಾಚ್ಯವಸ್ತು ಗಳು ಹಾಗೂ ಆಯುಧವಿಶೇಷಗಳು, ಟ್ಯಾಕ್ಸಿಡರ್ಮಿ ಕಲಾವಸ್ತುಗಳು ಹೆಚ್ಚಾಗಿವೆ.

ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ವಸ್ತುಸಂಗ್ರಹಾಲಯ 1967ರಲ್ಲಿ ಕಿತ್ತೂರಿನಲ್ಲಿ ಪ್ರಾರಂಭವಾಯಿತು. ಇಲ್ಲಿ ಕಿತ್ತೂರು ಮನೆತನಕ್ಕೆ ಸಂಬಂಧ ಪಟ್ಟ ವಸ್ತುಗಳು ಹಾಗೂ ಆ ಪ್ರದೇಶದಲ್ಲಿ ಬಳಕೆಯಾಗುತ್ತಿದ್ದ ಯುದ್ಧದ ಸಾಮಗ್ರಿಗಳು, ನಾಣ್ಯಗಳು, ವಿಗ್ರಹಗಳು, ವೇಷಭೂಷಣ ಇತ್ಯಾದಿಗಳನ್ನು ಪ್ರದರ್ಶಿಸಲಾಗಿದೆ.

ಗುಲ್ಬರ್ಗದ ಸರ್ಕಾರಿ ವಸ್ತುಸಂಗ್ರಹಾಲಯ ಅಲ್ಲಿನ ಎರಡು ಗುಮ್ಮಟ ಗಳಲ್ಲಿ ಆವಿಷ್ಕಾರಗೊಂಡಿದ್ದು ಇಲ್ಲಿ ಪ್ರದರ್ಶಿಸಿರುವ ಬೆಲೆಬಾಳುವ ಪುರಾತನ ವಸ್ತುಗಳು ಅಪೂರ್ವವಾದುವು. ಈ ಭಾಗದ ಪ್ರಾಚ್ಯ ಸಂಶೋಧನೆಯಲ್ಲಿ ದೊರೆತ ಮಣ್ಣಿನ ಹಾಗೂ ಶಿಲ್ಪದ ಅವಶೇಷಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಶಿಲಾಮೂರ್ತಿಗಳು, ನಾಣ್ಯಗಳು, ಆಯುಧ ಗಳು, ವೇಷಭೂಷಣಗಳು, ಮೈಸೂರು ಶೈಲಿಯ ವರ್ಣಚಿತ್ರಗಳು, ಆಧುನಿಕ ಚಿತ್ರಗಳು ಇಲ್ಲಿ ಗಮನಿಸಬೇಕಾದ ವಸ್ತುಗಳು. ಕ್ರಿ. ಪೂ. 3ನೆಯ ಶತಮಾನಕ್ಕೂ ಹಿಂದಿನದೆನ್ನಲಾದ ಅನೇಕ ಅವಶೇಷಗಳು ಇಲ್ಲಿನ ಮುಖ್ಯ ಸಂಗ್ರಹಗಳಾಗಿವೆ. ಅಲ್ಲದೆ ಗುಲ್ಬರ್ಗ ವಿಭಾಗದಲ್ಲಿರುವ ಸಂಚಿಹೊನ್ನಮ್ಮ, ಶಿರವಾಳ, ಮಳಖೇಡ, ಸೇಡಂ, ಉವುರ, ಮಣುರ, ಕಾಳಗಿ ಇವುಗಳಲ್ಲಿಯ ಶೈವ ಮತ್ತು ಜೈನ ಶಿಲಾಲೇಖಗಳ ಮತ್ತು ಶಿಲ್ಪಕಲೆಯ ಸಂಗ್ರಹವಿಶೇಷವನ್ನು ಇಲ್ಲಿ ಕಾಣಬಹುದು. ಸುರಪುರದ ಅರಸರ ಕಾಲದ ಅವಶೇಷಗಳೂ ಇಲ್ಲಿವೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದ ಸರ್ಕಾರಿ ವಸ್ತುಸಂಗ್ರಹಾಲಯ ಬಸವಕಲ್ಯಾಣ ನಗರಕ್ಕೆ ಹೊಂದಿಕೊಂಡಂತಿರುವ ಚಿಕ್ಕ ಹಾಗೂ ಸುಂದರವಾದ ಒಂದು ಕೋಟೆಯಲ್ಲಿದೆ. ಈ ಸಂಗ್ರಹಾಲಯದಲ್ಲಿ ಶಿಲಾಲೇಖಗಳು, ಶಿಲಾಮೂರ್ತಿಗಳು ಮೊದಲಾದುವನ್ನು ಪ್ರದರ್ಶಿಸ ಲಾಗಿದೆ.

