ಸಿಂಧೂ ನದಿಗೆ ಸೇರುವ ಅದರ ಉಪನದಿಗಳಾದ ಜೇಲಂ (ವಿತ್ರಸ್ತ), ಚೀನಾಬ್ (ಅಶಿಕ್ನಿ), ರಾವಿ (ಪರುಷ್ನೀ), ಬೀಯಾಸ್ (ವಿಪಾಶ) ಮತ್ತು ಸಟ್ಲೆಜ್ (ಶತದ್ರು) ಎಂಬ ಐದು ನದಿಗಳ ಈ ಪ್ರದೇಶ ಎರಡು ವಿಭಿನ್ನ ಸಂಸ್ಕೃತಿಗಳ ಆಗರವಾಗಿದ್ದರೂ ಇವುಗಳ ನಡುವೆ ಅತಿಶಯವಾಗಿ ಸಂಬಂಧಗಳಿವೆ. ಮಿಟ್ನೆ, ಖೈಬರ್, ಪೀವರ್ ಮತ್ತು ಬೊಲಾನ್ ಕಣಿವೆಗಳು ವಾಯುವ್ಯದಲ್ಲಿ ಹಿಮಾಲಯದ ಆಚೆ ಇರುವ ದೇಶಗಳೊಡನ ಸಂಬಂಧವನ್ನು ಕಲ್ಪಿಸಿವೆ. ಶತಮಾನಗಳಿಂದಲೂ ಪಾಶ್ಚಾತ್ಯ ಜನರು ಸತತವಾಗಿ ಈ ಪ್ರದೇಶದ ಮೂಲಕ ಹಾದು ಭಾರತಕ್ಕೆ ಬಂದಿದ್ದಾರೆ ಎಂತಲೇ ಇದು ಮಾನವಕುಲಗಳ ವಸ್ತುಸಂಗ್ರಹಾಲಯದಂತಾಗಿದೆ. ಐರೋಪ್ಯರು ಸಮುದ್ರಮಾರ್ಗವಾಗಿ ಭಾರತಕ್ಕೆ ಬರುವುದಕ್ಕೆ ಮೊದಲು ಇಲ್ಲಿಗೆ ಬಂದವರೆಲ್ಲ ಈ ಮಾರ್ಗವಾಗಿ ಬಂದವರೇ. ಅವರಲ್ಲಿ ಅನೇಕರು ದಂಡೆತ್ತಿ ಬಂದವರು. ಮೇಲಿಂದ ಮೇಲೆ ಪರಕೀಯರ ದಾಳಿಗೆ ತುತ್ತಾದ ಈ ಪ್ರದೇಶದ ಜನರು ಕ್ರಮೇಣ ಬಲಗೂಡಿಸಿಕೊಂಡರು. ಇಲ್ಲಿನ ಪ್ರಕೃತಿ ಸಹ ಇವರ ದೃಢಕಾಯಕ್ಕೆ ಸಹಾಯಕವಾಗಿತ್ತು. ಇವರು ಅನಂತರ ಒಟ್ಟುಗೂಡಿದರು. ಒಂದಾಗಿ, ಸಂಘ ಬಲ ಬೆಳೆಸಿಕೊಂಡು, ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಹೊರಗಡೆಯಿಂದ ಬಂದ ಭಿನ್ನ ಸಂಸ್ಕೃತಿಗಳು ಇಲ್ಲಿ ಭಾರತೀಯ ಸಂಸ್ಕೃತಿಯೊಡನೆ ಬೆರೆತವು. ಮೇಲಿಂದ ಮೇಲೆ ನಡೆದ ದಾಳಿಗಳು ಇಲ್ಲಿನ ಜನರಲ್ಲಿ ಏಕತೆಯನ್ನುಂಟುಮಾಡಿದವು.[]

ವೇದ ಕಾಲದಲ್ಲಿ ಪಂಜಾಬ್ ಪ್ರದೇಶವನ್ನೊಳಗೊಂಡ ಭಾರತದ ನಕ್ಷೆ.

ಸಿಂಧೂ ಕಣಿವೆ ನಾಗರಿಕತೆ

ಬದಲಾಯಿಸಿ

ಭಾರತದ ಅತಿ ಪ್ರಾಚೀನವೆನಿಸಿದ ಸಿಂಧೂ ಸಂಸ್ಕೃತಿ ಯ ತೊಟ್ಟಿಲು ಈ ಪ್ರದೇಶ. ಭಾರತದಲ್ಲಿ ಮಾನವ ವಾಸಸ್ಥಳದ ಆರಂಭಿಕ ಕುರುಹು ಸಿಂಧೂ ಮತ್ತು ಜೇಲಂ ನದಿಗಳ ನಡುವಿನ ಸೋನ್ ಕಣಿವೆಯಲ್ಲಿ ಕಂಡುಬರುತ್ತದೆ.ಪಂಜಾಬ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳ ಸ್ಥಳವಾಗಿದೆ, ಇದನ್ನು ಹರಪ್ಪನ್ ನಾಗರಿಕತೆ ಎಂದೂ ಕರೆಯುತ್ತಾರೆ.ಈ ಪ್ರದೇಶದಾದ್ಯಂತ ನೂರಾರು ಪ್ರಾಚೀನ ವಸಾಹತುಗಳು ಕಂಡುಬಂದಿವೆ, ಇದು ಸುಮಾರು ೧೦೦ ಮೈಲಿಗಳಷ್ಟು ವಿಸ್ತಾರವಾಗಿದೆ. ಈ ಪ್ರಾಚೀನ ಪಟ್ಟಣಗಳು ಮತ್ತು ನಗರಗಳು ನಗರ-ಯೋಜನೆ, ಇಟ್ಟಿಗೆ-ನಿರ್ಮಿತ ಮನೆಗಳು, ಒಳಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಗಳು ಹಾಗೂ ಸಾರ್ವಜನಿಕ ಸ್ನಾನಗೃಹಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದವು. ಸಿಂಧೂ ಕಣಿವೆಯ ಜನರು ಸಹ ಬರವಣಿಗೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು.

ಪರ್ಷಿಯನ್ನರು

ಬದಲಾಯಿಸಿ

ಇತಿಹಾಸ ಕಾಲದಲ್ಲಿ ಅಲೆಗ್ಸಾಂಡರನ ದಂಡಯಾತ್ರೆಗೂ ಮೊದಲು ಇದು ಪರ್ಷಿಯ ದೇಶದ ಅಕೆಮಿನಿಯನ್ ವಂಶಕ್ಕೆ ಸೇರಿದ ಮೊದಲನೆಯ ಡೇರಿಯಸ್ ನ ಅಧೀನಕ್ಕೊಳಪಟ್ಟಿತ್ತು. ಗಾಂಧಾರ ಇವನ ರಾಜ್ಯದ ಏಳನೆಯ ಪ್ರಾಂತ್ಯ (ಸತ್ರಪಿ) ಆಗಿತ್ತೆಂದೂ, ಸಿಂಧೂ ಕಣಿವೆ ಇವನ ಸಾಮ್ರಾಜ್ಯದ ಇಪ್ಪತ್ತನೆಯ ಪ್ರಾಂತ್ಯವಾಗಿತ್ತೆಂದೂ ಹೆರಾಡಟಸ್ (ಕ್ರಿ.ಪೂ. ೫ನೆಯ ಶತಮಾನ) ಹೇಳಿದ್ದಾನೆ. ಡೇರಿಯಸ್ ನು ಸೈರಸ್ (ಕ್ರಿ. ಪೂ. ೫೫೯-೫೩೦) ಗಾಂಧಾರದ ಪುಕ್ಕುಸಾತಿ ಎಂಬ ಅರಸನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದನೆಂದೂ ಅನಂತರ ಭಾರತದ ಈ ಭಾಗವನ್ನು ಆಕ್ರಮಿಸಲು ಯತ್ನಿಸಿದನೆಂದೂ ತಿಳಿದಿದೆ. ಡೇರಿಯಸ್ ನ ಕಾಲದಲ್ಲಿ ಪರ್ಷಿಯ ದೇಶದೊಡನೆ ಉಂಟಾದ ಬಾಂಧವ್ಯ ಅನಂತರ ಗ್ರೀಕ್ ದೇಶದ ಜನರೂ ಭಾರತಕ್ಕೆ ಕಾಲಿಡುವುದರಲ್ಲಿ ಪರಿಣಮಿಸಿತು.

ಗ್ರೀಕರು

ಬದಲಾಯಿಸಿ

ಕ್ರಿ.ಪೂ. ೩೨೬ರಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದಾಗ ಪಂಜಾಬಿನಲ್ಲಿ ಸಣ್ಣ ಸಣ್ಣ ರಾಜ್ಯಗಳಿದ್ದವು. ತಕ್ಷಶಿಲೆಯಲ್ಲಿದ್ದ ಅಂಭಿ ಮತ್ತು ಜೇಲಂ-ಚೀನಾಬ್ ನಡುವಣ ರಾಜ್ಯದ ಪೋರಸ್ ನ (ಪುರೂರವ) ಪ್ರಬಲರಾಗಿದ್ದರು. ಅಂಭಿ ಅಲೆಗ್ಸಾಂಡರನಿಗೆ ಶರಣಾಗಿ ಪುರೂರವನ ವಿರುದ್ಧದ ಕದನದಲ್ಲಿ ಶತ್ರುವಿಗೆ ನೆರವಾದ. ಪುರೂರವನು ಕೆಚ್ಚೆದೆಯಿಂದ ಹೋರಾಡಿದರೂ ಅಂತಿಮವಾಗಿ ಸೋಲಿಸಲ್ಪಟ್ಟ. ಅಲೆಕ್ಸಾಂಡರ್ ಆತನಿಗೆ ರಾಜ್ಯವನ್ನು ಹಿಂದಿರುಗಿಸಿದನಲ್ಲದೆ, ಹೆಚ್ಚಿನ ಪ್ರದೇಶವನ್ನೂ ಪುರೂರವನ ಆಳ್ವಿಕೆಗೆ ಒಳಪಡಿಸಿದ. ಪಂಜಾಬಿನ ಶಿಬಿ, ಮಾಳವ, ಕ್ಷುದ್ರಕ, ಅಗ್ರಶೇಣ್ಯ ಮುಂತಾದ ಇತರ ಜನಾಂಗದವರು ತಮ್ಮ ತಮ್ಮ ಪ್ರದೇಶಗಳ ಸ್ವಾತಂತ್ರ್ಯಕ್ಕಾಗಿ ಮಿಗಿಲಾದ ಹೋರಾಟ ನಡೆಸಿದರು.