ಕರ್ನಾಟಕದ ಖ್ಯಾತ ಕಲಾವಿದರಾದ ವೆಂಕಟಪ್ಪನವರ ಸ್ಮಾರಕವಾಗಿ ಸ್ಥಾಪನೆಗೊಂಡ ವೆಂಕಟಪ್ಪ ಆರ್ಟ್ ಗ್ಯಾಲರಿ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದ ಪಕ್ಕದಲ್ಲೇ ಇದೆ. ಈ ಸಂಗ್ರಹಾಲಯದಲ್ಲಿ ವೆಂಕಟಪ್ಪನವರು ರಚಿಸಿದ ಅನೇಕ ಕಲಾಕೃತಿಗಳನ್ನು ಸುವ್ಯವಸ್ಥಿತವಾಗಿ ಪ್ರದರ್ಶಿಸಲಾಗಿದೆ. ಅಲ್ಲದೆ ಇವರು ಬಳಸಿದ ಸಂಗೀತ ವಾದ್ಯಗಳನ್ನೂ ಇವರು ಉಪಯೋಗಿಸಿದ ಕಲಾಸಾಮಗ್ರಿಗಳು ಮತ್ತು ಇವರು ಬಳಸಿದ ಬಟ್ಟೆಬರೆಗಳನ್ನೂ ಇಲ್ಲಿ ನೋಡಬಹುದಾಗಿದೆ. ಈ ಸಂಗ್ರಹಾಲಯದ ಮೊದಲ ಮಹಡಿಯಲ್ಲಿ ರಾಜ್ಯದ ಹಾಗೂ ಇತರ ರಾಜ್ಯದ ಖ್ಯಾತ ಕಲಾವಿದರ ಚಿತ್ರಗಳನ್ನೂ ಶಿಲ್ಪಗಳನ್ನೂ ಕಾಣಬಹುದು. ಇವುಗಳಲ್ಲಿ ಬಹುಪಾಲು ಆಗಿಂದಾಗ್ಗೆ ಕಲಾವಿದರಿಂದಲೇ ಕೊಂಡ ಕಲಾವಸ್ತುಗಳು. ಎರಡನೆಯ ಮಹಡಿ ವಿಶಾಲವಾದ ಸಭಾಂಗಣವಾಗಿದೆ. ಇಲ್ಲಿ ಕಲಾವಿದರ ಕೃತಿಗಳ ಪ್ರದರ್ಶನಕ್ಕೆ ಅಣಿಮಾಡಿಕೊಡಲಾಗಿದೆ.