ಮೌರ್ಯರು

ಬದಲಾಯಿಸಿ

ಅನಂತರದ ಸುಮಾರು ಒಂದು ಶತಮಾನ ಕಾಲ ಪಂಜಾಬ್ ಮೌರ್ಯ ಸಾಮ್ರಾಜ್ಯದ ಅಧೀನದಲ್ಲಿತ್ತು. ಅಲೆಗ್ಸಾಂಡರ್ ಪಂಜಾಬಿನಲ್ಲಿದ್ದಾಗ ಕಾಂದಾಹಾರದ ಜನದಂಗೆ ಎದ್ದು ಪ್ರಾಂತ್ಯಾಧಿಕಾರಿಯಾದ ನಿಕನೊರನನ್ನು ಕೊಂದರು. ಪಂಜಾಬಿನಿಂದ ಕಾಲ್ತೆಗೆದು ಹಿಂದಿರುಗುತ್ತಿದ್ದಾಗ ದಕ್ಷಿಣ ಪಂಜಾಬನ್ನೊಳಗೊಂಡಂತೆ ವಿಸ್ತಾರವಾದ ಪ್ರಾಂತ್ಯಕ್ಕೆ ಅಧಿಪತಿಯಾಗಿ ತನ್ನ ಪ್ರತಿನಿಧಿಯಾಗಿ ನಿಯಮಿಸಲ್ಪಟ್ಟ ಫಿಲಿಪ್ಪನನ್ನು ಸಹ ಜನರು ಕೊಂದರು. ರೋಷಗೊಂಡಿದ್ದ ಜನತೆ, ಸೈನ್ಯದಿಂದ ವಿಮೋಚನೆಗೊಳಿಸಲ್ಪಟ್ಟ ಸೈನಿಕ ಜನ, ಇದ್ದಕ್ಕಿದ್ದಂತೆ ಪ್ರಾಮುಖ್ಯಕ್ಕೆ ಬಂದ ಸಾಹಸಿಗಳು , ಪಂಜಾಬಿನ ಇಂಥವರನ್ನೆಲ್ಲ ಚಾಣಕ್ಯ ಚಂದ್ರಗುಪ್ತರು ಒಟ್ಟುಗೂಡಿಸಿದರು. ಈ ಜನರು ಚಂದ್ರಗುಪ್ತನ ವಿಶಿಷ್ಟ ಸೈನ್ಯವಾಗಿ ಸಮಾವೇಶಗೊಂಡರು. ಇವರ ನೆರವಿನಿಂದ ಪಾಟಲೀಪುತ್ರದವರೆಗೂ ನುಗ್ಗಿದ ಚಂದ್ರಗುಪ್ತ ಮೌರ್ಯಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ. ಅಲೆಗ್ಸಾಂಡರನ ದಂಡಯಾತ್ರೆಗೆ ಪಂಜಾಬಿನ ಜನರು ತೋರಿದ ಪ್ರತಿಕ್ರಿಯೆ ಇಂಥದು. ಅಶೋಕನ ೧೪ ಬಂಡೆಗಲ್ಲು ಶಾಸನಗಳು ಹಿಂದಿನ ಪಂಜಾಬಿನ, ಈಗಿನ ಪಶ್ಚಿಮ ಪಾಕಿಸ್ತಾನದ ಪೆಷಾವರ್ ಮತ್ತು ಹಜಾರಾ ಜಿಲ್ಲೆಗಳಿಗೆ ಸೇರಿದ ಷಾಹಬಾಜ್‍ಗರಿ ಮತ್ತು ಮಾನ್‍ಸೆಹ್ರಾಗಳಲ್ಲಿ ದೊರಕಿವೆ. ಅಫ್ಘಾನಿಸ್ಥಾನದ ಕಾಂದಾಹಾರ್ ಮತ್ತು ಜಲಾಲಾಬಾದ್‍ಗಳಲ್ಲಿ ಸಿಕ್ಕಿದ ಶಾಸನಗಳಿಂದ ಅತನ ರಾಜ್ಯ ಪಂಜಾಬನ್ನೂ ದಾಟಿ ವಾಯುವ್ಯ ಗಡಿಪ್ರಾಂತ್ಯಗಳನ್ನು ಕೂಡ ಒಳಗೊಂಡಿತ್ತೆಂಬುದು ಖಚಿತವಾಗುತ್ತದೆ. ಸಲ್ಯೂಕಸ್ ಚಂದ್ರಗುಪ್ತಮೌರ್ಯನಿಗೆ ಬಿಟ್ಟುಕೊಟ್ಟ ಪ್ರಾಂತ್ಯಗಳಲ್ಲಿ ಇವು ಸೇರಿವೆ.

ಯವನರು, ಇಂಡೋಗ್ರೀಕರು

ಬದಲಾಯಿಸಿ

ಮೌರ್ಯರ ಪತನಾನಂತರ ಪಂಜಾಬ್ ಪ್ರಾಂತ್ಯವೂ ಸ್ವಲ್ಪ ಕಾಲ ಯವನರ ಅಧೀನಕ್ಕೊಳಪಟ್ಟಿತು. ಮಧ್ಯಯುಗೀನ ಸಾಹಿತ್ಯದಲ್ಲಿ ಯವನ ಎಂಬ ಮಾತು ಸಾಮಾನ್ಯವಾಗಿ ಮ್ಲೇಚ್ಛ ಎಂಬುದರ ಪರ್ಯಾಯ ಪದವಾಗಿ ಬಳಸಲ್ಪಟ್ಟು ಎಲ್ಲ ಪರಕೀಯರಿಗೂ ಅನ್ವಯವಾಗಬಹುದಾಗಿತ್ತಾದರೂ, ಆರಂಭದ ಶತಮಾನಗಳಲ್ಲಿ ಇದು ಖಚಿತವಾಗಿ ಗ್ರೀಸ್ ದೇಶದ ಗ್ರೀಕರಿಗೆ,ಏಷ್ಯ ಮೈನರ್ನಲ್ಲಿ ಇಜಿಯನ್ ಸಮುದ್ರ ಮತ್ತು ಲಿಡಿಯಗಳ ನಡುವಣ ಗ್ರೀಕರಿಗೆ, ಅನ್ವಯವಾಗುತ್ತಿದ್ದ ಪದ. ಅಲೆಗ್ಸಾಂಡರ್ ಹೊಸದಾಗಿ ಹುಟ್ಟುಹಾಕಿದ ನಗರಗಳಲ್ಲಿ ಬ್ಯೂಸಿಫಲ್ ಮತ್ತು ನೈಸೀಯಗಳು ಜೇಲಂ ನದಿತೀರದ ಮೇಲೂ, ಅಲೆಗ್ಸಾಂಡ್ರಿಯ ಸಿಂಧು ಮತ್ತು ಚೀನಾಬ್ ನದಿಗಳ ಸಂಗಮದಲ್ಲೂ ಇದ್ದುವು. ಇಲ್ಲಿ ನೆಲಸಿದ ಗ್ರೀಕ್ ಜನರು ಭಾರತೀಯರೊಂದಿಗೆ ತೀರ ಹತ್ತಿರದ ಸಂಬಂಧಗಳನ್ನು ಹೊಂದಿದ್ದರು. ಎರಡೂ ಜನಾಂಗದವರು ಪರಸ್ಪರ ಪ್ರಭಾವಕ್ಕೊಳಪಟ್ಟಿದ್ದರು. ಈ ಗ್ರೀಕ್ ಅರಸರಲ್ಲಿ ಡಿಮೀಟ್ರಿಯಸ್ ಪ್ರಮುಖ. ಈತ ಸಿಯಾಲ್‍ಕೋಟ್ ಪ್ರದೇಶವನ್ನು ವಶಪಡಿಸಿಕೊಂಡಿದ್ದ. ಶುಂಗವಂಶದ ಪುಷ್ಯಮಿತ್ರ ಕೆಲವು ವರ್ಷಗಳಾದರೂ ಪಂಜಾಬಿನ ಕೆಲವು ಭಾಗಗಳನ್ನು ತನ್ನ ಅಧೀನದಲ್ಲಿರಿಸಿಕೊಂಡಿದ್ದನಾದರೂ ಡಿಮೀಟ್ರಿಯಸ್ ಅವನ್ನು ಪುನಃ ಗೆದ್ದುಕೊಂಡನೆಂಬಂತೆ ತೋರುತ್ತದೆ. ಇನ್ನೊಬ್ಬ ಪ್ರಮುಖ ಅರಸ ಮಿನಾಂಡರ್ (ಕ್ರಿ.ಪೂ. ಸು. ೧೫೦). ಈತ ಇಂಡೊ-ಗ್ರೀಕ್. ಶಾಕಲ ಈತನ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ಪೆಷಾವರ್ ಸುತ್ತಲಿನ ಪ್ರದೇಶವೆಲ್ಲ ಈತನ ಆಳ್ವಿಕೆಗೆ ಒಳಪಟ್ಟಿತ್ತೆಂಬುದು ಷಿನ್‍ಕೋಟ್‍ನಲ್ಲಿ ದೊರೆತ ಈತನ ಶಾಸನದಿಂದ ಸ್ಪಷ್ಟವಾಗುತ್ತದೆ. ಇಂಡೊ-ಗ್ರೀಕ್ ಅರಸ ಆಂಟಿಯಾಲ್ಕಿಡಾಸ್. ಈತನನ್ನು ಮಹಾರಾಜ ಅಂತಲಿಕಿತನೆಂದು ಬೆಸ್ನನಗರದ ಶಾಸನದಲ್ಲಿ ಕರೆದಿದೆ. []

ಶಕರು , ಕುಶಾಣರು

ಬದಲಾಯಿಸಿ

ಕ್ರಿಸ್ತಶಕದ ಆರಂಭದಲ್ಲಿ ಇಂಡೊ-ಗ್ರೀಕರ ಬಲ ಕುಗ್ಗಿ ಶಕರು ಪ್ರಬಲರಾದರೂ ತಕ್ಷಶಿಲೆ, ಪುಷ್ಕಲಾವತಿ ಪ್ರದೇಶದಲ್ಲಿನ ಇವರನ್ನು ಕೆಳಗಿನ ಸಿಂಧೂಕಣಿವೆಯ ಶಕರ ದೊರೆ ಮೌಸ್ (ಕ್ರಿ.ಪೂ. ಸು. ೨೦-ಕ್ರಿ.ಶ. ೨೨) ಹೊರದೂಡಿದ. ಕ್ರಮೇಣ ಈ ಪ್ರದೇಶ, ಕುಷಾಣರ ಕೈಸೇರಿತೆಂಬುದು ಪಂಜ್‍ತರ್ ಮತ್ತು ತಕ್ಷಶಿಲೆಯ ಶಾಸನಗಳಿಂದ ತಿಳಿದಿದೆ. ಕುಷಾಣರ ವಿಮ ಕಡ್‍ಫೀಸಿಸ್ ಪಂಜಾಬ್ ಪ್ರಾಂತ್ಯವನ್ನು ಆಳುತ್ತಿದ್ದ. ಈತನ ಮಗ ಇಮ್ಮಡಿ ಕಡ್‍ಫೀಸಿಸ್ ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತನಾಗಿದ್ದ. ಈತನ ನಾಣ್ಯಗಳಲ್ಲಿ ಈತನನ್ನು ಸರ್ವಲೋಕ ಈಶ್ವರ ಮಹೀಶ್ವರನೆಂದು ವರ್ಣಿಸಿದ್ದಾರೆ. ಕುಷಾಣರಲ್ಲಿ ಖ್ಯಾತಿವೆತ್ತವ ಕನಿಷ್ಕ. ಈತನ ರಾಜ್ಯ ಈಗಿನ ಉತ್ತರ ಪ್ರದೇಶ, ಪಂಜಾಬ್, ವಾಯುವ್ಯ ಪ್ರಾಂತ್ಯ ಮತ್ತು ಸಿಂಧ್ ಪ್ರಾಂತ್ಯದ ಉತ್ತರಭಾಗಗಳನ್ನು ಒಳಗೊಂಡಿತ್ತು. ಕನಿಷ್ಕ ಪೆಷಾವರಿನಲ್ಲಿ ದೊಡ್ಡ ಬೌದ್ಧ ವಿಹಾರವನ್ನು ಕಟ್ಟಿಸಿದನೆಂದು ಹ್ಯೂಯೆನ್‍ತ್ಸ್ಯಾಂಗ್ ಮತ್ತು ಆಲ್ಬೆರೊನಿಗಳ ಬರಹಗಳಿಂದ ತಿಳಿದುಬಂದಿದೆ. ನಾಗರ್‍ಕೋಟ್‍ನಲ್ಲಿ (ಈಗಿನ ಕೋಟ್‍ಕಾಂಗ್ರ) ಒಂದು ರೇಷ್ಮೆ ಬಟ್ಟೆಯ ಗ್ರಂಥದಲ್ಲಿ ಈ ಕುಷಾಣರ ವಂಶಾವಳಿಯನ್ನು ಬರೆದಿಟ್ಟಿರುವುದಾಗಿ ಸಹ ಆಲ್ಬೆರೊನಿ ತಿಳಿಸಿದ್ದಾನೆ.

ಯೌಧೇಯರು, ಗುಪ್ತರು, ಹೂಣರು

ಬದಲಾಯಿಸಿ

ಇಂಡೊ-ಗ್ರೀಕರ ಪ್ರಾಬಲ್ಯ ಕುಗ್ಗಿದಾಗ ಪಂಜಾಬಿನ ರೊಹ್‍ತಾಕ್ ಜಿಲ್ಲೆಯ ಸುತ್ತಲೂ ನೆಲಸಿದ್ದ ಯೌಧೇಯರು ಪ್ರಬಲರಾದರು. ಶಕ-ಕುಷಾಣರಿಗೆ ಇವರು ಅಡಿಯಾಳಾಗಬೇಕಾಗಿ ಬಂತಾದರೂ ಪುನಃ ಕ್ರಿ.ಶ. ೨ನೆಯ ಶತಮಾನದಲ್ಲಿ ಪ್ರಾಮುಖ್ಯ ಪಡೆದು ಕ್ಷತ್ರಪ ರುದ್ರದಾಮನನ್ನು ವಿರೋಧಿಸಿದರು. ಇವರು ಅನಂತರ ಗುಪ್ತರ ಅಧೀನಕ್ಕೊಳಪಡಬೇಕಾಯಿತು. ಮಹಾಭಾರತದಲ್ಲಿ ಆಯುಧಜೀವಿಗಳೆಂದು ಕರೆಯಲ್ಪಟ್ಟವರಲ್ಲಿ ಇವರೂ ಸೇರಿದ್ದಾರೆ. ಇವರ ನಾಣ್ಯಗಳು ಷಹರಾನ್‍ಪುರದಿಂದ ಮುಲ್ತಾನದ ವರಗಿನ ವಿಸ್ತಾರವಾದ ಪ್ರದೇಶದಲ್ಲಿ ಹಲವಾರು ಕಡೆ ದೊರಕಿವೆ. ಅಲ್ಲದೆ ನಾಣ್ಯದ ಅಚ್ಚುಗಳೂ ಜೇಡಿಮಣ್ಣಿನ ಮುದ್ರೆಗಳೂ ದೊರೆತಿವೆ. ಯೌಧೇಯರ ಮನೆದೇವತೆ ಬ್ರಹ್ಮಣ್ಯದೇವ (ಕಾರ್ತಿಕೇಯ). ಕ್ರಿ.ಶ. ಸುಮಾರು ೪ನೆಯ ಶತಮಾನದ ಲೂಧಿಯಾನಾದಲ್ಲಿ ದೊರೆತ ದೊಡ್ಡ ಮುದ್ರೆಯೊಂದರಲ್ಲಿ ವೃಷಭನ ಚಿತ್ರವಿದ್ದು, ಕೆಳಗೆ, ಯೌಧೇಯಾಣಾಂ ಜಯಮಂತ್ರ ಧರಾಣಾಂ ಎಂಬ ಉಲ್ಲೇಖವಿದೆ.

ಗುಪ್ತವಂಶದ ಅರಸರು ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದರು. ಕುಷಾಣ ಸಂತತಿಗೆ ಸೇರಿದ ಕಿಡಾರ ಕ್ರಿ.ಶ. ೪ನೆಯ ಶತಮಾನದ ಮೂರನೆಯ ಪಾದದಲ್ಲಿ ಪಂಜಾಬಿನಲ್ಲಿ ಆಳುತ್ತಿದ್ದ. ಕಿಡಾರ ಕುಷಾಣ ಷಾ ಎಂಬ ಬ್ರಾಹ್ಮಿಲಿಪಿಯ ಲೇಖವುಳ್ಳ, ಈತನ ಹಲವಾರು ನಾಣ್ಯಗಳು ದೊರೆತಿವೆ. ಸಸೇನಿಯನ್ ದೊರೆ ಇಮ್ಮಡಿ ಪಾಪುರನನ್ನು ಈತ ಸುಮಾರು ೩೬೭-೬೮ರಲ್ಲಿ ಸೋಲಿಸಿದ. ಸಮುದ್ರಗುಪ್ತನ ಅಲಹಾಬಾದ್ ಸ್ತಂಭ ಶಾಸನದಲ್ಲೂ ಉಕ್ತನಾದ ದೈವಪುತ್ರ ಷಾಹಿ ಷಾಹಾನುಷಾಹಿ ಎಂಬ ಕುಷಾಣ ದೊರೆ ಈ ಕಿಡಾರನಾಗಿರಬಹುದೆಂದು ಊಹಿಸಲಾಗಿದೆ. ಬಿಳಿಯ ಹೂಣರು ೫ನೆಯ ಶತಮಾನದ ಮಧ್ಯಭಾಗದಲ್ಲಿ ಕಾಬೂಲ್ ಕಣಿವೆ ಮತ್ತು ಪಂಜಾಬ್‍ಗಳನ್ನು ಆಕ್ರಮಿಸುವವರೆಗೂ,ಅನಂತರದ ಕುಷಾಣ ಸಂತತಿಯ ಹಲವರು ಇಲ್ಲಿ ಆಳುತ್ತಿದ್ದರು. ಬಿಳಿಯ ಹೂಣರು ಮೂಲತಃ ಚೀನ ದೇಶಕ್ಕೆ ಸೇರಿದವರು. ಯೂಚಿ ಪಂಗಡದೊಡನೆ ಉಂಟಾದ ಕಲಹಗಳ ಪರಿಣಾಮವಾಗಿ ಅವರು ವಲಸೆ ಹೋಗಬೇಕಾಗಿ ಬಂದು, ಅವರಲ್ಲಿ ಒಂದು ಗುಂಪು ಆಕ್ಸಸ್ ಕಣಿವೆಯ ಮೂಲಕ ಪರ್ಷಿಯ ಹಾಗೂ ಭಾರತ ದೇಶಗಳಿಗೆ ಬಂತು. ಈ ಗುಂಪಿನವರು ಗಾಂಧಾರವನ್ನು ಆಕ್ರಮಿಸಿದಾಗ ಗುಪ್ತರ ಸ್ಕಂದಗುಪ್ತ ಇವರನ್ನು ತಡೆದ (ಕ್ರಿ.ಶ. ೪೬೦). ಆದರೆ ಮುಂದಿನ ಶತಮಾನದ ಆರಂಭದಲ್ಲಿ ಹೂಣರ ತೋರಮಾನ ಪಂಜಾಬಿನಿಂದ ಮಧ್ಯಪ್ರದೇಶದ ನೌಗಾರ್ ವರೆಗಿನ ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿದ. ಚಂದ್ರಭಾಗಾ (ಚೀನಾಬ್) ತೀರದ ವೈಯಾದಲ್ಲಿ ಈ ತೋರಮಾನ ವಾಸಿಸುತ್ತಿದ್ದು, ಜೈನಧರ್ಮಾವಲಂಬಿಯಾದನೆಂದು ಜೈನ ಕುವಲಯಮಾಲಾ ಗ್ರಂಥದಲ್ಲಿ ಹೇಳಿದೆ. ಈತನ ಮಗ ಮಿಹಿರಕುಲ. ಈತನ ರಾಜಧಾನಿ ಸೌಕರ (ಸಿಯಾಲ್‍ಕೋಟ್).

ಸಣ್ಣ ತುಂಡರಸರು

ಬದಲಾಯಿಸಿ

ಅನಂತರದ ಶತಮಾನಗಳಲ್ಲಿ ಪಂಜಾಬಿನಲ್ಲಿ ಸಣ್ಣ ತುಂಡರಸರು ಆಳುತ್ತಿದ್ದರು. ಕೆಲವೊಮ್ಮೆ ಇದು ಅನ್ಯ ಅರಸರ ರಾಜ್ಯದ ಭಾಗವೂ ಆಗಿತ್ತು. ೮ನೆಯ ಶತಮಾನದಲ್ಲಿ ಪ್ರತೀಹಾರ ವಂಶದ ಭೋಜ ಮತ್ತು ಮಹೇಂದ್ರಪಾಲರ ರಾಜ್ಯ ಪಂಜಾಬನ್ನೊಳಗೊಂಡಿತ್ತೆನ್ನಲು ಆಧಾರಗಳಿವೆ. ಬಂಗಾಲದ ಪಾಲಮನೆತನದ ಧರ್ಮಪಾಲನ ಆಳ್ವಿಕೆಯ ಕಾಲದಲ್ಲಿ ಪಂಜಾಬಿನಲ್ಲಿದ್ದ ಹಲವಾರು ಮಾಂಡಲಿಕರು ಆತನ ಸಾರ್ವಭೌಮತ್ವವನ್ನು ಅಂಗೀಕರಿಸಿದ್ದರು. ಅವರಲ್ಲಿ ಮಧ್ಯಪಂಜಾಬಿನ ಮದ್ರರು, ಸಿಂಹಪುರದ ಯದುಗಳು (ಯಾದವ) ಪ್ರಮುಖರು. ತೋಮರ ಕುಲದವರು ಸಹ ಮಾಂಡಲಿಕರಾಗಿದ್ದೂ ಪ್ರತೀಹಾರ ಮಹೇಂದ್ರಪಾಲನಿಗೆ ಬೆಂಬಲವಾಗಿದ್ದರು. ಈ ತೋಮರರು ಈಗಿನ ದೆಹಲಿ (ಡಿಲ್ಲಿಕ) ನಗರದ ಸ್ಥಾಪಕರೆನ್ನಲಾಗಿದೆ. ಅದು ಅವರ ರಾಜಧಾನಿಯಾಗಿತ್ತು. ಕರ್ವಾಲ್ ಜಿಲ್ಲೆಯ ಪಹೋವಾದ (ಪ್ರಾಚೀನ ಪೃಥೂದಕ) ಶಾಸನದಲ್ಲಿ ಈ ಕುಲದ ಜಾಲಾಲ ಎಂಬ ಅರಸನ ಪ್ರಸ್ತಾಪವಿದೆ. ಈತನ ಸಂತತಿಗೆ ಸೇರಿದವನು ವಜ್ರಟ. ೯ನೆಯ ಶತಮಾನದ ಮಧ್ಯಭಾಗದಲ್ಲಿ ದೆಹಲಿಯಲ್ಲಿ ಪ್ರಬಲನಾಗಿದ್ದ ಈತ ಪ್ರತೀಹಾರ ಭೋಜನ ಸಾರ್ವಭೌಮತ್ವವನ್ನು ಒಪ್ಪಿದ್ದ. ಈತನ ಮೊಮ್ಮಗ ಗೊಗ್ಗ ೧ನೆಯ ಮಹೇಂದ್ರಪಾಲನ ಸಾಮಂತ. ಈತ ತನ್ನಿಬ್ಬರ ಸೊದರರೊಡಗೂಡಿ ಸರಸ್ವತೀ ತೀರದಲ್ಲಿ ನೂರು ವಿಷ್ಣುಗೃಹಗಳನ್ನು ಕಟ್ಟಿಸಿದ. ಈ ತೋಮರರು ದೆಹಲಿಯಿಂದ ಈಗಿನ ಹರಿಯಾಣ ರಾಜ್ಯದ ಭಾಗಗಳನ್ನು ೧೨ನೆಯ ಶತಮಾನದ ಮಧ್ಯಭಾಗದ ವರೆಗೂ ಆಳುತ್ತಿದ್ದರು.