ಕೇಂದ್ರ ಪ್ರಾಚ್ಯ ಇಲಾಖಾ ವಸ್ತುಸಂಗ್ರಹಾಲಯಗಳು: ಭಾರತ ಸರ್ಕಾರದ ಪ್ರಾಚ್ಯ ಇಲಾಖೆಯ ಆಶ್ರಯದಲ್ಲಿ ರೂಪಿಸಲಾದ ಸಂಗ್ರಹಾಲಯಗಳಲ್ಲಿ ಹಳೇಬೀಡು, ಹಂಪೆ, ಬಿಜಾಪುರ, ಶ್ರೀರಂಗಪಟ್ಟಣ, ಬೀದರ್ ಮುಂತಾದ ಕಡೆಗಳಲ್ಲಿರುವ ವಸ್ತುಸಂಗ್ರಹಾಲಯಗಳು ಕಲೋಪಾಸಕರ ಪ್ರಮುಖ ಆಕರ್ಷಣೆಗಳಾಗಿವೆ.

ಹಳೇಬೀಡಿನ ಸಂಗ್ರಹಾಲಯ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿದೆ. ಇಲ್ಲಿನ ಸುತ್ತುಮುತ್ತಲ ಪ್ರದೇಶದಲ್ಲಿ ದೊರೆತ ಅನೇಕ ವಿಗ್ರಹಗಳನ್ನು ಸಂಗ್ರಹಿಸಿ ಇಲ್ಲಿ ಪ್ರದರ್ಶಿಸಲಾಗಿದೆ.

ವಿಜಯನಗರದ ಗತವೈಭವದ ಸ್ಮಾರಕವಾಗಿ ಉಳಿದಿರುವ ಹಂಪೆ ಯಲ್ಲಿ ಅಲ್ಲಿನ ಗಜಶಾಲೆಯಲ್ಲಿ ಕೆಲವಾರು ಮೂರ್ತಿಶಿಲ್ಪ ಕೃತಿಗಳನ್ನು ಜೋಡಿಸಲಾಗಿದೆ. ಇವೆಲ್ಲವೂ ಆ ಸುತ್ತಿನಲ್ಲಿ ಸಂಗ್ರಹಿಸಿದ ಕೃತಿಗಳು.

ಬಿಜಾಪುರದ ವಸ್ತುಸಂಗ್ರಹಾಲಯ ಪ್ರಖ್ಯಾತ ಗೋಳಗುಮ್ಮಟದ ಪಕ್ಕದಲ್ಲಿರುವ ನಗರ್‍ಖಾನ್ ಕಟ್ಟಡದಲ್ಲಿದೆ. ಈ ಸಂಗ್ರಹಾಲಯದಲ್ಲಿರುವ ಅಪೂರ್ವ ವಸ್ತುಗಳೆಂದರೆ ಬಹಮನೀ ಶೈಲಿಯ ಸೂಕ್ಷ್ಮ ವರ್ಣಚಿತ್ರಗಳು. ಇವುಗಳ ಜೊತೆಗೆ ಶಿಲ್ಪಕೃತಿಗಳೂ ನಾಣ್ಯಗಳೂ ಸೇರ್ಪಡೆಗೊಂಡಿವೆ.

ಶ್ರೀರಂಗಪಟ್ಟಣದಲ್ಲಿರುವ ಟಿಪ್ಪುಸುಲ್ತಾನನ ಬೇಸಗೆ ಅರಮನೆಯನ್ನು (ದರಿಯಾದೌಲತ್) 1959ರಲ್ಲಿ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾ ಯಿತು. ಇಲ್ಲಿ ಹೈದರ್ ಅಲಿ, ಟಿಪ್ಪು ಕಾಲದ ನಾಣ್ಯಗಳು, ವೇಷಭೂಷಣ ಗಳು, ತೈಲ, ಜಲವರ್ಣ ಹಾಗೂ ಸೀಸದ ಕಡ್ಡಿಯಲ್ಲಿ ರಚಿಸಿದ ರೂಪಚಿತ್ರ ಗಳನ್ನೂ ಕೋಟೆ ಕೊತ್ತಲಗಳ ನಿಸರ್ಗಚಿತ್ರಗಳನ್ನೂ ಪ್ರದರ್ಶಿಸಲಾಗಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಗಂಜೀಫ ಕಲೆಯ ವಸ್ತುಸಂಗ್ರಹಾಲಯವಿದೆ. ಪ್ರಾಚೀನ ಮತ್ತು ಅರ್ವಾಚೀನ ಗಂಜೀಫ ಕಲೆ, ಇತಿಹಾಸದ ವಿವರ ಇಲ್ಲಿದೆ.

ಕೇಂದ್ರ ಪ್ರಾಚ್ಯ ಇಲಾಖೆಯ ವತಿಯಿಂದ ಇತಿಹಾಸ ಪ್ರಸಿದ್ಧ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಆಯಾ ಭಾಗದ ಶಿಲ್ಪಕೃತಿಗಳನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಮಾಡಲಾಗಿದೆ.

ವಿಜ್ಞಾನ ವಸ್ತುಸಂಗ್ರಹಾಲಯ (ಕೈಗಾರಿಕಾ ಪ್ರಾಯೋಗಿಕ ಸಂಗ್ರಹಾಲಯಗಳು): ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ವಿಜ್ಞಾನದ ನಾನಾ ಪ್ರಕಾರದ ಪ್ರಗತಿ ಯನ್ನು ಪ್ರತ್ಯಕ್ಷವಾಗಿ ತೋರುವ ವಿವಿಧ ಮಾದರಿಯ ಯಂತ್ರಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೆ ವಿಶ್ವೇಶ್ವರಯ್ಯನವರು ಸಾಧಿಸಿದ ಕೈಗಾರಿಕಾಪ್ರಗತಿಯನ್ನೂ ಸಾಕ್ಷ್ಯಚಿತ್ರಗಳ ಮಾದರಿಯೊಡನೆ ಪ್ರದರ್ಶಿಸಲಾಗಿದೆ. ಮೈಸೂರಿನ ಪ್ರಾದೇಶಿಕ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯ (ಆರ್.ಎಮ್. ಎನ್.ಎಚ್.)ನಲ್ಲಿ ನಾಗರಿಕತೆಯ ಬೆಳೆವಣಿಗೆಯ ಹಂತಗಳು, ಪ್ರಾಣಿ, ಪಕ್ಷಿಗಳ ಪ್ರತಿಕೃತಿಗಳನ್ನು ಸವಿವರವಾಗಿ ಪ್ರದರ್ಶಿಸಲಾಗಿದೆ.

ರೀಜನಲ್ ಸೈನ್ಸ್ ಸೆಂಟರ್ ಒಂದನ್ನು ಗುಲ್ಬರ್ಗದಲ್ಲಿ ತೆರೆಯಲಾಗಿದೆ. ಇದರ ಮೂಲಕ ಸಂಚಾರಿ (ಮೊಬೈಲ್ ಸೈನ್ಸ್) ವಿಜ್ಞಾನ ಪ್ರದರ್ಶನ ಗಳನ್ನು ಆಗಾಗ್ಗೆ ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳೂ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎರಡು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎರಡು ಸಂಗ್ರಹಾಲಯ ಇವೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿನ ಪ್ರಾಚ್ಯ ಸಂಶೋಧನಾಲಯ ಪ್ರಾಚ್ಯ ಸಂಶೋಧನೆಯನ್ನು ಕುರಿತ ಅಧ್ಯಯನ ನಡೆಸುತ್ತಿದೆ. ಇಲ್ಲಿ ಮೂರ್ತಿಶಿಲ್ಪಗಳೇ ಅಲ್ಲದೆ ಅಪೂರ್ವ ಕಲಾಸಂಗ್ರಹಗಳನ್ನು ಗಮನಿಸಬಹುದಾಗಿದೆ. ಜಾನಪದ ವಸ್ತುಸಂಗ್ರಹಾಲಯವನ್ನು ಕರ್ನಾಟಕ ವಿಶ್ವವಿದ್ಯಾಲಯ ಇತ್ತೀಚೆಗೆ ಆರಂಭಿಸಿದ್ದು, ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರಾಂತ್ಯದ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇದೇ ರೀತಿಯ ವಸ್ತುಸಂಗ್ರಹಾಲಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಇಲಾಖೆಯೂ ಹೊಂದಿದೆ. ಇಲ್ಲಿ ಅನೇಕ ಬಗೆಯ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ.