ಒಂಬತ್ತನೆಯ ಶತಮಾನದ ಮಧ್ಯಭಾಗದವರೆಗೂ ಸಿರ್ಪಾ ವರೆಗಿನ ಪೂರ್ವ ಪಂಜಾಬ್ ಪ್ರದೇಶ ಪ್ರತೀಹಾರರ ಅಧೀನದಲ್ಲಿತ್ತು. ಹತ್ತನೆಯ ಶತಮಾನದ ಆರಂಭದಲ್ಲಿ ಕಾಶ್ಮೀರದ ಅರಸನಾದ ಶಂಕರ ವರ್ಮಾ ಅದನ್ನು ಪ್ರತೀಹಾರ ಮಹೇಂದ್ರಪಾಲನಿಂದ ಕಸಿದು ಢಕ್ಕೆಯಾ ವಂಶಕ್ಕೆ ಸೇರಿದ ತನ್ನ ಅಧಿಕಾರಿಗಳಲ್ಲೊಬ್ಬನಿಗೆ ಬಿಟ್ಟುಕೊಟ್ಟ. ತ್ರಿಭಾಂಡಪುರದಿಂದ (ಈಗಿನ ಭಟಿಂಡ) ರಾಜಾ ಶತ್ರುಘ್ನದೇವನೆಂಬಾತ ಆ ಶತಮಾನದ ಉತ್ತರಾರ್ಧದಲ್ಲಿ ಆಳುತ್ತಿದ್ದ ರಾಜತರಂಗಿಣಿಯಲ್ಲಿ ಹೆಸರಿಸಲಾದ ಲಲ್ಲಿಯ ಎಂಬಾತ ಷಾಹಿ ಎಂಬ ಹೆಸರಿನ ಹಿಂದೂ ಮನೆತನದ ಮೊದಲ ಅರಸನಾಗಿ ಕಾಬುಲ್ ಕಣಿವೆಯಲ್ಲಿ 9ನೆಯ ಶತಮಾನದ ಉತ್ತರಾರ್ಧದಲ್ಲಿ ಆಳತೊಡಗಿದೆ. ಆದರೆ ಬಹುಬೇಗ ಕಾಬೂಲ್ ಅವನ ಕೈಯಿಂದ ಜಾರಿತು. ಆ ಬಳಿಕ ಆತ ಉದಭಾಂಡವನ್ನು (ರಾವಲ್ಪಿಂಡಿ ಜಿಲ್ಲೆಯ ಉಂಡ್) ರಾಜಧಾನಿಯಾಗಿ ಮಾಡಿಕೊಂಡ. ರಾಜತರಂಗಿಣಿಯಲ್ಲಿ ಆತನನ್ನು ವಿಶೇಷವಾಗಿ ಸ್ತುತಿಸಲಾಗಿದೆ. ಸಾಮಂತನೆಂಬಾತ ದಂಗೆ ಎದ್ದು ಲಲ್ಲಿಯನ ಮಗ ತೋರಮಾನನನ್ನು ಹೊರದೂಡಿದನಾದರೂ ಅವನನ್ನು ಕಾಶ್ಮೀರದ ಅರಸನಾದ ಪ್ರಭಾಕರ ಸೋಲಿಸಿ ರಾಜ್ಯವನ್ನು ತೋರಮಾನನಿಗೆ ಹಿಂದಿರುಗಿಸಿದ. ತೋರಮಾನನನ್ನು ಕಮವಾ ಎಂದು ಅಲ್ಬೆರೂನಿ ಕರೆದಿದ್ದಾನೆ. ಈತನ ವಂಶಕ್ಕೆ ಸೇರಿದಾತ ೧೦ನೆಯ ಶತಮಾನದ ಅಂತಿಮ ಭಾಗದಲ್ಲಿ ಆಳಿದ ಜಯಪಾಲ. ಇವನು ವಿಸ್ತಾರವಾದ ಪಶ್ಚಿಮ ಪಂಜಾಬ್ ವಾಯುವ್ಯ ಗಡಿ ಪ್ರಾಂತ್ಯ ಮತ್ತು ಪೂರ್ವ ಆಫ್ಘಾನಿಸ್ತಾನಗಳನ್ನೊಳಗೊಂಡ ರಾಜ್ಯವನ್ನಾಳಿದ. ಆದರೆ ಆ ವೇಳೆಗೆ ಘಜ್ನಿಯಲ್ಲಿ ಅಸ್ತಿತ್ವಕ್ಕೆ ಬಂದ ಸುಲ್ತಾನರು ಭಾರತದ ಮೇಲೆ ದಾಳಿ ಮಾಡಿದಾಗ ಜಯಪಾಲ ಅವರೊಡನ ನಿರಂತರವಾಗಿ ಹೋರಾಡಬೇಕಾಯಿತು.

ಘಜನಿ ಮತ್ತು ಘೋರಿ ಸುಲ್ತಾನರು

ಬದಲಾಯಿಸಿ

ಘಜ್ನಿಯಲ್ಲಿ ಅಸ್ತಿತ್ವಕ್ಕೆ ಬಂದ ಯಾಮಿನೀ ವಂಶದ ಮೂಲಪುರಷ ಸಬಕ್ತಗೀನ್ ಈತ ಚಿಕ್ಕವಯಸ್ಸನಲ್ಲಿಯೇ ಖುರಾಸಾನ್ ದೇಶದ ಅಲ್ಪ್ತಿಗೀನನ ಗುಲಾಮನಾಗಿದ್ದ. ಅಲ್ಪ್ತಿಗೀನ್ ಜಾಬುಲಿಸ್ತಾನವನ್ನು ಕಸಿದುಕೊಂಡು ಸುಲ್ತಾನನಾದಾಗ ಸಮಕ್ತಗೀನ್ ಆತನ ಸೇನಾನಿಯಾದ. ಅಲ್ಪ್ತಿಗೀನನ ಅನಂತರದ ಕೆಲವು ವರ್ಷಗಳಲ್ಲಿ ಆ ರಾಜ್ಯ ಪೀರಾಇಯಾ ಎಂಬ ಗುಲಾಮನ ವಶವಾಯಿತು. ಕ್ರೂರಿಯಾಗಿದ್ದ ಆತನ ವಿರುದ್ಧ ಕಳುಹಿಸಲಾದ ಸೈನ್ಯಗಳಲ್ಲಿ ಷಾಹೀ ಮನೆತನದ ಜಯಪಾಲನದೂ ಇತ್ತು. ಆದರೆ ಈ ಸೈನ್ಯ ಸೋತಿತು. ಪೀರಾಇಯಾನ ದುರ್ನಡತೆಯಿಂದಾಗಿ ಆತ ಅಧಿಕಾರ ಕಳೆದುಕೊಂಡ. ಆಗ ಸಬಕ್ತಗೀನ್ ಅರಸನಾದ . ಈತ ಉದಭಾಂಡದ ಷಾಹಿ ಜಯಪಾಲನ ವಿರುದ್ಧವಾಗಿ ಮೇಲಿಂದ ಮೇಲೆ ದಂಡೆತ್ತಿದ. ಮೊದಲೊಮ್ಮೆ ನಡೆದ ಕದನದಲ್ಲಿ ಲಂಘಾನ್ ನಗರ ಶತ್ರುವಶವಾಯಿತು. ಇದನ್ನು ಪುನಃ ವಶಪಡಿಸಿಕೊಳ್ಳಲು ಜಯಪಾಲ ಇತರ ಹಿಂದೂ ಅರಸರ ನೆರವು ಬೇಡಿದನೆಂಬುದು ಫಿರಿಸ್ತಾಸಿ ಹೇಳಿಕೆ. ಇದರ ಸತ್ಯಾಸತ್ಯತೆ ಸ್ಪಷ್ಟವಾಗಿಲ್ಲ. ಈ ಬಾರಿ ಜಯಪಾಲ ಪೆಷಾವರ್ ವರೆಗಿನ ಪ್ರದೇಶವನ್ನೆಲ್ಲ ಕಳೆದುಕೊಂಡ. ಸಬಕ್ತಗೀನನ ಮಗ ಘಜ್ನಿ ಮಹಮ್ಮದ್.[] ೯೯೮ರಲ್ಲಿ ಪಟ್ಟಕ್ಕೆ ಬಂದ ಈತ ಮುಂದಿನ ಎರಡು ವರ್ಷಗಳಲ್ಲಿ ಪೇಷಾವರ್ ಸಮೀಪದ ಕೆಲವು ಕೋಟೆಗಳನ್ನು ತನ್ನ ಮೊದಲ ದಂಡಯಾತ್ರೆಯಲ್ಲಿ ಗೆದ್ದುಕೊಂಡ. ೧೦೦೧ರಲ್ಲಿ ಮತ್ತೊಮ್ಮೆ ಜಯಪಾಲ ಈತನನ್ನು ೧೨೦೦ ಕುದುರೆಗಳು, ೩೦೦೦ ಕಾಲಾಳುಗಳು, ಮತ್ತು ೩೦೦ ಆನೆಗಳಿಂದ ಕೂಡಿದ ಶಕ್ತವಾದ ಸೈನ್ಯದೊಡನೆ ಪೆಷಾವರ್ ನಗರದ ಹೊರವಲಯದಲ್ಲಿ ಎದುರಿಸಿದ ; ಆದರೆ ಸೋತು ಸೆರೆಯಾದ ; ೨೫,೦೦೦ ದಿನಾರಗಳನ್ನು ಕೊಡುವ ಆಶ್ವಾಸನೆಯೊಂದಿಗೆ ಮುಕ್ತನಾದ. ಈತನ ಇಚ್ಛೆಗೆ ವಿರುದ್ಧವಾಗಿ ಈತನ ಮಗ ಆನಂದಪಾಲ ಆ ಹಣ ಕೊಟ್ಟ. ಮೂರು ಬಾರಿ ಮೇಲಿಂದ ಮೇಲೆ ಸೋಲನ್ನನುಭವಿಸಿದ ಜಯಪಾಲ ಆತ್ಮಹತ್ಯೆ ಮಾಡಿಕೊಂಡ.

ಜಯಪಾಲನ ಮಗ ಆನಂದಪಾಲ ೧೦೦೧ ರಲ್ಲಿ ಪಟ್ಟಕ್ಕೆ ಬಂದ. ೧೦೦೪ ರಲ್ಲಿ ಮಹಮೂದ್ ಭಾರತದ ಮೇಲಿನ ದಾಳಿಗಳನ್ನು ಮುಂದುವರಿಸಿದ. ಮುಲ್ತಾನಿಗೆ ಸಮೀಪದಲ್ಲಿ ಸಿಂಧೂ ನದಿಯನ್ನು ದಾಟಿ ಭಾಟಿಯವನ್ನು ತಲುಪಿದ. ಇಲ್ಲಿ ಆನಂದಪಾಲನ ಸಾಮಂತನಾದ ಬಾಜಿರಾಯ ಇವನನ್ನು ತಡೆದ. ಆದರೆ ಆತನ ಎಲ್ಲ ಯತ್ನಗಳೂ ವಿಫಲವಾಗಿ ಭಾಟಿಯ ಮಹಮ್ಮದನ ವಶವಾಯಿತು. ಮಹಮೂದ ಅಪಾರವಾದ ಸಂಪತ್ತನ್ನು ದೋಚಿದ. ಆದರೆ ಈತ ಹಿಂದಿರುಗುತ್ತಿದ್ದಾಗ ಪಂಜಾಬಿನ ನದಿಗಳಲ್ಲಿ ಏರಿದ್ದ ಪ್ರವಾಹದಲ್ಲಿ ಅದರ ಬಹುಭಾಗ ಕೊಚ್ಚಿಹೋಯಿತು. ೧೦೦೫-೦೬ ಹಾಗೂ ೧೦೦೮ ರಲ್ಲಿ ಇನ್ನೂ ಎರಡು ಬಾರಿ ಆನಂದಪಾಲ ಮಹಮೂದನನ್ನು ಎದುರಿಸಿ ತೀವ್ರವಾಗಿ ಹೋರಾಡಿದನಾದರೂ ಮಹಮೂದನ ಬಲದ ಮುಂದೆ ಆನಂದಪಾಲನ ಉತ್ಸಾಹ ಕುಗ್ಗಿತು. ಮೊದಲಬಾರಿ ಪೇಷಾವರ್ ಸಮೀಪದಲ್ಲಿ, ಆನಂತರ ನಾಗರಕೋಟ್‍ನಲ್ಲಿ ಕದನಗಳಾದವು. ವಿಜಯಶಾಲಿಯಾದ ಸುಲ್ತಾನ ಮೊದಲ ಬಾರಿ ಮುಲ್ತಾನನ್ನೂ ಅನಂತರ ನಾಗರಕೋಟವನ್ನೂ ಆಕ್ರಮಿಸಿ ಸಂಪತ್ತ್ತನ್ನು ಕೊಳ್ಳೆಹೊಡೆದ. ಈ ಎಲ್ಲ ಸೋಲುಗಳಿಂದ ಧೃತಿಗೆಟ್ಟ ಆನಂದಪಾಲ ಮಹಮೂದನ ಮೈತ್ರಿ ಬೆಳಸಬೇಕಾಯಿತು. ಇದರ ಪರಿಣಾಮವಾಗಿ ಇವರ ನಡುವಣ ವ್ಯವಹಾರಗಳು ಉತ್ತಮಗೊಂಡುವು. ಆದರೆ ಮಹಮೂದನ ಭಾರತದ ಮೇಲೆ ಮಾಡಿದ ದಾಳಿಗಳಲ್ಲಿ ಆನಂದಪಾಲ ಬಲವಂತವಾಗಿ ಅನಂತರ ಪಾಲುಗೊಳ್ಳಬೇಕಾಯಿತು.

ಆನಂದಪಾಲನ ಮಗ ತ್ರಿಲೋಚನಪಾಲ ಮಹಮೂದನನ್ನು ಎದುರಿಸಿದ (೧೦೧೩). ಆ ವೇಳೆಗೆ ಈತ ರಾಜಧಾನಿಯನ್ನು ನಂದನಕ್ಕೆ ಬದಲಾಯಿಸಿದ್ದ. ಅನೇಕ ದಿನಗಳ ಕಾಲ ನಡೆದ ತೀವ್ರ ಹೋರಾಟದಲ್ಲಿ ಅಂತಿಮವಾಗಿ ಮಹಮೂದ ಗೆದ್ದ. ಷಾಹಿ ರಾಜ್ಯದ ಪಶ್ಚಿಮ ಹಾಗೂ ಮಧ್ಯ ಭಾಗಗಳು ಘಜ್ನಿóಯ ವಶವಾದುವು. ಪೂರ್ವ ಭಾಗವನ್ನು ಮಾತ್ರ ತ್ರಿಲೋಚನಪಾಲ ಸರ್‍ಹಿಂದ್‍ನಿಂದ ಆಳುತ್ತಿದ್ದ. ಅನಂತರ ಸುಮಾರು ಐದು ವರ್ಷಗಳ ಕಾಲ ಮಹಮೂದನ ಕಾಟವಿಲ್ಲದಿದ್ದರೂ ಪೂರ್ವ ರಾಜ್ಯದ ಅರಸನಾದ ಚಾಂದ್‍ರಾಯ್ ಇವನ ಪ್ರತಿಸ್ಪರ್ಧಿಯಾದ. ಇವರ ನಡುವೆ ಆಗಿಂದಾಗ್ಗೆ ಕದನಗಳು ನಡೆಯುತ್ತಿದ್ದುವು. ೧೦೧೮ ರಲ್ಲಿ ಮಹಮೂದ ಇನ್ನೊಮ್ಮೆ ತ್ರಿಲೋಚನಪಾಲನ ವಿರುದ್ಧ ಏರಿಬಂದಾಗ ಇವನು ರಾಜ್ಯವನ್ನು ತೊರೆದು ಮಾಳವದೇಶದ ಪರಮಾರ ಭೋಜನ ಆಶ್ರಯ ಪಡೆದ. ಆದರೆ ಮಹಮೂದ ಬುಂದೇಲವಂಶದ ವಿದ್ಯಾಧರನೊಡನೆ ಕಾಳಗಕ್ಕೆ ಬಂದಾಗ (೧೦೨೦-೨೧) ತಿರಲೋಚನಪಾಲ ವಿದ್ಯಾಧರನ ನೆರವಿಗೆ ಬಂದ. ಬಹುಶಃ ಯಮುನಾ ತೀರದ ಮೇಲೆ ನಡೆದ ಯುದ್ಧದಲ್ಲಿ ಇವನು ಅಂತಿಮವಾಗಿ ಸೋತ ; ಹಿಂಜರಿಯುತ್ತಿದ್ದಾಗ ಕೊಲ್ಲಲ್ಪಟ್ಟ. ಇದರ ಪರಿಣಾಮವಾಗಿ ಷಾಹೀ ರಾಜ್ಯ ಸಂಪೂರ್ಣವಾಗಿ ಮಹಮೂದನ ವಶವಾಯಿತು.

ಮಹಮೂದನ ಮರಣದ ಅನಂತರ ಅವನ ರಾಜ್ಯಕ್ಕಾಗಿ ಅವನ ಮಕ್ಕಳಲ್ಲಿ ಕಲಹಗಳಾದುವು. ಪಂಜಾಬಿನಲ್ಲಿ ಅರಿಯಾರಖ್ ಎಂಬವನನ್ನು ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ಮಹಮೂದ ನೇಮಿಸಿದ್ದ. ಇವನು ದಬ್ಬಾಳಿಕೆ ನಡೆಸುತ್ತಿದ್ದನೆಂದು ಸುಲ್ತಾನನ ಮಗ ಮಾಸೂದ್ ಇವನನ್ನು ಹಿಂದಕ್ಕೆ ಕರೆಸಿಕೊಂಡ. ಇವನ ಸ್ಥಾನದಲ್ಲಿ ಅಹ್ಮದ್ ನಿಯಾಲ್ತಿಗೀನ್ ನೇಮಕವಾದ. ಈತ ಕಂದಾಯದ ಅಧಿಕಾರಿಯೊಂದಿಗೆ (ಷಿಯಾಜೀ ಖಾಜಿ) ಹೊಂದಿಕೊಂಡು ಹೋಗಲಿಲ್ಲ. ಮಾಸುದ್ ಆ ಅಧಿಕಾರಿಯ ಕರ್ತವ್ಯಗಳನ್ನು ಮೊಟಕುಗೊಳಿಸಿದ. ಅದರ ದುರುಪಯೋಗ ಪಡೆದ ನಿಯಾಲ್ತಿಗೀನ್ ಅಲ್ಲಿಯ ಠಾಕೂರರಿಂದ ವಿಶೇಷವಾದ ಕಾಣಿಕೆಗಳನ್ನು ವಸೂಲು ಮಾಡಿದ. ವಾರಣಾಸಿಯವರೆಗೂ ಹಠಾತ್ತನೆ ದಾಳಿ ಮಾಡಿ, ಅಲ್ಲಿಯ ಅಂಗಡಿಬೀದಿಯನ್ನು ಕೊಳ್ಳೆಹೊಡೆದು, ಅಪಾರ ದ್ರವ್ಯದೊಂದಿಗೆ ಹಿಂದಿರುಗಿದ. ಇವನ ಇಂಥ ಕೃತ್ಯಗಳಿಂದ ಬೇಸತ್ತ ಸುಲ್ತಾನ ಇವನನ್ನು ದಂಡಿಸಲು ತಿಲಕ್ ಎಂಬ ಹಿಂದುವನ್ನು ಕಳುಹಿಸಿದ. ನಿಯಾಲ್ತಿಗೀನ್ ಓಡಿಹೋದ. ಜಾಟರು ಇವನನ್ನು ಕೊಂದರು. ಅನಂತರ ಮಾಸೂದನ ಒಬ್ಬ ಮಗ ಮಜ್ದೂದ್ ಪ್ರಾಂತ್ಯಾಧಿಕಾರಿಯಾದ (೧೦೩೬). ಈ ಪ್ರಾಂತ್ಯವನ್ನು ವಿಸ್ತರಿಸಲು ಮೂರು ವರ್ಷಗಳ ಕಾಲ ಮಾಸೂದ್ ಯತ್ನಿಸಿ ಸ್ವಲ್ಪಮಟ್ಟಿಗೆ ಯಶಸ್ವಿಯಾದ. ಆದರೆ ಸಲ್ಜುಕರು ಫಜ್ನಿಯ ಮೇಲೆ ಒತ್ತಡ ಹೇರ ತೊಡಗಿದಾಗ ಮಾಸೂದ್ ಫಜಿಯನ್ನೇ ಬಿಡಬೇಕಾಯಿತು. ಹಾದಿಯಲ್ಲಿ ಈತನ ತುರ್ಕ್ ಮತ್ತು ಹಿಂದೂ ಗುಲಾಮರು ದಂಗೆಯೆದ್ದು ಇವನನ್ನು ಕೊಂದು ಇವನ ಕುರುಡ ಸೋದರ ಮಹಮ್ಮದನನ್ನು ಸುಲ್ತಾನ್ ಪದವಿಗೆ ಏರಿಸಿದರು.