ಜಾನಪದ ವಸ್ತುಸಂಗ್ರಹಾಲಯ : ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಸ್ತುಸಂಗ್ರಹಾಲಯ ಭಾರತದಲ್ಲೇ ದೊಡ್ಡದು. ಈ ಸಂಗ್ರಹಾಲಯದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳ ಜನಪದ ಕಲಾವಸ್ತುಗಳನ್ನು ಸಂಗ್ರಹಿಸಲಾಗಿದೆ. ಪ್ರಸಿದ್ಧ ಜಾನಪದ ವಿದ್ವಾಂಸರಾದ ದೇಜಗೌ, ಹಾ.ಮಾ.ನಾಯಕ, ಜೀ.ಶಂ.ಪರಮಶಿವಯ್ಯ ಇವರ ಮಾರ್ಗದರ್ಶನದಲ್ಲಿ ಕಲಾವಿದರೂ ಕ್ಯೂರೇಟರೂ ಆದ ಪಿ. ಆರ್. ತಿಪ್ಪೇಸ್ವಾಮಿಯವರ ಸಹಕಾರದಲ್ಲಿ ಈ ಸಂಗ್ರಹಾಲಯ ಬಹುಬೇಗ ಬೆಳೆಯಿತು. ಈಗ ಈ ಸಂಗ್ರಹಾಲಯದಲ್ಲಿ ಸೂತ್ರದ ಬೊಂಬೆಗಳು, ತೊಗಲುಬೊಂಬೆಗಳು, ವಾದ್ಯವಿಶೇಷಗಳು, ಮರದ ವಿವಿಧ ಕೆತ್ತನೆ ಮಾದರಿಗಳು, ಮಕ್ಕಳ ಆಟದ ಸಾಮಗ್ರಿಗಳು, ನಿತ್ಯಬಳಕೆಯ ವಸ್ತುಗಳು, ಆಯುಧವಿಶೇಷಗಳು, ಉಡುಗೆ ತೊಡುಗೆಗಳು, ಮೀನುಗಾರ, ನೇಕಾರ, ಕಮ್ಮಾರ, ಬಡಗಿ, ಅಕ್ಕಸಾಲಿ, ಚಮ್ಮಾರ ಮುಂತಾದವರ ವೃತ್ತಿವಿಶೇಷ ಹತಾರಗಳು, ಮಣ್ಣಿನ, ಮರದ, ಲೋಹದ ವಸ್ತುಗಳು ಮತ್ತು ವ್ಯವಸಾಯ ಸಾಧನಗಳು, ಯಕ್ಷಗಾನ ವೇಷಭೂಷಣಗಳು, ದೇವತಾಸಾಮಗ್ರಿಗಳು ಮತ್ತು ಆದಿವಾಸಿಗಳ ಮಾದರಿ ಗುಡಿಸಲುಗಳು ಹಾಗೂ ಅವರು ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿನ ಬಹುಪಾಲು ಎಲ್ಲ ವಸ್ತುಗಳು ದಾನರೂಪದಲ್ಲಿ ಪಡೆದವೇ ಆಗಿವೆ. ಈ ಸಂಗ್ರಹಾಲಯದ ಮತ್ತೊಂದು ವಿಶೇಷವೆಂದರೆ ಕನ್ನಡನಾಡಿನ ಖ್ಯಾತ ಸಾಹಿತಿಗಳೂ, ಕಲಾವಿದರು ಬಳಸುತ್ತಿದ್ದ ವಸ್ತುಗಳು ಅವರ ಬರೆಹ ಮುಂತಾದುವನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಖಾಸಗಿ ವಸ್ತುಸಂಗ್ರಹಾಲಯಗಳಲ್ಲಿ ಮೈಸೂರಿನಲ್ಲಿರುವ ಜಯಚಾಮ ರಾಜೇಂದ್ರ ಚಿತ್ರಶಾಲೆ ಪ್ರಮುಖವಾದುದು. 1861ರಲ್ಲಿ ಕಟ್ಟಲಾದ ಜಗನ್ಮೋ ಹನ ಅರಮನೆಯನ್ನು 1915ರಲ್ಲಿ ಸಂಗ್ರಹಾಲಯವಾಗಿ ಪರಿವರ್ತಿಸಲಾ ಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ಭಾರತೀಯ ಚಿತ್ರಕಲೆ ಹಾಗೂ ಕುಶಲ ಕೈಗಾರಿಕಾ ಕಲಾಕೃತಿಗಳ ಸಂಗ್ರಹಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟರು. 1924ರ ವೇಳೆಗೆ ಭಾರತದ ನಾನಾ ಶೈಲಿಯ ಖ್ಯಾತ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಸಂಗ್ರಹಿಸಲಾಯಿತು. 1932-37ರ ಸುಮಾರಿನಲ್ಲಿ ಪಿ.ಮೆಕಾಲ್ಫಿ, ಬಿ.ವೆಂಕಟಾಚಲಂ ಅವರ ಸಹಕಾರದೊಂದಿಗೆ ಈ ಸಂಗ್ರಹಾ ಲಯ ವಿಸ್ತಾರಗೊಂಡಿತು. ಕೇರಳದ ಕಲಾವಿಭಾಗದಲ್ಲಿದ್ದ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಕೃಷ್ಣರಾಜ ಒಡೆಯರು ಮೈಸೂರಿಗೆ ಕರೆಸಿ ಈ ಸಂಗ್ರಹಾಲಯವನ್ನು ಓರಣಗೊಳಿಸಿದರು. ದಸರಾ ವಸ್ತುಪ್ರದರ್ಶನ ದಲ್ಲಿ ಬಹುಮಾನ ಪಡೆದ ಕೃತಿಗಳನ್ನು ಕೊಂಡು ಈ ಸಂಗ್ರಹಾಲಯದಲ್ಲಿ ಇರಿಸಲಾಯಿತು. ಇಲ್ಲಿರುವ ವಸ್ತುಗಳಲ್ಲಿ ಬಹುಮಂದಿ ಪ್ರೇಕ್ಷಕರ ಗಮನ ಸೆಳೆದಿರುವಂಥದ್ದು ದೀಪ ಹಿಡಿದ ಹೆಣ್ಣುಮಗಳ ಜಲವರ್ಣ ಚಿತ್ರ. ಮುಂಬಯಿಯ ಖ್ಯಾತ ಕಲಾವಿದ ಎಸ್.ಜಿ. ಹಾಲ್‍ಡಂಕರ್ ಈ ಚಿತ್ರರಚಕರು.