ಬಾಲ್ಖ್‍ನಲ್ಲಿದ್ದ ಮಾಸೂದನ ಮಗ ಮೌದೂದ್ ಇದನ್ನು ಕೇಳೀ ಫಜ್ನಿಗೆ ಬಂದು ಅಲ್ಲಿಂದ ಚಿಕ್ಕಪ್ಪನ ಬೆನ್ನಟ್ಟಿ ಸಿಂಧೂ ಮತ್ತು ಫಜನಿಗಳ ನಡುವೆ ಸಂಗ್ರಹಾರ್‍ನಲ್ಲಿ ಅವರನ್ನು ಎದುರಿಸಿ ಸೋಲಿಸಿ ಕೊಂದ. ಪೆಷಾವರ್ ಮುಲ್ತಾನ್‍ಗಳ ಪ್ರಾಂತ್ಯಾಧಿಕಾರಿಯಾಗಿ ನಿಯಮಿಸಲ್ಪಟ್ಟಿದ್ದ ಮಹಮ್ಮದನ ಮಗ ನಾಮಿಯೂ ಕೊಲೆಗೆ ಈಡಾದ. ಆದರೆ ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿದ್ದ ಮಜ್ದೂದ್ ಅಣ್ಣನಿಗೆ ಸಾಮಂತನಾಗಿರಲೊಪ್ಪಲಿಲ್ಲ. ಫಲವಾಗಿ ಅವನೂ ಪ್ರಾಣ ಕಳೆದುಕೊಂಡ. ಮೌದೂದ್ ಪಂಜಾಬನ್ನು ಆಕ್ರಮಿಸಿದ. ೧೦೪೩ರಲ್ಲಿ ಪಂಜಾಬಿನಿಂದ ಮಹಮದೀಯರನ್ನು ಹೊರದೂಡುವ ಉದ್ದೇಶದಿಂದ ದೆಹಲಿಯ ರಾಜನ ನೇತೃತ್ವದಲ್ಲಿ ಹಲವು ಅರಸರು ಒಟ್ಟುಗೂಡಿ ದಂಡೆತ್ತಿ ಬಂದರು. ಇವರು ಹನ್‍ಸಿ, ಥಾನೇಶ್ವರ, ನಾಗರಕೋಟ್‍ಗಳನ್ನು ಅಕ್ರಮಿಸಿ ಲಾಹೋರನ್ನು ಮುತ್ತಿದರಾದರೂ ಹಠಾತ್ತಾಗಿ ಮೇಲೆ ಬಿದ್ದ ಶತ್ರುಸೈನ್ಯದಿಂದ ಪರಾಜಿತರಾಗಿ ಹಿಮ್ಮೆಟ್ಟಿದರು. ಕೆಲವು ವರ್ಷಗಳ ಕಾಲ ನಾಗರಕೋಟ್ ಹಿಂದುಗಳ ವಶದಲ್ಲಿ ಉಳಿದಿತ್ತು. ಫಜ್ನಿಯಲ್ಲಿ ಮೇಲಿಂದ ಮೇಲೆ ಅಧಿಕಾರಕ್ಕಾಗಿ ಜಗಳಗಳಾಗುತ್ತಿದ್ದುವು. ಅವುಗಳ ಪರಿಣಾಮವಾಗಿ ಪಂಜಾಬಿನ ಪ್ರಾಂತ್ಯಾಧಿಕಾರಿಗಳು ಬದಲಾಗುತ್ತಿದ್ದರು. ಅಂತಿಮವಾಗಿ ಘೋರಿ ಮನೆತನದ ಮುಇಜುದ್ದೀನ್ ಮುಹಮ್ಮದ್ ಯಾಮಿನೀ ಅರಸರ ಆಳ್ವಿಕೆಗೆ ಚರಮಗೀತ ಹಾಡಿದ.

೧೧೮೬ರಲ್ಲಿ ಷಿಹಾಬುದ್ದೀನ್ ಘೋರಿ ಪಂಜಾಬನ್ನು ವಶಪಡಿಸಿಕೊಂಡ ಅನಂತರ ಅದು ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡಿತು. ೧೨೦೬ ರಿಂದ ದೆಹಲಿಯ ಸುಲ್ತಾನರ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶ ಕ್ರಮೇಣ ಮೊಘಲ್ ಸಾಮ್ರಾಜ್ಯದ ಭಾಗವಾಯಿತು. ಸಯ್ಯದ್ ಮನೆತನದ ಮುಬಾರಕ್ ಷಹನ (೧೪೨೧-೩೪) ಆಳ್ವಿಕೆಯ ಕಾಲದಲ್ಲಿ ಬಹಳ ಕಾಲದಿಂದಲೂ ಝೀಲಮ್ ಚೀನಾಬ್ ಕಣಿವೆಗಳಲ್ಲಿ ನೆಲಸಿದ್ದ ಖೈಬರ್ ಜನರ ನಾಯಕ ಇಸರತ್ ಸಯ್ಯೀದರನ್ನು ಹೊರದೂಡಲು ಬಹಳ ಶ್ರಮಿಸಿದ. ಜಲಂಧರ್ ಮತ್ತು ಸರ್‍ಹಿಂದ್ ವರೆಗೂ ಮುನ್ನುಗಿದ ಈತನನ್ನು ಇಸ್ಲಾಮ್ ಖಾನ್ ಲೋದಿ ತಡೆದ (೧೪೨೨). ಮತ್ತೆ ಇವನು ಲಾಹೋರನ್ನು ಎರಡು ಬಾರಿ ಮುತ್ತಿದ್ದನಾದರೂ ಅದರಿಂದ ಪ್ರಯೋಜನವಾಗಲಿಲ್ಲ. ಆರು ವರ್ಷಗಳ ಬಳಿಕ, ೧೪೨೮ ರಿಂದ ಮೂರು ನಾಲ್ಕು ಬಾರಿ, ಇವನು ದೆಹಲಿಯನ್ನು ಆಕ್ರಮಿಸಲು ಯತ್ನಿಸಿದ. ಆದರೆ ಪ್ರತಿಬಾರಿಯೂ ವಿಫಲನಾದ. ೧೪೪೨ರಲ್ಲಿ ಇವನ ರಾಣಿಯೇ ಈತನನ್ನು ಕೊಲ್ಲಿಸಿದಳು.

ಬಾಬರ್ ಮತ್ತು ಮೊಘಲರ ಆಳ್ವಿಕೆ

ಬದಲಾಯಿಸಿ

೧೫೨೪ರಲ್ಲಿ ಬಾಬರ್ ಭಾರತದ ಮೇಲೆ ಆರನೆಯ ಬಾರಿ ದಂಡೆತ್ತಿ ಬಂದು ಝೀಲಮ್ ಚೀನಾಬ್ ನದಿಗಳನ್ನು ದಾಟಿ ಲಾಹೋರಿನ ಸಮೀಪಕ್ಕೆ ಬಂದಾಗ ಅಲ್ಲಿ ಲೋದಿ ಸುಲ್ತಾನನ ಸೈನ್ಯ ಎದುರಾಯಿತು. ಅವನು ಅದನ್ನು ಸೋಲಿಸಿ ಅಲ್ಲಿಂದ ದೀಪಾಲ್ಪುರಕ್ಕೆ ಸಾಗಿದ. ದೌಲತ್‍ಖಾನನಿಗೆ ಜಲಂಧರ್ ಮತ್ತು ಸುಲ್ತಾನ್ಪುರಗಳ ಅಧಿಕಾರ ವಹಿಸಿಕೊಟ್ಟ. ಆದರೆ ದೌಲತ್ ಖಾನ್ ತೃಪ್ತನಾಗಲಿಲ್ಲ. ಬಾಬರ್ ಹಿಂದಿರುಗಿದ ಮೇಲೆ ಇಲ್ಲಿ ಗೊಂದಲಗಳಾದುವು. ೧೫೨೫ರಲ್ಲಿ ಪುನಃ ದಂಡೆತ್ತಿ ಬಂದ ಬಾಬರ್ ಲಾಹೋರ್ ಹಾಗೂ ಅದರ ಅಧೀನ ಪ್ರದೇಶಗಳನ್ನು ವಶಪಡಿಸಿಕೊಂಡ. ಅಲ್ಲಿಂದ ದೆಹಲಿಯ ಕಡೆಗೆ ಸರ್‍ಹಿಂದ್ ಅಂಬಾಲಾಗಳ ಮೂಲಕ ಪ್ರಯಾಣ ಮಾಡಿದ. ಪಾಣಿಪತ್ ಕದನದ ಫಲವಾಗಿ ಮೊಗಲ್ ಸಾಮ್ರಾಜ್ಯದ ಸ್ಥಾಪನೆಯಾಯಿತು. ೧೫೪೦ರಲ್ಲಿ ಷೇರ್ ಖಾನ್‍ನಿಂದ ಪರಾಜಯಹೊಂದಿದ ಹುಮಾಯೂನ ಸರ್‍ಹಿಂದ್ ಮೂಲಕ ಲಾಹೋರಿಗೆ ಸಾಗಿ ಅಲ್ಲಿ ಸೋದರ ಕಾಮ್ರಾನನೊಡನೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿದ. ಆದರೆ ಇದು ಸಾಧ್ಯವಾಗಲಿಲ್ಲ. ಹುಮಾಯೂನ್ ಪಂಜಾಬಿನಿಂದ ಕಾಲ್ತೆಗೆಯಬೇಕಾಯಿತು. ೧೫೫೪-೫೫ರಲ್ಲಿ ಹುಮಾಯೂನ್ ಹಿಂದಿರುಗಿದಾಗ, ಬೈರಾಮಖಾನನ ಹೋರಾಟದ ಫಲವಾಗಿ ದೀಪಾಲ್ಪುರ, ಹರಿಯಾಣ, ಜಲಂಧರ್, ಸರ್‍ಹಿಂದ್‍ಗಳು ಒಂದೊಂದಾಗಿ ಹುಮಾಯೂನನ ವಶವಾದುವು. ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ಮೊದಲು ಅಬ್ದುಲ್ ಮಾಲಿಯೂ ಅನಂತರ ಬೈರಾಮ್ ಖಾನನ ರಕ್ಷಣೆಯಲ್ಲಿದ್ದ ಅಕ್ಬರನೂ ನೇಮಿತರಾದರು. ಆದರೆ ಕೆಲವೇ ತಿಂಗಳುಗಳಲ್ಲಿ ಹುಮಾಯೂನ್ ಮೃತನಾದ.[]