1950ರಲ್ಲಿ ಜಯಚಾಮರಾಜ ಒಡೆಯರವರು ಈ ಸಂಗ್ರಹಾಲಯದ ಆಡಳಿತವನ್ನು ಒಂದು ಖಾಸಗಿ ಟ್ರಸ್ಟಿಗೆ ಒಳಪಡಿಸಿದರು. ರಾಜಾ ರವಿವರ್ಮ ಬರೆಸಿದ ಬಹುಬೆಲೆಬಾಳುವ ತೈಲವರ್ಣ ಚಿತ್ರಗಳನ್ನು ಅವರು ಈ ಸಂಗ್ರಹಾಲಯಕ್ಕೆ ದಾನವಾಗಿ ನೀಡಿದರು. 1960ರಲ್ಲಿ ಈ ಸಂಗ್ರಹಾಲಯ ಪುನಃ ಕಾಯಕಲ್ಪ ಪಡೆಯಿತು. ಅವನೀಂದ್ರನಾಥ ಠಾಕೂರ್, ಅನಿತ್‍ಕುಮಾರ್ ಹಲ್ದಾರ್, ಆಗಾ ಹುಸೇನ್, ಈಶ್ವರದಾಸ್, ಇನಾಮತಿ, ಕನುದೇಸಾಯಿ, ಖಾನ್‍ಬಹದ್ದೂರ್, ಎ.ಡಿ. ಥಾಮಸ್, ಸುಬ್ಬುಕೃಷ್ಣ, ಎಂ.ವೀರಪ್ಪ, ಕೆ.ವೆಂಕಟಪ್ಪ, ರೋರಿಚ್, ನಂದಲಾಲ ಬಸು ಮೊದಲಾದವರ ಪ್ರಖ್ಯಾತ ಚಿತ್ರಗಳು ಇಲ್ಲಿ ಸೇರ್ಪಡೆಗೊಂಡಿವೆ.

ಮೈಸೂರಿನ ಅಪರೂಪ (1980) ಇನ್ನೊಂದು ಮುಖ್ಯ ವಸ್ತುಸಂಗ್ರಹಾಲಯ. ಇಲ್ಲಿ ಅಂತಾರಾಷ್ಟ್ರೀಯ ಪದಕ, ಪ್ರಶಸ್ತಿ, ನಾಣ್ಯ, ಅಂಚೆಚೀಟಿ ಮುಂತಾದ ಅಮೂಲ್ಯ ಸಂಗ್ರಹವಿದೆ. ಐವತ್ತು ಸಾವಿರ ವಸ್ತುಗಳು ಸವಿವರಗಳೊಂದಿಗೆ ವ್ಯವಸ್ಥಿತವಾಗಿ ಇಲ್ಲಿ ಪ್ರದರ್ಶನಗೊಂಡಿವೆ. ಎಮ್.ಲಕ್ಷ್ಮೀನಾರಾಯಣ ಇದರ ರೂವಾರಿ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿಯ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನಲ್ಲಿದೆ. ಈ ಸಂಗ್ರಹಾಲಯದಲ್ಲಿ ಶಿಲ್ಪಮೂರ್ತಿಗಳು ಮರದ ವಿಗ್ರಹಗಳು, ವರ್ಣಚಿತ್ರಗಳು, ಕಂಚಿನ ಪ್ರತಿಮೆಗಳನ್ನು ಪ್ರದರ್ಶಿಸಲಾಗಿದೆ. ಜೊತೆಗೆ ದೊಡ್ಡ ಗ್ರಂಥರಾಶಿಯೂ ಇದೆ. ಪ್ರಸಿದ್ಧ ಇತಿಹಾಸ ವಿದ್ವಾಂಸರಾದ ಪಿ.ಗುರುರಾಜಭಟ್ಟ ಅವರಿಂದ ಸ್ಥಾಪಿಸಲ್ಪಟ್ಟ ಇಂಡಾಲಜಿಕಲ್ ಮ್ಯೂಸಿಯಮ್ ಕಲ್ಯಾಣಪುರದಲ್ಲಿದೆ. ಇಲ್ಲಿ ಅನೇಕ ತಾಮ್ರಶಾಸನಗಳು, ವಿಗ್ರಹಗಳು ಚಾರಿತ್ರಿಕ ದಾಖಲೆಗಳನ್ನು ಕಾಣಬಹುದು. ಧರ್ಮಸ್ಥಳದ ಮಂಜೂಷಾ ವಿಶಿಷ್ಟ ವಸ್ತುಸಂಗ್ರಹಾಲಯ. ಇಲ್ಲಿ ಕಲೆ, ಸಂಸ್ಕøತಿ, ವಾಸ್ತು, ಶಿಲ್ಪ, ನಾಣ್ಯ, ಉಡುಗೆ, ಅಲಂಕಾರ ಸಾಮಗ್ರಿಗಳಲ್ಲದೆ ಅಪರೂಪದ ಕೈಗಡಿಯಾರ, ಕ್ಯಾಮರಗಳಿಂದ ಹಿಡಿದು ಕಾರು, ವಿಮಾನಗಳವರೆಗೆ ಎಲ್ಲ ಬಗೆಯ ಅಪೂರ್ವ ವಸ್ತುಗಳನ್ನೂ ಸಂಗ್ರಹಿಸಿಡಲಾಗಿದೆ.