ಸಿಖ್ ಧರ್ಮದ ಆರಂಭ, ಮೊಘಲರೊಂದಿಗೆ ಘರ್ಷಣೆ

ಬದಲಾಯಿಸಿ

ಸಿಖ್ ಧರ್ಮ ಆರಂಭವಾಗಿ ಹೆಚ್ಚಾಗಿ ಪ್ರಭಾವಗಳಿಸಿದ್ದು ಪಂಜಾಬಿನಲ್ಲಿ. ಈ ಧರ್ಮದ ಸ್ಥಾಪಕನಾದ ಗುರು ನಾನಕ್ ೧೪೬೯ರಲ್ಲಿ ಲಾಹೋರ್ ಸಮೀಪದ ತಲವಂದಿಯಲ್ಲಿ ಖತ್ರಿ ಕುಲದಲ್ಲಿ ಜನಿಸಿದ. ಚಿಕ್ಕಂದಿನಲ್ಲೇ ಇವನ ಮನಸ್ಸು ಅಧ್ಯಾತ್ಮದ ಕಡೆಗೆ ತಿರುಗಿತು[]. ದೇವರೊಬ್ಬನೇ ಎಂದು ನಂಬಿ, ಆತನಲ್ಲಿ ಪ್ರೇಮವಿಟ್ಟು, ಆತನ ಧ್ಯಾನ ಮಾಡುವುದೊಂದೇ ನಿರ್ವಾಣಕ್ಕೆ ಹಾದಿ ಎಂದು ಅವನು ಸಾರಿದ. ವಿಗ್ರಹಾರಾಧನೆಯನ್ನು ಖಂಡಿಸಿದ. ಪಂಜಾಬಿನ ಜನರಿಗೆ ಈತ ಒಂದು ತತ್ತ್ವವನ್ನು ನೀಡಿ, ಅವರೆಲ್ಲ ಒಟ್ಟುಗೂಡುವಂತೆ ಮಾಡಿದ. ಅವರಿಗೆಲ್ಲ ಒಬ್ಬ ಗುರು ಅವಶ್ಯಕವೆಂದು ಅರಿತು ತನ್ನ ನಿಷ್ಠಾವಂತ ಶಿಷ್ಯನಾದ ಭಾಇಲಾಹ್ನನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ. ತನ್ನ ಆತ್ಮ ಅವನ ದೇಹವನ್ನು ಹೊಗುತ್ತದೆಂದು ಹೇಳಿದ. ಎರಡನೆಯ ಗುರು ಅಂಗದನೆನಿಸಕೊಂಡ. ಈತ ತನ್ನ ನೆಲೆಯನ್ನು ಕರ್ತಾರಪುರದಿಂದ ಅಮೃತಸರ ಜಿಲ್ಲೆಯ ಖದುರ್‍ಗೆ ಬದಲಾಯಿಸಿದ. ಗುರುಮುಖಿ ಲಿಪಿಯನ್ನು ಬೆಳೆಸಿ, ಅದರ ಮೂಲಕ ಸಿಖ್ ಧರ್ಮವನ್ನು ಗ್ರಂಥಸ್ಥಗೊಳಿಸಲು ಈತ ಶ್ರಮಿಸಿದ. ನಾನಕ್ ಕಲಿಸಿದ ಎರಡು ತತ್ತ್ವಗಳು ಸಂಗತ್ (ಸತ್ಸಂಗ-ಸಭೆ) ಮತ್ತು ಪಂಗತ್ (ಸಹಪಂಕ್ತಿ ಭೋಜನ). ಪಂಗತ್‍ಗಾಗಿ ಲಂಗರ್ ಎಂಬ ಸಾರ್ವಜನಿಕ ಅಡಿಗೆಶಾಲೆಗಳು-ಧರ್ಮಶಾಲೆಗಳು-ಅಸ್ತಿತ್ವಕ್ಕೆ ಬಂದುವು. ಮೂರನೆಯ ಗುರು ಅಮರದಾಸನಿಗೆ ಅಕ್ಬರ್ ಗೌರವ ಸಲ್ಲಿಸಿ, ಆತ ನಡೆಸುತ್ತಿದ್ದ ಲಂಗರ್‍ಗಾಗಿ ತೆರಿಗೆಮಾನ್ಯ ಗ್ರಾಮಗಳನ್ನು ದಾನ ಮಾಡಿದ.[] ಮಧ್ಯದಲ್ಲಿ ಕೊಳವಿದ್ದ ವಿಸ್ತಾರವಾದ ಭೂಮಿಯನ್ನು ಮುಂದಿನ ಗುರು ರಾಮದಾಸನಿಗೆ ಅಕ್ಬರ್ ಅಮೃತಸರದಲ್ಲಿ ನೀಡಿದ. ಇದೇ ಮುಂದೆ ಅಲ್ಲಿಯ ಸುವರ್ಣದೇವಾಲಯವಾಗಿ ಖ್ಯಾತಿ ಹೊಂದಿತು. ಅನಂತರ ಬಂದ ಗುರು ಅರ್ಜನ್ ಸಿಖ್ ಜನರಲ್ಲಿ ಶಿಸ್ತನ್ನು ರೂಪಿಸಿದ. ಆದಿಗ್ರಂಥ ಅಥವಾ ಗ್ರಂಥಸಾಹಿಬ್ ಎಂಬುದು ಈತ ಸಿದ್ಧಪಡಿಸಿದ, ಸಿಖ್ ಧರ್ಮದ ಮೊದಲ ಗ್ರಂಥ. ಇದರ ಸಂಕಲನಕಾರ್ಯ ೧೬೦೪ರಲ್ಲಿ ಮುಗಿಯಿತು. ಗುರು ಅರ್ಜನ್ ಖುಸ್ರಾವನಿಗೆ ಆಶ್ರಯ ನೀಡಿದ್ದನೆಂಬ ಕಾರಣದಿಂದ ಜಹಾಂಗೀರ್ ಈತನನ್ನು ಹಿಂಸಿಸಿ ಕೊಲ್ಲಿಸಿದ. ಅನಂತರದ ಗುರು ಹರಗೋವಿಂದ. ಇವನು ಷಹಜಹಾನನೊಡನೆ ನಿರಂತರವಾಗಿ ಆರು ವರ್ಷಗಳ ಕಾಲ (೧೬೩೪-೪೦) ಕಾದಬೇಕಾಯಿತು. ಈತ ಅಮೃತಸರ ಜಿಲ್ಲೆಯ ಉತ್ತರಭಾಗದಲ್ಲಿ ತನ್ನ ಹೆಸರಿನಲ್ಲಿ ಹರಗೋವಿಂದಪುರವನ್ನು ನೆಲೆಗೊಳಿಸಿದ. ಔರಂಗ್‍ಜೇಬ್ ಇಸ್ಲಾಮ್ ಧರ್ಮಪ್ರಚಾರಕನಾಗಿ ಪಂಜಾಬಿನ ಅನೇಕ ಗುರುದ್ವಾರಗಳನ್ನು ಮಸೀದಿಗಳಾಗಿ ಪರಿವರ್ತಿಸಿದ (೧೬೭೪-೭೫). ಆಗಿನ ಗುರು ತೇಗ್ ಬಹದೂರನನ್ನು ದೆಹಲಿಗೆ ಕರೆಯಿಸಿ ಆತ ಇಸ್ಲಾಂ ಧರ್ಮವನ್ನು ಒಪ್ಪುವಂತೆ ಬಲವಂತಪಡಿಸಿದ. ಒಲ್ಲದ ಆತನನ್ನು ಸರಪಳಿಗಳಿಂದ ಕಟ್ಟಿ ಕೊಲ್ಲಿಸಿದ. ಅನಂತರದ ಗುರು ಗೋವಿಂದಸಿಂಹ. ಈತ ಶಾಂತಿಯುತ ಸಿಖ್ ಜನರನ್ನು ಸನ್ನದ್ಧ ಸೇನಾನಿಗಳಾಗಿ ಪರಿವರ್ತಿಸಿ ಮಹಮದೀಯರ ಆಕ್ರಮಣವನ್ನು ಎದುರಿಸಲು ಅವರನ್ನು ಸಿದ್ಧಗೊಳಿಸಿದ. ಕಟ್ಟುನಿಟ್ಟಾದ ಶಿಸ್ತನ್ನು ಅನುಸರಿಸಿದ ಅವರು ಖಲ್ಸ (ಪವಿತ್ರ) ಎನಿಸಿಕೊಂಡರು. ಉದ್ದಕೂದಲು, ನಕ್ಕರ್, ಕಬ್ಬಿಣದ ಬಳೆ, ಉಕ್ಕಿನ ಬಾಕು ಮತ್ತು ಬಾಚಣಿಗೆ ಇವು ಅವರೊಡನೆ ಎಂದೂ ಇರಬೇಕಾದ ಸಾಧನಗಳಾದುವು. ಸ್ಥಳೀಯ ಮೊಗಲ್ ಅಧಿಕಾರಿಗಳೊಡನೆ ಹೋರಾಟದಲ್ಲಿ ಈತ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡ. ಈತನನ್ನು ತಿವಿಯಲಾಯಿತು. ಸಾವು ಸಮೀಪಿಸಿತೆಂಬುದನ್ನರಿತ ಗೋವಿಂದಸಿಂಹ ಚಿತೆಯಲ್ಲಿ ಜೀವಂತ ಸಮಾಧಿ ಪಡೆದ (ಅಕ್ಟೋಬರ್ ೧೭೦೮). ಇದು ನಡೆದುದು ಮಹಾರಾಷ್ಟ್ರದ ನಾಂದೇಡದಲ್ಲಿ. ಅನಂತರ ಅಧಿಕಾರಕ್ಕೆ ಬಂದ ಬಂದಾ ಬಹಾದೂರ್ ಸರ್‍ಹಿಂದ್, ಸಟ್ಲೆಜ್ ಮತ್ತು ಯಮುನಾ ನದಿಗಳ ನಡುವಣ ಪ್ರದೇಶವನ್ನು ವಶಪಡಿಸಿಕೊಂಡು, ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಅಚ್ಚುಹಾಕಿಸಿದ. ಆದರೆ ಆಗಿನ ಮೊಗಲ್ ಅರಸ ಪರುಕ್‍ಸಿಯರ್ ಇತನ ವಿರುದ್ಧ ಸೈನ್ಯಾಚರಣೆ ನಡೆಸಿ ಇವನನ್ನು ಸೆರೆಹಿಡಿದು ದೆಹಲಿಗೆ ತರಿಸಿ ಆನೆಯಿಂದ ತುಳಿಯಿಸಿ ಸಾಯಿಸಿದ (೧೭೧೬). ಆದರೆ ಆವೇಳೆಗೆ ಸಿಕ್ಖರಲ್ಲಿ ಅಗಾಧ ಪರಿವರ್ತನೆಯಾಗಿತ್ತು.

೧೭೩೮ರಲ್ಲಿ ಪರ್ಷಿಯದ ನಾದಿರ್ ಷಾ ಮೊಗಲರ ಮೇಲಿನ ಸೇಡು ತಿರಿಸಿಕೊಳ್ಳಲು ಭಾರತಕ್ಕೆ ದಾಳಿ ಇಟ್ಟಾಗ ಪಂಜಾಬ್ ಪ್ರಾಂತ್ಯದಲ್ಲೆಲ್ಲ ಅಶಾಂತಿ ಅವ್ಯವಸ್ಥೆ ಉಂಟಾದುವು. ಒಂದು ದಶಕದೊಳಗೆ ಅಹ್ಮದ್ ಷಾ ಅಬ್ದಾಲಿ ಎಂಬ ಆಫ್‍ಘಾನ್ ಭಾರತದ ಮೇಲೆ ದಂಡೆತ್ತಿ ಬಂದ. ಇವನು ಮೊದಲು ಮಾನಪುರದಲ್ಲಿ ಸೋತರೂ (೧೭೪೮) ಎರಡು ವರ್ಷಗಳಲ್ಲಿ (೧೭೫೦) ಮತ್ತೆ ದಂಡೆತ್ತಿ ಬಂದು ಪಂಜಾಬನ್ನೆಲ್ಲ ವಶಪಡಿಸಿಕೊಂಡ. ಪಂಜಾಬಿನ ಜನರು ತಲ್ಲಣಿಸಿದರು. ಮೊಗಲರ ವಿರುದ್ಧ ಎಲ್ಲ ಕಡೆಗಳಲ್ಲೂ ದಂಗೆಗಳು ಎದ್ದುವು. ಇವರು ಮರಾಠರ ನೆರವು ಕೋರಿದರು. ೧೭೫೮ರಲ್ಲಿ ರಘುನಾಥರಾಯ ಪಂಜಾಬಿಗೆ ಬಂದು ಲಾಹೋರನ್ನು ಆಕ್ರಮಿಸಿ ಆಫ್‍ಘನರನ್ನು ಹೊರದೂಡಿದ. ೧೭೫೯ರಲ್ಲಿ ಅಬ್ದಾಲಿ ಮತ್ತೆ ದಂಡೆತ್ತಿ ಬಂದು ಪಂಜಾಬನ್ನು ಆಕ್ರಮಿಸಿದ. ೧೭೬೧ರಲ್ಲಿ ನಡೆದ 3ನೆಯ ಪಾನಿಪತ್ ಕದನದಲ್ಲಿ ಅಫ್‍ಘನರ, ಮೊಗಲರ, ಮರಾಠರ ಇತಿಶ್ರೀ ಹಾಡಿದಂತಾಯಿತು.

ರಣಜಿತ್‍ಸಿಂಹನ (೧೭೮೦-೧೮೩೯) ನೇತೃತ್ವದಲ್ಲಿ ಸಿಖ್ ಜನರೆಲ್ಲ ಮತ್ತೆ ಒಟ್ಟುಗೂಡಿದರು. ಆಫ್‍ಘನ್ ನಾಯಕ ಜಮಾನ್ ಷಹ ಪಂಜಾಬಿನ ಮೇಲೆ ನಡೆಸಿದ ದಾಳಿಗಳಿಂದ ಉಂಟಾದ ಅವ್ಯವಸ್ಥೆಯ ಪ್ರಯೋಜನ ಪಡೆದು ರಣಜಿತ್ ಲಾಹೋರನ್ನು ಆಕ್ರಮಿಸಿದ. ಅವನನ್ನು ಅದರ ಅಧಿಕಾರಿಯಾಗಿ ಜಮಾನ್ ಷಹ ಪರಿಗಣಿಸಬೇಕಾಯಿತು. ಅವರು ರಾಜಾ ಎಂಬ ಬಿರುದನ್ನೂ ಪಡೆದ. ಕ್ರಮೇಣ ಅವನು ಆಫ್‍ಘನ್‍ರನ್ನು ಹೊರದೂಡಿದ. ಸಟ್ಲೆಜ್ ವರೆಗಿನ ಸಿಖ್ ಮಿಸಲ್‍ಗಳ ನಾಯಕನಾಗಿ ಅವನು ಪರಿಗಣಿತನಾದ. ಅಮೃತಸರವನ್ನು ಆಕ್ರಮಿಸಿ ಝಮಝಮ ಎಂಬ ತುಪಾಕಿಯನ್ನು ತನ್ನದಾಗಿಸಿಕೊಂಡ (೧೮೦೫). ಈ ವೇಳೆಗೆ ಭಾರತದ ಬಹು ಭಾಗವನ್ನಾಕ್ರಮಿಸಿದ್ದ ಬ್ರಿಟಿಷರು ರಣಜಿತನನ್ನು ಸಟ್ಲೆಜ್‍ನ ಉತ್ತರಕ್ಕಿರುವ ಎಲ್ಲ ಪಂಜಾಬ್ ಪ್ರದೇಶದ ಅಧಿಪತಿಯೆಂದು ಮಾನ್ಯಮಾಡಿದರು. ಸಿಕ್ಖರ ಅಂತಃಕಲಹಗಳನ್ನು ಹತ್ತಿಕ್ಕಲು ರಣಜಿತ್ ೧೮೦೭ರಲ್ಲಿ ಲೂಧಿಯಾನವನ್ನು ಆಕ್ರಮಿಸಿದ. ಇದು ಮೊದಲಿನ ಒಪ್ಪಂದಕ್ಕೆ ವಿರುದ್ಧವಾಗಿತ್ತೆಂದು ಬ್ರಿಟಿಷರು ಮೆಟ್‍ಕಾಫ್ ಮತ್ತು ಡೇವಿಡ್ ಆಕ್ಟರ್‍ಲೋನಿಯನ್ನು ಪಂಜಾಬಿಗೆ ಕಳುಹಿಸಿದರು. ೧೮೦೯ರ ಅಮೃತಸರದ ಒಪ್ಪಂದದಂತೆ ರಣಜಿತ್ ಸಟ್ಲೆಜ್‍ನ ಉತ್ತರ ಮತ್ತು ಪಶ್ಚಿಮ ಭಾಗಗಳಿಗೆ ತನ್ನ ಅಧಿಕಾರವನ್ನು ಸೀಮಿತಗೊಳಿಸಲು ಒಪ್ಪಿದ. ಆದರೆ ಕ್ರಮೇಣ ಇವನು ಕಾಂಗ್ರಾ (೧೮೧೧), ಅಟಕ್ (೧೮೧೩), ಮುಲ್ತಾನ್ (೧೮೧೮), ಕಾಶ್ಮೀರ (೧೮೧೯) ಮತ್ತು ಪೆಷಾವರ್‍ಗಳನ್ನು (೧೮೨೩, ೧೮೩೪) ಆಕ್ರಮಿಸಿದ. ಇದರ ಪರಿಣಾಮವಾಗಿ ಪಂಜಾಬ್ ಸಿಕ್ಖರ ಪ್ರಬಲ ರಾಜ್ಯವಾಯಿತು. ಇವನ ಮರಣಾನಂತರ ಉಂಟಾದ ಅವ್ಯವಸ್ಥೆಯ ಪರಿಣಾಮವಾಗಿ ಸಿಕ್ಖರು ಬ್ರಿಟಿಷರೊಡನೆ ಎರಡು ಬಾರಿ, ೧೮೪೫-೪೬ ಮತ್ತು ೧೮೪೮-೪೯ರಲ್ಲಿ, ಹೋರಾಟ ನಡೆಸಿದರು. ಲಾರ್ಡ್‍ಡಾಲ್‍ಹೌಸಿ ಇದನ್ನು ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ.

ಬ್ರಿಟಿಷರ ಸಾಮ್ರಾಜ್ಯದ ಭಾಗವಾಗಿ

ಬದಲಾಯಿಸಿ

ಅನಂತರದ ಒಂದು ಶತಮಾನ ಕಾಲ ಪಂಜಾಬ್ ಭಾರತದ ಒಂದು ಪ್ರಾಂತ್ಯವಾಗಿ ಮುಂದುವರಿಯಿತು.

ಪಂಜಾಬ್ ವಿಭಜನೆ

ಬದಲಾಯಿಸಿ
 
ಭಾರತ ಪಾಕಿಸ್ತಾನಗಳ ಗಡಿ, ಪಂಜಾಬಿನ ವಾಘಾದಲ್ಲಿ ಸೇನೆಗಳ ದೈನಂದಿನ ಕಾರ್ಯಕ್ರಮ

೧೯೪೭ ರಲ್ಲಿ, ಬ್ರಿಟಿಷ್ ಭಾರತದ ಪಂಜಾಬ್ ಪ್ರಾಂತ್ಯವನ್ನು ಧಾರ್ಮಿಕ ಮಾರ್ಗಗಳಲ್ಲಿ ಪಶ್ಚಿಮ ಪಂಜಾಬ್ ಮತ್ತು ಪೂರ್ವ ಪಂಜಾಬ್ ಎಂದು ವಿಂಗಡಿಸಲಾಯಿತು. ಪಶ್ಚಿಮ ಭಾಗವನ್ನು ಹೊಸ ದೇಶವಾದ ಪಾಕಿಸ್ತಾನಕ್ಕೆ ಸೇರಿಸಲಾಯಿತು ಮತ್ತು ಪೂರ್ವವು ಭಾರತದಲ್ಲಿಯೇ ಇತ್ತು. ಇದು ಗಲಭೆಗೆ ಕಾರಣವಾಯಿತು. ೧೯೪೭ ರಲ್ಲಿ ಭಾರತದ ವಿಭಜನೆಯು ಹಿಂದಿನ ರಾಜ್ ಪ್ರಾಂತ್ಯದ ಪಂಜಾಬ್ ಅನ್ನು ವಿಭಜಿಸಿತು; ಹೆಚ್ಚಾಗಿ ಮುಸ್ಲಿಂ ಪಶ್ಚಿಮ ಭಾಗವು ಪಾಕಿಸ್ತಾನದ ಪಶ್ಚಿಮ ಪಂಜಾಬ್ ಪ್ರಾಂತ್ಯವಾಯಿತು ಮತ್ತು ಹೆಚ್ಚಾಗಿ ಸಿಖ್ ಮತ್ತು ಹಿಂದೂ ಪೂರ್ವ ಭಾಗವು ಭಾರತದ ಪ್ರಾಂತ್ಯವಾದ ಪಂಜಾಬ್ ಆಗಿ ಮಾರ್ಪಟ್ಟಿತು. ಅನೇಕ ಸಿಖ್ಖರು ಮತ್ತು ಹಿಂದೂಗಳು ಪಶ್ಚಿಮದಲ್ಲಿ ವಾಸಿಸುತ್ತಿದ್ದರು ಮತ್ತು ಅನೇಕ ಮುಸ್ಲಿಮರು ಪೂರ್ವದಲ್ಲಿ ವಾಸಿಸುತ್ತಿದ್ದರು, ಆದ್ದರಿಂದ ವಿಭಜನೆಯು ಅನೇಕ ಜನರನ್ನು ಸ್ಥಳಾಂತರಿಸಿತು ಮತ್ತು ಹೆಚ್ಚಿನ ಅಂತರಸಂಪರ್ಕ ಹಿಂಸಾಚಾರವನ್ನು ಕಂಡಿತು. ಪಟಿಯಾಲ ಸೇರಿದಂತೆ ಹಲವಾರು ಸಣ್ಣ ಪಂಜಾಬಿ ರಾಜಪ್ರಭುತ್ವಗಳು ಭಾರತದ ಭಾಗವಾಯಿತು. ಅವಿಭಾಜಿತ ಪಂಜಾಬ್, ಇಂದು ಪಂಜಾಬ್ (ಪಾಕಿಸ್ತಾನ) ಒಂದು ಪ್ರಮುಖ ಪ್ರದೇಶವಾಗಿದೆ, ಮುಸ್ಲಿಂ ಬಹುಸಂಖ್ಯಾತರನ್ನು ಹೊರತುಪಡಿಸಿ ೧೯೪೭ ರವರೆಗೆ ಪಂಜಾಬಿ ಸಿಖ್ಖರು ಮತ್ತು ಹಿಂದೂಗಳ ದೊಡ್ಡ ಅಲ್ಪಸಂಖ್ಯಾತ ಜನಸಂಖ್ಯೆಗೆ ನೆಲೆಯಾಗಿದೆ. ಗುರುದಾಸ್‌ಪುರ ಜಿಲ್ಲೆಯಂತಹ ವಿಭಜನೆಗೆ ಮೊದಲು ಈಗ ಭಾರತದ ಪಂಜಾಬ್‌ನ ಭಾಗವಾಗಿರುವ ಹಲವಾರು ಜಿಲ್ಲೆಗಳಲ್ಲಿ ಮುಸ್ಲಿಂ ಬಹುಸಂಖ್ಯಾತರು ಇದ್ದರು. ಪಾಕಿಸ್ತಾನದಲ್ಲಿ ನೆಲೆಸಲು ಬಹುತೇಕ ಎಲ್ಲ ಮುಸ್ಲಿಮರು ವಿಭಜನಾ ಹಿಂಸಾಚಾರದಿಂದ ಪಲಾಯನ ಮಾಡಿದರು.[]

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು

ಬದಲಾಯಿಸಿ
  1. https://www.britannica.com/place/Punjab-state-India
  2. http://www.iranicaonline.org/articles/indo-greek-dynasty
  3. https://www.mapsofindia.com/history/battles/mahmud-ghazni-invasions-of-india.html
  4. "ಆರ್ಕೈವ್ ನಕಲು". Archived from the original on 2011-09-27. Retrieved 2020-01-11.
  5. https://www.allaboutsikhs.com/punjab/historical-overview-of-punjab
  6. https://www.britannica.com/place/India/The-Sikhs-in-the-Punjab
  7. https://feminisminindia.com/2017/06/27/partition-punjab-violation-women/