ಚಿತ್ತಾಪುರ ಮಠದ ಸಂಗ್ರಹಾಲಯ ಒಂದು ಅಪೂರ್ವ ಸಂಗ್ರಹ. ಈ ಮಠದ ಮಹಡಿಯಲ್ಲಿ ಅನೇಕ ಲೋಹದ, ಕಲ್ಲಿನ, ಮರದ ಹಾಗೂ ದಂತದ ವಿಗ್ರಹಗಳನ್ನು, ಸೂಕ್ಷ್ಮ ಕುಸುರಿನ ಕೆತ್ತನೆ ಕಲಾಕೃತಿಗಳನ್ನು, ಗಾಜಿನ ಮೇಲೆ ರಚಿಸಿದ ಚಿತ್ರಗಳನ್ನು ಪ್ರದರ್ಶಿಸ ಲಾಗಿದೆ. ಕೆಲವು ಜನಪದ ವಸ್ತು ವಿಶೇಷಗಳನ್ನೂ ಇಲ್ಲಿ ಗಮನಿಸಬಹುದಾಗಿದೆ. ನಂಜನಗೂಡಿನ ಸುತ್ತೂರಿನಲ್ಲೂ ಇದೇ ಬಗೆಯ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ.

ವಿಶ್ವೇಶ್ವರಯ್ಯನವರು ಭಾರತದ ಕೈಗಾರಿಕಾ ಪ್ರಗತಿಗೆ ಬಹುವಾಗಿ ಶ್ರಮಿಸಿದ ನೆನಪಿಗಾಗಿ ಇವರ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ನ್ಯಾಷನಲ್ ಟ್ರಸ್ಟ್ ಮ್ಯೂಸಿಯಮ್ ಅನ್ನು ಸ್ಥಾಪಿಸಲಾಗಿದೆ (1972). ಇದರಲ್ಲಿ ವಿಶ್ವೇಶ್ವರಯ್ಯನವರು ಉಪಯೋಗಿಸುತ್ತಿದ್ದ ವಸ್ತುವಿಶೇಷಗಳನ್ನು ಇರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕೆಳದಿ ಗ್ರಾಮದಲ್ಲಿ ಏಕವ್ಯಕ್ತಿ ವಸ್ತುಸಂಗ್ರಹಾಲಯವೊಂದು ರೂಪಗೊಂಡಿದೆ. ಕೆಳದಿ ಗುಂಡಾಜೋಯಿಸರು ಇದರ ನೇತಾರರು. ಅವರ ಮನೆಯ ಒಂದು ಕೋಣೆಯಲ್ಲಿ ತಾವೇ ಸ್ವತಃ ಸಂಗ್ರಹಿಸಿದ ಕೆಲವು ವಸ್ತುವಿಶೇಷಗಳನ್ನು ಪ್ರದರ್ಶಿಸಿದ್ದಾರೆ. ಬಹುಪಾಲು ಅವು ಕೆಳದಿ ನಾಯಕರ ಕಾಲ ತಾಮ್ರದ ಶಾಸನಗಳು, ಓಲೆಗರಿ ಬರೆಹಗಳು ಮತ್ತು ಶಿಲ್ಪಮೂರ್ತಿಗಳಾಗಿವೆ.

ಬಾಹ್ಯ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: